Gokak Falls : ನಮ್ಮ ಕಾಯುವಿಕೆ ಮೊಬೈಲ್ ಚಾರ್ಜ್ ಆಗುವವರೆಗೆ, ನಮ್ಮ ಹುಡುಕಾಟ ಸಿಗದ ನೆಟ್​ವರ್ಕ್​ಗಾಗಿ

Gokak Falls : ನಮ್ಮ ಕಾಯುವಿಕೆ ಮೊಬೈಲ್ ಚಾರ್ಜ್ ಆಗುವವರೆಗೆ, ನಮ್ಮ ಹುಡುಕಾಟ ಸಿಗದ ನೆಟ್​ವರ್ಕ್​ಗಾಗಿ

Mobile Addiction : ಆಧುನಿಕತೆಗೆ ನಮ್ಮನ್ನು ನಾವೇ ಅಚ್ಚುಕಟ್ಟಾಗಿ ಯಂತ್ರಗಳಂತೆ ವಾಲಿಸಿಕೊಂಡು ತುಂಬ ಎತ್ತರಕ್ಕೆ ಹಾರಿದ್ದೇವೆ. ನಾವೀಗ ಕಾಣದ ಬಾಹ್ಯಲೋಕಕ್ಕೆ ಹಾರಬಲ್ಲೆವು, ಇಲ್ಲದ ಕಲ್ಪನೆಯ ಲೋಕವನ್ನು ಸೃಷ್ಟಿಸಲೂ ಬಲ್ಲೆವು (ಮೆಟಾವರ್ಸ). ಆದರೆ ನಮ್ಮೊಳಗಿನ ನಮ್ಮನ್ನು ಅದೆಷ್ಟು ಅರಿತುಕೊಂಡಿದ್ದೇವೆ?

ಶ್ರೀದೇವಿ ಕಳಸದ | Shridevi Kalasad

|

May 18, 2022 | 3:24 PM

Gokak Falls | ಗೋಕಾಕ ಫಾಲ್ಸ್ : ಮೊನ್ನೆ ಬಸ್ಸನಲ್ಲಿ ಪ್ರಯಾಣಿಸುವಾಗ ನನ್ನ ಪಕ್ಕ ಅಮ್ಮ, ಮಗ ಕುಳಿತಿದ್ದರು. ಮಗುವಿಗೆ ಮೂರುನಾಲ್ಕು ವರ್ಷವಿದ್ದಿರಬಹುದು. ಸಹಜವಾಗಿಯೆ ನನ್ನ ದೃಷ್ಟಿ ಆ ಮುದ್ದು ಮಗುವಿನ ಮೇಲೆ ಇತ್ತು. ಕುಳಿತುಕೊಳ್ಳುತ್ತಲೇ ಅವನು ತಾಯಿಯಿಂದ ಮೊಬೈಲ್ ಪಡೆದವನು ಯುಟ್ಯೂಬ್ ನಲ್ಲಿ ವಿಡಿಯೋ ನೋಡ್ತಾ ಕುಳಿತಿದ್ದ. ನಾನು ಮಾತಾಡಿಸಿದರು no response. ನಾನೂ ನನ್ನ ಮೊಬೈಲ್​ನಲ್ಲಿ ಮುಳುಗಿದೆ. ಅವರ ಅಮ್ಮನೂ ಒಂದು ಮೊಬೈಲ್ ಹಿಡಿದು ಕುಳಿತಿದ್ದರು. ಸ್ವಲ್ಪ ಹೊತ್ತಿಗೆ ನನಗೆ ಮೊಬೈಲ್ ಬೋರ್ ಆಗಿ ಬ್ಯಾಗಿಗೆ ಸೇರಿಸಿದೆ. ಆದರೆ ಅವನು ಮಾತ್ರ ಸ್ಕ್ರೋಲ್ ಮಾಡ್ತಾನೆ ಇದ್ದ. ಅವರ ಅಮ್ಮ ಏನೋ ಗೊಂದಲದಲ್ಲಿ ಇದ್ದಂತೆ ಕಂಡಿತು. ನಿಧಾನಕ್ಕೆ ಮಗನ ಹತ್ರ ಕಂದಾ ಎರಡು ನಿಮಿಷ ನಿನ್ನ ಫೋನ್ ಕೊಡೋ ನನ್ನ ಫೋನ್ ನಲ್ಲಿ ನೆಟವರ್ಕ ಇಲ್ಲ ಅಂತ ಕೇಳಿಕೊಂಡರು. ಆ ಮಗು ಜಪ್ಪಯ್ಯ ಅನ್ನಲಿಲ್ಲ. ಕತ್ತೂ ಮೇಲೆತ್ತಲಿಲ್ಲ. ಎಡಿಕ್ಷನ್ ಅಂದೆ. ಅದಕ್ಕಾಕೆ ಹೌದು ನಾವಿಬ್ಬರೂ ಕೆಲಸಕ್ಕೆ ಹೋಗ್ತೀವಿ. ಮನೆಗೆಲಸ ಮಾಡುತ್ತಲೇ ಅವನನ್ನು ನೋಡಿಕೊಳ್ಳಲು ಸಹಾಯಕಿ ಇದ್ದಾಳೆ. ಅವನು ಸುಮ್ಮನೆ ಇರಬೇಕಲ್ಲ ಹಾಗಾಗಿ ಮೊಬೈಲ್ ಕೊಡಿಸಿದ್ದೆವೆ. ಅದೇ ಅಭ್ಯಾಸವಾಗಿದೆ ಎಂದರು. ಪ್ರಯಾಣದ ಸುಖದ ಪರಿವೆಯೇ ಅವರಿಬ್ಬರಿಗೂ ಇದ್ದಂತಿರಲಿಲ್ಲ. ಸುಷ್ಮಾ ಸವಸುದ್ದಿ, ಪತ್ರಿಕೋದ್ಯಮ ವಿದ್ಯಾರ್ಥಿನಿ, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ

(ಹರಿವು 15)

ಅವರ ಈ ನಡೆಗೆ ಏನು ಪ್ರತಿಕ್ರಿಯಿಸಬೇಕು ಎನ್ನುವುದು ತಿಳಿಯದೇ ಮುಗುಳ್ನಗೆ ಎಸೆದು ಮತ್ತೆ ನಾನೂ ನನ್ನ ಪೋನ್ ಹಿಡಿದು ಕುಳಿತೆ. ಅವರು, ನಿಮ್ಮದು ಯಾವ ಸಿಮ್, ನೆಟ್ವರ್ಕ್ ಇದೆಯಾ ಅಂದರು. ನನ್ನ ಎರಡು ಸಿಮ್​ಗಳಲ್ಲಿ ಒಂದರ ನೆಟ್​ವರ್ಕ್ ಮಾತ್ರ ಇತ್ತು. ಅವರು ಕೆಲಸದ ವಿಷಯವಾಗಿ ತಮ್ಮ ಸಹದ್ಯೋಗಿಗೆ ಕರೆ ಮಾಡಬೇಕಿತ್ತು. ನನ್ನ ಮೊಬೈಲ್​ನಿಂದಲೇ ಫೋನ್ ಮಾಡಿದರು. ಬಸ್​ ಸ್ವಲ್ಪ ದೂರ ಚಲಿಸುತ್ತಿದ್ದಂತೆ ಎಲ್ಲಾ ಸಿಮ್ ನೆಟ್ವರ್ಕ್ ಬಂದ್. ಛೆ ಅನ್ನಿಸಿತು ನನಗೆ. ಅತ್ತ ಮಗುವಿಗೂ ಕಿರಿಕಿರಿ. ನೆಟ್ವರ್ಕ್ ಸಿಗುವವರೆಗೂ ನಮ್ಮ ಮೂವರ ಗೋಳು ನೋಡಬೇಕಿತ್ತು. ಇದು ಬಹಶಃ ಆಧುನಿಕತೆಯ ಚಾಪಿಗೆ ತಾಗಿದವರೆಲ್ಲರಿಗೂ ಅಂಟಿಕೊಂಡಿರುವ ಗೀಳು. ಕೆಲವರಿಗೆ ಅಡಿಕ್ಷನ್ ಅನ್ನೋದಕ್ಕಿಂತ ಡಿಪೆಂಡೆನ್ಸಿ. ಮಾಧ್ಯಮ ವಿದ್ಯಾರ್ಥಿನಿಯಾಗಿ ನಾನಿದನ್ನು ಅಲ್ಲಗಳೆಯುವಹಾಗಿಲ್ಲ. ಆ ಡಿಪೆಂಡೆನ್ಸಿ ಕೂಡ ಆಧುನಿಕತೆ ಸೃಷ್ಟಿಸಿದ ಅನಿವಾರ್ಯವೇ.

ಆದರೆ ಈ ಗೀಳು ಅತಿಯಾದರೆ ಎಂತಹ ಘೋರ ಅಪಘಾತಗಳು ಸಂಭವಿಸಬಲ್ಲವು. ಕಳೆದ ತಿಂಗಳು ಪಿಯು ಪರೀಕ್ಷೆ ಬರಿಯಬೇಕಾದ ಹುಡುಗ ಇದ್ದಕ್ಕಿದ್ದಂತೆ ಮನೆ ಮಹಡಿ ಮೇಲಿಂದ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದ. ಪೊಲೀಸ್ ತನಿಖೆಯ ಬಳಿಕ ಗೊತ್ತಾಗಿದ್ದು, ಅವನ ಸಾವಿಗೆ ಪ್ರೇರೇಪಿಸಿದ್ದು ಆತ ತನ್ನ ಮೊಬೈಲ್​ನಲ್ಲಿ ನೋಡಿದ ಭಯಾನಕ ಗೇಮ್ ಎಂದು. ಈ ಮೊಬೈಲ್, ಇಂಟರ್ನೆಟ್, ಗೇಮ್ಸ್, ಎಲೆಕ್ಟ್ರಾನಿಕ್ ಗ್ಯಾಜೆಟ್​ಗಳು ಮಕ್ಕಳನ್ನು ಬಹು ಬೇಗ ಆಕರ್ಷಿಸುವ ಶಕ್ತಿ ಹೊಂದಿವೆ. ಮೊದಲೆಲ್ಲ ಶಾಲೆ ಕಾಲೇಜುಗಳು ಮಕ್ಕಳನ್ನು ಇವುಗಳಿಂದ ದೂರ ಇಡಲು ಪ್ರೇರೇಪಿಸುತ್ತಿದ್ದವು. ಆದರೆ ಈ ಲಾಕಡೌನ್ ಸೃಷ್ಟಿಸಿದ ಅನಿವಾರ್ಯತೆಯಿಂದಾಗಿ ಮಕ್ಕಳೂ ಅಂಟಿಕೊಳ್ಳಬೇಕಾಯಿತು. ಅಂಗೈಯಲ್ಲಿ ಜಗತ್ತನ್ನೇ ಜಾಲಾಡಿಸುವ ಅದರ ಅಮಲಿನಿಂದ ದೊಡ್ಡವರಿಗೆ ತಪ್ಪಿಸಿಕೊಳ್ಳಲು ಆಗಿಲ್ಲ ಅಂದ್ರೆ ಮಕ್ಕಳ ಮನಸ್ಸಿಂದ ಅದನ್ನ ದೂರ ಇಡುವುದು ಸುಲಭ ಸಾಧ್ಯವಲ್ಲವಲ್ಲ?

ಇದನ್ನೂ ಓದಿ : Gokak Falls : ಮುಖವಾಡದ ಮನುಷ್ಯರಿಗಿಂತ ಪ್ರತಿಫಲಾಪೇಕ್ಷೆ ಬಯಸದ ಪ್ರಾಣಿಗಳೇ ಮೇಲು

ದಶಕಗಳಿಂದಲೂ ಈ ಮೊಬೈಲ್ ಬಳಕೆ, ಅದರ ದುಷ್ಪರಿಣಾಮಗಳ ಕುರಿತು ಸಂಶೋಧನೆ ನಡೆಯುತ್ತಲೇ ಇವೆ. ಲಂಡನ್ ಯೂನಿವರ್ಸಿಟಿ ಒಂದರ ವರದಿ ಪ್ರಕಾರ ಅತಿ ಹೆಚ್ಚು ಮೊಬೈಲ್ ಬಳಕೆಯಿಂದ ಮೆದುಳಿನ ಕ್ಯಾನ್ಸರ್ ಆಗುವ ಸಾದ್ಯತೆ ಹೆಚ್ಚಿದೆ. 2017 ರಲ್ಲಿ ನಡೆಸಿದ ಸಂಶೋಧನೆ ಒಂದರ ಪ್ರಕಾರ ಅತಿಯಾದ ಅಡಿಕ್ಷನ್ ಖಿನ್ನತೆಗೆ, ನಿದ್ರಾಹೀನತೆಗೆ ಕಾರಣವಾಗುತ್ತದೆ. ಮಕ್ಕಳ ಮೇಲಂತೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆತ್ಮವಿಶ್ವಾಸವನ್ನು ಕುಂದಿಸಿಬಿಡಬಹುದು.

ಅದೊಂದು ಕಾಲವಿತ್ತು ಹೈಸ್ಕೂಲ್​ ಅಡ್ಮಿಶನ್ ಗೆ 5 ರೂಪಾಯಿ ಹೊಂದಿಸೋಕೆ ಒದ್ದಾಡಿ ಹೋಗಿದ್ರಂತೆ ಅಜ್ಜ. ಆದರೂ ಆ ಕಾಲಕ್ಕೆ ಊರ ಹೈಸ್ಕೂಲ್ ಮೆಟ್ಟಿಲು ಏರಿದ ನಾಲ್ವರಲ್ಲಿ ತಾವು ಒಬ್ಬರು ಎಂಬ ಹೆಮ್ಮೆ ಇತ್ತು ಅವರ ಮೀಸೆಗೆ. ಸೈನ್ಯದಲ್ಲಿ ಇದ್ದ ಅಜ್ಜನ ಪಾತ್ರಕ್ಕೆ ದಿನ ಕಾಯ್ತಾ ಇದ್ರಂತೆ ಅಜ್ಜಿ. ಅವರ ಕಾಯುವಿಕೆಯಲ್ಲೂ ಸಂತಸ ಕಂಡವರವರು. ವಾರಕ್ಕೆ ಒಂದು ದಿನ ಪ್ರಸಾರವಾಗುವ ಮಹಾಭಾರತ ಧಾರಾವಾಹಿಗೆ ಒಂದು ಗಂಟೆಗೂ ಮೊದಲೇ ಹಾಸಿಗೆ ಸಮೇತ ಊರ ಜನರೆಲ್ಲ ಇರುವ ಒಂದೇ ಟಿವಿಯ ಮುಂದೆ ಹಾಜರಾಗುತ್ತಿದ್ದರಂತೆ ಇದು ಅಮ್ಮನ ಬಾಲ್ಯದ ನೆನಪುಗಳಲ್ಲಿ ಒಂದು. ಚಿಕ್ಕಪ್ಪನ ಹಣೆಯ ಮೇಲಿರುವ ಮಾಸದ ಗಾಯದ ಕಲೆಯೊಂದು ಅವರ ಮರಕೋತಿ ಆಟದ ಮಜವನ್ನು ಆಗಾಗ ಬಿಚ್ಚಿಡುತ್ತದೆ. ಇತ್ತೀಚಿನ ಆಹಾರ ಪದ್ಧತಿಗೆ ಬೇಸತ್ತ ಅಪ್ಪನ ಕಥೆಗಳಲ್ಲತೂ ಅಜ್ಜಿ ಮಾಡುವ ರುಚಿರುಚಿ ತಿನಿಸುಗಳದ್ದೆ ರಾಜ್ಯಭಾರ. ಇವುಗಳೆಲ್ಲ ಅಜ್ಜ, ಅಜ್ಜಿ, ಅಪ್ಪ, ಅಮ್ಮ ಸೇರಿದಂತೆ ನಮ್ಮ ಹಿರಿಯರು ನಮ್ಮೊಡನೆ ಹಂಚಿಕೊಂಡ ಅವರ ನೆನಪುಗಳಷ್ಟೆ. ಅವುಗಳು ಯಾವುವು ನಮ್ಮ ಅನುಭವಕ್ಕೆ ಬರಲೇ ಇಲ್ಲ.  ಹೀಗಾಗಿ ಅವರ ಒದ್ದಾಟ, ಕಾಯುವಿಕೆಯ ಸುಖ ಯಾವುದು ನಮಗೆ ದಕ್ಕಲೇ ಇಲ್ಲ. ನಮ್ಮ ಕಾಯುವಿಕೆ ಏನಿದ್ದರೂ ಮೊಬೈಲ್ ಚಾರ್ಜ್ ಆಗುವವರೆಗೆ ಮಾತ್ರ. ನಮ್ಮ ಹುಡುಕಾಟ ಏನಿದ್ರೂ ಸಿಗದ ನೆಟ್ವರ್ಕ್​ಗಾಗಿ ಮಾತ್ರ.

ಮೊಬೈಲ್ ಮಾತ್ರ ಅಲ್ಲ. ನಾವು ನಮ್ಮ ಆಧುನಿಕತೆಗೆ ನಮ್ಮನ್ನು ನಾವೇ ಅಚ್ಚುಕಟ್ಟಾಗಿ ಯಂತ್ರಗಳಂತೆ ವಾಲಿಸಿಕೊಂಡು ತುಂಬ ಎತ್ತರಕ್ಕೆ ಹಾರಿದ್ದೇವೆ. ನಾವೀಗ ಕಾಣದ ಬಾಹ್ಯಲೋಕಕ್ಕೆ ಹಾರಬಲ್ಲೆವು, ಇಲ್ಲದ ಕಲ್ಪನೆಯ ಲೋಕವನ್ನು ಸೃಷ್ಟಿಸಲೂ ಬಲ್ಲೆವು (ಮೆಟಾವರ್ಸ). ಆದರೆ ನಮ್ಮೊಳಗಿನ ನಮ್ಮನ್ನು ಅದೆಷ್ಟು ಅರಿತುಕೊಂಡಿದ್ದೇವೆ? ಎಂಬ ಪ್ರಶ್ನೆ ಆಗಾಗ ಕಾಡುತ್ತದೆ.

ಇದನ್ನೂ ಓದಿ  : International Museum Day 2022 : ಬೀದರಿನ ಕೋಟೆ ಕಂದಕದಿಂದ ಹಿಮಾಲಯದತನಕ ವಾಜೇಂದ್ರ ಮ್ಯೂಸಿಯಂ ಪಯಣ

ನಾವೆಲ್ಲ ಇಂದು ತುಂಬಾ ವೇಗದ ಓಟದಲ್ಲಿದ್ದೇವೆ. ಒಮ್ಮೆ ನಿಂತು ಹಿಂತಿರುಗಿ ನೋಡುವ ತಾಳ್ಮೆ, ಸಮಯ ಎಲ್ಲವನ್ನೂ ಕಾಲದ ಮಿತಿಗೆ ಧಾರೆ ಎರೆದು ಕಾಲಾಯ ತಸ್ಮಯ ನಮಃ ಎನ್ನುತ್ತ ತಪ್ಪನೆಲ್ಲ ಕಾಲಕ್ಕೆ ಒಪ್ಪಿಸಿ ಮತ್ತೆ ನಮ್ಮ ಕಾಲುಗಳ ವೇಗ ಹೆಚ್ಚಿಸುತ್ತೇವೆ. ನಿಂತರೆ ಎಲ್ಲಿ ಜಗತ್ತು ನನ್ನ ಹಿಂದೆಯೇ ಬಿಟ್ಟು ಹೋದೀತು ಎಂಬ ಭಯ. ಸಹ ಓಟಗಾರರು ನನಗಿಂತ ಮುಂದೆ ಹೋದಾರು ಎಂಬ ಆತಂಕ. ಈ ಭಯ ಮತ್ತು ಆತಂಕಗಳೆ ಕೆಲವೊಮ್ಮೆ ನಮ್ಮೊಳಗಿನ ಮನುಜತ್ವವನ್ನು, ನಮ್ಮೊಳಗಿನ ಅಂತಃಕರಣವನ್ನು ಅಲ್ಲಗಳೆದು ಬಿಡುತ್ತವೆಯೇನೋ ಎಂಬುದು ನನ್ನ ಆತಂಕ.

ಬದುಕಬೇಕೆಂದರೆ ಓಡಲೆಬೇಕು. ಬೇರೆ ದಾರಿ ಇಲ್ಲ. ಹೊಸ ಬದಲಾವಣೆಗಳಿಗೆ ನಮ್ಮನ್ನು ನಾವು ಹೊಂದಿಸಿಕೊಳ್ಳಲ್ಲೆ ಬೇಕಾದದ್ದು ಅನಿವಾರ್ಯ. ಆದರೆ ಅದೆಲ್ಲದರ ಮಧ್ಯೆಯೂ ಈ ಹಾಳು – ಗಿಳುಗಳನ್ನೆಲ್ಲ ಮೆಟ್ಟಿ ಹೊರಬಂದು ನಾನು, ನನ್ನದು, ನಾವು, ನಮ್ಮದು ಎಂಬುದರತ್ತ ನೋಡಬೇಕಿದೆ. ಅಪ್ಪ ಅಮ್ಮ ಇಬ್ಬರ ಬಳಿಯೂ ಸಮಯ ಇಲ್ಲ ಅಂತ ಮಗುವಿಗೆ ಒಂದು ಫೋನ್ ಕೊಡುವುದು, ಪೋನ್ ಬಳಕೆಯಲ್ಲಿನ ಅದರ ಚಾಕಚಕ್ಯತೆ ನೋಡಿ ಅದು ಮಗುವಿನ ಜಾಣತನ ಎಂದು ಬೀಗುವವರನ್ನು ನಾವು ನೋಡುತ್ತೇವೆ. ಆದರೆ ಅದು ಮಗುವಿನ ಸೃಜನಶೀಲತೆಯನ್ನು ಮಿತಿಗೊಳಿಸುತ್ತದೆ ಎನ್ನುತ್ತಾರೆ ತಜ್ಞರು. ಮಕ್ಕಳು ನಾವು ಹೇಳಿದ್ದನ್ನು ಕಲಿಯುವುದಕ್ಕಿಂತ ನೋಡಿ ಕಲಿಯುವುದೇ ಹೆಚ್ಚು. ಸ್ನೇಹಿತರೊಬ್ಬರಿಗೆ ನಿಮಗೆ ಇಷ್ಟು ಪುಸ್ತಕ ಓದುವ ಹುಚ್ಚು ಹೇಗೆ ಹುಟ್ಟಿದ್ದು ಅಂತಾ ಕೇಳಿದ್ದಕ್ಕೆ – ನಾನು ಚಿಕ್ಕವನಿದ್ದಾಗ ನಮ್ಮ ಅಪ್ಪ, ಅಮ್ಮ, ಅಜ್ಜ ಎಲ್ಲರೂ ಓದುತ್ತಿದ್ದರು. ಅದನ್ನು ನೋಡಿ ನನಗೂ ಅದೇ ಆಸಕ್ತಿ ಬೆಳೆಯಿತು ಅಂದಿದ್ದರು. ಈಗ ನಾವೇನೋ ಮಾಡುತ್ತೇವೋ ಅದನ್ನೇ ಮಕ್ಕಳು ಅನುಕರಿಸುತ್ತಿದ್ದಾರೆ. ಹಾಗಿದ್ದರೆ ನಾವೇನು ಮಾಡಬೇಕು?

ಈ ಅಂಕಣದ ಎಲ್ಲಾ ಬರಹಗಳನ್ನು ಓದಲು ಕ್ಲಿಕ್ ಮಾಡಿ

ಪ್ರತಿಕ್ರಿಯೆಗಾಗಿ : tv9kannadadigital@gmail.com

ಇದನ್ನೂ ಓದಿ

Follow us on

Related Stories

Most Read Stories

Click on your DTH Provider to Add TV9 Kannada