Music : ನಾಕುತಂತಿಯ ಮಿಡಿತ ; ಸಾಧನಕೇರಿಗೆ ಹೊರಟಾಗ ಬಸ್ಸಿನಿಂದಿಳಿದು ಮೆಲ್ಲ ನೆಲ ಮುಟ್ಟಿ ನಮಸ್ಕರಿಸಿದ್ದೆ

|

Updated on: Jan 06, 2022 | 10:43 AM

Dharwad : ‘ಆ ದಿನ ಪಂ. ವೆಂಕಟೇಶಕುಮಾರ್ ಅವರ ಗಾಯನ. ಶಾಲೆ ಮುಗಿಸಿ ನೇರವಾಗಿ ನಾನು ನನ್ನಮ್ಮ ಅಲ್ಲಿಗೆ ಹೋಗಿದ್ದೆವು. ಕ್ಯಾಸೆಟ್‌ನಲ್ಲಿ ಮುದ್ರಿಸಿಕೊಂಡ ವೆಂಕಟೇಶಕುಮಾರ್ ಅವರು ಹಾಡಿದ ಶುದ್ಧಕಲ್ಯಾಣ್ ಮತ್ತು ದುರ್ಗಾ ರಾಗಗಳೆರಡನ್ನೂ ‘ನಾನು ಧಾರವಾಡಕ್ಕೆ ಹೋಗುತ್ತೇನೆ’ ಎನ್ನುವ ರಾಗ ಸಂಪೂರ್ಣವಾಗಿ ಮುಚ್ಚಿ ಹಾಕಿದೆ.’ ಶ್ರೀಮತಿದೇವಿ

Music : ನಾಕುತಂತಿಯ ಮಿಡಿತ ; ಸಾಧನಕೇರಿಗೆ ಹೊರಟಾಗ ಬಸ್ಸಿನಿಂದಿಳಿದು ಮೆಲ್ಲ ನೆಲ ಮುಟ್ಟಿ ನಮಸ್ಕರಿಸಿದ್ದೆ
Follow us on

ನಾಕುತಂತಿಯ ಮಿಡಿತ | Naakutantiya Midita : ನನಗೇನೋ ಪುರಾಣಿಕಮಠ ಸರ್ ಬಳಿ ಕಲಿಯಬೇಕೆಂಬ ಆಸೆ. ಜೊತೆಗೆ ಅವರು ಸಾಧನಕೇರಿಯಲ್ಲಿದ್ದದ್ದೂ ಒಂದು ಕಾರಣವಿರಬಹುದು. ಮೊದಲಿನಿಂದಲೂ ಬೇಂದ್ರೆಯವರು, ಅವರ ಸಾಧನಕೇರಿಯ ಬಗ್ಗೆ ಏನೋ ಒಂದು ಸೆಳೆತವಿತ್ತು. ಗುರುಗಳನ್ನು ನೋಡಲು ಮೊದಲ ಬಾರಿಗೆ ಸಾಧನಕೇರಿಗೆ ಹೊರಟಾಗ ಬಸ್‌ನಿಂದ ಇಳಿದು ಮೆಲ್ಲ ನೆಲ ಮುಟ್ಟಿ ನಮಸ್ಕರಿಸಿದ್ದಂತೂ ನಿಜ. ನನ್ನ ಮಟ್ಟಿಗೆ ಅದು ‘ಸಾಧನೆ’ಯ ಭೂಮಿಯಾಗಿತ್ತು. ಆಗಲೇ ತುಂಬ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಸಮಯವನ್ನು ಹೊಂದಿಸಿಕೊಳ್ಳಲು ಕಷ್ಟಪಡುತ್ತಿದ್ದ ಪುರಾಣಿಕಮಠ ಸರ್ ಸ್ವಲ್ಪ ಸಮಯ ತೆಗೆದುಕೊಂಡು ನನಗೆ ಕಲಿಸಲು ಒಪ್ಪಿದರು. ಮೊದಲ ದಿನ ಪೂಜೆ ಮಾಡಿದ ನಂತರ ನನ್ನ ಪಾಠ ಆರಂಭಿಸಿದ್ದು ರಾಗ ಆಹೀರ್ ಭೈರವ್‌ನೊಂದಿಗೆ.
ಶ್ರೀಮತಿದೇವಿ, ಹಿಂದೂಸ್ತಾನಿ ಗಾಯಕಿ, ಮೈಸೂರು

(ಮಿಡಿತ – 1)

ಬಾಲ್ಯದಿಂದ ಸಂಗೀತವನ್ನು ಕೇಳುತ್ತಾ, ಹಾಡುಗಳನ್ನು ಕಲಿಯುತ್ತಾ ಬೆಳೆದ ನನಗೆ ಯಾವ ಸಂಗೀತ ಕಾಯಕ್ರಮಗಳಿಗೆ ಹೋದರೂ ಅಲ್ಲಿ ಇರುತ್ತಿದ್ದ ಮುಖ್ಯ ಕಲಾವಿದರು ಮತ್ತು ಸಹ ಕಲಾವಿದರಲ್ಲಿ ಒಬ್ಬರಾದರೂ ಧಾರವಾಡದವರಿರುತ್ತಿದ್ದುದನ್ನು ನೋಡಿ ಆಶ್ಚರ್ಯವಾಗುತ್ತಿತ್ತು. ಧಾರವಾಡದಲ್ಲಿ ಎಲ್ಲಿ ನಿಂತು ಕಲ್ಲು ಒಗೆದರೂ ಅದು ಸಾಹಿತಿಗಳ ಇಲ್ಲವೇ ಸಂಗೀತಗಾರರ ಮನೆ ಬಾಗಿಲಿಗೆ ತಾಗುತ್ತದೆ ಎನ್ನುವ ಮಾತನ್ನು ಎಲ್ಲಾ ಕಡೆಯೂ ಕೇಳುತ್ತಿದ್ದ ಕಾರಣ ಧಾರವಾಡವೆಂಬುದು ಒಂದು ದೊಡ್ಡ ಅಚ್ಚರಿಯ-ಕೌತುಕದ ಬೀಡಾಗಿತ್ತು.

ನಮ್ಮ ಊರಾದ ಮೂಡಬಿದ್ರೆ ಮತ್ತು ಪಕ್ಕದ ಕಾರ್ಕಳದಲ್ಲಿದ್ದ ಸಂಗೀತ ಗುರುಗಳಿಂದ ದೊರಕಿದಷ್ಟು ಸಂಗೀತವನ್ನು ನಾನು ಕಲಿಯುತ್ತಿದ್ದ ಸಮಯದಲ್ಲಿ ಕಾರ್ಕಳದಲ್ಲಿ ಡಾ.ಪ್ರಕಾಶ ಶೆಣೈ ಅವರು ‘ಶಾಸ್ತ್ರೀಯ ಸಂಗೀತ ಸಭಾ’ದ ಮೂಲಕ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು. ಮೂಡಬಿದ್ರೆಯಲ್ಲಿ ಆಳ್ವಾಸ್ ಸಂಸ್ಥೆ ಮೂಲಕ ಹಲವಾರು ಕಾರ್ಯಕ್ರಮಗಳು ನಡೆಯುತ್ತಿದ್ದವು. ಇವುಗಳನ್ನು ಕೇಳಿದಾಗ ‘ನಾನು ಕಲಿಯುತ್ತಿರುವ ಸಂಗೀತ ಇದಲ್ಲ, ಈ ಬಗೆಯ ಸಂಗೀತವನ್ನು ಕಲಿಯಬೇಕಾದರೆ ಅದು ಇರುವ ಊರಿಗೇ ಹೋಗಬೇಕು’ ಎಂದು ನನಗನಿಸುತ್ತಿತ್ತು. ಕಾರ್ಕಳದಲ್ಲಿ ಎಂ.ರಾಮಚಂದ್ರ ಅವರು ‘ಸಾಹಿತ್ಯ ಸಂಘ’ದಲ್ಲಿ ನಡೆಸುತ್ತಿದ್ದ ಕಾರ್ಯಕ್ರಮಗಳಲ್ಲೂ ಧಾರವಾಡದ ಸಾಹಿತಿಗಳ ಚಂದದ ಮಾತನ್ನು, ಆ ಮಾತಿನಲ್ಲಿನ ಗೇಯತೆಯನ್ನು ಕೇಳುತ್ತಿದ್ದೆ. ಪಿಯುಸಿ ನಂತರವಾದರೂ ಕಾಲೇಜಿಗೆ ಧಾರವಾಡಕ್ಕೇ ಹೋಗಬೇಕೆಂಬ ಆಸೆ ಬರಬರುತ್ತಾ ಜಾಸ್ತಿ ಆಗಿ ಮನೆಯವರನ್ನು ಪೀಡಿಸುವಷ್ಟು ಆದದ್ದರ ಸಾಕ್ಷಿ, ಕಾರ್ಯಕ್ರಮ ಒಂದರ ಲೈವ್ ರೆಕಾರ್ಡಿಂಗ್ ಜೊತೆಯಲ್ಲಿ ನಡೆದ ನನ್ನ-ಅಮ್ಮನ ಮಾತುಗಳೂ ಅದರಲ್ಲಿ ಅಡಗಿವೆ.

ಪಂ. ಚಂದ್ರಶೇಖರ ಪುರಾಣಿಕಮಠರೊಂದಿಗೆ ಶ್ರೀಮತಿದೇವಿ

ಮೂಡಬಿದ್ರೆಯ ಸಾವಿರ ಕಂಬದ ಬಸದಿ ಆವರಣದಲ್ಲಿ ನಡೆದ ಸ್ಪಿಕ್‌ಮೆಕೆ ಕಾರ್ಯಕ್ರಮದಲ್ಲಿ ಆ ದಿನ ಪಂ. ವೆಂಕಟೇಶಕುಮಾರ್ ಅವರ ಗಾಯನ. ಶಾಲೆ ಮುಗಿಸಿ ನೇರವಾಗಿ ಅಲ್ಲಿ ಹೋಗಿ ಕುಳಿತಿದ್ದೆ. ಶಾಲಾ ಶಿಕ್ಷಕಿಯಾಗಿದ್ದ ನನ್ನಮ್ಮ ಶಾಲೆ ಮುಗಿಸಿ ಅಲ್ಲಿಗೆ ಬಂದಿದ್ದರು. ಆ ದಿನ ಕ್ಯಾಸೆಟ್‌ನಲ್ಲಿ ಮುದ್ರಿಸಿಕೊಂಡ ವೆಂಕಟೇಶಕುಮಾರ್ ಅವರು ಹಾಡಿದ ಶುದ್ಧಕಲ್ಯಾಣ್ ಮತ್ತು ದುರ್ಗಾ ರಾಗಗಳೆರಡನ್ನೂ ‘ನಾನು ಧಾರವಾಡಕ್ಕೆ ಹೋಗುತ್ತೇನೆ’ ಎನ್ನುವ ರಾಗ ಸಂಪೂರ್ಣವಾಗಿ ಮುಚ್ಚಿ ಹಾಕಿದೆ. ಒಂದು ಗಂಟೆ ಇಡೀ ‘ನಾನು ಸಂಗೀತ ಕಲಿಯಲು ಧಾರವಾಡಕ್ಕೆ ಹೋಗುತ್ತೇನೆ’ ಎನ್ನುವ ನನ್ನ ಮಾತು, ಅಮ್ಮನ ಸಮಾಧಾನದ ‘ಅಷ್ಟು ದೂರ ಒಬ್ಬಳೇ ಹೋಗುವುದು ಹೇಗೆ, ಉಳಿಯುವುದು, ಊಟ-ಭಾಷೆ ಎಲ್ಲಾ ಬೇರೆ, ಒಳ್ಳೆ ಗುರುಗಳು ಸಿಗಬೇಕಲ್ಲಾ, ಹಣದ ಹೊಂದಿಕೆ ಹೇಗೆ, ದಕ್ಷಿಣ ಕನ್ನಡದಲ್ಲಿನ ಶಿಕ್ಷಣದ ಗುಣಮಟ್ಟ ಅಲ್ಲಿ ಇಲ್ಲವಲ್ಲಾ’ ಮುಂತಾದ ಮಾತುಗಳು ಕ್ಯಾಸೆಟ್‌ನಲ್ಲಿ ತುಂಬಿ ಬಿಟ್ಟಿವೆ. ಮುಂದೆ ನನ್ನ ಅಪ್ಪನ ಹರಿಕಥೆಗೆ ಹಾರ್ಮೋನಿಯಂ ನುಡಿಸಲು ಬರುತ್ತಿದ್ದ ವಿಶ್ವನಾಥ್ ಭಟ್ ಎಂಬವರೊಂದಿಗೆ ಅಮ್ಮ ಮಾತಾಡಿ, ಅವರ ನೆರವು ಪಡೆದು ಅಂತೂ ಇಂತೂ ನನ್ನನ್ನು ಧಾರವಾಡದ ಜೆಎಸ್ಎಸ್ ಕಾಲೇಜಿಗೆ, ಕಾಲೇಜಿನ ಹಾಸ್ಟೆಲ್‌ಗೆ ಸೇರಿಸಿದರು. ಆಗ ಧಾರವಾಡದಲ್ಲಿ ಅತ್ಯಂತ ಹಿರಿಯ ಗುರುಗಳಾದ ದಂಡಾಪೂರ್ ಸರ್, ಪಟವರ್ಧನ್ ಸರ್ ಮತ್ತು ಪುರಾಣಿಕಮಠ ಸರ್ ಅವರುಗಳ ಬಳಿ ಅನೇಕರು ಸಂಗೀತಾಭ್ಯಾಸ ಮಾಡುತ್ತಿದ್ದರು. ಜೊತೆಗೆ ಶ್ರೀಪಾದ ಹೆಗಡೆ ಸರ್, ಶಾಂತಾರಾಮ ಹೆಗಡೆ ಸರ್ ಹೀಗೆ ಒಳ್ಳೆಯ ಗುರುಗಳಿದ್ದರು.

ನನಗೇನೋ ಪುರಾಣಿಕಮಠ ಸರ್ ಬಳಿ ಕಲಿಯಬೇಕೆಂಬ ಆಸೆ. ಜೊತೆಗೆ ಅವರು ಸಾಧನಕೇರಿಯಲ್ಲಿದ್ದದ್ದೂ ಒಂದು ಕಾರಣವಿರಬಹುದು. ಮೊದಲಿನಿಂದಲೂ ಬೇಂದ್ರೆಯವರು, ಅವರ ಸಾಧನಕೇರಿಯ ಬಗ್ಗೆ ಏನೋ ಒಂದು ಸೆಳೆತವಿತ್ತು. ಗುರುಗಳನ್ನು ನೋಡಲು ಮೊದಲ ಬಾರಿಗೆ ಸಾಧನಕೇರಿಗೆ ಹೊರಟಾಗ ಬಸ್‌ನಿಂದ ಇಳಿದು ಮೆಲ್ಲ ನೆಲ ಮುಟ್ಟಿ ನಮಸ್ಕರಿಸಿದ್ದಂತೂ ನಿಜ. ನನ್ನ ಮಟ್ಟಿಗೆ ಅದು ‘ಸಾಧನೆ’ಯ ಭೂಮಿಯಾಗಿತ್ತು. ಆಗಲೇ ತುಂಬ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಸಮಯವನ್ನು ಹೊಂದಿಸಿಕೊಳ್ಳಲು ಕಷ್ಟಪಡುತ್ತಿದ್ದ ಪುರಾಣಿಕಮಠ ಸರ್ ಸ್ವಲ್ಪ ಸಮಯ ತೆಗೆದುಕೊಂಡು ನನಗೆ ಕಲಿಸಲು ಒಪ್ಪಿದರು. ಮೊದಲ ದಿನ ಪೂಜೆ ಮಾಡಿದ ನಂತರ ನನ್ನ ಪಾಠ ಆರಂಭಿಸಿದ್ದು ರಾಗ ಆಹೀರ್ ಭೈರವ್‌ನೊಂದಿಗೆ.

ಚಂದ್ರಶೇಖರ ಪುರಾಣಿಕಮಠ ಗುರುಗಳು ‘ಸಜ್ಜನ ಕಲಾವಿದ’ರೆಂದೇ ಹೆಸರು ಪಡೆದವರು. ಅವರು ಯಾರ ಬಗ್ಗೂ ಕೆಟ್ಟದ್ದನ್ನು ಆಡಿದ್ದು ನೋಡಿಲ್ಲ. ಧಾರವಾಡಕ್ಕೆ ಹೊರಗಿನಿಂದ ಯಾವ ಸಂಗೀತಗಾರರು ಬಂದರೂ ತಾವು ಸಮಯಕ್ಕೆ ಸರಿಯಾಗಿ ಬಂದು ಎದುರಿನ ಸಾಲಿನಲ್ಲಿ ಕೂತು ತಲೆಯಾಡಿಸುತ್ತಾ ಸಂಗೀತ ಕೇಳಿ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದರು. ತುಂಬಾ ತಾಳ್ಮೆಯಿಂದ ಕಲಿಸುತ್ತಿದ್ದರು. ಅವರ ಪಾಠದ ಪದ್ಧತಿಯೇ ಬೇರೆಯದಾಗಿತ್ತು, ವಿಶಿಷ್ಟವಾಗಿತ್ತು. ಯಾರಿಗೂ ಪುಟಗಟ್ಟಲೆ ಆಲಾಪ ಬರೆಸುತ್ತಿರಲಿಲ್ಲ, ರೆಕಾರ್ಡರ್ ಹೆಚ್ಚಾಗಿ ಎಲ್ಲರ ಬಳಿ ಇರುತ್ತಿರಲಿಲ್ಲ. ಆದರೂ ಅವರ ಬಳಿ ಬಂದ ಪುಟ್ಟಪುಟ್ಟ ಮಕ್ಕಳೂ ನೋಡನೋಡುತ್ತಿದ್ದಂತೆ ಬಡಾಖ್ಯಾಲ್ ಹಾಡಲು ಆರಂಭಿಸುತ್ತಿದ್ದರು. ವಿಲಂಬಿತ್ ಬಂದಿಶ್ (ರಾಗದಲ್ಲಿನ ರಚನೆ)ನ ತಾಳ ಕಲಿಸುವುದು ಗುರುಗಳಾದವರಿಗೆ ಅತ್ಯಂತ ಕಷ್ಟವಾದ ಅಂಶ. ಆದರೆ, ಪುರಾಣಿಕಮಠ ಗುರುಗಳು ಪಾಠ ಮಾಡುವ ರೀತಿಯಲ್ಲಿ ವಿದ್ಯಾರ್ಥಿಗಳು ಸುಲಭವಾಗಿ ಅದನ್ನು ಕಲಿತು ಬಿಡುತ್ತಿದ್ದರು. ನಾನು ಪಾಠಕ್ಕೆ ಸೇರಿದ ಸಮಯದಲ್ಲಿ ಇತ್ತೀಚೆಗಷ್ಟೇ ನಮ್ಮನ್ನಗಲಿದ ಗಿಳಿಗುಂಡಿ ಗಜಾನನ ಹೆಗಡೆ ಅವರು ಕ್ಲಾಸ್ ನಡೆಯುವಾಗ ತಬಲಾ ನುಡಿಸಲು ಬರುತ್ತಿದ್ದ ಕಾರಣ ತುಂಬಾ ಉಪಯೋಗವಾಗುತ್ತಿತ್ತು.

ದಮಯಂತಿ ನರೇಗಲ್ ಅವರೊಂದಿಗೆ

ಹಾಸ್ಟೆಲ್‌ನಲ್ಲಿ ಸಂಗೀತ ಅಭ್ಯಾಸಕ್ಕೆ ಅನುಕೂಲವಾಗದೆ ಮುಂದಿನ ವರ್ಷವೇ ಬಾಡಿಗೆ ರೂಮೊಂದನ್ನು ಹಿಡಿದು, ಅಡುಗೆ ಶುರು ಮಾಡಿಬಿಟ್ಟೆ. ಇದರಿಂದಾಗಿ ಅಭ್ಯಾಸ ಮಾತ್ರವಲ್ಲದೆ ಸಂಗೀತ ಕಾರ್ಯಕ್ರಮ ಕೇಳಲು ಹೋಗುವುದು ಕೂಡಾ ಸುಲಭವಾಯಿತು. ಒಂದು ವರ್ಷ ದೂರದಲ್ಲೆಲ್ಲೋ ಇದ್ದುಕೊಂಡು ಬಸ್ ಹಿಡಿದು ಓಡಾಡಿಕೊಂಡಿದ್ದ ನನಗೆ ಮರು ವರ್ಷದಲ್ಲೇ ಗುರುಗಳ ಮನೆ ಪಕ್ಕದಲ್ಲೇ ಇದ್ದ ಸಾಹಿತಿ ದಮಯಂತಿ ನರೇಗಲ್ ಅವರ ಮನೆಯಲ್ಲಿ ವಾಸ ಮಾಡುವ ಅವಕಾಶ ಸಿಕ್ಕಿತು. ಹೀಗೆ ಸಾಧನಕೇರಿಯ ಪ್ರಶಾಂತ ನಗರದ 4ನೇ ಕ್ರಾಸ್‌ನ ವಿಳಾಸ ಗುರುಗಳದ್ದು ಮಾತ್ರವಲ್ಲದೆ ನನ್ನದೂ ಆಯಿತು. ಸಾಧನಕೇರಿಯ ಎರಡನೇ ಕ್ರಾಸ್‌ನಲ್ಲಿರುವ ಬೇಂದ್ರೆಯವರ ಮನೆಗೆ ಹೋಗಿ, ವಾಮನ ಬೇಂದ್ರೆಯವರಿಂದ ಕಲ್ಲುಸಕ್ಕರೆ ಪಡೆಯುವುದು, ಮುಂದೆ ಬೇಂದ್ರೆ ಭವನ ಸ್ಥಾಪನೆಯಾದ ಮೇಲೆ ಅಲ್ಲಿ ನಡೆಯುವ ಕಾರ್ಯಕ್ರಮ ಕೇಳುವುದು, ಕೆರೆಯ ಸುತ್ತಮುತ್ತ ಅಡ್ಡಾಡುವುದು ನಡೆದೇ ಇರುತ್ತಿತ್ತು. ಬೇಂದ್ರೆಯವರ ‘ಶ್ರೀಮಾತಾ’ ಮನೆ ಮುಂದಿನ ಬಸ್‌ಸ್ಟಾಂಡ್‌ನಲ್ಲಿ ನಾಲ್ಕು ಕಂಬಗಳಿದ್ದು, ಅವುಗಳ ಮೇಲೆ ‘ನಾನು, ನೀನು, ಆನು, ತಾನು’ ಎಂದು ಬರೆಸಿರುವುದು ನೆನಪಾಗುತ್ತದೆ. ಒಂದೆರಡು ಬಾರಿ ಬೇಂದ್ರೆಯವ ಮನೆ ಅಂಗಳದಲ್ಲೇ ಅವರ ಭಾವಗೀತೆಗಳನ್ನು ಹಾಡಿ, ಅತಿಥಿಗಳಾಗಿ ಬಂದಿದ್ದ ಸಂಗೀತಾ ಕಟ್ಟಿ ಅವರಿಂದ ಬಹುಮಾನವನ್ನೂ ಪಡೆದಿದ್ದೆ.

ಸಂಗೀತಾ ಕಟ್ಟಿ ಅವರೊಂದಿಗೆ ಶ್ರೀಮತಿದೇವಿ

ಗುರುಗಳ ಬಳಿ ವಾರದಲ್ಲಿ ಎರಡು ದಿನ ಪಾಠ ದೊರಕಿದರೂ ಪ್ರತಿ ದಿನ ಬೆಳಗ್ಗೆ ಅವರು ಅಭ್ಯಾಸ ಮಾಡುವಾಗ ತಾನಪೂರಾ ನುಡಿಸುತ್ತಾ, ಹಿರಿಯ ಶಿಷ್ಯರಿಗೆ ಅವರು ಪಾಠ ಮಾಡುವುದನ್ನು ಕೇಳುತ್ತಾ ತುಂಬಾ ಕಲಿತೆ. ಮುಂದೆ ಸ್ವಲ್ಪ ಸಮಯದಲ್ಲೇ ಹುಬ್ಬಳ್ಳಿಯ ಅಕಾಡೆಮಿ ಆಫ್ ಪರ್ಫಾರ್ಮಿಂಗ್ ಆರ್ಟ್ಸ್​ ನಡೆಸುವ ಸ್ಪರ್ಧೆಯೊಂದರಲ್ಲಿ ‘ತಾಮಣ್‌ಕರ್ ಪ್ರಶಸ್ತಿ’ ಜೊತೆಗೆ 3,000 ರೂ ನಗದು ಬಹುಮಾನ ಸಿಕ್ಕಾಗ, ಗುರುಗಳು ಆ ದುಡ್ಡಿನಲ್ಲಿ ಮಿರಜ್‌ನಿಂದ ತಾನಪೂರಾ ತರಿಸಿಕೊಟ್ಟರು. ತಂತಿ ಹಾಕುವುದು, ಚಾಕ್​ಪೀಸ್​ನಿಂದ ಬರೆದು ಕುಂಟಿಯನ್ನು ಬಿಗಿಯಾಗಿಸುವುದು, ಸ್ಯಾಂಡ್ ಪೇಪರ್ ಉಜ್ಜಿ ಕುಂಟಿಯನ್ನು ಪಾಲಿಶ್ ಮಾಡಿ ತೂತಿನೊಳಗೆ ಕೂರಿಸುವುದು ಮುಂತಾದ ಎಲ್ಲಾ ತಂತ್ರಗಳನ್ನು ಬೆರಗಿನಿಂದ ಕಲಿತೆ. ಆವತ್ತು ತಂಬೂರದ ನಾಲ್ಕು ತಂತಿಗಳನ್ನು ಶ್ರುತಿಯಲ್ಲಿ ಕೂಡಿಸಿ ಗುರುಗಳು ಕೈಗಿತ್ತ ತಂಬೂರಿಯ ಮಿಡಿತ ಮನವನ್ನೂ, ಬದುಕನ್ನೂ ತುಂಬಿದೆ. ಗುರುಗಳ ಪ್ರೀತಿಯಿಂದ, ಸಂಗೀತದ ಸೆಳೆತದಿಂದ, ಧಾರವಾಡದ ನೆನಪಿನಿಂದ ತುಂಬಿ ಇನ್ನೂ ಅನುರಣಿಸುತ್ತಲೇ ಇದೆ.

(ನಿರೀಕ್ಷಿಸಿ : ಮಿಡಿತ-2, ಜನವರಿ 20ರಂದು)

ಶ್ರೀಮತಿದೇವಿ ಆಶಯ : Music : ‘ನಾಕುತಂತಿಯ ಮಿಡಿತ’ ಹಿಂದೂಸ್ತಾನಿ ಗಾಯಕಿ ಶ್ರೀಮತಿದೇವಿಯವರ ಅಂಕಣ ನಾಳೆಯಿಂದ ಆರಂಭ

Published On - 10:40 am, Thu, 6 January 22