ಎಂ. ಗೋವಿಂದ ಪೈ | M. Govind Pai : ಎಂ. ಗೋವಿಂದ ಪೈ (1883-1963) ಕನ್ನಡದ ಪ್ರಥಮ ರಾಷ್ಟ್ರಕವಿ. ಕೇರಳದ ಮಂಜೇಶ್ವರಕ್ಕೆ ಭಾರತದ ಸಾಂಸ್ಕೃತಿಕ ಭೂಪಟದಲ್ಲಿ ಸ್ಥಾನ ಒದಗಿಸಿಕೊಟ್ಟರು. ತಮ್ಮ ಹೆಸರಿನೊಂದಿಗೆ ಮಂಜೇಶ್ವರವನ್ನು ಶಾಶ್ವತವಾಗಿರಿಸಿಕೊಂಡಿದ್ದ ಇವರಿಗೆ ಕಾಸರಗೋಡು ಕರ್ನಾಟಕದ ಅವಿಭಾಜ್ಯ ಅಂಗವಾಗಿತ್ತು. ಬಹುಭಾಷಾಪ್ರಿಯರಾಗಿದ್ದ ಇವರು ಕೊಂಕಣಿ, ತುಳು, ಕನ್ನಡ, ಸಂಸ್ಕೃತ, ಮಲಯಾಳಂ, ತೆಲುಗು, ತಮಿಳು, ಮರಾಠಿ, ಒರಿಯಾ, ಬಂಗಾಳಿ, ಪಾಲಿ, ಅರ್ಧಮಾಗಧಿ, ಉರ್ದು, ಪರ್ಷಿಯನ್, ಗ್ರೀಕ್, ಲ್ಯಾಟಿನ್, ಜಪಾನಿ, ಇಟ್ಯಾಲಿಯನ್, ಸ್ಪ್ಯಾನಿಷ್, ಪ್ರಾಕೃತ, ಹಿಂದಿ, ಗುಜರಾತಿಯಲ್ಲಿ ಪ್ರಾವೀಣ್ಯ ಹೊಂದಿದ್ದರು. 1949ರಲ್ಲಿ ಮದರಾಸು ಸರಕಾರವು ಗೋವಿಂದ ಪೈಗಳಿಗೆ ರಾಷ್ಟ್ರಕವಿ ಎಂಬ ಬಿರುದು ಕೊಟ್ಟು ಸನ್ಮಾನಿಸಿತ್ತು. ಇವರ ಅಪಾರ ದೇಶಭಕ್ತಿಗೆ ಅವರ ಕವನಗಳೇ ಸಾಕ್ಷಿ. “ಜಯ ಜಯ ತುಳುವ ತಾಯೆ ಮಣಿವೆ, ತಂದೆ ತಾಯಂದಿರ ತಾಯೆ, ಭುವನದಿ ತ್ರಿದಿವಚ್ಛಾಯೆ”, “ತಾಯೆ ಬಾರ, ಮೊಗವ ತೋರ, ಕನ್ನಡಿಗರ ಮಾತೆಯೆ, ಹರಸು ತಾಯೆ, ಸುತರ ಕಾಯೆ, ನಮ್ಮ ಜನ್ಮದಾತೆಯೆ.”
ಗೋವಿಂದ ಪೈಗಳದು ಮಂಗಳೂರು ಮೂಲ. ತಂದೆ ಮಂಗಳೂರು ತಿಮ್ಮಪ್ಪ ಪೈ, ತಾಯಿ ದೇವಕಿಯಮ್ಮ. ತಾಯಿಯ ತವರು ಮಂಜೇಶ್ವರ. ಗೋವಿಂದ ಪೈ ಜನಿಸಿದ್ದು ಕಾಸರಗೋಡಿನ ಮಂಜೇಶ್ವರದಲ್ಲಿ. ಶಿಕ್ಷಣವನ್ನೆಲ್ಲ ಮಂಗಳೂರಿನಲ್ಲೇ ಪೂರೈಸಿದರು. ಪಂಜೆ ಮಂಗೇಶರಾಯರು ಇವರ ಶಿಕ್ಷಕರಾಗಿದ್ದರು. ಉನ್ನತ ವಿದ್ಯಾಭ್ಯಾಸಕ್ಕಾಗಿ ಮದರಾಸಿಗೆ ತೆರಳಿದ ಅವರು ಅಲ್ಲಿಯ ಕ್ರಿಶ್ಚಿಯನ್ ಕಾಲೇಜು ಸೇರಿದರು. ಅಲ್ಲಿ ಇವರಿಗೆ ಸಹಪಾಠಿಯಾಗಿದ್ದವರು ಡಾ.ಎಸ್. ರಾಧಾಕೃಷ್ಣನ್. ತಂದೆಯ ಅನಾರೋಗ್ಯದಿಂದ ಬಿಎ ಅಂತಿಮ ವರ್ಷವನ್ನು ಮೊಟಕುಗಳಿಸಿ ಊರಿಗೆ ಮರಳಿಬಿಟ್ಟರು. ಆದರೆ ಅದಾಗಲೇ ಬರೆದಿದ್ದ ಇಂಗ್ಲಿಷ್ ಪರೀಕ್ಷೆಗೆ ಬಂಗಾರದ ಪದಕ ದೊರೆತಿತ್ತು. ತಂದೆಯ ಮರಣಾನಂತರ ಪದವಿಯನ್ನು ಪೂರ್ಣಗೊಳಿಸದೆ ಬುದಕುಪೂರ್ತಿ ಸಾಹಿತ್ಯದ ಅಧ್ಯಯನಕ್ಕೆ ತಮ್ಮನ್ನು ಅರ್ಪಿಸಿಕೊಂಡರು.
ಇದನ್ನೂ ಓದಿ : Gabriel Garcia Marquez’s Birth Anniversary: ‘ಗೋರಿಯ ದಾರಿಯಲ್ಲಿ’ ಗಂಗಾಧರಯ್ಯ ಅನುವಾದಿಸಿದ ಮಾರ್ಕ್ವೆಝ್ ಕಥೆ
ಗೋವಿಂದ ಪೈಗಳ ಕೃತಿಗಳು : ಗೊಲ್ಗೋಥಾ ಅಥವಾ ಯೇಸುವಿನ ಕಡೆಯ ದಿನ, ವೈಶಾಖಿ ಅಥವಾ ಬುದ್ಧನ ಕೊನೆಯ ದಿನ (ಖಂಡ ಕಾವ್ಯ), ಹೆಬ್ಬೆರಳು, ಇಂಡಿಯಾನ 5 ವಿಟಂಕ, ಇಂಗಡಲು (ಆಯ್ದ ಕವನಗಳು), ಶ್ರೀಕೃಷ್ಣ ಚರಿತ್ರೆ, ಆತ್ಮಕಥೆ: ಕನ್ನಡದ ಮೊರೆ (ಭಾಷಣಗಳು ಮತ್ತು ಲೇಖನಗಳು), ತಾಯಿ ಮತ್ತು ನೋ ನಾಟಕಗಳು, ಕುಮಸಾಕಾ, ಕಾಯೊಮ್ ಕೋಮಾಚಿ, ಸೊತೋಬಾಕೊಮಾಚಿ, ಹಾಗೊರೋವೊ, ತ್ಸುನೆಮಾಸ, ಸೊಮಾಗೆಮಂಜಿ, ಚೊರಿಯೊ, ಶೋಜೊ, ಗಿಳಿವಿಂಡು (ಕವನ ಸಂಕಲನ), ಗೀತಾಂಜಲಿ (ರವೀಂದ್ರನಾಥ ಠಾಗೋರರ ಗೀತಾಂಜಲಿಯ ಕನ್ನಡ ಅನುವಾದ), ಗೋವಿಂದ ಪೈ ಅವರ ಲೇಖನಗಳು ಮತ್ತು ಪ್ರಬಂಧಗಳು, ಗೋವಿಂದ ಪೈ ಅವರ ಕೆಲವು ಪತ್ರಗಳು, ಚಿತ್ರಭಾನು ಅಥವಾ ೧೯೪೨, ಗೋವಿಂದ ಪೈ ಸಂಶೋಧನಾ ಸಂಪುಟ, ನಂದಾದೀಪ (ಕವನ ಸಂಕಲನ), ಹೃದಯರಂಗ (ಕವನ ಸಂಕಲನ).
ಇದನ್ನೂ ಓದಿ : Gabriel Garcia Marquez’s Birth Anniversary: ‘ಗೋರಿಯ ಹಾದಿಯಲ್ಲಿ’ ಸೂರ್ಯ ತಣ್ಣಗಾಗೋವರೆಗೂ ತಡೀರಿ
Published On - 11:54 am, Wed, 23 March 22