Amazon Prime Video : ‘ನೆನಪುಗಳು ಮನಸ್ಸಿನಲ್ಲಿರಲಿ ಅಂತ ಇಟ್ಟುಕೊಳ್ಳಬೇಕು, ಯಾರನ್ನಾದರೂ ದೂಷಿಸುವುದಕ್ಕಂತ ಅಲ್ಲ’

|

Updated on: Dec 01, 2021 | 6:23 PM

#Home : ‘ನಾನು ಸದಾ ಅಂದುಕೊಳ್ಳುತ್ತಿರುತ್ತೇನೆ - ಕ್ರಿಯೇಟಿವಿಟಿ ಅನ್ನುವುದು ಶಿವಗಂಗೆಯ ಒಳಕಲ್ಲು ತೀರ್ಥದ ಹಾಗೆ. ಸಿಕ್ಕಾಗ ಸೀರುಂಡೆ, ಮೊಗೆದಿಟ್ಟುಕೊಳ್ಳಬೇಕು. ಸಿಗದೇ ಹೋದಾಗ ಮತ್ತೆ ಮತ್ತೆ ಕೈಹಾಕಿ ನೊಂದುಕೊಳ್ಳುವುದು ವ್ಯರ್ಥ. ಆದರೆ ನಮ್ಮ ಬ್ರೆಡ್-ಬಟರ್​ನ ಮೂಲ ಅದೇ ‘ಸೃಜನಶೀಲತೆ’ ಆಗಿ ಹೋದಾಗ ನೋಯುವುದು ಅನಿವಾರ್ಯವಾಗುತ್ತದೆ.’ ಭವ್ಯ ಎಚ್​.ಸಿ. ನವೀನ

Amazon Prime Video : ‘ನೆನಪುಗಳು ಮನಸ್ಸಿನಲ್ಲಿರಲಿ ಅಂತ ಇಟ್ಟುಕೊಳ್ಳಬೇಕು, ಯಾರನ್ನಾದರೂ ದೂಷಿಸುವುದಕ್ಕಂತ ಅಲ್ಲ’
ಕವಿ, ಲೇಖಕಿ ಭವ್ಯ ಎಚ್. ಸಿ. ನವೀನ
Follow us on

Cinema : ಯಾರ ಲೀಲೆಗೋ ಯಾರೋ ಏನೋ ಗುರಿಯಿರದೆ ಬಿಟ್ಟ ಬಾಣಕ್ಕೆ ಓಡುತ್ತಲೇ ಇರುತ್ತೇವೆ, ಇದ್ದೇವೆ. ಆದರೂ ಬಿಡುವು ಮಾಡಿಕೊಂಡು ಒಂದು ಸಿನೆಮಾ ನೋಡುವ ಮನಸ್ಸು ಮಾಡುತ್ತೇವೆ; ಅರೆ! ಇಂಥದೇ ಒಂದು ಪಾತ್ರ, ಇಂಥದೇ ಒಂದು ಸನ್ನಿವೇಶ, ಇಂಥದೇ ಒಂದು ತಂತುವಿನೊಂದಿಗೆ ಜೀವಿಸುತ್ತಿದ್ದೇವಲ್ಲ ಎನ್ನಿಸಲಾರಂಭಿಸುತ್ತದೆ. ಎದುರಿನ ಪರದೆಯೊಳಗಿನ ಅಂತಃಸಾರ ಎದೆಮೆದುಳಿಗಿಳಿದು ಮೆಲ್ಲನೆ ಅಲೆಗಳನ್ನು ಹರಡುತ್ತದೆ. ಇಳಿದದ್ದು ಕಾಡದೇ ಇರದು, ಕಾಡುವುದು ಸುಮ್ಮನಿರಲು ಬಿಡದು. ಹಿಂಜಾಡಿ ಹಿಂಜಾಡಿ ಏನೇನೋ ನೆನಪುಗಳನ್ನುಕ್ಕಿಸುತ್ತದೆ, ಪ್ರಶ್ನೆಗಳನ್ನೆಬ್ಬಿಸುತ್ತದೆ. ಏಕೆಂದರೆ ಕಲೆ ಎನ್ನುವುದು ‘ರುಚಿಯವಿಚಾರ’, ನಮ್ಮ ಭಾವಭಿತ್ತಿಯನ್ನು ಮೀಟಿ, ಮೀರಿ ಪಾಕಗಟ್ಟುವ ಆತ್ಮಾವಲೋಕನದ ಪ್ರಕಾರ. ಈ ಪ್ರಕ್ರಿಯೆಯಲ್ಲಿ ನಿಮ್ಮನ್ನು ನೀವು ಕೆದಕಿಕೊಳ್ಳುತ್ತ ಅರಿವಿಲ್ಲದೆ ನೀವೇ ಒಂದು ಪಾತ್ರವಾಗಿಯೂ ನಿಂತುಬಿಡಬಹುದು! ಅಂತಹ ಅಭಿವ್ಯಕ್ತಿಗೊಂದು ವೇದಿಕೆಯಾಗಿ ‘ಟಿವಿ9 ಕನ್ನಡ ಡಿಜಿಟಲ್ : ಮೀಟುಗೋಲು’ ನೀವು ಬರೆದಾಗೆಲ್ಲ ಇದು ಪ್ರಕಟವಾಗುತ್ತದೆ. 

ನೀವು ನೋಡಿದ ಯಾವುದೇ ಭಾಷೆಯ ಸಿನೆಮಾ/ವೆಬ್​ ಸೀರೀಸ್ ಮತ್ತು ನಿಮ್ಮ ಬದುಕಿನ ಅನುಭವ ಪರಸ್ಪರ ಮಿಳಿತಗೊಂಡು ವಾಸ್ತವದ ಬಗ್ಗೆ ಯೋಚಿಸುವಂತೆ ಮಾಡಿದ ರೀತಿಯನ್ನು ಬರಹದ ಮೂಲಕ ಕಟ್ಟಿಕೊಡಬಹುದು. ಪದಮಿತಿ ಸುಮಾರು 600. ನಿಮ್ಮ ಸ್ಥೂಲ ಪರಿಚಯ, ಭಾವಚಿತ್ರವೂ ಇರಲಿ. ಮೇಲ್ :  tv9kannadadigital@gmail.com 

*

ಕವಿ, ಲೇಖಕಿ ಭವ್ಯ ಎಚ್.ಸಿ. ನವೀನ ಅವರನ್ನು ಮಲಯಾಳಂನ #HOME ಯಾಕೆ ಇಷ್ಟೊಂದು ಎಳೆದುಕೊಂಡಿದೆ? ಓದಿ.

*

ಎಲ್ಲರೂ ಕತೆಗಳನ್ನೇ ಬದುಕುತ್ತಿರುತ್ತಾರೆ, ಕಂಡು ಓದಲಾಗದಿದ್ದಕ್ಕೆ ನಾವು ಆ ಕತೆಗಳನ್ನು ನಿರ್ಲಕ್ಷಿಸಿಬಿಟ್ಟಿರುತ್ತೇವೆ. ಪುಸ್ತಕ, ಸಿನಿಮಾದ ಕತೆಗಳಲ್ಲಿ ಕಲ್ಪನೆಗಳನ್ನೇ ಆಸ್ವಾದಿಸಿ ‘ರಿಯಲಿಸ್ಟಿಕ್’ ಅನ್ನುವ ನಾವು, ನಿಜ ಬದುಕಿನ ಕತೆಗಳ ತೀವ್ರತೆಯನ್ನು ಕಲ್ಪಿಸಿಕೊಳ್ಳಲಾಗದೇ ಇದ್ದಕ್ಕೆ ಸುಳ್ಳಿನಂತೆ ನಡೆಸಿಕೊಳ್ಳುತ್ತೇವೆ. ಪಾತ್ರ, ಸ್ಥಳ, ಬೆಳಕು ಇವೆಲ್ಲಾ ನಿಜಜೀವನದಲ್ಲಿ ಒಂದೇ ದೃಶ್ಯದಲ್ಲಿ ಒಂದೇ ಹದದಲ್ಲಿ ಕಾಣಿಸದೇ ಇರಬಹುದು, ಆದರೂ ಅಲ್ಲಿ ಕತೆಯ ಗಂಟೇ ಇರುತ್ತದೆ, ಹೆಚ್ಚಿನವರು ಗಮನಿಸುವುದಿಲ್ಲ. ಇನ್ನು ಆ ಗಂಟೇನಾದರೂ ನಮ್ಮ ನಮ್ಮ ಮನೆಯದ್ದೇ ಆಗಿದ್ದರೆ ಆಗ ಅದು ಮತ್ತಷ್ಟು ತೆಳುವಾಗುತ್ತದೆ. ಕತೆ ಮತ್ತು ಮನೆ ಎರಡನ್ನೂ ಜಗತ್ತು ನಡೆಸಿಕೊಳ್ಳುವ ರೀತಿಯೇ ಹೀಗೇ.

‘#ಹೋಂ’ ನೋಡ ನೋಡುತ್ತಾ ಎದೆ ಹಗುರಾಗಿ.. ಭಾರವಾಗಿ.. ಮರೆತಂತಿದ್ದ ಎಷ್ಟೋ ಸಣ್ಣ ಸಣ್ಣ ವಿಷಯಗಳನ್ನ ನೆನಪಿಸಿತು. ಬೆಳೆಯುತ್ತಿರುವ ತಾಂತ್ರಿಕ ಜಗತ್ತಿಗೆ ತೆರೆದುಕೊಳ್ಳದ ಅಪ್ಪ, ಫಿಲ್ಮ್‍ಮೇಕರ್ ಮಗ ಇವರಿಬ್ಬರ ನಡುವೆಯೇ ನೂಲುವಂತೆ ಕಾಣುವ ಸಿನಿಮಾ ತೆರೆದುಕೊಳ್ಳುತ್ತಾ ಹೋದಂತೆ ಎಲ್ಲರನ್ನೂ ಒಳಗೊಳ್ಳುತ್ತದೆ. ಸುಂದರವಾದ ಮನೆ, ಅಪ್ಪಾಮ್ಮ-ಇಬ್ಬರು ಮಕ್ಕಳು ಮತ್ತು ಮನೆಯ ಹಿರೀ ತಲೆ ಅಪ್ಪಚ್ಚನ್ ಕುಟುಂಬದ ಕತೆ ಇದು. ಅಪ್ಪಚ್ಚನ್ ಆ ಕಾಲಕ್ಕೇ ಟೈಪ್‍ರೈಟಿಂಗ್ ಕಲಿತಿದ್ದು ಈ ಕಾಲದ ಕಂಪ್ಯೂಟರ್ ಇಂಜಿನಿಯರಿಂಗ್‍ಗಿಂತ ಹೆಚ್ಚು ಅಂದುಕೊಳ್ಳುವ ಮಗ ಆಲಿವರ್ ಟ್ವಿಸ್ಟ್ ಒಂದು ಕಡೆ, ಅದೇ ಅವನ ಮಗ ಆಂಟೋನಿಗೆ ತನ್ನಪ್ಪ ಆಲಿವರ ಅಪ್‍ಡೇಟ್ ಆಗದೇ ಖಾಲೀ ಉಳಿದವನು. ಇತ್ತ ಅಪ್ಪನ ಮೇಲೆ ಗೌರವ ಮೂಡಿಸಲು, ಎಲ್ಲಾ ಸರಿ ಮಾಡಲು ಹೆಣಗುವ ಕುಟ್ಟಿಯಮ್ಮ, ಇವರ ನಡುವೆ ತುಂಟನಾದರೂ ಭಾವುಕ ಅನಿಸುವ ತಮ್ಮ ಚಾರ್ಲ್ಸ್​. ಒಂದೊಂದೂ ಪಾತ್ರಗಳು ಸಿನಿಮಾ ಮುಗಿಯುವ ಹೊತ್ತಲ್ಲಿ ರಿವೈಂಡ್ ಮಾಡಿ ಮತ್ತೆ ಸರಿಯಾಗಿ ಪರಿಚಯ ಮಾಡಿಸಿಕೊಳ್ಳುವಾ ಅಂತ ಅನ್ನಿಸುತ್ತದೆ.

#HOME ಸಿನೆಮಾದ ದೃಶ್ಯ

ನಾನು ಸದಾ ಅಂದುಕೊಳ್ಳುತ್ತಿರುತ್ತೇನೆ – ಕ್ರಿಯೇಟಿವಿಟಿ ಅನ್ನುವುದು ಶಿವಗಂಗೆಯ ಒಳಕಲ್ಲು ತೀರ್ಥದ ಹಾಗೆ. ಸಿಕ್ಕಾಗ ಸೀರುಂಡೆ, ಮೊಗೆದಿಟ್ಟುಕೊಳ್ಳಬೇಕು. ಸಿಗದೇ ಹೋದಾಗ ಮತ್ತೆ ಮತ್ತೆ ಕೈಹಾಕಿ ನೊಂದುಕೊಳ್ಳುವುದು ವ್ಯರ್ಥ. ಆದರೆ ನಮ್ಮ ಬ್ರೆಡ್-ಬಟರ್​ನ ಮೂಲ ಅದೇ ‘ಸೃಜನಶೀಲತೆ’ ಆಗಿ ಹೋದಾಗ ನೋಯುವುದು ಅನಿವಾರ್ಯವಾಗುತ್ತದೆ. ಒಂದು ಯಶಸ್ವೀ ಸಿನಿಮಾ ನಿರ್ದೇಶಿಸಿ ಗೆದ್ದ ಆಂಟೋನಿ ತನ್ನ ಸಿನಿಮಾಗೆ ಒಳ್ಳೆಯ ಕ್ಲೈಮಾಕ್ಸ್ ಕೊಡಲು ತಾನಿದ್ದಲ್ಲಿ ಸಾಧ್ಯವಾಗದೇ ಹೋದಾಗ ಗೆಲುವಿನ ಕತೆಗಳನ್ನು ಬರೆಸಿಕೊಂಡ ತನ್ನ ಮನೆಯಲ್ಲಿ ಮತ್ತೆ ಪ್ರಯತ್ನಿಸಲು ಬರುತ್ತಾನೆ. ಆದರೆ ಕೈಹಿಡಿದು ಬರೆಸಲು ಹೊರಗಿನ ವಾತಾವರಣದ ಜೊತೆಗೆ ಒಳಗಿನ ವಾತಾವರಣವೂ ಮುಖ್ಯವಾಗುತ್ತದೆ. ಒಂದು ಗ್ಯಾಜೆಟ್ಸ್ ಮತ್ತೊಂದು ಫರ್ಫೆಕ್ಷನ್… ಈ ಕಾಲದ ಅರ್ಥವಾಗದ ಅಡಿಕ್ಷನ್‍ಗಳು ಅನ್ನುವುದು ಅದರ ವ್ಯಸನಿಗೆ ಮಾತ್ರ ಸರಿಯಾಗಿ ಗೊತ್ತಿರುತ್ತದೆ. ಅವೆರಡೂ ಸೇರಿದರೆ ಏನನ್ನಾದರೂ ಮುಗಿಸುವುದು ಕಷ್ಟ-ಕಷ್ಟ. ಆಂಟೋನಿ ಪ್ರಯತ್ನಿಸುತ್ತಾನೆ, ಸೋಲುತ್ತಾನೆ. ಸೋತಾಗ ಒರಗಲು ಹೆಗಲಿಗಿಂತ ಮುಖ್ಯವಾಗಿ, ಎದುರಿಗೆ ಕಲ್ಲಾದ ಕಣ್ಣು-ಕಿವಿಗಳು ಬೇಕೆನಿಸುತ್ತವೆ. ಮತ್ತದಕ್ಕಂತಲೇ ನಮ್ಮ ‘#ಹೋಂ’ ಸ್ವೀಟ್ ಹೋಂ ಇದ್ದೇ ಇರುತ್ತದಲ್ಲ.

#ಹೋಂ ಈಸ್ ದ ಪ್ಲೇಸ್ ವೇರ್ ಐ ಬಿಲಾಂಗ್ – ನಾವು ಎಲ್ಲೇ ಹೋದರೂ, ಏನೇ ಸಾಧಿಸಿದರೂ ಕಡೇಗೂ ಸ್ವಂತದ್ದು ಅನ್ನಿಸುವುದು ನಮ್ಮ ಮನೆಯೇ. ಬೆಳಗ್ಗಿನ ಹಾಳುಮುಖಕ್ಕೆ, ಓರೆಪೋರೆ ಮಲಗುವುದಕ್ಕೆ, ನಾಜೂಕಿಲ್ಲದೆ ನಗುವುದಕ್ಕೆ, ರಾಗವಾಗಿ ಅಳುವುದಕ್ಕೆ, ಹಸಿವಿಗೆ, ಗಬಗಬ ತಿನ್ನುವುದಕ್ಕೆ, ಹೊಟ್ಟೆ ಉಬ್ಬರಿಸಿ ಸದ್ದು ಬಿಡುವುದಕ್ಕೆ, ಯಾವುದಕ್ಕೂ ಮುಜುಗರವಿಲ್ಲದೆ, ಭರಪೂರ ನಿರ್ಲಕ್ಷಿಸುವುದಕ್ಕೆ- ಉದಾಸೀನ ಮಾಡಿಯೂ ಬದುಕುವುದಕ್ಕೆ ಸಾಧ್ಯವಿರುವ ಜಾಗವಿದ್ದರೆ ಅದು ನಮ್ಮವರಿಂದಲೇ ಆಗಿರುವ ಮನೆಯಲ್ಲಿ ಮಾತ್ರ. ನಮಗಲ್ಲಿ ಕಾರ್ಪೋರೇಟ್ ಮುಖವಾಡಗಳು ಬೇಕಾಗುವುದಿಲ್ಲ. ತಪ್ಪುಗಳು ತಪ್ಪಂತಲೇ ಅನಿಸದ ಹಾಗೆಯೂ, ತಪ್ಪುಗಳನ್ನು ಅತ್ಯಂತ ವಿಮರ್ಶಿಸುವ ಹಾಗೆಯೂ ಸಮಯಕ್ಕೆ ಸರಿಯಾಗಿ ಬೇಕಾದ ಮೋಡ್‍ಗಳನ್ನು ಆನ್‍ ಮಾಡುವುದು ಮನೆಯಲ್ಲಿ ಫ್ಯಾನ್ ತಿರುಗಿಸಿದಷ್ಟು ಸುಲಭ ನಮ್ಮವರಿಗೆ. ಹ್ಞಾಂ.. ‘ಫ್ಯಾನ್’!

ಯಾರಿಗಾದರೂ ಯಾವಾಗಾದರೂ ಅನುಭವಕ್ಕೆ ಸಿಕ್ಕಿದೆಯಾ..?! ನಾವು ಈ ಜಗತ್ತಿಗೆ ತೆರೆದುಕೊಳ್ಳುವ ಮೊದಲಿಗಿಂತಲೂ ನಮಗಂತ ಇರುವ ಫ್ಯಾನ್ ಫಾಲೋವರ್ಸ್, ನಮ್ಮ ಪಿಆರ್ ಎಲ್ಲವೂ ನಮ್ಮ ಮನೆಯವರೇ ಅಂತ. ಮೊದ-ಮೊದಲಿಗೆ ನಮ್ಮ ಸಣ್ಣ ಸಣ್ಣ ಗೆಲುವುಗಳೂ ‘ಗೆಲುವು’ ಅಂತ ಗೊತ್ತಾಗುವುದೇ ಅದನ್ನು ಸಂಭ್ರಮಿಸುವ ಅಪ್ಪ.. ಅಮ್ಮ.. ಮನೆಯವರ ಹಿಗ್ಗುಗಣ್ಣಿನ ಸಂಭ್ರಮದಿಂದ. ಮಗ ಆಂಟೋನಿ ಆಲಿವರ್ ಟ್ವಿಸ್ಟ್ ನಿರ್ದೇಶಿಸಿದ ಸಿನಿಮಾ ನೋಡುವಾಗ, ಅಕ್ಕ-ಪಕ್ಕದವರ ಬಳಿ ಮಗನ ಬಗ್ಗೆ ಹೇಳಿಕೊಳ್ಳುವಾಗ ಕುಟ್ಟಿಯಮ್ಮನ ಕಣ್ಣುಗಳಲ್ಲಿನ ಹೆಮ್ಮೆ ಎಷ್ಟು ಆಪ್ತ ಅನಿಸಿತಂದರೆ ಸ್ಕೂಲು, ಕಾಲೇಜುಗಳಲ್ಲಿ ನಾನು ಗೆದ್ದು ತಂದ ಶೀಲ್ಡ್​ಗಳನ್ನು  ಒರೆಸಿ ಕಾಣುವಂತೆ ಇಡುತ್ತಿದ್ದ ಅಮ್ಮ ಈಗಲೂ ಕವಿತೆ ಓದುವುದಕ್ಕೆ ಹೋಗುವಾಗಿ ಇರಲಿ ಅಂತ ಮೆತ್ತನೆ ಕಾಟನ್ ಸೀರೆಗಳಿಗೆ ಖುದ್ದು ಫಾಲ್ ಹಚ್ಚಿ ರೆಡಿ ಮಾಡಿ ಕೊಡುವ ಅವಳ ಖುಷಿಗೆ ಏನನ್ನಾದರೂ ನಿರಂತರ ಮಾಡಬೇಕು ಅಂತ ನೆನಪಿಸಿತು ‘#ಹೋಂ’.

ಚಿತ್ರದ ಒಂದು ದೃಶ್ಯ

ಇಡೀ ಸಿನಿಮಾ ಹೊತ್ತಿರುವುದೇ ಈ ಆಲಿವರ ಅನ್ನುವಂತೆ ಮುಗಿದ ಮೇಲೂ ಕಾಡುತ್ತಾನೆ ಆಲಿವರ್ ಟ್ವಿಸ್ಟ್. ಜಗತ್ತಿನ ಲೆಕ್ಕಾಚಾರಗಳ ಅರಿಯದೆ ಮಾತನಾಡುವ ಅವನ ಮುಕ್ತತೆ ಮತ್ತು ಮುಗ್ಧತೆಯೇ ಇಡೀ ಸಿನಿಮಾದ ಕಥಾವಸ್ತು, ಮಿಕ್ಕಿದ್ದೆಲ್ಲಾ ಪೂರಕ ಅನ್ನಿಸುವಂತೆ ಆವರಿಸಿಕೊಂಡಿದ್ದಾನೆ. ‘ನೆನಪುಗಳು ಮನಸ್ಸಿನಲ್ಲಿರಲಿ ಅಂತ ಇಟ್ಟುಕೊಳ್ಳಬೇಕು, ಯಾರನ್ನಾದರೂ ದೂಷಿಸುವುದಕ್ಕಂತ ಅಲ್ಲ’ ಅಂತ ಅದೆಷ್ಟು ಸರಳ ಮುಖಭಾವದಲ್ಲಿ ಹೇಳುತ್ತಾನೆಂದರೆ ಆಲಿವರ್ ಭರ್ತಿ ಇಷ್ಟವಾಗುತ್ತಾನೆ. ವೀಡಿಯೋ ಕ್ಯಾಸೆಟ್ ಅಂಗಡಿ ನಡೆಸಿ ಮೋಸ ಹೋಗಿದ್ದ ಆ ದಿನಗಳನ್ನು ನೆನಪಿಸಿಕೊಳ್ಳುವಾಗ, ತನಗೆ ಗೊತ್ತಿರುವ ವಿಜ್ಞಾನ ಪ್ರಮೇಯಗಳನ್ನು ರಸವತ್ತಾಗಿ ವಿವರಿಸುವಾಗ, ಮಗನ ಕಣ್ಣಲ್ಲಿ ತಾನು ಕಾಣಿಸುವುದಕ್ಕಾಗಿ ಏನನ್ನೋ ಸಾಧಿಸಿದ್ದನ್ನು ಹೇಳಿಕೊಳ್ಳಲು ಒದ್ದಾಡುವಾಗ, ಅಷ್ಟು ಕನವರಿಸಿ ಪಡೆದ ಹೊಸ ಸ್ಮಾರ್ಟ್‍ಫೋನ್ ಬಳಸುವುದಕ್ಕೆ ಗೊತ್ತಾಗದೆ ಏನೋ ಮಾಡಿ ದೊಡ್ಡ ಸಮಸ್ಯೆಯನ್ನೇ ಸೃಷ್ಟಿಸಿದಾಗ ಎಲ್ಲಕ್ಕಿಂತ ಮುಖ್ಯವಾಗಿ ಮಗನಿಗೆ ತನಗಿಂತ ಹೆಚ್ಚು ತನ್ನ ಮಾವ ಆಗುವವನು ಇಷ್ಟವಾಗುವುದನ್ನು ಗಮನಿಸಿ ಮುಖ ಸಣ್ಣದು ಮಾಡಿಕೊಳ್ಳುವ ಎಲ್ಲಾ ಸಮಯದಲ್ಲೂ ಅನಾಯಾಸವಾಗಿ ಕರುಳು ಚುರುಕ್ಕೆನ್ನುವಂತೆ ಮಾಡುತ್ತಾನೆ.

ಮುರಿದ ಟೇಬಲ್ ರಿಪೇರಿ ಮಾಡಿಕೊಂಡು, ಅಪ್ಪನ ಮೂತ್ರ ಒರೆಸಿಕೊಂಡು, ಅದ್ಭುತ ಅನಿಸುವಂತೆ ಕೈತೋಟ ಬೆಳೆಸಿದ್ದರೂ ಮಗನ ಕಣ್ಣಲ್ಲಿ ತನ್ನ ಬಗ್ಗೆ ಕೊಂಚ ಹೆಮ್ಮೆ ಹುಟ್ಟಿಸಲು ಪರದಾಡುತ್ತ ತನ್ನ ಜೀವನದಲ್ಲಿ ನಡೆದ ಎಕ್ಟ್ಸ್ರಾರ್ಡಿನರಿ ಕತೆ ಹೇಳಲು ಕೂರಿಸಿಕೊಳ್ಳುತ್ತಾನೆ. ಆದರೆ ಅಪ್ಪನ ಕತೆಯ ಗಂಟನ್ನು ಮಗ ನಂಬುವುದೇ ಇಲ್ಲ. ನಂಬುವುದಕ್ಕೆ ಕಾರಣ ಸಿಗುವವರೆಗೂ. ಹೀಗೆ ಹೇಗೇಗೋ ಮಕ್ಕಳಿಗೆ ಹತ್ತಿರವಾಗಲು ನಡೆಸುವ ಎಲ್ಲಾ ಪ್ರಯತ್ನಗಳಲ್ಲಿ ಎಷ್ಟೋ ಅಪ್ಪಂದಿರ ಪ್ರತಿನಿಧಿ ಅನಿಸಿಬಿಡುತ್ತಾನೆ ಆಲಿವರ್ ಟ್ವಿಸ್ಟ್. ಮುಜುಗರಕ್ಕೆ ತಕ್ಕುದಾದ ಮುಖಭಾವ ಇದೇ ಅನಿಸುವಂತೆ ಸಿನಿಮಾದುದ್ದಕ್ಕೂ ಕಾಣಿಸುವ ಬೊಕ್ಕ ತಲೆಯ, ತೆಳ್ಳಗೆ ಹೊಟ್ಟೆ ಇದ್ದೂ ತುಂಬಾ ತೆಳ್ಳಗನಿಸುವ ಇಂದ್ರನ್ಸ್, ಆಲಿವರ್ ಟ್ವಿಸ್ಟ್ ಆಗಿ ತುಂಬಾ ಇಷ್ಟವಾಗುತ್ತಾರೆ.

ನಮ್ಮಜ್ಜ ಯುಟಿಲಿಟಿಯ ಮಧ್ಯೆ ಒಂದು ಕಾಲು ಮಡಚಿದಂತೆ ಚಕ್ಕಂಬಕ್ಕಳ ಹಾಕಿ ಕೂತು ಪಾತ್ರೆ ತೊಳೆಯುತ್ತಿದ್ದ ಒಂದು ಚಿತ್ರ ಯಾವುದೇ ಹಿನ್ನೆಲೆಗಳ ನೆನಪಿಲ್ಲದೆಯೂ ಇನ್ನೂ ಅಚ್ಚೊತ್ತಿದ ಹಾಗೆ ನೆನಪಿದೆ. ಎಲ್ಲೋ ಹೊರಗಿಂದ ಬಂದ ನಮ್ಮನ್ನು ಅಜ್ಜ ನೋಡಿದ ಕೂಡಲೇ ತನ್ನ ಹಲ್ಲಿಲ್ಲದ ಬೊಚ್ಚುಬಾಯಿಂದ ನಕ್ಕ ನಗೆ ನಾನು ಈವರೆಗೆ ನೋಡಿದ ಕಲ್ಮಶಗಳಿಲ್ಲದ ನಗೆಯಲ್ಲೊಂದು. ಸಿನಿಮಾ ನೋಡುತ್ತಾ ಅಜ್ಜ, ಅವ್ವ ನೆನಪಾದರು. ಅಜ್ಜನ ಇಂಗ್ಲಿಷ್ ಹುಚ್ಚು, ಏನೋ ಮಾತಾಡಿ ಕಣ್ಣಗಲಿಸಿ ತುಟಿಯುಬ್ಬಿಸಿ ನಗುತ್ತಿದ್ದ ಆತನ ತುಂಟತನ ಭರ್ತಿ ಹದಿನೆಂಟು ವರ್ಷಗಳ ನಂತರ ನೆನಪಿಸಿದ್ದು ಈ ಸಿನಿಮಾ. ವಯಸ್ಸಾದಂತೆಲ್ಲಾ ಮಕ್ಕಳಾಗುವ ಅವರನ್ನು ಕಾಣಬಹುದಾದ ರೀತಿ ತುಂಬಾ ಪ್ರಾಕ್ಟಿಕಲ್‍ಆಗಿ ತೋರಿಸುವಂತೆ ಇಂಗ್ಲೀಷ್ ಟೈಪಿಸ್ಟ್ ಅಪ್ಪಚ್ಚನ್ ಮತ್ತು ಮನೆಯವರನ್ನು ಚಿತ್ರಿಸಲಾಗಿದೆ. ಇಡೀ ಮನೆಯಲ್ಲಿ ಏರುದನಿ, ಜೋರು ಮಾತು ಇದ್ದಾಗ್ಯೂ ಅಲ್ಲಿ ಮುಖ್ಯವಾಗಿ ಪ್ರೀತಿ ಕಾಣಸಿಗುತ್ತದೆ. ಹೆಂಡತಿಗೆ ಗಂಡನ ಮೇಲಿರಬೇಕಾದ ಪ್ರೀತಿ, ಮಕ್ಕಳಿಗೆ ಹೆತ್ತವರ ಮೇಲಿರಬೇಕಾದ ಪ್ರೀತಿಯ ಜೊತೆಗೆ ಗೌರವದ ಕುರಿತಾಗಿ ಇಲ್ಲಿ ಸೂಚ್ಯವಾಗಿ ತೋರಿಸಲಾಗಿದೆ.

ಸಿನಿಮಾದ ಕಡೇಗೆ “ಐ ಆಮ್ ಆಲ್‍ವೇಸ್ ಇಮ್​ಪರ್ಫೆಕ್ಟ್ ಎಟ್ ಮೈ ಹೋಂ” ಆಂಟೋನಿ ಹೀಗಂತ ಹೇಳುತ್ತಾನಷ್ಟೇ. ಆದರೆ ನಾವೆಲ್ಲರೂ ನಮ್ಮ ಮನೆಯಲ್ಲಿರುವುದೂ ಹಾಗೆಯೇ. ಅದು ಸಮಾಧಾನ, ನೆಮ್ಮದಿ ಹೌದೇ ಆದರೂ, ಹಾಗಿರುವುದು ನಾವು ಭಾವಿಸಿದಂತೆ ನಮ್ಮ ಜನ್ಮತಃ ಹಕ್ಕಾಗಿದೆಯಾ? ಗೊತ್ತಿಲ್ಲ. ಸದಾ ನಮ್ಮೊಳಗಿನ ಒಳ್ಳೆಯದನ್ನೇ ತೋರಿಸಲು ಹಾತೊರೆಯುವ ನಾವು ಜಗತ್ತಿನೆದುರು ಅರೆಗಣ್ಣಿನ ಬುದ್ಧನಂತೆ ಇದ್ದು ಬರುವುದು ನಮ್ಮ ಇನ್‍ಬಿಲ್ಟ್ ವ್ಯಕ್ತಿತ್ವವೇ ಆಗಿ ಹೋಗಿರುವುದನ್ನು ನಟನೆ ಎಂದರೆ ತಪ್ಪಾಗಬಹುದು. ನಮಗೆ ಅದರ ವ್ಯತಿರಿಕ್ತವಾದ ಸ್ವಭಾವವೊಂದಿರುತ್ತದೆ. ತಪ್ಪು ಅಂತ ಗೊತ್ತಿದ್ದೂ ಹಾರಾಡುವ, ಚೀರಾಡುವ, ನಿರ್ಲಕ್ಷಿಸುವ, ಮಾತನಾಡದೆ ಇರುವ, ಮಾತಿಗೆ ತಿರುಗಿ ಹೇಳುವ ಹಾಗೆ ಸ್ವಭಾವ, ಕೇವಲ ನಮ್ಮ ಮನೆಯ ಗೋಡೆಗಳಿಗಷ್ಟೇ ಗೊತ್ತಿರುವ ಸ್ವಭಾವ. ಕಟ್ಟಿದ ಮನೆ, ‘ಮನೆ’ಯಾಗುವುದು ಇಂತಹ ಸುಲಭತೆ, ಸಲಿಗೆಯ ಕಾರಣಗಳಿಂದಲೇ. ಆದರೂ ಸಲಿಗೆ ಹೆಚ್ಚು ಏರುಪೇರಾಗದಂತೆ ನೋಡಿ ಸುಧಾರಿಸಿಕೊಳ್ಳುವುದು ಎಷ್ಟು ಮುಖ್ಯ ಅನ್ನುವುದನ್ನು ಯೋಚಿಸಲು ಮುನ್ನುಡಿಸುತ್ತದೆ ಈ ಸಿನಿಮಾ.

ಸಿನೆಮಾದ ದೃಶ್ಯ

‘#ಹೋಂ’ – ರೋಜಿನ್ ಥಾಮಸ್ ನಿರ್ದೇಶನದ ಮಲಯಾಳಂ ಸಿನಿಮಾ. ಒಂದೊಂದು ಪಾತ್ರ ಮತ್ತು ದೃಶ್ಯಗಳನ್ನು ಕಟ್ಟಿಕೊಟ್ಟ ರೀತಿ ಖುಷಿ ಕೊಡುತ್ತದೆ. ಆಲಿವರ್ ಟ್ವಿಸ್ಟ್(ಇಂದ್ರನ್ಸ್), ಆಂಟೋನಿ ಆಲಿವರ್ ಟ್ವಿಸ್ಟ್ (ಶೀಕಾಂತ್ ಬಾಸಿ), ಕುಟ್ಟಿಯಮ್ಮ(ಮಂಜು ಪಿಲ್ಲಯ್), ಚಾರ್ಲ್ಸ್​ ಆಲಿವರ್ ಟ್ವಿಸ್ಟ್ (ನಸ್ಲೆನ್), ಅಪ್ಪಚ್ಚನ್ (ಕೈಂಕರಿ ತಂಕರಾಜ್), ಇನ್ನು ಆಲಿವರ್ ಟ್ವಿಸ್ಟ್​ನ ಬಾಲ್ಯದ ಗೆಳೆಯ ಸೂರ್ಯನ್(ಜಾನ್ ಆಂಟೋನಿ), ಸೈಕಿಯಾಟ್ರಿಸ್ಟ್ ಡಾ. ಫ್ರಾಂಕ್ಲಿನ್(ವಿಜಯ್ ಬಾಬು) ಇವರನ್ನು ಸಿನಿಮಾ ನೋಡಿಯೇ ಖುಷಿ ಪಡಬೇಕು.

ಯಾವುದೇ ತೋರಿಕೆ, ಆಡಂಬರ, ಸದ್ದು-ಗದ್ದಲಗಳಿಲ್ಲದೆ ಎಷ್ಟು ತಣ್ಣಗಿನ ವಾತಾವರಣದಲ್ಲಿ ಕಣ್ಣುಗಳಿಗೆ ಇಷ್ಟವಾಗುವಂತೆ ಇಡೀ ಸಿನಿಮಾ ನಡೆಯುತ್ತದೆಂದು ನೋಡಬೇಕು. ಫ್ಲ್ಯಾಶ್‍ಬ್ಯಾಕ್ ಕತೆಯ ಹಿನ್ನೆಲೆಗಳು ಯಾರೋ ಬಿಡಿಸಿಟ್ಟ ಚಿತ್ರದಂತೆ ಖುಷಿ ಕೊಡುತ್ತವೆ. ಎಷ್ಟೊಳ್ಳೆ ಸಾಲುಗಳಿರುವ ಹಾಡುಗಳು… ನೋಡುಗರನ್ನ ಹಿಡಿ ಹಿಡಿಯಾಗಿ ನೇವರಿಸುತ್ತವೆ. ಕೆಲವೊಂದು ಸಣ್ಣ ಸಣ್ಣ ಸಂಗತಿಗಳೂ ನಮಗೆ ನಮ್ಮನ್ನು ನೆನಪಿಸಲು ಸಹಾಯ ಮಾಡುತ್ತವೆ, ಹಾಗಾಗಿ ‘#ಹೋಂ’ ಒಳ್ಳೆಯ ಚಿತ್ರ.

ಹಿಂದಿನ ಮೀಟುಗೋಲು : Cinema : ಮೀಟುಗೋಲು ; ಮರ ಎಷ್ಟೇ ಬೆಳೆದರೂ ನೆಲವ ತಬ್ಬಿದ ಬೇರನ್ನು ಮರೆಯಬಾರದು ‘ಅಮೆರಿಕಾ ಅಮೆರಿಕಾ’

Published On - 6:07 pm, Wed, 1 December 21