K. S. Nissar Ahmed Birth Anniversary : ನಿರ್ಭಯದಲಿ ದನಿಯೆತ್ತು! ಶಾಂತಿ ಬರಲಿ ಧ್ವಜವ ಹೊತ್ತು, ನಿನ್ನೊಳಗನೆ ತೋಡು

|

Updated on: Feb 05, 2022 | 4:32 PM

Poetry : ‘ಇಬ್ಬಂದಿ’ ಮತ್ತು ‘ಉಭಯ ಕಷ್ಟ’ ಒಂದು ಕೋಮಿನವರು ಇನ್ನೊಂದು ಕೋಮಿನವರನ್ನು ಸಂಶಯದಿಂದ ನೋಡಿದ ಪದ್ಯಗಳಾಗಿವೆ. ಇಬ್ಬಂದಿ ಪದ್ಯದಲ್ಲಿ ಎರಡೂ ಧರ್ಮಗಳ ವಿಶಿಷ್ಟ ಪರಿಕಲ್ಪನೆಯನ್ನು, ಆಯಾ ಧರ್ಮದ ಪರಿಭಾಷೆಗಳನ್ನು ಪಕ್ಕ ಪಕ್ಕ ಇಡುವುದರ ಮೂಲಕ ಹೊಸದೇ ವಿನ್ಯಾಸವನ್ನು ಸಾಧಿಸುತ್ತಾರೆ.’ ಪಿ. ಚಂದ್ರಿಕಾ

K. S. Nissar Ahmed Birth Anniversary : ನಿರ್ಭಯದಲಿ ದನಿಯೆತ್ತು! ಶಾಂತಿ ಬರಲಿ ಧ್ವಜವ ಹೊತ್ತು, ನಿನ್ನೊಳಗನೆ ತೋಡು
ಕೆ. ಎಸ್. ನಿಸಾರ್ ಅಹಮ್ಮದ್
Follow us on

ಡಾ. ಕೆ. ಎಸ್. ನಿಸಾರ್ ಅಹಮ್ಮದ್ | Dr. K. S Nissar Ahmed : ನಿಮ್ಮೊಡನಿದ್ದೂ ನಿಮ್ಮಂತಾಗದೆ, ನಾನೆಂಬ ಪರಕೀಯ, ಅಮ್ಮ ಆಚಾರ ಮತ್ತು ನಾನು, ರಂಗೋಲಿ ಮತ್ತು ಮಗ ಹೀಗೆ ಅನೇಕ ಪದ್ಯಗಳಲ್ಲಿ ಇದನ್ನು ತರುತ್ತಾರೆ. ಉಟ್ಟನೀಲಿ ನಿಲುವಂಗಿಯ ಬೆಳ್ಳಿ ಗುಂಡಿಯ ಚಂದ್ರನನ್ನು ವರ್ಣಿಸುತ್ತಾ ಕಾವ್ಯ ಲೋಕದಲ್ಲಿ ನಮ್ಮನ್ನು ವಿಹರಿಸುವ ಹಾಗೇ ಮಾಡಬಲ್ಲ ನಿಸಾರರಿಗೆ ವಾಸ್ತವ ಮಾರ್ಗದಲ್ಲಿ ನಮ್ಮನ್ನು ಕರೆದೊಯ್ಯುವುದೂ ಗೊತ್ತಿದೆ. ವ್ಯಂಗ್ಯ, ವಿಡಂಬನೆ ಮತ್ತು ನಾಟಕೀಯ ಗುಣಗಳಿಂದಲೇ ಇಂಥಾ ಪದ್ಯಗಳು ತೀರಾ ಸರಳವಾಗಿ ನಮ್ಮನ್ನು ಮುಟ್ಟುತ್ತದೆ. ಕವಿ ಪ್ರಜ್ಜೆ ಇಲ್ಲೆಲ್ಲ ದೂರ ನಿಲ್ಲುವುದಿಲ್ಲ, ಸಮೂಹದ ಪ್ರತಿನಿಧಿಯಾಗಿ ಮಾತಾಡುವ ಸಮೂಹವನ್ನು ಒಳಗೊಳ್ಳುವ ಪ್ರಕ್ರಿಯೆ ಇಲ್ಲಾಗಿದೆ. ಆದ್ದರಿಂದಲೇ ನಾವು ನೀವು ಎನ್ನುವುದರ ಮಧ್ಯೆ ಇರುವ ದಟ್ಟವಾದ ಗೆರೆ ಇಲ್ಲ ಎನ್ನುವಷ್ಟು ಸಣ್ಣದಾಗುತ್ತದೆ. ಮತ್ತು ಹೆಚ್ಚು ಆಪ್ತವಾಗುತ್ತದೆ.

ಪಿ. ಚಂದ್ರಿಕಾ, ಕವಿ, ಲೇಖಕಿ

*

(ಭಾಗ – 3)

ಬರೀ ಹೊಟ್ಟೆ ಹುಟ್ಟುಗಳ ಊಳಿಗಕ್ಕೆ ಹುಟ್ಟಿದವಕ್ಕೆ

ಗೋರಿ, ಪಕ್ಷ, ನಲವತ್ತನೆಯ ದಿನದ ಪುನಸ್ಕಾರ

ಹೇಗೆ ಸಿಕ್ಕಬೇಕು? ಸ್ಮೃತಿ, ಸ್ಮಾರಕಗಳು

ಹೇಗೆ ನಿಲ್ಲಬೇಕು? (ಪ್ರಾಗ್ಬಂಧಗಳು)

ಕೌಟುಂಬಿಕ ಚೌಕಟ್ಟಿನ ಒಳಗೆ ಬೆಳೆಯುವ ಅಮ್ಮ ಆಚಾರ ಮತ್ತು ನಾನು ಎನ್ನುವ ಪದ್ಯ ಎಲ್ಲ ಆಧುನಿಕ ಸಂಗತಿಗಳ ಜೊತೆ ಸಂಪ್ರದಾಯವನ್ನು ತಂದಿರಿಸುವುದರ ಮೂಲಕ ಸಾಂಸ್ಕೃತಿಕ ಭಿನ್ನತೆಯನ್ನು ದಾಖಲು ಮಾಡುತ್ತಾರೆ. ಧಾರ್ಮಿಕ ನಿಬಂಧನೆಗಳನ್ನು ಮೀರಲಾರದ ಆಧುನಿಕತೆ ವ್ಯಂಗ್ಯ ಕೂಡಾ ಅಲ್ಲೆ ಇಣುಕಿ ಹಾಕುತ್ತದೆ. ಚೌಕಟ್ಟುಗಳನ್ನು ಮೀರ ಹೊರಟವರೂ ಹೇಗೆ ಚೌಕಟ್ಟಿನ ಒಳಗೆ ಬಂದಿಯಾಗುತ್ತಾರೆ ಎನ್ನುವುದು ಇಂತಲ್ಲಿ ನಿಸಾರ್ ವಿವರಿಸುವ ಮತ್ತು ಅದರಿಂದ ಉಂಟಾಗುವ ಅಸಹಾಯಕಸ್ಥಿತಿಯನ್ನು ವ್ಯಕ್ತಪಡಿಸುತ್ತಾರೆ. ಕವಿತೆಯ ಕೊನೆಯಲ್ಲಿ ಆಧುನಿಕ ಹೆಂಡತಿ ಲಿಪ್ಸ್ಟಿಕ್ ಮೊದಲಾದ ಆಧುನಿಕ ಅಲಂಕರಣ ಮಾಡಿಕೊಂಡು ವಾಕಿಂಗ್ ಹೊರಟವಳು ಮರೆತ ಬುರ್ಕಾವನ್ನು ಧರಿಸಿದಾಗಲೇ ಅಷ್ಟು ಸುಲಭವಲ್ಲದ ಬದಲಾವಣೆಯ ಸೂಚನೆ ಕೊಡುತ್ತಾರೆ. ಪ್ರಸಂಗಿಕವಾಗಿ ಇದು ನಗು ಉಕ್ಕಿದರೂ ಅದು ಅಲ್ಲಿಗೆ ನಿಲ್ಲದೆ ಒಪ್ಪುವ ಮತ್ತು ಒಪ್ಪಿಕೊಳ್ಳದ ಎರಡು ಧ್ರುವಗಳ ನಡುವಣ ಸ್ಥಿತಿಯೇ ಆಗುತ್ತದೆ. ಘಟನೆಯ ಮೂಲಕ ಇದನ್ನು ವಿವರಿಸಿರುವುದರಿಂದ ಕೇಳುಗನಿಗೆ ಮುಂದೇನಾಗುತ್ತದೆ ಎನ್ನುವ ಒಂದು ಕುತೂಹಲ ಕೊನೆಯ ವರೆಗೂ ಉಳಿದೇ ಇರುತ್ತದೆ.

ಇಂಥಾದ್ದೆ ರಂಗೋಲಿ ಮತ್ತು ಮಗ ಎನ್ನುವ ಕವಿತೆಯಲ್ಲಿ ವ್ಯಕ್ತವಾಗುತ್ತದೆ. ಧಾರ್ಮಿಕ ಸಂಗತಿಗಳು ಅನುಸರಿಸುವವರಲ್ಲಿ ಹೇಗೆ ಭಿನ್ನವಾಗುತ್ತದೆ ಎನ್ನುವುದೇ ವಸ್ತು. ಮಗ ರಂಗೋಲಿಯನ್ನು ನೋಡಿ ದಿನಾ ಯಾಕೆ ಬಿಡಿಸುತ್ತಾರೆ ಇವರು ಹೀಗೆ ಚಕ್ರ ಬಂದ ಎಂದು ಕೇಳುವಾಗ ಕವಿಯ ಮನಸ್ಸಿನಲ್ಲಿ ಚಿಕ್ಕಂದಿನಿಂದಲೂ ಇರುವ ನೆನಪುಗಳೆಲ್ಲಾ ಹಾದು ಹೋಗುತ್ತವೆ. ಮಗ ಕೇಳುವ ಖುರಾನ್‌ನಲ್ಲಿ ಬರೆದಿದೆಯೇ ಎನ್ನುವ ಮುಗ್ಧ ಪ್ರಶ್ನೆಗೆ ಉತ್ತರಿಸಲೇ ಆಗದ ಅಸಹಾಯಕತೆಗೆ ಕವಿ ಎದುರು ನಿಲ್ಲುತ್ತಾನೆ. ಈ ಧಾರ್ಮಿಕ ದ್ವಂದ್ವಗಳನ್ನು ಬಗೆ ಹರಿಸಿಕೊಳ್ಳುವುದಾದರೂ ಹೇಗೆ?

ಭಾಗ 1 : K. S. Nissar Ahmed Birth Anniversary : ಚೆಲ್ಲಿದ ರಕ್ತದಲ್ಲಿ ರಾಷ್ಟ್ರೀಯತೆಯ ಧಾತುಗಳ ನನ್ನೆದುರಲ್ಲೇ ತನಿಖೆ ಮಾಡುವ ಕ್ಷಣ

ನಿಸಾರ್ ಅಹಮದ್ ಇಂತಲ್ಲಿ ಆಧುನಿಕತೆ ಮತ್ತು ಆಚರಣೆ, ನಂಬಿಕೆ ಮತ್ತು ವಿಧಿ, ಶ್ರದ್ಧೆ ಮತ್ತು ಆತ್ಮಸಾಕ್ಷಿಗೆ ತಮ್ಮನ್ನು ತಾವೇ ಎದುರು ಮಾಡಿಕೊಳ್ಳುತ್ತಾರೆ. ಒಂದು ನಿರ್ದಿಷ್ಟ ಸಮಾಜದ ಕಟ್ಟುಪಾಡುಗಳು ಮನುಷ್ಯನ ಎದುರು ತಂದು ನಿಲ್ಲಿಸುವ ಪ್ರಶ್ನೆಗೆ ಉತ್ತರ ಹುಡುಕುವುದು ಹೇಗೆ ನಾನು ಅವರಿಗಿಂತ ಭಿನ್ನ ಎಂತಲೋ, ಇಲ್ಲ ನಾನೂ ಅವರ ಹಾಗೆ ಎಂತಲೋ ಇಂಥಾ ಸೂಕ್ಷ್ಮಗಳ ನಡುವೆ ಕವಿತೆ ಬೆಳೆದು ಕೊಡುವ ಹೊಳಹು ನಿಸಾರ್ ಅವರನ್ನು ಓದುಗರಿಗೆ ಆಪ್ತವಾಗುವ ಹಾಗೇ ಮಾಡುತ್ತದೆ.

ಹಾಗೆಯೇ ‘ಇಬ್ಬಂದಿ’ ಮತ್ತು ‘ಉಭಯ ಕಷ್ಟ’ ಒಂದು ಕೋಮಿನವರು ಇನ್ನೊಂದು ಕೋಮಿನವರನ್ನು ಸಂಶಯದಿಂದ ನೋಡಿದ ಪದ್ಯಗಳಾಗಿವೆ. ಇಬ್ಬಂದಿ ಪದ್ಯದಲ್ಲಿ ಎರಡೂ ಧರ್ಮಗಳ ವಿಶಿಷ್ಟ ಪರಿಕಲ್ಪನೆಯನ್ನು, ಆಯಾ ಧರ್ಮದ ಪರಿಭಾಷೆಗಳನ್ನು ಪಕ್ಕ ಪಕ್ಕ ಇಡುವುದರ ಮೂಲಕ ಹೊಸದೇ ವಿನ್ಯಾಸವನ್ನು ಸಾಧಿಸುತ್ತಾರೆ.

ಬ್ರಾಹ್ಮೀ ಮಹೂರ್ಥದ ಘಂಟಾನಾದದೆಚ್ಚರದಲ್ಲಿ

ಬೆಳ್ದಿಂಗಳನೊರ್ದ ಬೆಳಸು- ಮಿನಾರು:

ಕಂದಮ್ಮನ ಕನಸು ಪವಿತ್ರಾತ್ಮರ ಮಜಾರು

ರಂಜಾನಿನಿರುಳ ಚಂದ್ರರೇಖೆ …’

ನಿಸಾರ್ ಅವರಿಗೆ ಧರ್ಮ ಎನ್ನುವುದು ಚೌಕಟ್ಟು. ಪ್ರತಿಸಲವೂ ಅವರು ಅದನ್ನು ಮೀರಲು ನೋಡುತ್ತಿರುತ್ತಾರೆ. ಹೀಗಾಗೇ ಆಧುನಿಕತೆ ಮತ್ತು ಸಾಂಪ್ರದಾಯಿಕತೆಯ ಮಧ್ಯೆ ಇರುವ ದ್ವಂದ್ವವನ್ನು ಅವರ ಕವಿತೆಗಳು ಬೇರೆ ಬೇರೆ ಆಯಾಮಗಳಲ್ಲಿ ಹಿಡಿಯಲು ಯತ್ನಿಸುತ್ತವೆ. ಅವರಿಗೆ ಖುರಾನ್ ಹೇಗೋ ಭಗವದ್ಗೀತೆ ಕೂಡಾ ಗೊತ್ತು. ಭಗವದ್ಗೀತೆಯ ಸಾಲುಗಳನ್ನು ಸಾಂದರ್ಭಿಕವಾಗಿ ಉದ್ಧರಿಸಿ ಮಾತನಾಡುವಷ್ಟು ಹಿಡಿತ ಅವರಿಗಿದೆ. ಧರ್ಮ ಸಮನ್ವಯತೆ ಭಾರತದ ನೆಲದಲ್ಲಿ ಇದೆ ಎನ್ನುವುದು ಅವರ ನಂಬಿಕೆ. ಸೂಫಿಗಳು ಕೃಷ್ಣ ತತ್ವದಿಂದ ಪ್ರಭಾವಿತರಾದ್ದನ್ನು ಕೂಡಾ ಅವರು ನಂಬುತ್ತಾರೆ. ಹೀಗಾಗೆ ಕನ್ನಡದ ಮನದ ಹಾಡಾದ ಬೆಣ್ಣೆ ಕದ್ದ ನಮ್ಮ ಕೃಷ್ಣ ಹುಟ್ಟಲು ಸಾಧ್ಯವಾದದ್ದು ಎನ್ನುವುದರಲ್ಲಿ ಎರಡು ಮಾತಿಲ್ಲ. ಅದನ್ನು ರಹಮತ್ ತರೀಕೆರೆ ಅವರು ‘ಧರ್ಮಗಳ ಮಧ್ಯೆ ಭೇದವೇ ಇಲ್ಲವೆಂದು ನಿರಾಳವಾದಾಗ ಬೆಣ್ಣೆ ಕದ್ದ ಥರದ ಕೃತಕ ಪದ್ಯಗಳು ಹುಟ್ಟಿವೆ. ಆದರೆ ಭೇದವೂ ಇದೆ, ಸಂಘರ್ಷವೂ ಇದೆ. ಆಕರ್ಷಣೆಯೂ ಇದೆ ವಿಕರ್ಷಣೆಯೂ ಇದೆ. ಎಂಬ ದ್ವಂದ್ವಾತ್ಮಕ ಮನೋಭಾವದಲ್ಲಿ ಧಾರ್ಮಿಕ ಅನುಭವವನ್ನು ಎದುರುಗೊಂಡಾಗಲೆಲ್ಲಾ ಅತ್ಯುತ್ತಮ ಕವಿತೆಗಳನ್ನು ರಚಿಸುತ್ತಾರೆ. ಪ್ರಾಮಾಣಿಕವಾದ ಸಾಂಸ್ಕೃತಿಕ ಕಾವ್ಯವನ್ನು ರಚಿಸಿದ್ದಾರೆ’ ಎನ್ನುತ್ತಾರೆ.

ಆದರೆ ಈ ಕವಿತೆಗೆ ಧಾರ್ಮಿಕವಾದ ಯಾವ ಲೇಪವೂ ಇಲ್ಲ ಎನ್ನುವುದನ್ನೂ ನೋಡಬೇಕು. ಕೃಷ್ಣ ಎನ್ನುವುದು ಒಂದು ಪುರಾಣ ಪ್ರತಿಮೆಯಾದ್ದರಿಂದ ಅದನ್ನು ಬರೆಯುವುದು ಕೃತಕ ಎಂದು ಹೇಳಲಾಗದು. ದೈವದ ಎತ್ತರಕ್ಕಿಂತ ಮನುಷ್ಯರೊಳಗೆ ಇರುವ ದೈವತ್ವ ಮುಖ್ಯ. ಆದ್ದರಿಂದಲೇ ನಿಸಾರರ ಕೃಷ್ಣ ತುಂಟ ಪೋರ. ಭಕ್ತಿಯ ಉತ್ಕಟತೆಯಿಂದ ಕಳಚಿ, ವಾತ್ಸಲ್ಯದ ಎದೆಗೆ ಮುಗ್ಧತೆಯ ಸುಧೆಯನ್ನು ಹರಿಸುವವನು. ಕದ್ದ ಬೆಣ್ಣೆಯ ಮುಖದ ತುಂಬೆಲ್ಲಾ ಹಚ್ಚಿಕೊಂಡ ಆ ತುಂಟ ಪೋರನಲ್ಲಿ ಪ್ರತಿಯೊಬ್ಬ ತಾಯಿಯೂ ತಮ್ಮ ಮಗನನ್ನು ಕಾಣುತ್ತಾ ಆ ಅಕುಟಿಲ ನಗುವಿನ ಜೊತೆ ತಮ್ಮ ನಗುವನ್ನು ಸೇರಿಸುತ್ತಾರೆ. ಬೆಣ್ಣೆ ಕದಿಯುವ ತುಂಟ ಕೃಷ್ಣನನ್ನು, ಗದರಿಸುವ ತಾಯಿ ಯಶೋದೆಯನ್ನೂ ಒಂದೆಡೆಗೆ ತಂದು ಕವಿ ಕುಟುಂಬ ವತ್ಸಲರಾಗುತ್ತಾರೆ.

ನಿರ್ಭಯದಲಿ ದನಿಯೆತ್ತು! ಶಾಂತಿ ಬರಲಿ ಧ್ವಜವ ಹೊತ್ತು

ಹಾಡುಕವಿಯೇ ಹಾಡು ನಿನ್ನೊಳಗನೆ ತೋಡು

ಎನ್ನುವ ಸಾಲುಗಳಲ್ಲಿ ಮನುಕುಲದ ಕ್ರಾಂತಿಯ ನೆರೆಯುಕ್ಕಿಸುವ ಹಾಡನ್ನು ಕವಿ ಹಾಡುವುದರ ಮೂಲಕ ಎಚ್ಚರದ ಸ್ಥಿತಿಯಾಗಿ, ಅಹಂಕಾರಕ್ಕೆ ಪೆಟ್ಟನ್ನು ನೀಡಬಲ್ಲ ಈ ಚಿಂತನಶೀಲ ಪದ್ಯಗಳಲ್ಲಿ ಒಂದು ಕಿಡಿ ಇದೆ. ನೋವಿಗದ್ದಿದ ಛಾಯೆಯೊಂದು ನಿರಂತರ ಬೆನ್ನಟ್ಟಿಬರುತ್ತಲೆ ಇದೆ. ಅನ್ಯ ಪ್ರಜ್ಜೆಯನ್ನು ಪುಟಗಟ್ಟಲೆ ಬರೆಯುತ್ತಿದ್ದ ನವ್ಯಕಾವ್ಯದ ನಡುವೆಯೇ ನಿಮ್ಮೊಡನಿದ್ದು ನಿಮ್ಮಂತಾಗದೆ ಥರದ ಪದ್ಯಗಳು ಪ್ರತಿ ದಿನವೂ ಅಗ್ನಿಪರೀಕ್ಶೆಗೆ ಒಳಗಾಗಬೇಕಾದ ಅನಿವಾರ್ಯತೆಯ ಸಾಂದ್ರವಾದ ಭಾವಾಭಿವ್ಯಕ್ತಿಯಾಗಿವೆ. ಅದಕ್ಕೆ ಅವರು ಕೊಡುವ  ವಿಸ್ತೃತವಾದ ಚೌಕಟ್ಟಿನಿಂದಾಗಿ ಭಾರತೀಯ ಮತ್ತು ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಭಿನ್ನ ಧ್ವನಿಯಾಗಿ ನೆಲೆ ನಿಲ್ಲಲು ಸಾಧ್ಯವಾಗಿದೆ.

ಪ್ರಾಚೀನ ಪರಂಪರೆಯನ್ನು ಬಲ್ಲ ನಿಸಾರರು ನಾನು ಮುಸ್ಲೀಂನಾಗಿ ಕನ್ನಡದಲ್ಲಿ ಬರೆಯುತ್ತಿರುವುದಕ್ಕೆ ಯಾವ ವಿನಾಯಿತಿಯೂ ಬೇಡ ಎಂದಿರುವುದರ ಹಿಂದೆ ಮೊದಲು ನಾನು ಕನ್ನಡಿಗ ಎನ್ನುವ ಧ್ವನಿಯೇ ಇದೆ. ಶುದ್ಧ ಮಾನವೀಯತೆಗೆ ಧರ್ಮದ ಹಂಗೂ ಬೇಡ. ಕನ್ನಡವೇ ತನ್ನ ಧರ್ಮ ಎನ್ನುವುದನ್ನು ಹೇಳಿದ ಕವಿ ಇವರು. ಕನ್ನಡದ ಸಂಸ್ಕೃತಿ ತುಂಬಾ ಉದಾರವಾದದ್ದು ಸಮನ್ವಯ ಸಾಮರಸ್ಯ ಇಲ್ಲಿಯ ಮೂಲ ಮಂತ್ರ ಎಂಬುದು ಕವಿಯ ನಂಬಿಕೆ.

ತನ್ನ ಧರ್ಮವನ್ನೂ ಒಳಗೊಂಡಂತೆ ತಪ್ಪುಗಳನ್ನು ಬಿಡದೆ ಖಂಡಿಸುವ ವಿಡಂಬಿಸುವ, ಅತಿಯಾದ ಆಸ್ತಿಕತೆಯನ್ನು ಅಲ್ಲಗಳೆಯುವ ಅನೇಕ ಪದ್ಯಗಳನ್ನು ಕೂಡಾ ಬರೆದಿದ್ದಾರೆ.

ಅಪಾರವೋ ಪ್ರಭು ನಿನ್ನ ಕರುಣೆ

ಮಸೀದಿಗೆ ಹೋಗದ ನನಗೆ ರೇಜರ್ ಕೊಟ್ಟಂತೆ

ದಡ್ದ ಮೌಲ್ವಿಗೆ ಕಿರಾತ ಗಡ್ದ ಕೊಟ್ಟೆ, ಅಲ್ಲೇಕೆ, ಇಲ್ಲೇ

ತೀರಿಸ್ಸುತ್ತೇನೆ ತಾಳಿ, ನಿಮ್ಮ ಗೊಡ್ಡಾಚಾರಗಳ ಸಾಲವನೆಂದು

ರಕ್ತದೊತ್ತಡದ ಜೊತೆ ನನ್ನಂಥ ಅವಿಧೇಯ ಸುಪುತ್ರರ ಕೊಟ್ಟೆ

ನಿನ್ನ ನಾಮವನೊದರುವ ಆಸ್ತಿಕ ಮುಂಡೇವಕ್ಕೆ (ಅಪಾರವೋ ಪ್ರಭು ನಿನ್ನ ಕರುಣೆ)

ಇಂತಲ್ಲಿ ನಿಸಾರರು ಮುಕ್ತರಾಗಿ ತನ್ನನ್ನೂ ಒಳಗೊಂಡಂತೆ ಎಲ್ಲರನ್ನೂ ಲೇವಡಿಗೆ ಒಳಗು ಮಾಡುವ ಆರೋಗ್ಯಕರ ಸ್ಥಿತಿಯನ್ನು ಎತ್ತಿ ಹಿಡಿಯುತ್ತಾರೆ.

(ಮುಗಿಯಿತು)

*

ಎಲ್ಲಾ ಬರಹಗಳನ್ನು ಇಲ್ಲಿ ಓದಿ : https://tv9kannada.com/tag/ks-nissar-ahmed-birth-anniversary

ಭಾಗ 1 : K. S. Nissar Ahmed Birth Anniversary : ‘ಮಸೀದಿಗೆ ಹೋಗದ ನನಗೆ ರೇಜರ್ ಕೊಟ್ಟಂತೆ ದಡ್ದ ಮೌಲ್ವಿಗೆ ಕಿರಾತ ಗಡ್ದ ಕೊಟ್ಟೆ’

ಇದನ್ನೂ ಓದಿ : Book Release : ಅಚ್ಚಿಗೂ ಮೊದಲು ; ಇಂದು ಧಾರವಾಡದಲ್ಲಿ ಆರಿಫ್ ರಾಜಾ ‘ಎದೆ ಹಾಲಿನ ಪಾಳಿ’ ಕವನ ಸಂಕಲನ ಬಿಡುಗಡೆ

Published On - 4:29 pm, Sat, 5 February 22