ಕಿರಿಯ ವಯಸ್ಸಿನಲ್ಲೇ ಯಕ್ಷಗಾನ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿದ ಯಕ್ಷಪ್ರತಿಭೆ ರೋಹಿತ್
ಬೆಳೆಯುವ ಸಿರಿ ಮೊಳಕೆಯಲ್ಲಿ' ಎನ್ನುವಂತೆ ಬಾಲ್ಯದಿಂದಲೇ ತನ್ನನು ತಾನು ಕಲಾಸೇವೆಯಲ್ಲಿ ತೊಡಗಿಸಿಕೊಂಡು ಯಕ್ಷಗಾನ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆಗೈಯುತ್ತಿದ್ದರೆ ಯಕ್ಷಪ್ರತಿಭೆ ರೋಹಿತ್ ಮಳಲಿ.
ಕಷ್ಟಪಟ್ಟು ದೇಹ ದಂಡಿಸಿ ದುಡಿದಾಗ ಸಾಧನೆಯೆಂಬ ‘ಮೊಳಕೆ’ ಒಡೆದು ಸಸಿಯಾಗಿ, ‘ಕೀರ್ತಿಯೆಂಬ’ ಮರವಾಗಿ ಬೆಳೆದು ಜೀವನದುದ್ದಕ್ಕೂ ‘ಮನ್ನಣೆಯೆಂಬ’ ಹೆಮ್ಮರ ಸದೃಢವಾಗಿ ಬೇರೂರುತ್ತದೆ. ಪ್ರತಿಯೊಂದು ಜೀವಿಯ ಗೆಲುವೂ ಕಷ್ಟಾರ್ಜಿತ. ಉಳಿಪೆಟ್ಟು ಬಿದ್ದಾಗಲೇ ಶಿಲೆಯೊಂದು ಅದ್ಭುತ ಶಿಲ್ಪವಾಗುತ್ತದೆ. ಚೆನ್ನಾಗಿ ಮಣ್ಣನ್ನು ಹದಗೊಳಿಸಿದಾಗ ಮಾತ್ರವೇ ಅದರಿಂದ ಅನೇಕ ಆಕೃತಿಗಳು ಸೃಷ್ಟಿಯಾಗುತ್ತದೆ. ಹಾಗಾಗಿ ವ್ಯಕ್ತಿಯೋರ್ವನು ಸಾಧನೆಯ ಶಿಖರವನ್ನೇರಲು ಸವೆಸಿದ ದಾರಿಯಲ್ಲಿ, ಪಟ್ಟ ಕಷ್ಟದಲ್ಲಿ, ಪ್ರತಿಯೊಂದರಲ್ಲೂ ತನ್ನ ಕಾರ್ಯಕ್ಷಮತೆಯನ್ನು ಗಮನದಲ್ಲಿಟ್ಟುಕೊಂಡು ಚುರುಕು ನಡೆಯಿಂದ ಮುನ್ನಡೆಯಬೇಕು. ಹಾಗಾದಾಗ ಮಾತ್ರಾ ತನ್ನನ್ನು ತಾನು ಜನರಿಗೆ ಅಥವಾ ಲೋಕಕ್ಕೆ ಪರಿಚಯಿಸಿಕೊಳ್ಳಲು ಸಾಧ್ಯವಾಗುತ್ತದೆ. ‘ಬೆಳೆಯುವ ಸಿರಿ ಮೊಳಕೆಯಲ್ಲಿ’ ಎನ್ನುವಂತೆ ಬಾಲ್ಯದಿಂದಲೇ ತನ್ನನು ತಾನು ಕಲಾಸೇವೆಯಲ್ಲಿ ತೊಡಗಿಸಿಕೊಂಡು ಯಕ್ಷಗಾನ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆಗೈಯುತ್ತಿದ್ದರೆ ಯಕ್ಷಪ್ರತಿಭೆ ರೋಹಿತ್ ಮಳಲಿ.
ಇವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮಳಲಿಯವರು. ತನ್ನ ಪ್ರೌಢ ವ್ಯವಸ್ಥೆಯಿಂದಲ್ಲೇ ಯಕ್ಷಗಾನದಲ್ಲಿ ಅತೀವ ಆಸಕ್ತಿಯನ್ನು ಹೊಂದಿದ್ದ ಇವರಿಗೆ ಯಕ್ಷಗಾನದ ಪ್ರಾಥಮಿಕ ಹೆಜ್ಜೆಗಳನ್ನು ಕಲಿಸಿ ಪ್ರತಿಭಾನ್ವಿತ ಯಕ್ಷಗಾನ ಕಲಾವಿದನಾಗುವಂತೆ ಮಾಡಿ ದ್ದು ಯೋಗೀಶ್ ಆಚಾರ್ಯ ಅಳದಂಗಡಿ. ಅಡಿಪಾಯ ಸರಿಯಾಗಿದ್ದಾಗ ಮಾತ್ರ ಕಟ್ಟಡ ಸುದೀರ್ಘಕಾಲ ಸ್ಥಿರವಾಗಿರುತ್ತದೆ. ಅದರಂತೆಯೇ ರೋಹಿತ್ ಅವರಿಗೆ ಯಕ್ಷಗಾನದ ಬುನಾದಿಯನ್ನು ಹಾಕಿದ ಗುರುಗಳು ಇದೀಗ ಅವರ ಏಳಿಗೆಗೆ ಕಾರಣೀಕರ್ತರಾಗಿದ್ದಾರೆ.
ಸಾಧಿಸಬೇಕೆಂದು ಅಚಲವಾಗಿ ಪಣ ತೊಟ್ಟವರಿಗೆ ದಾರಿ ತನ್ನಿಂತಾನೆ ತೆರೆದುಕೊಳ್ಳುತ್ತದೆ. ಅದರಂತೆ ರೋಹಿತ್ ಅವರಿಗೆ ದೊರೆತ ಇನ್ನೊಬ್ಬರು ಗುರುಗಳು ಶಿವಕುಮಾರ್ ಮೂಡಬಿದ್ರೆ. ಶ್ರೀ “ಯಕ್ಷನಿಧಿ” ಮೂಡಬಿದಿರೆ( ರಿ ) ‘ಯಕ್ಷಗಾನ ಶಿಕ್ಷಣ ಸಂಸ್ಥೆ ಮತ್ತು ಮಕ್ಕಳ ಮೇಳ’ ಸಂಸ್ಥೆಯ ಸ್ಥಾಪಕರಾದ ಶಿವಕುಮಾರ್, ರೋಹಿತ್ ಅವರ ಹೆಜ್ಜೆಗಳನ್ನು ಇನ್ನಷ್ಟು ಬಲಗೊಳಿಸಿದರು.
ತನ್ನ ಪಿಯುಸಿ ಮತ್ತು ಪದವಿ ಶಿಕ್ಷಣವನ್ನು ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ಶಿಕ್ಷಣ ಸಂಸ್ಥೆಯಲ್ಲಿ ಪಡೆದ ಇವರು, ಪದವಿ ವಿದ್ಯಾಭ್ಯಾಸವನ್ನು ಮಾಡುತ್ತಿರುವಾಗ ಕಾಲೇಜಿನ ಯಕ್ಷಕಲಾ ಸಂಘದ ಸದಸ್ಯರಾಗಿ, ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದರು. ಕಾಲೇಜಿನ ಯಕ್ಷ ಕಲಾ ಸಂಘದ ಗುರುಗಳಾದ ಸತೀಶ್ ಮಡಿವಾಳ ಕಾರ್ಕಳ ಇವರಿಂದ ಎರಡು ವರ್ಷ ನಾಟ್ಯಾಭ್ಯಾಸವನ್ನು ಶಿಸ್ತಿನಿಂದ ಪೂರೈಸಿ ಯಕ್ಷಗಾನದಲ್ಲಿ ಹಿಡಿತವನ್ನು, ಪ್ರಬುದ್ಧತೆಯನ್ನು ಸಾಧಿಸಿದರು. ಹೈಸ್ಕೂಲ್ ದಿನಗಳಿಂದಲೇ ಯಕ್ಷಗಾನ ಪ್ರದರ್ಶನ ನೀಡಿದರೂ ಇವರು ಎಲ್ಲರಿಂದ ಗುರುತಿಸಲ್ಪಟ್ಟದ್ದು ತನ್ನ ಕಾಲೇಜು ದಿನಗಳಲ್ಲಿ ನೀಡುತ್ತಿದ್ದ ಯಕ್ಷಗಾನ ಪ್ರದರ್ಶನದಿಂದ.
” ಯಕ್ಷಗುರು” ಎಂದು ಮಾನಿಸಲ್ಪಟ್ಟ ರಾಕೇಶ್ ರೈ ಅಡ್ಕರವರ ಶಿಷ್ಯನಾಗಿ ಅವರ ಹವ್ಯಾಸಿ ತಂಡ “ಸನಾತನ ಯಾಕ್ಷಾಲಯ” ಮತ್ತು “ಶ್ರೀ ಅಮೃತೇಶ್ವರ ಯಕ್ಷಗಾನ ಮಂಡಳಿ ವಾಮಂಜೂರು” ಇದರಲ್ಲಿ ಪ್ರಧಾನ ವೇಷಧಾರಿಯಾಗಿ ಹೊರರಾಜ್ಯಗಳಲ್ಲಿಯೂ ಯಕ್ಷಗಾನ ಪ್ರದರ್ಶನ ನೀಡಿ ಕರಾವಳಿಯ ಗಂಡು ಕಲೆಯ ಕಂಪು ಅಲ್ಲಿಯೂ ಹಬ್ಬುವಂತೆ ಮಾಡಿದ ಕೀರ್ತಿ ಇವರಿಗೂ ಹಾಗೂ “ಸನಾತನ ಯಕ್ಷಾಲಯ” ಸಂಸ್ಥೆಗೆ ಸಲ್ಲುತ್ತದೆ.
ಅದ್ಭುತ ಕಿರೀಟ ವೇಷಧಾರಿಯಾದ ಇವರು, ಇದುವರೆಗೂ ನೂರಕ್ಕೂ ಹೆಚ್ಚು ಪಾತ್ರಗಳಿಗೆ ಜೀವ ತುಂಬಿದ್ದಾರೆ. ದೇವೇಂದ್ರ, ಶತ್ರುಪ್ರಸೂಧನ, ವಿದ್ಯುನ್ಮಾಲಿ, ರಕ್ತಬೀಜ, ಧೂಮ್ರಾಕ್ಷ, ವೃಷಭಾಸುರ, ಶಿಶುಪಾಲ, ಇಂದ್ರಜಿತು ಇಂತಹ ಪ್ರಧಾನ ವೇಷಗಳನ್ನು ನಿರ್ವಹಿಸಿದ್ದಾರೆ.
ಪ್ರಸ್ತುತ ಇವರು ಹವ್ಯಾಸಿ ಕಲಾವಿದರಾಗಿರದೆ, ಪಟ್ಲ ಸತೀಶ್ ಶೆಟ್ಟಿ ಅವರ ಸಾರಥ್ಯದಲ್ಲಿ ಆರಂಭಗೊಂಡ “ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ” ಇದರಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ದಿನವಿಡಿ ಫೈನಾನ್ಸ್ ಕಂಪೆನಿಯೊಂದರಲ್ಲಿ ಕಾರ್ಯನಿರ್ವಹಿಸಿ ರಾತ್ರಿ ತನ್ನ ಮನದಿಚ್ಛೆಯಂತೆ ಕಲಾಮಾತೆಯ ಸೇವೆಗೈಯುತ್ತಿರುವ ಇಂತಹ ಉದಯೋನ್ಮುಖ ಕಲಾವಿದರು ಸಾಧಿಸಲಿಚ್ಚಿಸುವವರಿಗೆ ಸದಾ ಪ್ರೇರಣೆ.
ಕವನ ಕಾಂತಾವರ ಆಳ್ವಾಸ್ ಕಾಲೇಜು