DS Nagabhushan Death: ಕನ್ನಡದ ‘ಹೊಸ ಮನುಷ್ಯ’ ನಾಗಭೂಷಣನೆಂಬ ಮಹಾನ್ ನಿಷ್ಠುರಿ

|

Updated on: May 19, 2022 | 8:10 AM

DS Nagabhushan : ಕನ್ನಡದ ವಿಮರ್ಶಕ, ಪ್ರಖರ ಚಿಂತಕ ಡಿ. ಎಸ್. ನಾಗಭೂಷಣ ನಿಧನ ಹೊಂದಿದ್ದಾರೆ. ಅವರ ಒಡನಾಡಿಗಳಾಗಿದ್ದ ವಿಮರ್ಶಕ ಡಾ. ರಾಜೇಂದ್ರ ಚೆನ್ನಿ ನುಡಿನಮನ ಸಲ್ಲಿಸಿದ್ದಾರೆ.

DS Nagabhushan Death: ಕನ್ನಡದ ‘ಹೊಸ ಮನುಷ್ಯ’ ನಾಗಭೂಷಣನೆಂಬ ಮಹಾನ್ ನಿಷ್ಠುರಿ
ವಿಮರ್ಶಕ ಡಿ. ಎಸ್. ನಾಗಭೂಷಣ
Follow us on

D. S. Nagabhushan : ಡಿ. ಎಸ್. ನಾಗಭೂಷಣ ಕನ್ನಡದ ಶ್ರೇಷ್ಠ ವಿಮರ್ಶಕ. ಅವರ ಸಮಾಜ, ಸಾಹಿತ್ಯ, ರಾಜಕೀಯ ದೃಷ್ಟಿಕೋನ ಅತ್ಯಂತ ಪ್ರಖರ. ಯಾವುದೇ ರೀತಿಯ ಹೊಂದಾಣಿಕೆ ಮಾಡಿಕೊಳ್ಳದ ವೈಚಾರಿಕ ಬದ್ಧತೆಯುಳ್ಳ ವ್ಯಕ್ತಿ. ಒಂದು ವಿರೋಧಪಕ್ಷ ಮಾಡಬೇಕಾದ ಕೆಲಸವನ್ನು ಇಡೀ ಬದುಕಿನುದ್ದಕ್ಕೂ ಮಾಡುತ್ತ ಬಂದರು. ಮಹಾನ್ ಜಗಳಗಂಟ, ನಿಷ್ಠುರಿ. ಜಗಳಗಳ ಮೂಲಕ ನೈತಿಕತೆಯನ್ನು ಹೇಗೆ ಕಾಪಾಡಿಕೊಂಡು ಬರಬೇಕು ಎನ್ನುವುದು ಅವರಿಗೆ ಗೊತ್ತಿತ್ತು. ಯಾವುದೇ ಪ್ರಶಸ್ತಿ, ಸನ್ಮಾನಗಳನ್ನು ಸುಲಭವಾಗಿ ಸ್ವೀಕರಿಸುತ್ತಿರಲಿಲ್ಲ. ಕನ್ನಡಕ್ಕೆ ಸರಿಯಾದ ಸ್ಥಾನಮಾನ ಕೊಟ್ಟಿಲ್ಲ ಎಂದು ರಾಜ್ಯೋತ್ಸವ ಪ್ರಶಸ್ತಿಯನ್ನೇ ನಿರಾಕರಿಸಿದರು. ಲೋಹಿಯಾವಾದ, ಗಾಂಧೀವಾದವನ್ನು ಬಹುವಾಗಿ ಪ್ರೀತಿಸಿದವರು ಹಾಗೆಯೇ ಪ್ರಶ್ನಿಸುತ್ತಲೂ ಬಂದವರು. ಕನ್ನಡದ ಕ್ಲಾಸಿಕ್  ‘ಗಾಂಧಿ ಕಥನ’. ಸಹಸ್ರ ಸಂಖ್ಯೆಯಲ್ಲಿ ಪುಸ್ತಕಗಳನ್ನು ಓದಿ ಈ ಕೃತಿಯನ್ನು ಬರೆದಿರುವುದು ಅವರ ಮಹಾನ್ ಪ್ರತಿಭೆಗೆ ಸಾಕ್ಷಿ. ಗಾಂಧಿಯನ್ನು ಒಪ್ಪಿಕೊಂಡು ಮತ್ತು ವಿಮರ್ಶಾತ್ಮಕವಾಗಿ ನೋಡುವುದಿದೆಯಲ್ಲ ಅದು ಸುಲಭದ್ದಲ್ಲ.
ಡಾ. ರಾಜೇಂದ್ರ ಚೆನ್ನಿ, ವಿಮರ್ಶಕ 

‘ಹೊಸ ಮನುಷ್ಯ’ ಪತ್ರಿಕೆಯ ಸಂಪಾದಕೀಯ ಬರಹಗಳಲ್ಲಿರುವ ಕರ್ನಾಟಕ ಸಂಸ್ಕೃತಿಯ ವಿಶ್ಲೇಷಣೆ ಅದ್ಭುತ.  ಬಹುಶಃ ಲಂಕೇಶ್ ಬಿಟ್ಟರೆ ನಾಗಭೂಷಣರೇ ಅಂಥ ದೃಷ್ಟಿಕೋನವುಳ್ಳವರಾಗಿದ್ದರು. ಅವರ ಗಾಂಧಿ ಕಥನವನ್ನು ಕನ್ನಡ ಸಮುದಾಯ ಒಪ್ಪಿಕೊಂಡಿತಲ್ಲ, ಇದು ಸಂಸ್ಕೃತಿಯ ಬಗ್ಗೆ ಈ ಕಾಲದಲ್ಲಿ ನಂಬಿಕೆ ಹುಟ್ಟಿಸುವಂಥ ಸಂಗತಿ. ರಾಜಕೀಯ ಗ್ರಹಿಕೆ ಮಾತ್ರವಲ್ಲ ಸಾಹಿತ್ಯ ಕೃತಿಗಳ ಸೂಕ್ಷ್ಮ ಓದುಗರಾಗಿದ್ದ ಇವರು ಎಂಥ ಅನಾರೋಗ್ಯದಲ್ಲಿಯೂ ‘ಹೊಸ ಮನುಷ್ಯ’ ಪತ್ರಿಕೆಯನ್ನು ನಿರಂತರವಾಗಿ ಹೊರತಂದಿದ್ದು ಅವರ ಬದ್ಧತೆಗೆ ಸಾಕ್ಷಿ. ಸಮಕಾಲೀನ ಚಿಂತನೆಗಳಿಗೆ ಸಂಬಂಧಿಸಿದ ಯಾವುದೇ ಗಂಭೀರ ವಿಷಯವನ್ನೂ ಕನ್ನಡದ ಜನರಿಗೆ ಓದಿಸಲೇಬೇಕು ಎಂದು ಹಟ ತೊಟ್ಟು ಅನುವಾದ ಮಾಡಿಸುತ್ತಿದ್ದರು. ಸಂಪಾದಿಸುತ್ತಿದ್ದರು. ಇಂದು ಕನ್ನಡದಲ್ಲಿ ಇದಕ್ಕೆ ಸಮನಾದ ಪತ್ರಿಕೆ ಇಲ್ಲವೇ ಇಲ್ಲ. ಈ ಪತ್ರಿಕೆಯ ಮೂಲಕ ಚರ್ಚೆ, ಸಂವಾದ ಏರ್ಪಡಿಸಿ ಅಕ್ಷರಗಳ ಮೂಲಕವೇ ಸಮುದಾಯವೊಂದನ್ನು ಕಟ್ಟಿದರಲ್ಲ ಅದು ಅವರ ಸಾಧನೆ.

ಇದನ್ನೂ ಓದಿ : DS Nagabhushan: ಗಾಂಧಿ ಕಥನದ ಲೇಖಕ, ಕೇಂದ್ರ ಸಾಹಿತ್ಯ ಅಕಾಡೆಮಿ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಿಎಸ್ ನಾಗಭೂಷಣ ನಿಧನ

ಇದನ್ನೂ ಓದಿ
DS Nagabhushan: ಗಾಂಧಿ ಕಥನದ ಲೇಖಕ, ಕೇಂದ್ರ ಸಾಹಿತ್ಯ ಅಕಾಡೆಮಿ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಿಎಸ್ ನಾಗಭೂಷಣ ನಿಧನ
ವರ್ಷಾಂತ್ಯ ವಿಶೇಷ 2020: ‘ಓದಿನಂಗಳ’ದಲ್ಲಿ ಕಾದಂಬರಿಕಾರ ವಿವೇಕ ಶಾನಭಾಗ
ವರ್ಷಾಂತ್ಯ ವಿಶೇಷ 2020: ‘ಓದಿನಂಗಳ’ದಲ್ಲಿ ಕಥೆಗಾರ ಅಮರೇಶ ನುಗಡೋಣಿ
ವರ್ಷಾಂತ್ಯ ವಿಶೇಷ 2020: ’ಓದಿನಂಗಳ‘ದಲ್ಲಿ ಪತ್ರಕರ್ತ ಡಿ. ಉಮಾಪತಿ

ವ್ಯಕ್ತಿ ಅಳಿದರೂ ನಮ್ಮೊಂದಿಗೆ ಶಾಶ್ವತವಾಗಿರುವುದು ಅವರ ವಿಚಾರಗಳು ಕೃತಿಗಳು. ‘ಇಂದಿಗೆ ಬೇಕಾದ ಗಾಂಧಿ’, ‘ಲೋಹಿಯಾ ಜೊತೆಯಲ್ಲಿ’, ‘ರೂಪ ರೂಪಗಳನು ಧಾಟಿ’, ‘ಕುವೆಂಪು ಒಂದು ಪುನರನ್ವೇಷಣೆ’, ‘ಕುವೆಂಪು ಸಾಹಿತ್ಯ ದರ್ಶನ’, ‘ಜಯ ಪ್ರಕಾಶ ನಾರಾಯಣ ಒಂದು ಅಪೂರ್ಣ ಕ್ರಾಂತಿಯ ಕಥೆ’, ‘ನಮ್ಮ ಶಾಮಣ್ಣ’, ‘ಕನ್ನಡದ ಮನಸು ಮತ್ತು ಇತರ ಲೇಖನಗಳು’, ‘ಕಾಲಕ್ರಮ’, ‘ಗಮನ’, ‘ಅನೇಕ’, ‘ಈ ಭೂಮಿಯಿಂದ ಆ ಆಕಾಶದವರೆಗೆ’, ‘ಮರಳಿ ಬರಲಿದೆ ಸಮಾಜವಾದ’, ‘ವಸಿಷ್ಠರು ಮತ್ತು ವಾಲ್ಮೀಕಿಯರು’…

 

Published On - 8:04 am, Thu, 19 May 22