AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

The White Tiger: ಉಕ್ರೇನ್ ಯುದ್ಧ ಮತ್ತು ಪೂರ್ವ ಪಶ್ಚಿಮಗಳ ಸಂಘರ್ಷ: ಎಂದಿಗೂ ಮುಗಿಯುವ ಯುದ್ಧವಲ್ಲ ಇದು

2ನೇ ಮಹಾಯುದ್ಧವನ್ನು ಹಿಟ್ಲರ್​ನ ಮನೋಭಿತ್ತಿಯ ಆಯಾಮದ ಮೇಲೆ, ಹಿಟ್ಲರ್ ಏನೆಂದು ಯೋಚಿಸಿ ರಷ್ಯಾ ಮೇಲೆ ದಾಳಿ ಮಾಡಿರಬಹುದು ಎಂಬ ವಿಶ್ಲೇಷಣೆಯನ್ನು ಈ ಸಿನಿಮಾ ಮೂಲಕ ನಿರ್ದೇಶಕರು ಪ್ರಸ್ತುತಪಡಿಸಲು ಯತ್ನಿಸಿದ್ದಾರೆ.

The White Tiger: ಉಕ್ರೇನ್ ಯುದ್ಧ ಮತ್ತು ಪೂರ್ವ ಪಶ್ಚಿಮಗಳ ಸಂಘರ್ಷ: ಎಂದಿಗೂ ಮುಗಿಯುವ ಯುದ್ಧವಲ್ಲ ಇದು
ದ ವೈಟ್ ಟೈಗರ್ ರಷ್ಯನ್ ಸಿನಿಮಾದ ದೃಶ್ಯ
Ghanashyam D M | ಡಿ.ಎಂ.ಘನಶ್ಯಾಮ
|

Updated on:Mar 24, 2022 | 6:09 AM

Share

ಉಕ್ರೇನ್ ಮೇಲೆ ದಾಳಿ (Russia Ukraine War) ಲಕ್ಷಾಂತರ ಜನರು ನಿರಾಶ್ರಿತರಾಗಲು, ಸಾವಿರಾರು ಸೈನಿಕರು ಜೀವ ಕಳೆದುಕೊಳ್ಳಲು ಕಾರಣರಾದ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Vldadimir Putin) ಇಂದು ಜಗತ್ತಿನ ಕಣ್ಣಲ್ಲಿ ಅಪರಾಧಿ ಸ್ಥಾನದಲ್ಲಿದ್ದಾರೆ. ಪುಟಿನ್ ಅಂದುಕೊಂಡಷ್ಟು ವೇಗವಾಗಿ ಅಲ್ಲದಿದ್ದರೂ, ಒಟ್ಟಾರೆಯಾಗಿ ಈ ಯುದ್ಧವನ್ನು ಇಂದಲ್ಲದಿದ್ದರೆ ನಾಳೆ ರಷ್ಯಾ ಗೆಲ್ಲಬಹುದು. ಆದರೆ ಈಗಾಗಲೇ ದಿವಾಳಿಯಾಗಿರುವ, ಹೊಸ ಆರ್ಥಿಕ ದಿಗ್ಬಂಧನಗಳ ಹೊಡೆತಕ್ಕೆ ನಲುಗಿರುವ ರಷ್ಯಾದ ಆರ್ಥಿಕತೆ ಮಾತ್ರ ಸದ್ಯಕ್ಕೆ ಚೇತರಿಸಿಕೊಳ್ಳುವ ಮಾತೇ ಇಲ್ಲ. ರಷ್ಯಾದ ಪಾಲಿಗೆ ಆತ್ಮಾಹತ್ಯಾತ್ಮಕ ಎನಿಸುವಂಥ ಈ ದಾಳಿ ನಿರ್ಧಾರ ತೆಗೆದುಕೊಳ್ಳುವ ಮೊದಲು ಪುಟಿನ್ ಈ ಪರಿಣಾಮಗಳನ್ನು ಮುಂಗಾಣಲಿಲ್ಲವೇ?

ಈ ಪ್ರಶ್ನೆಯ ಬೆನ್ನುಹತ್ತಿದಾಗ ವರ್ತಮಾನದ ಜೊತೆಗೆ ಭೂತಕಾಲದಲ್ಲಿಯೂ ಹಲವು ಉತ್ತರಗಳು ಇದೆ ಎನ್ನಿಸಿತು. ಆ ಉತ್ತರವೆಂದರೆ ರಷ್ಯಾ ಬಗ್ಗೆ ಪಾಶ್ಚಿಮಾತ್ಯ ದೇಶಗಳಿಗೆ ಇರುವ ಭಯ ಮತ್ತು ಹೇಗಾದರೂ ಸರಿ, ಸದಾ ರಷ್ಯಾವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಲೇಬೇಕು ಎಂಬ ಆಕಾಂಕ್ಷೆ. ಈ ಅಂಶವನ್ನು ಕಾವ್ಯಾತ್ಮಕವಾಗಿ ಕಟ್ಟಿಕೊಡುವ ಚಲನಚಿತ್ರ ‘ದ ವೈಟ್ ಟೈಗರ್’ (The White Tiger). 2ನೇ ಮಹಾಯುದ್ಧವನ್ನು ಹಿಟ್ಲರ್​ನ ಮನೋಭಿತ್ತಿಯ ಆಯಾಮದ ಮೇಲೆ, ಹಿಟ್ಲರ್ ಏನೆಂದು ಯೋಚಿಸಿ ರಷ್ಯಾ ಮೇಲೆ ದಾಳಿ ಮಾಡಿರಬಹುದು ಎಂಬ ವಿಶ್ಲೇಷಣೆಯನ್ನು ಈ ಸಿನಿಮಾ ಮೂಲಕ ನಿರ್ದೇಶಕರು ಪ್ರಸ್ತುತಪಡಿಸಲು ಯತ್ನಿಸಿದ್ದಾರೆ. ಇಂದಿನ ವಿದ್ಯಮಾನಗಳು ಮತ್ತು ಬೆಳವಣಿಗೆಗಳನ್ನು ಗಮನದಲ್ಲಿರಿಸಿಕೊಂಡು ಸಿನಿಮಾ ನೋಡಿದರೆ ಹಲವು ಹೊಸ ಅರ್ಥಗಳು ಹೊಳೆಯುತ್ತವೆ.

ಇಡೀ ಸಿನಿಮಾಕ್ಕೆ ಯುದ್ಧದ ಕಥೆಯೇ ತಳಹದಿ. ಸಾವುನೋವು, ಬಾಂಬ್​ ಸ್ಫೋಟದ ಸನ್ನಿವೇಶಗಳು ಸಾಕಷ್ಟಿವೆ. ಆದರೆ ಎಲ್ಲಿಯೂ ಹಿಂಸೆಯನ್ನು ವಿಜೃಂಭಿಸಿಲ್ಲ. ಬದಲಿಗೆ ಯುದ್ಧವೆಂಬ ಸಾಮೂಹಿಕ ಹಿಂಸೆಯ ನಿರರ್ಥಕತೆಯನ್ನು ಸಾರಿ ಹೇಳಲು ಯತ್ನಿಸಿರುವುದು ಮನಸ್ಸಿಗೆ ತಟ್ಟುತ್ತದೆ. 2012ರಲ್ಲಿ ತೆರೆಕಂಡ ಈ ಸಿನಿಮಾ ಇಲ್ಯಾ ಬಿಯಾಶೋವ್‌ರ ‘ಬೆಲ್ಯಿ ಟಿಗರ್’ ಕಾದಂಬರಿಯನ್ನು ಆಧರಿಸಿದೆ. 2ನೇ ಮಹಾಯುದ್ಧದಲ್ಲಿ ನಡೆದ ಟ್ಯಾಂಕ್ ಯುದ್ಧಗಳನ್ನು ಮತ್ತೊಂದು ಆಯಾಮದಿಂದ ಕಟ್ಟಿಕೊಡುವ ಪ್ರಯತ್ನ ಈ ಚಿತ್ರದಲ್ಲಿ ನಡೆದಿದೆ.

ಜರ್ಮನ್ ಸೇನೆ ನಡೆಸಿದ ದಾಳಿಯಲ್ಲಿ ರಷ್ಯಾದ ಟ್ಯಾಂಕ್‌ ಒಂದರಲ್ಲಿದ್ದ ಎಲ್ಲ ಸಿಬ್ಬಂದಿ ಮೃತಪಟ್ಟರೂ ಇವಾನ್ ನೆಡೆನ್ವೊ ಎಂಬಾತ ಶೇ 90ರಷ್ಟು ಸುಟ್ಟಗಾಯಗಳೊಂದಿಗೆ ಬದುಕಿ ಉಳಿಯುತ್ತಾನೆ. ಸೇನಾ ವೈದ್ಯರು ಇದನ್ನು ಪವಾಡ ಎನ್ನುತ್ತಾರೆ. ಹೀಗೆ ಸತ್ತುಬದುಕಿಕ ಇವಾನ್ ನೆಡೆನ್ವೊನೊಂದಿಗೆ ಯುದ್ಧಭೂಮಿಯ ಟ್ಯಾಂಕ್‌ಗಳು ಮಾತನಾಡಲು ಶುರುಮಾಡುತ್ತವೆ. ನಾಸ್ತಿಕ ಕಮ್ಯುನಿಸ್ಟರಾದ ರಷ್ಯಾದ ಸೇನಾಧಿಕಾರಿಗಳಿಗೆ ಅವನ ಮಾತು ಸೋಜಿಗ ಎನಿಸುತ್ತದೆ. ಆದರೆ ಕ್ರಮೇಣ ನಂಬಿಕೆ ಬರುತ್ತದೆ.

ಭೂಸೇನೆಯಲ್ಲಿ ಕೆಲಸ ಮಾಡುವವರಿಗೆ ರೈಫಲ್, ವಾಯುಪಡೆಯಲ್ಲಿ ಕೆಲಸ ಮಾಡುವವರಿಗೆ ವಿಮಾನ, ಸಬ್​ಮರೀನ್​ಗಳಲ್ಲಿ ಕೆಲಸ ಮಾಡುವವರಿಗೆ ಟಾರ್ಪೆಡೊಗಳೇ ನೆಚ್ಚಿನ ಗೆಳೆಯರೇ ಆಗಿರುತ್ತಾರೆ. ಹೊರಜಗತ್ತಿಗೆ ವಿಧ್ವಂಸಕ ಆಯುಧ-ಸ್ಫೋಟಕ ಅಥವಾ ಯಂತ್ರಗಳಂತೆ ಕಾಣಿಸುವ ನಿರ್ಜೀವ ಯುದ್ಧೋಪಕರಣಗಳು ಸೈನಿಕರ ಪಾಲಿಗೆ ಅತ್ಯಾಪ್ತ ಮಿತ್ರರಂತೆ ಆಗಿರುತ್ತವೆ. ಅವಕ್ಕೆ ಜೀವವಿದೆಯೇನೋ ಎಂಬಷ್ಟು ಆಸ್ಥೆಯಿಂದ ಅವರು ಕಾಳಜಿ ಮಾಡುತ್ತಿರುತ್ತಾರೆ.

ಟ್ಯಾಂಕ್ ಬೆಟಾಲಿಯನ್​ಗಳಲ್ಲಿರುವ ಸೈನಿಕರಿಗೂ ಅಷ್ಟೇ. ತಮ್ಮ ಟ್ಯಾಂಕ್​ಗಳ ಬಗ್ಗೆ ಇಂಥದ್ದೇ ಆಪ್ಯಾಯತೆ ಬೆಳೆದಿರುತ್ತದೆ. ಅದನ್ನೇ ಇಲ್ಯಾನ ಎಂಬ ಯೋಧನ ಪಾತ್ರದ ಮೂಲಕ ‘ದ ವೈಟ್ ಟೈಗರ್’ ಕಟ್ಟಿಕೊಡುತ್ತದೆ. ಇಲ್ಯಾನ ಪಾಲಿಗೆ ಯುದ್ಧ ಟ್ಯಾಂಕ್ ಎನ್ನುವುದು ಫ್ರೆಂಡ್‌, ಫಿಲಾಸಫರ್, ಗೈಡ್. ಇದು ಇಷ್ಟಕ್ಕೇ ಸೀಮಿತವಾಗುವುದಿಲ್ಲ. ಕೊನೆಕೊನೆಗೆ ಅದು ಅವನ ಪಾಲಿಗೆ ದೇವರೂ ಆಗುತ್ತದೆ. ಕೇವಲ ಇದಿಷ್ಟನ್ನೇ ಈ ಸಿನಿಮಾದಲ್ಲಿ ಗಮನಿಸಿದರೆ, ಯುದ್ಧ ಮತ್ತು ಟ್ಯಾಂಕ್ ಕದನಗಳನ್ನು ಕಟ್ಟಿಕೊಡುವ ನೂರಾರು ಸಿನಿಮಾಗಳ ಪೈಕಿ ಇದನ್ನೂ ಒಂದು ಎಂದುಬಿಡಬಹುದು. ಉಕ್ರೇನ್ ಮೇಲೆ ರಷ್ಯಾದ ಟ್ಯಾಂಕ್​ಗಳು ದಾಂಗುಡಿಯಿಡುತ್ತಿರುವ ಈ ಸಿನಿಮಾ ಬಗ್ಗೆ ಬರೆಯಲೂ ಏನೂ ಇರುತ್ತಿರಲಿಲ್ಲ.

ರಷ್ಯಾದ ಸೈನಿಕ ಇವಾನ್ ಈ ಚಿತ್ರದ ನಾಯಕನಾದರೆ, ‘ವೈಟ್ ಟೈಗರ್’ ಈ ಚಿತ್ರದ ಪ್ರತಿನಾಯಕ. ವೈಟ್ ಟೈಗರ್ ಎಂದರೆ ವ್ಯಕ್ತಿಯಲ್ಲ, ಅದು ಜರ್ಮನ್ ಸೇನೆಯ ಟ್ಯಾಂಕ್ ಎನ್ನುವುದು ಗಮನಿಸಬೇಕಾದ ಅಂಶ. ರಷ್ಯನ್ನರನ್ನು ಬೆನ್ನಟ್ಟಿ ಕಾಡುವ, ಎಷ್ಟೋ ಟ್ಯಾಂಕ್​ಗಳನ್ನು ಛಿದ್ರಗೊಳಿಸುವ, ಯಾರೂ ಮಣಿಸಲು ಆಗದ ಟ್ಯಾಂಕ್ ಅದು. ಆದರೆ ಕೊನೆಗೆ ಇವಾನ್ ಅತ್ಯಂತ ಜಾಣತನದಿಂದ ಅದನ್ನು ಖೆಡ್ಡಾಕ್ಕೆ ಕೆಡವುತ್ತಾನೆ, ತಕ್ಕಮಟ್ಟಿಗೆ ಹಾನಿ ಮಾಡುತ್ತಾನೆ. ಆದರೆ ನಾಶಪಡಿಸಲು ಆಗುವುದಿಲ್ಲ. ಹಾನಿಗೊಂಡ ‘ವೈಟ್ ಟೈಗರ್’ ಫಿರಂಗಿ ನಳಿಕೆಯನ್ನು ತಗ್ಗಿಸಿ, ಯುದ್ಧಭೂಮಿಯಿಂದ ಹೊರನಡೆಯುವ ದೃಶ್ಯ ಹಲವು ಕ್ಷಣಗಳವರೆಗೆ ತೆರೆಯ ಮೇಲೆಯೇ ಇರುತ್ತದೆ. ಯುದ್ಧವೆಂಬುದು ಎಂದಿಗೂ ಮುಗಿಯುವುದಿಲ್ಲ, ಗೆಲ್ಲುವವರೂ ಯಾರೂ ಇಲ್ಲ ಎಂಬುದರ ಸಂಕೇತ ಇದು ಎನ್ನಿಸಿಬಿಡುತ್ತದೆ.

ರಷ್ಯಾ ಸೇನೆಯು ಜರ್ಮನಿಯ ರಾಜಧಾನಿ ಬರ್ಲಿನ್ ನಗರವನ್ನು ವಶಪಡಿಸಿಕೊಳ್ಳುವುದು ಚಿತ್ರದ ನಿರ್ಣಾಯಕ ಘಟ್ಟ. ಈ ಹಂತದಲ್ಲಿ ಪ್ರಸ್ತುತಪಡಿಸಿರುವ ಎರಡು ದೃಶ್ಯಗಳು ಸಶಕ್ತ ಸಂಭಾಷಣೆ ಮತ್ತು ಚಿಂತನೆಯ ಗಟ್ಟಿತನದಿಂದ ಗಮನ ಸೆಳೆಯುತ್ತವೆ.

ಕರ್ನಲ್ ಪಾತ್ರಧಾರಿ ಇವಾನ್​ಗೆ ‘ಯುದ್ಧ ಮುಗಿಯಿತು’ ಎಂದು ಖುಷಿಯಿಂದ ಹೇಳುತ್ತಾನೆ. ಆದರೆ ಇವಾನ್ ಮುಖ ಹೊಳೆಯುವುದಿಲ್ಲ. ಬದಲಿಗೆ, ‘ಯುದ್ಧ ಮುಗಿದಿಲ್ಲ ಕರ್ನಲ್, ನಾನು ಅವನನ್ನು ಕೊಲ್ಲುವವರೆಗೆ ಇದು ಮುಂದುವರಿಯುತ್ತದೆ’ ಎನ್ನುತ್ತಾನೆ. ‘ವೈಟ್ ಟೈಗರ್ ಇಲ್ಲ, ಎಲ್ಲಿಯೂ ಕಾಣಿಸಿಲ್ಲ’ ಎಂದು ಕ್ಯಾಪ್ಟನ್ ಪ್ರತಿನುಡಿದಾಗ, ‘ಅವನು ಕಾಣಿಸುತ್ತಿಲ್ಲ ಅಷ್ಟೇ, ಆದರೆ ಸತ್ತಿಲ್ಲ. ನೂರು ವರ್ಷವಾದರೂ ಸರಿ, ಸರಿಯಾದ ಸಮಯಕ್ಕೆ ಅವನು ಕಾದು ಬೇಟೆಯಾಡುತ್ತಾನೆ. ಅವನನ್ನು ನಾಶಪಡಿಸಲೇಬೇಕು’ ಎನ್ನುತ್ತಾನೆ ಇವಾನ್.

ಇದೇ ಹೊತ್ತಿಗೆ ಬರ್ಲಿನ್​ನಲ್ಲಿ ನಡೆಯುವ ಕಲ್ಪಿತ ಸಂಭಾಷಣೆಯಲ್ಲಿ ಹಿಟ್ಲರ್ ಮಾತನಾಡುತ್ತಾನೆ. ಇಡೀ ಮಹಾಯುದ್ಧವನ್ನು ಘಟನೆಗಳ ಆಧಾರದ ಮೇಲೆ ಐತಿಹಾಸಿಕವಾಗಿ ಗ್ರಹಿಸುವುದು ಒಂದು ಕ್ರಮವಾದರೆ, ಮನಸ್ಸುಗಳು ತಾಕಲಾಟದ ನೆಲೆಗಟ್ಟಿನಲ್ಲಿ ಸಾಹಿತ್ಯಾತ್ಮಕವಾಗಿ ಗ್ರಹಿಸುವುದು ಇನ್ನೊಂದು ಕ್ರಮ. ಹಿಟ್ಲರ್​ನ ಪಾತ್ರಧಾರಿ ಆಡುವ ಕೆಲವೇ ಮಾತುಗಳಲ್ಲಿ ಈ ಎರಡನೇ ಕ್ರಮವನ್ನು ‘ದ ವೈಟ್ ಟೈಗರ್’ ಚಿತ್ರ ನಮ್ಮೆದುರು ತೆರೆದಿಡುತ್ತದೆ.

ಹಿಟ್ಲರ್ ಪಾತ್ರಧಾರಿಯ ಮಾತುಗಳಿವು…

‘ಯುದ್ಧದಲ್ಲಿ ನಾವು ಮಾತ್ರ ಸೋಲಲಿಲ್ಲ, ಇಡೀ ಯೂರೋಪ್ ಹಾಳಾಯಿತು. ಅದಕ್ಕೆ ಅವರು ಜರ್ಮನಿಯನ್ನು ದೂರುತ್ತಿದ್ದಾರೆ. ಜರ್ಮನ್ ಜನರನ್ನು ಹರಕೆಯ ಕುರಿ ಮಾಡುತ್ತಾರೆ. ಮುಂದೆ ಸಾವಿರಾರು ಪುಸ್ತಕಗಳನ್ನು ಬರೆಯುತ್ತಾರೆ. ದಾಖಲೆಗಳನ್ನು ಬಹಿರಂಗ ಮಾಡುತ್ತಾರೆ. ನಮ್ಮನ್ನು ಅಮಾನುಷರು ಎಂದು ಬಿಂಬಿಸುತ್ತಾರೆ. ಆದರೆ ನಾನು ಮಾಡಿದ್ದೇನು? ನೂರಾರು ವರ್ಷಗಳಿಂದ ಯುರೋಪ್ ಏನು ಮಾಡಬೇಕೆಂದು ಕನಸು ಕಂಡಿತ್ತೋ ಅದನ್ನೇ ಕಾರ್ಯರೂಪಕ್ಕೆ ತರುವ ಧೈರ್ಯವನ್ನಷ್ಟೇ ನಾನು ತೋರಿದೆ. ರಷ್ಯಾ ಮೇಲೆ ದಾಳಿ ನಡೆಸಬೇಕು ಎನ್ನುವುದು ಪ್ರತಿ ಯೂರೋಪ್ ನಾಗರಿಕನ ಕನಸಾಗಿತ್ತು. ಯೂರೋಪ್ ಎಂದಿಗೂ ಯಹೂದಿಗಳನ್ನು ಪ್ರೀತಿಸಲಿಲ್ಲ. ಯೂರೋಪ್​ಗೆ ಸದಾ ರಷ್ಯಾ ದಾಳಿಯ ಭೀತಿಯಿತ್ತು. ಪೂರ್ವದಲ್ಲಿರುವ ಆ ನಿಗೂಢ ದೇಶವನ್ನು ಗೆದ್ದು ಈ ಎಲ್ಲ ಸಮಸ್ಯೆ ಮುಗಿಸೋಣ ಎಂದುಕೊಂಡೆ. ವ್ಯಕ್ತಿವ್ಯಕ್ತಿಗಳ ನಡುವೆ ಸಂಘರ್ಷ ಇದ್ದೇ ಇರುತ್ತದೆ. ದೇಶದೇಶಗಳ ನಡುವೆ ಯುದ್ಧ ನಡೆಯುತ್ತಲೇ ಇರುತ್ತದೆ. ಯುದ್ಧ ಎನ್ನುವುದು ಶಾಶ್ವತ ಮತ್ತು ಸಹಜ ವಿದ್ಯಮಾನ. ಯುದ್ಧವೇ ಬದುಕು ಮತ್ತು ಮನುಷ್ಯನ ಸಹಜ ಸ್ವಭಾವವೂ ಆಗಿದೆ’ ಎಂದು ಹಿಟ್ಲರ್ ಪಾತ್ರಧಾರಿ ಮಾತು ಮುಗಿಸುತ್ತಾನೆ. ಸಿನಿಮಾ ಸಹ ಮುಗಿದು, ತೆರೆಯ ಮೇಲೆ ಕತ್ತಲಾಗುತ್ತದೆ.

ಪೂರ್ವ-ಪಶ್ಚಿಮಗಳ ಸಂಘರ್ಷ

ಇಡೀ ಎರಡನೇ ಮಹಾಯುದ್ಧವನ್ನು ‘ದ ವೈಟ್ ಟೈಗರ್’ ಪಶ್ಚಿಮ (ಯೂರೋಪ್) ಮತ್ತು ಪೂರ್ವ (ರಷ್ಯಾ) ಸಂಘರ್ಷವಾಗಿ ಗ್ರಹಿಸಲು ಯತ್ನಿಸುತ್ತದೆ. ಇಂದು ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡಿರುವುದು ಜಗತ್ತಿಗೆ ತಿಳಿದಿದೆಯಾದರೂ ರಷ್ಯಾದ ಈ ನಿರ್ಧಾರದ ಹಿಂದೆ, ಉಕ್ರೇನ್ ಅನ್ನೇ ದಾಳವಾಗಿಸಿಕೊಂಡು ಅಮೆರಿಕ ಮಾಡಿರುವ ತಂತ್ರಗಳಿಗೆ ಸೆಡ್ಡು ಹೊಡೆಯುವ ತಹತಹಿಕೆ ಇರುವುದನ್ನು ತಳ್ಳಿಹಾಕಲು ಆಗುವುದಿಲ್ಲ. ಅಂದು ಜರ್ಮನಿ ಮತ್ತು ಹಿಟ್ಲರ್ VS ರಷ್ಯಾ ಮತ್ತು ಸ್ಟಾಲಿನ್, ಇಂದು ಅಮೆರಿಕ ಮತ್ತು ಬೈಡೆನ್ VS ರಷ್ಯಾ ಮತ್ತು ಪುಟಿನ್ ಎಂದು ದೇಶ ಮತ್ತು ಪಾತ್ರಗಳನ್ನು ಅದಲು ಬದಲು ಮಾಡಿಕೊಂಡರೂ ಈ ಚಿತ್ರ ವರ್ತಮಾನದ ನೆಲೆಗಟ್ಟಿನಲ್ಲಿ ಸ್ಪಂದಿಸಬಲ್ಲದು.

ಇಂಥ ಗಂಭೀರ ವಿಚಾರಗಳನ್ನು ಬದಿಗಿರಿಸೋಣ. ಸಿನಿಮಾವನ್ನು ಸಿನಿಮಾಯಾಗಿಷ್ಟೇ ನೋಡೋಣ ಎಂದುಕೊಂಡರೂ ‘ದ ವೈಟ್ ಟೈಗರ್’ನ ನಿರ್ಮಾಣ ಮತ್ತು ನಿರೂಪಣೆ ಗಮನ ಸೆಳೆಯುತ್ತದೆ. ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡಿದ ನಂತರ ಸಾಕಷ್ಟು ಜನರಿಗೆ 2ನೇ ಮಹಾಯುದ್ಧದ ಟ್ಯಾಂಕ್ ಕದನದ ಸನ್ನಿವೇಶನಗಳನ್ನು ನೋಡಬೇಕು ಎನ್ನಿಸಿದೆ. ಇಂಥವರಿಗೂ ಈ ಸಿನಿಮಾ ಇಷ್ಟವಾದೀತು.

ಯುಟ್ಯೂಬ್‌ನಲ್ಲಿ ಪೂರ್ತಿ ಚಿತ್ರ, ಇಂಗ್ಲಿಷ್ ಸಬ್​ಟೈಟಲ್ ಸಹಿ ಲಭ್ಯವಿದೆ. ನೋಡಲು https://youtu.be/qiGDJ5-dXaI ಲಿಂಕ್ ಬಳಸಿ.

ವಿವರ ಚಿತ್ರದ ಹೆಸರು: ವೈಟ್ ಟೈಗರ್ ನಿರ್ದೇಶನ: ಕರೆನ್ ಶಖ್ನಾಝರೊವ್ ಮೂಲ ಕಾದಂಬರಿ: ಇಲಿಯಾ ಬೊಯಶೊವ್ ಚಿತ್ರಕತೆ: ಅಲೆಕ್ಸಾಂಡರ್ ಬೊರೊಡಿಯಾನ್‌ಸ್ಕಿ ಸಿನಿಮಾಟೊಗ್ರಫಿ: ಅಲೆಕ್ಸಾಂಡರ್ ಕುಝ್ನೆಟ್ಸೊವ್ ಅವಧಿ: 102 ನಿಮಿಷ (1:42 ಗಂಟೆ) ಭಾಷೆ: ರಷ್ಯನ್, ಜರ್ಮನ್

ಇದನ್ನೂ ಓದಿ: Russia Ukraine War: ಪುಟಿನ್ ಕೆಟ್ಟೋನು ಅಂತ್ಲೇ ಅಂದ್ಕೊಳಿ: ರಷ್ಯಾ ಉಕ್ರೇನ್ ಯುದ್ಧ ನೋಡುವ ಮೂರು ಕ್ರಮಗಳಿವು

ಇದನ್ನೂ ಓದಿ: Ukraine Crisis: ಯುದ್ಧ ನಿಲ್ಲಿಸಲು ಪುಟಿನ್ ಮುಂದಿಟ್ಟ ಬೇಡಿಕೆಗಳು ಬಹಿರಂಗ; ಉಕ್ರೇನ್​ಗೆ ಆತಂಕವೇಕೆ? ಇಲ್ಲಿದೆ ಮಾಹಿತಿ

Published On - 6:00 am, Thu, 24 March 22

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!