ಆಧುನಿಕ ಶಕುಂತಲಾ ಕಥನ: ಎರಡು ವರ್ಷಗಳ ನಂತರ ನನ್ನ ಬದುಕನ್ನೇ ಬದಲಾಯಿಸಿ ಬಿಟ್ಟಿತು!
ಈಗಾಗಲೇ ನಾನು ಹೇಳಿದಂತೆ 1972 ರಲ್ಲಿ ನನ್ನ ಸಂಶೋಧನಾ ಪ್ರಭಂದವನ್ನು ಬೆಂಗಳೂರು ವಿಶ್ವವದ್ಯಾನಿಲಯಕ್ಕೆ ಸಲ್ಲಿಸಿದ್ದೆ. ನಂತರ ಅನಿವಾಸಿ ಭಾರತೀಯ ಮೂಲದ ಅಮೇರಿಕಾದ Dr. ಪ್ರಸಾದ್ರವರಿಗೆ ಸಂಶೋಧನಾ ಸಹಾಯಕಿಯಾಗಿ ಮೂರು ತಿಂಗಳು ಕೆಲಸ ಮಾಡಿದೆ.
ನಾನು ಶಿರಾಕ್ಕೆ ಹೋಗುವ ಮೊದಲು ಇನ್ನೊಂದು ಅತೀ ಮುಖ್ಯವಾದ ಘಟನೆ ನಡೆಯಿತು. ಅದು ಯಾವುದೇ ಮುನ್ಸೂಚನೆ ಕೊಡದೆ ಅತೀ ಸಣ್ಣ ಝರಿಯಂತೆ ಪ್ರಾರಂಭವಾಗಿದ್ದು, ಎರಡು ವರ್ಷಗಳ ನಂತರ ನನ್ನ ಬದುಕನ್ನೇ ಎಲ್ಲಾ ತರದಲ್ಲೂ ಬದಲಾಯಿಸಿಬಿಟ್ಟಿತು. ಆ ರೀತಿ ಆಗಲು ನನಗೆ ಪ್ರಪಂಚ ಜ್ಞಾನವಿಲ್ಲದ್ದು ಅತೀ ದೊಡ್ಡ ಕಾರಣ. ಯಾರಾದರೂ ಹಿರಿಯರ ಬಳಿಯೋ, ಗೆಳತಿಯರ ಬಳಿಯೋ ಮನಬಿಚ್ಚಿ ಮಾತಾಡಿ ಅವರಿಂದ ಸಲಹೆ ಪಡೆದಿದ್ದರೆ ನನ್ನ ಜೀವನ ಬೇರೆಯದೆ ತಿರುವು ತೆಗೆದುಕೊಳ್ಳುತ್ತಿತ್ತಿನೋ!
ಈಗಾಗಲೇ ನಾನು ಹೇಳಿದಂತೆ 1972 ರಲ್ಲಿ ನನ್ನ ಸಂಶೋಧನಾ ಪ್ರಭಂದವನ್ನು ಬೆಂಗಳೂರು ವಿಶ್ವವದ್ಯಾನಿಲಯಕ್ಕೆ ಸಲ್ಲಿಸಿದ್ದೆ. ನಂತರ ಅನಿವಾಸಿ ಭಾರತೀಯ ಮೂಲದ ಅಮೇರಿಕಾದ Dr. ಪ್ರಸಾದ್ರವರಿಗೆ ಸಂಶೋಧನಾ ಸಹಾಯಕಿಯಾಗಿ ಮೂರು ತಿಂಗಳು ಕೆಲಸ ಮಾಡಿದೆ. ನನಗೆ ಲೆಕ್ಚರರ್ ಆಗೋ ಆಸೆ ಇರಲಿಲ್ಲ. ಬದಲಿಗೆ ಸಂಶೋಧನ ಕ್ಷೇತ್ರದಲ್ಲಿ ಮುಂದುವರಿಯುವ ಬಲವಾದ ಇಚ್ಛೆ ಇತ್ತು. ಐವತ್ತು ವರ್ಷಗಳ ಹಿಂದೆ ಈಗಿನಂತೆ Ph.D. ಮಾಡಿದ ಮೇಲೆ ಪೋಸ್ಟ್ ಡಾಕ್ಟರೇಟ್ ಫೆಲೋಶಿಪ್ (post doctoral fellowship) ಸುಲಭವಾಗಿ ಸಿಗುತ್ತಿರಲಿಲ್ಲ. ಅದೃಷ್ಟವಶಾತ್ ಭಾರತದ ಅಪ್ರತಿಮ ಅಣುವಿಜ್ಞಾನಿ ದಿವಂಗತ ಡಾ. ಹೊಮಿ ಬಾಬಾ ಬಾಂಬೆಯಲ್ಲಿ ಸ್ಥಾಪಿಸಿದ್ದ ಬಾಬಾ ಪರಮಾಣು ಸಂಶೋಧನಾ ಕೇಂದ್ರ (Bhabha Atomic Research Centre)ನಿಂದ ಜೈವಿಕ ವಿಜ್ಞಾನವೂ ಸೇರಿದಂತೆ ಸಂಶೋಧನೆಗಾಗಿ ಪೋಸ್ಟ್ ಡಾಕ್ಟರೇಟ್ ಫೆಲೋಶಿಪ್ಗೆ ಅರ್ಜಿಗಳನ್ನು ಕೋರಿ ವೃತ್ತ ಪತ್ರಿಕೆಗಳಲ್ಲಿ ಪ್ರಕಟಣೆ ಬಂತು.
ನಾನು ಅದಕ್ಕೆ ಅರ್ಜಿ ಸಲ್ಲಿಸಲು ನಿರ್ಣಯಿಸಿದೆ. ಅರ್ಜಿಯೊಂದಿಗೆ ನಾನು ಸಂಶೋಧನೆ ಮಾಡಲಿಚ್ಚಿಸುವ ಪ್ರಾಜೆಕ್ಟ್ ಒಂದನ್ನು ನೀಡಬೇಕಾಗಿತ್ತು. ನನಗೆ ಕಪ್ಪೆಗಳ ಮೇಲಾಗಲಿ, ಸ್ನಾಯುಗಳ ಮೇಲಾಗಲಿ, ಜೀವಿಗಳ ಮೇಲೆ ಪರಿಸರ ಉಷ್ಣಂಶದ ಪರಿಣಾಮದ ಬಗ್ಗೆಯಾಗಲಿ (ನನ್ನ Ph.D. ಸಂಶೋಧನೆ) ಕೆಲಸ ಮಾಡಲು ಇಷ್ಟವಿರಲಿಲ್ಲ. ಏಕೆಂದರೆ ಈ ಬಗೆಯ ಕೆಲಸ ಪ್ರಪಂಚದಲ್ಲೆಲ್ಲಾ ಅಷ್ಟಾಗಿ ನಡೆಯುತ್ತಿರಲಿಲ್ಲ. ನಾನು ಅದೇ ಕ್ಷೇತ್ರದಲ್ಲಿ ಮುಂದುವರೆದರೆ ಅಂತ ಭವಿಷ್ಯವೇನೂ ನನಗೆ ಕಾಣಲಿಲ್ಲ.
ನನಗೆ ಮೊದಲಿನಿಂದಲೂ ಮೆದುಳು, ನರ ಮಂಡಲಗಳ ಮೇಲಿನ ಸಂಶೋಧನೆಯಲ್ಲಿ ತುಂಬಾ ಆಸಕ್ತಿ ಇತ್ತು. ಶೂನ್ಯ ಪೋಷಣೆ (malnutrition) ಅಂದಿಗೂ, ಇಂದಿಗೂ ನಮ್ಮ ದೇಶದ ಜ್ವಲಂತ ಸಮಸ್ಯೆ. ಶಾರೀರಿಕವಾಗಿ ಶೂನ್ಯಪೋಷಣೆಯ ಪರಿಣಾಮಗಳ ಬಗ್ಗೆ ಸಾಕಷ್ಟು ಮಾಹಿತಿ ಇತ್ತು. ಅದರೆ ಶೂನ್ಯಪೋಷಣೆ ಯಾವ ರೀತಿ ಮೆದುಳು ಮತ್ತು ನರಮಂಡಲದ ಮೇಲೆ ಪ್ರಭಾವ ಬೀರುತ್ತೆ ಅನ್ನುವ ಬಗ್ಗೆ ಆಗ ಅಷ್ಟು ಜ್ಞಾನ ಇರಲಿಲ್ಲ. ಈ ಕ್ಷೇತ್ರ ಆರಿಸಿಕೊಂಡು ನಾನು ಒಂದು ಪ್ರಯೋಗ ಸಲ್ಲಿಸಿದೆ. ನನಗೇನೂ ಫೆಲೋಶಿಪ್ ಸಿಗುತ್ತೆ ಅನ್ನೋ ನಂಬಿಕೆ ಇರಲಿಲ್ಲ. ಏಕೆಂದರೆ BARC ವಿಜ್ಞಾನದಲ್ಲಿ ಸಂಶೋಧನೆ ನಡೆಸುತ್ತಿದ್ದ ದೇಶದ ಅತ್ಯುನ್ನತ ಸಂಶೋಧನಾ ಕೇಂದ್ರವಾಗಿತ್ತು. ಅಲ್ಲಿ ಹೆಚ್ಚಾಗಿ ಅಣು ವಿಜ್ಞಾನ, ಭೌತ ವಿಜ್ಞಾನ, ಸ್ವಲ್ಪ ಮಟ್ಟಿಗೆ ರಾಸಾಯನ ಶಾಸ್ತ್ರಗಳಲ್ಲಿ ಸಂಶೋಧನೆ ನಡೆಯುತ್ತಿತ್ತು. ನಾನು ಯಾವಾಗಲೂ ಮಹತ್ವಕಾಂಕ್ಷಿ. ಹೆಚ್ಚು ಸಲ ಆಕಾಶಕ್ಕೆ ಗುರಿ ಇಟ್ಟವಳು. BARC ನಿಂದ ಫೆಲೋಶಿಪ್ ಸಿಕ್ಕಿದರೆ ಅದೊಂದು ಚರಿತ್ರಾರ್ಹ ಸಾಧನೆಯಾಗುತ್ತಿತ್ತು. ಆರಂಭಿಕ ಪರಿಶೀಲೆನೇಯ ನಂತರ ನನ್ನ ಅರ್ಜಿ ಸ್ವೀಕೃತವಾಗಿ, ನನಗೆ ಸಂದರ್ಶನಕ್ಕೆ ಬರಲು, BARC ನಿಂದ ಎರಡನೇ ದರ್ಜೆ ರೈಲ್ವೆ ದರ ಮತ್ತು ಬಾಂಬೆಯಲ್ಲಿ ಎರಡು ದಿನಗಳ ವಸತಿಯ ಖರ್ಚು ವಹಿಸಿಕೊಳ್ಳುವುದಾಗಿ ಆಹ್ವಾನ ಬಂತು. ಆ ದಿನಗಳಲ್ಲಿ ಇದು ಒಂದು ದಾಖಲೆಯೇ.
ನನಗೆ ಆಗಲೂ ಈಗಲೂ ಬಾಂಬೆ ಮತ್ತು ಕಲ್ಕತ್ತ ಮಹಾನಗರಗಳೆಂದರೆ ಒಂದು ಬಗೆಯ ಆತಂಕ, ಭಯ. ಸಿನಿಮಾಗಳ ಪ್ರಭಾವೋ ಏನೋ ಅವು ಪಾಪ ಕೂಪಗಳೆಂದೂ, ಬೆಂಗಳೂರಿನಿಂದ ಹೋಗುವ ಒಂಬ್ಬಂಟಿ ಹೆಣ್ಣುಮಗಳಿಗೆ ಅಲ್ಲಿ ಇರುವುದು, ಓಡಾಡುವುದು ಸ್ವಲ್ಪ ಮಟ್ಟಿಗೆ ಅಪಾಯಕಾರಿಯೆಂದು ನನ್ನ ಭಾವನೆಯಾಗಿತ್ತು. ಇದೀಗ ನಾನು ಕ್ಷೇಮವಾಗಿ ಬಾಂಬೆಗೆ ಹೋಗಿ, ಅಲ್ಲಿ ತಂಗಿ, ಸಂದರ್ಶನ ಮುಗಿಸಿ, ಜೊತೆಗೆ ಆ ಮಹಾನಗರಿಯನ್ನು ನೋಡಲು ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗಿತ್ತು. ತಂದೆ ಈ ವಿಷಯದಲ್ಲಿ ಅಮಾಯಕರು. ಸಂಬಂಧಿಗಳು ಯಾರೂ ಬಾಂಬೆಯಲ್ಲಿ ಇರಲಿಲ್ಲ. ಎಲ್ಲೋ YWCA (Young Women’s Christian Association) ಎಂಬ ಕಡೆ ಹೆಣ್ಣುಮಕ್ಕಳಿಗೆ ಸುರಕ್ಷಿತವಾದ, ಕೈಗೆಟೆಕುವ ದರದಲ್ಲಿ ವಸತಿ ಸಿಗುತ್ತೆಂದು ಓದಿದ್ದು ನೆನೆಪಿತ್ತು. ನಾನು ಕೋರಿಕೊಂಡ ಮರುವಾರವೇ YWCA ನಲ್ಲಿ ಮೂರನಾಲ್ಕು ದಿನದ ಮಟ್ಟಿಗೆ ವಸತಿಯನ್ನು ನನ್ನ ಹೆಸರಲ್ಲಿ ಮೀಸಲಾಗಿಟ್ಟಿರುವುದಾಗಿ ಪತ್ರ ಬಂತು.
ನನ್ನೊಂದಿಗೆ ನನ್ನ ಸ್ಕೂಲಮೇಟ್, ಮಹಾರಾಣಿ ಕಾಲೇಜಿನಲ್ಲಿ ಒಟ್ಟಿಗೆ ಓದಿದ ಆತ್ಮೀಯ ಗೆಳತಿಯನ್ನು ಜೊತೆಗೊಯ್ಯಲು ನಿರ್ಧರಿಸಿದೆ. ಆಕೆಯ ಅಣ್ಣ ITI ನ purchase ವಿಭಾಗದಲ್ಲಿ ಕೆಲಸ ಮಾಡುತಿದ್ದರು. ಅವರು ತಮಗೆ ಗೊತ್ತಿದ್ದ ಒಂದು ಬಾಂಬೆ ಕಂಪನಿಯ ಬೆಂಗಳೂರಿನ ಶಾಖಾ ವ್ಯವಸ್ಥಾಪಕರ ಕಡೆಯಿಂದ ಬಾಂಬೆ ನೋಡಲು ವ್ಯವಸ್ಥೆ ಮಾಡುವುದಾಗಿ ಹೇಳಿದರು. ಅಂತೆಯೇ ಎರಡೇ ದಿನದಲ್ಲಿ ಅವರ ಕೇಂದ್ರ ಕಚೇರಿಯಲ್ಲಿ Sales amanager ಆಗಿದ್ದ ಅವರ ಗೆಳೆಯ ನಮ್ಮಿಬ್ಬರಿಗೂ ಬಾಂಬೆ ನಗರಿಯನ್ನ ತೋರಿಸುವ ವ್ಯವಸ್ಥೆ ಆಯಿತು. ನಾನು, ನನ್ನ ಗೆಳತಿ ಇಬ್ಬರು ಬಾಂಬೆ ತಲುಪಿ, YWCA ಸೇರಿದೆವು. ಆ ದಿನ ವಿಶ್ರಾಂತಿ ಪಡೆದು ಮರುದಿನ ನಾನು BARC ನ ಬಾಂಬೆ ನಗರದ ಕಚೇರಿಯಲ್ಲಿ ಸಂದರ್ಶನಕ್ಕೆ ಹಾಜರಾಗಬೇಕಾಗಿತ್ತು.
ನನಗೆ ರಾತ್ರಿಯೆಲ್ಲ ನಿದ್ದೆ ಬರಲಿಲ್ಲ. ಐದು ಗಂಟೆಗೆ ಎದ್ದು, ಅಡಿಗೆ ಮನೆಗೆ ಹೋಗಿ ಕಾಫಿ ಮಾಡಿ ಕುಡಿಯಬೇಕೆಂದು ಹೋದೆ. ಅಲ್ಲಿ ಸ್ವತಃ (self cooking) ಕಾಫಿ bread toast ಮಾಡಿಕೊಳ್ಳಲು ಅನುಕೂಲವಿತ್ತು. ಕಾಫಿ ಮಾಡಿ ಕೊಳ್ಳುತಿದ್ದಾಗ ಫೋನು ರಿಂಗಣಿಸಿತು. ನಾನು ರಿಸೀವರ್ ತೆಗೆದುಕೊಂಡು “ Hello” ಅಂದೇ. ಒಬ್ಬ ಗಂಡಸಿನ ಧ್ವನಿ ನನ್ನ ಜೊತೆಯಲ್ಲಿದ್ದ ರೂಮಿನ ಇನ್ನೊಬ್ಬ ಗೆಸ್ಟ್ ಹೆಸರಿನಿಂದ ಮಾತನಾಡಿಸಿತು. ನಾನು ಆಕೆಯಲ್ಲವೆಂದು, ಬೆಂಗಳೂರಿನಿಂದ ಬಂದವಳೆಂದು ಹೇಳಿದ ಮೇಲೆ ಆತ ನನ್ನ ಹೆಸರೇನೆಂದು ಮತ್ತು ನಾನ್ಯಾಕೆ ಬಾಂಬೆಗೆ ಬಂದಿದ್ದೇನೆಂದೂ ಕೇಳಿದ. ಅಮಾಯಕಳಾದ ನಾನು ಬಂದ ಉದ್ದೇಶ ಹೇಳಿದ ಮೇಲೆ ಆತ ಶಕ್ಕು, ನಿನ್ನ ಇಂಟರ್ವ್ಯೂ ಆದ ಮೇಲೆ ಸಂಜೆ ಮೀಟ್ ಮಾಡೋಣ ಅಂದ. ಮೊದಲೇ ಬಾಂಬೆ ಅಂದರೆ ಭಯ, ಈಗ ಈ ಆಸಾಮಿ ಸಾಯಂಕಾಲ ಬಾ ಅಂತಿದ್ದಾನೆ. ನಾನು ರಿಸೀವರ್ ಕೆಳಗಿಟ್ಟು ರೂಮಿಗೆ ಓಡಿದೆ.
ಮಾರನೇ ದಿನ ನನ್ನಸಂದರ್ಶನ ಮುಗಿಯಿತು. ಬೆಂಗಳೂರಿನ ಆ ವ್ಯವಸ್ಥಾಪಕರ ವಶೀಲಿ ಮೂಲಕ KU ಮೆನನ್(KUM) ಅನ್ನೋ ವ್ಯಕ್ತಿ ಬಂದು ನಮ್ಮನ್ನು ಬಾಂಬೆ ಆ ದಿನ, ಮತ್ತೆರೆಡು ದಿನ ತೋರಿಸಿದರು. ನಮ್ಮ ಪ್ರಯಾಣ ಹೆಚ್ಚಾಗಿ ಬಾಂಬೆಯ ಸುಪ್ರಸಿದ್ದlocal train ಗಳಲ್ಲಿ, ಒಮ್ಮೊಮ್ಮೆ ಬಸ್ಸಿನಲ್ಲಿ ಆಗುತ್ತಿತ್ತು. ಆತ ದೊಡ್ಡ ಕಂಪನಿಯ sales manager, ಅವರ ಜೀವನಶೈಲಿ ಎಲ್ಲಾ 5 star satandard. ನಾವೋ ಕೆಳಮಧ್ಯಮ ವರ್ಗದವರು, ಇದುವರೆಗೆ 5 star ಹೋಟೆಲ್ಲೇ ನೋಡಿಲ್ಲದವರು. ಅವರ ಆ ಬಗೆಯ ಆತೀತ್ಯದಿಂದ ನಮಗೆ ತುಂಬಾ ಸಂಕೋಚವಾಗುತ್ತಿತ್ತು. ಕೊನೆಗೊಂದು ದಿನ ನಮ್ಮಆರ್ಥಿಕ ಸ್ಥಿತಿಯನ್ನುವಿವರಿಸಿ, ನಾವು ಅವರಷ್ಟು ಶ್ರೀಮಂತರಲ್ಲವೆಂದೂ, ಆದರೂ ನಾವೊಂದು ಪಾರ್ಟಿ ಅವರಿಗೆ ಕೊಡುವುದು ನಮ್ಮ ಭಾಧ್ಯತೆಯಾಗಿದ್ದು, ಒಂದು ಚೆನ್ನಾಗಿರುವ ಉಡುಪಿ ಹೋಟೆಲಿನಲ್ಲಿ ಅವರಿಗೆ ಊಟ ಕೊಡಿಸಿದೆವು. ಇದ್ದ ಮೂರು ದಿನದಲ್ಲೇ KUM ಒಳ್ಳೆಯ ಸ್ನೇಹಿತರಾದರು. ಇಂದಿಗೂ, 50 ವರ್ಷಗಳ ನಂತರವೂ ಅವರು ನನ್ನ ಹಿತೈಷಿ ಮತ್ತು ಸಂಪರ್ಕದಲ್ಲಿದ್ದಾರೆ. ನಮಗೆ ಬಾಂಬೆಯಲ್ಲಿ ನಗರ ನೋಡಲು ಅನುಕೂಲ ಮಾಡಿ ಕೊಟ್ಟ ಬೆಂಗಳೂರಿನ ಶ್ರೀಧರ ಅವರು ನನ್ನನ್ನೊಮ್ಮೆ ಭೇಟಿಯಾಗಬೇಕೆಂಬ ಇಚ್ಛೆಯನ್ನKUM ಗೂ, ನನ್ನ ಸ್ನೇಹಿತೆಯ ಅಣ್ಣನಿಗೂ ಹೇಳಿದರಂತೆ. ಆದರೆ ನಾನು ಅದಕ್ಕೆ ಸ್ಪಂದಿಸಲಿಲ್ಲ.
BARC fellowship ನನಗೆ ಸಿಗಲಿಲ್ಲ. ಅಷ್ಟರಲ್ಲಿ ಅಮೇರಿಕಾದ Ford Foudation ಅವರು ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯಕ್ಕೆ ಎರಡು ವರ್ಷಗಳ ಅವಧಿಯಲ್ಲಿ, ಇಲಿ, ಹೆಗ್ಗಣ ಮುಂತಾದ ಕಶೆರುಕ ಪೀಡೆಗಳ ಬಗ್ಗೆ ಸಂಶೋಧನೆಗಾಗಿ ಧನ ಸಹಾಯ ನೀಡಿದ್ದರು. ಈ ಧನ ಸಹಾಯಕ್ಕೆ ಒಂದು ದೊಡ್ಡ ಚರಿತ್ರೆ ಇದೆ. ಅರವತ್ತರ ದಶಕದಲ್ಲಿ ನಮ್ಮ ದೇಶದಲ್ಲಿ ಆಹಾರ ಧಾನ್ಯಗಳ ಉತ್ಪಾದನೆ ಕಡಿಮೆ ಇದ್ದು, ಅವುಗಳ ಕೊರತೆಯಿತ್ತು. ಅದು ಸಾಲದೆಂಬಂತೆ ಭೀಕರ ಬರಗಾಲಗಳು, ಕ್ಷಾಮಗಳು, ಭಾರತದ ಮೇಲೆ ಚೀನಾದ ಆಕ್ರಮಣವೂ ಸೇರಿ ದೇಶದ ಜನತೆಗೆ ಆಹಾರ ಪೂರೈಸುವುದು ಭಗೀರಥ ಪ್ರಯತ್ನವಾಗಿತ್ತು. ಆಗ ಅಮೇರಿಕ ದೇಶ PL480 ಎಂಬ ಯೋಜನೆಯಡಿಯಲ್ಲಿ ಗೋಧಿ, ಸಕ್ಕರೆ, ಹಾಲಿನ ಪುಡಿ ಮುಂತಾದುವುನ್ನ ಹೆರಳವಾಗಿ ಭಾರತಕ್ಕೆ ಕಳುಹಿಸಿಕೊಡುತ್ತಿತ್ತು.
ಅವು ಹಡಗಿನ ಮೂಲಕ ಕಲ್ಕತ್ತ ಸೇರಿ, ಬಂದ ಆಹಾರ ಧಾನ್ಯಗಳೇ ಮುಂತಾದವು ಅಲ್ಲಿನ ಗೊಧಾಮುಗಳಲ್ಲಿ ಶೇಕರಿಸಿದ್ದು, ನಂತರ ದೇಶದಾದ್ಯಂತ ಹಂಚಿಕೆಯಾಗುತ್ತಿತ್ತು. ಕೆಲವು ವರ್ಷಗಳಾದ ಮೇಲೆ ಆ ದೇಶದ ಸೇನೆಟರ್ ಒಬ್ಬರು ಕಳುಹುಸುತ್ತಿದ್ದ ಆಹಾರ ಧಾನ್ಯಗಳೆಲ್ಲ ಮನುಷ್ಯರ ಬದಲು ಕಲ್ಕತ್ತಾದ ಗೊಧಾಮುಗಳಲ್ಲಿ ಇಲಿ, ಹೆಗ್ಗಣಗಳ ಪಾಲಾಗುತ್ತಿದೆಯೆಂದು ಆದ್ದರಿಂದ ಇಂತಹ ದಾನವನ್ನು ನಿಲ್ಲಿಸಬೇಕೆಂದೂ ವಾದ ಮಾಡಿದರು. ವಿಷಯದ ಸತ್ಯಾಸತ್ತ್ಯತೆ ಅರಿಯಲು ಅಮೇರಿಕ ಸರ್ಕಾರ ಇಬ್ಬರು ಸಂಶೋಧನ ವಿದ್ಯಾರ್ಥಿಗಳನ್ನು ಒಬ್ಬರಾದ ಮೇಲೊಬ್ಬರಂತೆ ಕಲ್ಕತ್ತೆಗೆ ಕಳುಹಿಸಿ ಅಲ್ಲಿಯ ಗೊಧಾಮುಗಳಲ್ಲಿನ ಇಲಿಗಳ ಬಗ್ಗೆ ಸಂಶೋಧನೆ ನಡೆಸಲು ನಿರ್ದೇಷಿಸಿತು. ಹಾಗೆ ಬಂದ ಸಂಶೋಧನ ವಿದ್ಯಾರ್ಥಿಗಳು, ಆರು ವರ್ಷಗಳ ಕಾಲ ಈ ನಿಟ್ಟಿನಲ್ಲಿ ಸಂಶೋಧಿಸಿ, ಸೇನಟರ್ ಹೇಳಿದ ಆಪಾದನೆಯಲ್ಲಿ ಹುರುಳಿದೆಯೆಂದೂ, ಅಲ್ಲಿರುವ ಇಲಿಗಳ ಬಗ್ಗೆ ಸುದೀರ್ಘ ಮಾಹಿತಿಯನ್ನು ಒದಗಿಸಿದರು. ಈ ಸಂಶೋಧನೆಗಾಗಿ ಅವರಿಗೆ ಪ್ರಪಂಚದ ಅತೀ ಶ್ರೇಷ್ಠ ವೈದ್ಯಕೀಯ ವಿಶ್ವವಿದ್ಯಾನಿಲಯವಾದ ಬಾಲ್ಟಿಮೋರ್ ನಗರದ ಜಾನ್ ಹಾಪಿಕಿನ್ಸ್ ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿಯನ್ನು ದಯಪಾಲಿಸಿತು.
ಅಮೇರಿಕಾದ Ford Foundation ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಲ್ಲಿಈ ಬಗೆಯ ಸಂಶೋಧನೆ ನಡೆಯಬೇಕೆಂದೂ, ಆಯೋಜನೆ ಯಡಿಯಲ್ಲಿ ಒಬ್ಬ ಪ್ರೊಫೆಸರ್, ಇಬ್ಬರು ಇನ್ಸ್ಟರಕ್ಟರ್ಗಳನ್ನು ನೇಮಕ ಮಾಡಿಕೋಬೇಕೆಂದು ಆಯೋಜಿಸಿತು. ನನ್ನ ಗುರುಗಳಾದ RV ಕೃಷ್ಣಮೂರ್ತಿಯವರು ಇನ್ಸ್ಟಕ್ಟರ್ಪದವಿಗೆ ಅರ್ಜಿಸಲ್ಲಿಸಲು ಹೇಳಿದರು. ನನಗಾಗ Ph.D. ಮಾಡಿದೆನೆಂಬ ಭಾರಿಕೊಬ್ಬಿತ್ತು. Instructor ಅಂದರೆ lecturer ಗಿಂತ ಒಂದು ಸ್ಥರಕೆಳಗೆ. ಅದಕ್ಕೆ ಅರ್ಜಿಸಲ್ಲಿಸಲು ಹಿಂದೇಟು ಹಾಕಿದೆ. ಆದರೆ RVK ಅವರು Ph.D.ಮಾಡಿದ ತಕ್ಷಣ ಪ್ರೊಫೆಸರ್ ಆಗೋಕೆ ಸಾಧ್ಯವಿಲ್ಲವೇಂದೂ, ಅದು ಹಂತ ಹಂತವಾಗಿ ಪಡೆಯುವ Post ಎಂದು, ಸದ್ಯಕ್ಕೆಇನ್ಸ್ಟಕ್ಟರ್ಗೆಅಪ್ಲೈ ಮಾಡ ಹೇಳಿದರು.
ಇದಾದ ಕೆಲವೇ ದಿನಗಳಲ್ಲಿ ನಾನು ಹಿಂದೆ ವಿವರಿಸಿದಂತೆ, ಶಿರಾದ first grade ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಲು ಹೊರಟು ಹೋದೆ. ಮೊದಲ ಸಲ ಹೋದಾಗ ನನ್ನ ತಂದೆ ಜೊತೆ ಬಂದು, ನಾನಿರಬೇಕಾದ ದಿವಂಗತ ಮಾಲಿ ಮರಿಯಪ್ಪನವರ ಮನೆ, ಅವರ ಮನೆ ಮಂದಿ, ಕೆಲಸ ಮಾಡಬೇಕಾಗಿದ್ದ ಕಾಲೇಜು ಎಲ್ಲಾ ನೋಡಿ, ಬೆಂಗಳೂರಿಗೆ ವಾಪಸ್ಸು ಹೊರಟುಹೋದರು. ಅವರ ಮನೆಯ ಹಿರಿಯ ಮಗ ವಂಶ ಪಾರಂಪರ್ಯವಾಗಿ ಬಂದಿದ್ದ ವ್ಯವಸಾಯ ನೋಡಿಕೊಳ್ಳುತಿದ್ದರು. ಅವರ ಮಗ ಕೃಷಿ ಪದವೀಧರ. ಮಗಳು ಶೈಲಾ ಇನ್ನೂ ಸ್ಕೂಲಿನಲ್ಲಿ ಓದುತಿದ್ದಳು. ಅವಳೊಟ್ಟಿಗೆ ಅವರ ಅತ್ತೆಯ ಮಗಳು ಸುಧಾ, ಅಂದರೆ ಮನೆಯ ಮಗಳಾದ ಪಾರ್ವತಿಯವರ ಮಗಳು. ಶೈಲನೊಟ್ಟಿಗೆ ಶಾಲೆಗೆ ಹೋಗುತಿದ್ದಳು. ಈ ಇಬ್ಬರು ಹುಡುಗಿಯರಿಗೂ ನಾನು ಪಾಠ ಹೇಳಿ ಕೊಡಲಾರಂಭಿಸಿದೆ. ಆದರೆ ಅದಕ್ಕಿಂತ ಹೆಚ್ಚಾಗಿ ಇಬ್ಬರೂ ನನ್ನ ಲವ ಕುಶರಂತಿದ್ದರು. ಶಾಲೆ ಮುಗಿದ ತಕ್ಷಣ ಮೊದಲು ಪಾಠ, ನಂತರ ಊಟ. ಆಮೇಲೆ ಸದಾ ನನ್ನೊಂದಿಗೆ ಅವರಿಬ್ಬರು ಮಲಗುವುದು ನನ್ನ ಅಕ್ಕ ಪಕ್ಕದಲ್ಲೇ.
ಯಾವ ಜನ್ಮದ ಋಣವೋ. ಈ ಋಣ ಇಷ್ಟಕ್ಕೆ ಮುಗಿಯಲಿಲ್ಲ. ಶೈಲನ ತಾಯಿ, ಮನೆಯ ಹಿರಿಯ ಸೊಸೆ ನನ್ನನ್ನು ಮಗಳಂತೆ ನೋಡಿಕೊಂಡರು. ಕಿರಿಯ ಮಗ ಮಾಲಿ ಮದ್ದಣ್ಣ ರಾಜಕೀಯದಲ್ಲಿದ್ದರು. ಕಿರಿಯ ಸೊಸೆ ನನ್ನನ್ನು ಸೋದರಿಯಂತೆ ತರಗತಿಗಳು ಬೆಳಿಗ್ಗೆ 7 ರಿಂದ 11 ರ ವರೆಗೆ. ನಾನು ಮನೆಗೆ ಬಂದ ಮೇಲೆ ಬೇಡ ಬೇಡವೆಂದರೂ ಕಿರಿ ಸೊಸೆ ಬೆಳಗಿನ ಉಪಹಾರ ಬಲವಂತವಾಗಿ ತಿನ್ನಿಸೋರು. ಅವರೊಂದಿಗೆ ಅಡಿಗೆಮನೆಯಲ್ಲಿದ್ದು ಮಾತಾಡಿಕೊಡಿದ್ದರೆ, ಸುಧಾ, ಶೈಲಾ ಬರೋರು . ಅವರು ಬಂದ ಮೇಲೆ ನನ್ನ ಸಂಗ ಬಿಡುತ್ತಲೇ ಇರಲಿಲ್ಲ. ಅವರ ಮುಗಿಯಲಾರದ ಪ್ರಶ್ನೆಗಳಿಂದ ಸದಾ ಬಿಡುವಿಲ್ಲದಂತೆ ನನ್ನನ್ನು busy ಯಾಗಿಡುತ್ತಿದ್ದರು. ಮಕ್ಕಳೊಂದಿಗೆ ಹಾಗೆ ಸಲೀಸಾಗಿ ಹೊಂದಿಕೊಂಡಿದ್ದು ನನಗೆ ಆಶ್ಚರ್ಯವಾಯಿತು ಎಲ್ಲಾ ಮನೆಯವರೂ ಒಬ್ಬರಿಗೊಬ್ಬರು ಪರಿಚಿತರು.
ಜಾತಿ ಭೇಧ ಬೇಕಾದಷ್ಟಿತ್ತು. ನನಗೆ ಆಶ್ಚರ್ಯವಾದುದೇನೆಂದರೆ ಗೌಡರ ಮನೆಗಳಲ್ಲೂ ಮಡಿ, ಆಚಾರ, ಆಚರಣೆಗಳೆನೂ ಕಡಿಮೆಯಿರಲಿಲ್ಲ. ನಾನು ಗಮನಿಸಿದ ಇನ್ನೊಂದು ಅಂಶವೆಂದರೆ ಶೆಟ್ಟರ ಹುಡುಗಿಯರ ಕಲಾ ನೈಪುಣ್ಯ ಮತ್ತು ಪಾಕ ಕುಶಲತೆ. ಮೊದಲ ಬಾರಿಗೆ ನಾನು ಎಕ್ಕದ ಹೂವಲ್ಲಿ ದಾರವಿಲ್ಲದೆ ಹೂವಿನ ಮಾಲೆಯನ್ನು ಮಾಡುವದನ್ನ ಕಲಿತೆ. ಅದು ಗಣೇಶನಿಗೆ ಶ್ರೇಷ್ಠವಂತೆ. ಗಣೇಶನ ಹಬ್ಬ ಬಂದಾಗ ನಾನು, ಶೈಲಾ, ಸುಧಾ, ಬಯಲಲೆಲ್ಲ ತಿರುಗಿ ಎಕ್ಕದ ಹೂವು ತರುತ್ತಿದ್ದೆವು. ವ್ಯವಸಾಯದೊಂದಿಗೆ ಮಾಲಿ ಮನೆಯವರು ಸಾರಿಗೆ ಬಸ್ಸುಗಳನ್ನು ಓಡುಸುತಿದ್ದರು. ಅವರದೊಂದು ಪೆಟ್ರೋಲ್ ಬಂಕು ಸಹ ಇತ್ತು. ಅವರೊಂದಿಗೆ ಅವರದೇ ಬಸ್ಸಿನಲ್ಲೇ ನಾನು ಅವರ ಸಂಬಂಧಿಗಳ ಹಳ್ಳಿಗಳಿಗೆಲ್ಲ ಹೋಗಿದ್ದೆ. ಹಾಗೆ ಹೋಗಿದ್ದ ಒಂದು ಹಳ್ಳಿಯ ಹೆಸರು ಕಳ್ಳಂಬೆಳ್ಳ. ಈ ಹಿಂದೆ ಕಾಂಗ್ರೆಸ್ ಸರಕಾರದಲ್ಲಿ ಸಚಿವರಾಗಿದ್ದ ಜಯಚಂದ್ರ ಕಳ್ಳಂಬೆಳ್ಳದವರು. ಅವರು ನನ್ನ ತಂಗಿಯ ಪತಿಯ ಸಹಪಾಟಿಯೂ ಹೌದು. ಸಂಬಂಧಗಳು ಬಳ್ಳಿಗಳಂತೆ ಹೇಗೆಹೇಗೋ ಹರಡುತ್ತವಲ್ಲಾ! ಅಲ್ಲಿಗೆ ಹೋದ ಮೇಲೆ ಶಿರಾ ಮೊಗಲರ, ಮರಾಠರ ಆಳ್ವಿಕೆಯಲ್ಲಿತ್ತು ಎಂದು ಗೊತ್ತಾಯಿತು. ಊರ ಹೊರಭಾಗದಲ್ಲಿ ಕೋಟೆ, ಊರೊಳಗೆ ಒಂದೊಳ್ಳೆ ಮಸೀದಿ.
ಶಿರಾದಲ್ಲಿ ನಾನು ಮೂರೋ ನಾಲ್ಕೋ ತಿಂಗಳು ಕೆಲಸ ಮಾಡುವಷ್ಟರಲ್ಲೇ ನನಗೆ Ford Foudation project ಅಡಿಯಲ್ಲಿ ಇನ್ಸ್ಟಿರ್ಕ್ಟರ್ ಆಗಿ ಆಯ್ಕೆಯಾಗಿರುವುದಾಗಿ ಪತ್ರ ಬಂತು. ಮತೊಮ್ಮೆ ಗಂಟು ಮೂಟೆ ಕಟ್ಟಿಕೊಂಡು ಬೆಂಗಳೂರಿಗೆ ಬಂದು, ಕೃಷಿ ವಿಶ್ವವಿದ್ಯಾನಿಲಯದಲ್ಲಿ ಇನ್ಸ್ಟಿರ್ಕ್ಟರ್ ಆಗಿ ಕೆಲಸಕ್ಕೆ ಸೇರಿಕೊಂಡೆ. ಸಂಬಳ ಸುಮಾರು 550 ರೂಪಾಯಿಗಳು. ನನ್ನ ತಂದೆಗೆ 25 ವರ್ಷ ಕೇಂದ್ರ ಸರ್ಕಾರದಲ್ಲಿ ಸೇವೆ ಮಾಡಿದ ನಂತರವೂ ಸಾಲದ ಕಂತುಗಳು ಹೋಗಿ ನನಗಿಂತ ಕಡಿಮೆ ಸಂಬಳ ಬರುತ್ತಿತ್ತು. ನನ್ನ ಸಂಬಳ, ತಂದೆ ಸೇರಿದಂತೆ ಮನೆಯವರೆಲ್ಲರಿಗೂ ತುಂಬಾ ಸಂತೋಷದ ವಿಷಯವಾಗಿತ್ತು. ಒಂದೇ ಒಂದು ನಿರಾಶಾದಾಯಕ ಸಂಗತಿ ಎಂದರೆ ನಾನೀಗ ಹೆಚ್ಚಾಗಿ ಹೊಲ ಗದ್ದೆಗಳಲ್ಲಿ ಇಲಿಗಳ ಬಗ್ಗೆ ಸಂಶೋಧನೆ ಮಾಡಬೇಕಾಗಿತ್ತು.
ಪ್ರಯೋಗ ಶಾಲೆಯಲ್ಲಿ ಸ್ವಲ್ಪ ಮಟ್ಟಿಗೆ ಇಲಿಗಳ ಬಗ್ಗೆ ಕೆಲಸ ಮಾಡಿದರೂ ಯಾವ ಕೆಲಸವೂ ಅಂಗ, ಅಂಗಾಂಶ, ಜೀವಕೋಷದಷ್ಟು ಆಳಕ್ಕೆ ಸದ್ಯಕ್ಕಂತೂ ಇಳಿಯಲಿಲ್ಲ. ಆದರೆ ಬೆಂಗಳೂರಿನಲ್ಲೇ ಕೆಲಸ, ಮೇಲಾಗಿ ಸಂಶೋಧನಾ ಕ್ಷೇತ್ರ, ಮನೆಗೆ ಹತ್ತಿರವಾಗಿದ್ದ ಕೃಷಿ ಕಾಲೇಜು ಇವು ಪ್ಲಸ್ ಪಾಯಿಂಟ್ಗಳಾಗಿದ್ದವು. ಆದರೆ ಮುಂದಕ್ಕೆ ಹೋದಂತೆ ನನ್ನೀ ಹೊಸ ಸಂಶೋಧನಾ ಕ್ಷೇತ್ರ ಪ್ರಗತಿ ಸಾಧಿಸುವ ಹೇರಳ ಅವಕಾಶಗಳನ್ನು ಒದಗಿಸಿತು. ನಾನೇದರೂ ಶರೀರಕ್ರಿಯಾ ಶಾಸ್ತ್ರದಲ್ಲಿ ನನ್ನ ವೃತ್ತಿಯನ್ನೊ , ಸಂಶೋಧನೆಯನ್ನೂ ಮುಂದುವರಿಸಿದ್ದರೆ ನಾನು ಈ ಕ್ಷೇತ್ರದ್ದಲ್ಲಿಏರೀದಷ್ಟು ಏತ್ತರ ಏರಲು ಖಂಡಿತ ಸಾಧ್ಯವಿರುತ್ತಿರಲಿಲ್ಲ. ಅದು ಹೇಗೆ ಸಾಧ್ಯಯಾಯಿತೆಂದು ಮುಂದೆ ನೋಡೋಣ.
ಮತ್ತಷ್ಟು ಸಾಹಿತ್ಯ-ಸಂಸ್ಕೃತಿ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.