ನಾಕುತಂತಿಯ ಮಿಡಿತ | Naakutantiya Midita : ಸಂಗೀತ ಕಲಿಯುವ ಆಸೆಗೆ ಬಿದ್ದು, ದೂರದ ಮೂಡಬಿದ್ರೆಯಿಂದ ಧಾರವಾಡಕ್ಕೆ ಓದಲು ಹೋದ ನನಗೆ ಊರಿಗೆ ಪ್ರತಿಬಾರಿ ಬಂದಾಗಲೂ ಎದುರಾಗುತ್ತಿದ್ದದ್ದು ‘ಈಗ ಎಷ್ಟು ಕಲಿತಾಯ್ತು, ಇನ್ನೆಷ್ಟು ವರ್ಷ ಇದೆ, ಪರೀಕ್ಷೆ ಆಯ್ತಾ, ಟಿ.ವಿಯಲ್ಲಿ ಬಂದಿದ್ದೀಯಾ, ನಮ್ಮ ಊರಲ್ಲಿ ಅದನ್ನು ಕಲಿಯಲು ಆಗಲ್ವಾ, ಮುಂದೆ ಕೆಲಸ ಸಿಗ್ತದಾ’ ಮುಂತಾದ ಪ್ರಶ್ನೆಗಳು. ಒಳ್ಳೆ ಅಂಕಗಳನ್ನು ಪಡೆದೂ, ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ದಕ್ಷಿಣ ಕನ್ನಡವನ್ನು ಬಿಟ್ಟು ದೂರ ಹೋದದ್ದು ಸಹಜವಾಗಿಯೇ ಈ ಪ್ರಶ್ನೆಗಳನ್ನು ಮೂಡಿಸುತ್ತಿತ್ತು. ಆದರೆ, ಯಾವುದೋ ಒಂದು ಕೋರ್ಸ್ ಮಾಡಲು, ನಮಗೆ ಬೇಕಾದ ಕಾಲೇಜಿನಲ್ಲಿ ಓದಲು ಅಥವಾ ಬೇಕಾದ ಒಂದು ಸಬ್ಜೆಕ್ಟಿಗಾಗಿ ಬೇರೆ ಎಲ್ಲೋ ಓದಲು ಹೋದಾಗ ಎದುರಾಗದ ಪ್ರಶ್ನೆಗಳು ಸಂಗೀತ-ನೃತ್ಯದಂಥ ವಿದ್ಯೆಯನ್ನು ಪಡೆಯಲು ಹೋದಾಗ ಎದುರಾಗುತ್ತವೆ ಎಂಬುದು ಚಿಂತೆಗೀಡುಮಾಡುತ್ತದೆ. ಮೊದಲಿನಿಂದಲೂ ಕಲಾ ಜೀವನವನ್ನು ಆಯ್ದುಕೊಳ್ಳುವವರಿಗೆ ಉತ್ತೇಜನ ನಮ್ಮಲ್ಲಿ ತುಂಬಾ ಕಡಿಮೆ. ಅದಕ್ಕೆ ನಮ್ಮ ಔಪಚಾರಿಕ ಶಿಕ್ಷಣದಲ್ಲಿ ಸಂಗೀತಕ್ಕೆ ಸ್ಥಾನಮಾನ ಸಿಗದಿರುವುದೂ ಕಾರಣವಾಗಿರಬಹುದು.
ಶ್ರೀಮತಿ ದೇವಿ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಾವಿದೆ (Shrimathi Devi)
(ಮಿಡಿತ 9)
ಕಲಾ ಜೀವನವನ್ನು ಆಯ್ದುಕೊಂಡು ಜೀವನದುದ್ದಕ್ಕೂ ಆರ್ಥಿಕ ಅಭದ್ರತೆಯಲ್ಲಿ ಇರುವ ಕಲಾವಿದರ ಜೀವನ ಈ ಭಾವನೆಯನ್ನು ಮೂಡಿಸಿರಬಹುದು. ಜೊತೆಯಲ್ಲಿ ಕಲೆಗಳ ಹಿಂದೆ ಹೊರಟವರು ಚಟಗಳ ದಾಸರಾಗುತ್ತಾರೆ ಎಂಬ ನಂಬಿಕೆ ನಮ್ಮಲ್ಲಿ ಬೇರೂರಿಬಿಟ್ಟಿದೆ. ಕುಲೀನ ಮತ್ತು ಮೇಲ್ವರ್ಗ ಮನೆತನದ ಸ್ತ್ರೀಯರಿಗಂತೂ ಹಲವಾರು ವರ್ಷಗಳ ಕಾಲ ಈ ಕ್ಷೇತ್ರಗಳಲ್ಲಿ ಪ್ರವೇಶವಿರಲಿಲ್ಲ. ಇತ್ತೀಚಿಗಿನ ಹಲವಾರು ವರ್ಷಗಳಲ್ಲಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮಹತ್ವದ ಬದಲಾವಣೆಗಳು ಆಗಿದ್ದರೂ ಒಟ್ಟಾರೆಯಾಗಿ ಸಾಮಾನ್ಯ ಜನರಲ್ಲಿ ಕಲೆಯ ಬಗ್ಗೆ ಅರಿವು, ಜಾಗೃತಿ ಮೂಡಿಲ್ಲ ಎನ್ನುವುದು ಬೇಸರದ ಸಂಗತಿ. ಮಕ್ಕಳು ಚಿಕ್ಕವರಿದ್ದಾಗ ಒತ್ತಾಯಪಡಿಸಿ ಸಂಗೀತ-ನೃತ್ಯ ತರಗತಿಗಳಿಗೆ ಸೇರಿಸುವ ಹೆಚ್ಚಿನ ಪೋಷಕರು ಮುಂದೆ ಅವರು ದೊಡ್ಡವರಾಗಿ ಇದನ್ನೇ ಆಯ್ದುಕೊಳ್ಳುತ್ತೇವೆ ಎಂದಾಗ ನಿರಾಕರಿಸುತ್ತಾರೆ. ಜೊತೆಯಲ್ಲಿ ಶಾಲೆಯ ಅಭ್ಯಾಸದ ಹೊರೆಯೊಂದಿಗೆ ಇಲ್ಲೂ ಪರೀಕ್ಷೆ ಕಟ್ಟುವುದು, ಸ್ಪರ್ಧೆಯಲ್ಲಿ ಭಾಗವಹಿಸುವುದು ಅವರ ಆದ್ಯತೆಯಾಗಿರುತ್ತದೆ. ಒಂದುವೇಳೆ ಪರೀಕ್ಷೆ, ಸ್ಪರ್ಧೆ, ಕಾರ್ಯಕ್ರಮ ಕೊಡುವುದು ಇವು ಮಾತ್ರ ಸಂಗೀತವಲ್ಲ, ಅದರ ಹರಹು ತುಂಬಾ ದೊಡ್ಡದಿದೆ ಎಂಬುದನ್ನು ಒಪ್ಪಿಕೊಂಡು ಮುಂದೆ ಸಾಗ ಬಯಸಿದರೂ, ಮುಂದಿರುವ ದಾರಿಯೇನು ಹೂಹಾಸಿನದ್ದಾಗಿರುವುದಿಲ್ಲ ಎನ್ನುವುದು ಕಟುವಾದ ಸತ್ಯ.
ಆರ್ಥಿಕ ಭದ್ರತೆ ಇಲ್ಲದೆ ಜೀವನ ನಡೆಯುವುದು ಸಾಧ್ಯವಿಲ್ಲವೆಂದಾಗ, ಈ ಭದ್ರತೆಯನ್ನೇ ಕೊಡದ ಕಲೆಯ ಜೀವನವನ್ನು ನೆಚ್ಚಿಕೊಳ್ಳಿ ಎಂದು ಯಾವ ಪೋಷಕರೂ ಹೇಳಲಾರರು. ಈ ಕಾರಣಕ್ಕಾಗಿ ಸಾಮಾಜಿಕ ವ್ಯವಸ್ಥೆಯಲ್ಲಿ ಪ್ರಧಾನರೆನಿಸಿರುವ ಗಂಡಸರಿಗೆ ಕಲಾ ಜೀವನವನ್ನು ಆರಿಸಿಕೊಳ್ಳಲು ಪ್ರೋತ್ಸಾಹ ಸಿಗುವುದಿಲ್ಲ, ಅವರಿಗೆ ಇಷ್ಟವಿಲ್ಲದಿದ್ದರೂ ಜೀವನಕ್ಕಾಗಿ ಬೇರೆ ಉದ್ಯೋಗವನ್ನು ಮಾಡಬೇಕಾಗುತ್ತದೆ. ಇನ್ನೊಂದೆಡೆ ವಿವಾಹದ ನಂತರ ಪ್ರೋತ್ಸಾಹ, ಅವಕಾಶ ದೊರೆಯಲಾರದು ಎಂಬ ಅರಿವಿದ್ದೂ ಎಳವೆಯಲ್ಲಿ ಹೆಣ್ಣು ಮಕ್ಕಳನ್ನು ಸಂಗೀತ ಕಲಿಯಲು ಪ್ರೋತ್ಸಾಹಿಸಲಾಗುತ್ತದೆ. ಆಕೆ ದುಡಿಯುವ ಅನಿವಾರ್ಯತೆ ಬರಲಾರದು ಎಂಬ ವಿಶ್ವಾಸ ಇದರ ಹಿಂದಿರುತ್ತದೆ. ಪಿಯುಸಿ ಮುಗಿಸಿ ಮತ್ತೆ ಮೂರು ನಾಲ್ಕು ಅಥವಾ ಐದು ವರ್ಷಗಳ ಶಿಕ್ಷಣವನ್ನು ಮುಗಿಸಿದ ವ್ಯಕ್ತಿಯೊಬ್ಬ ಒಳ್ಳೆಯ ಕೆಲಸವೊಂದನ್ನು ಹಿಡಿದು ಕೊನೆಯವರೆಗೂ ಕುಟುಂಬವನ್ನು ಚೆನ್ನಾಗಿಟ್ಟುಕೊಂಡು ಇರಬಹುದಾದ ಪರಿಸ್ಥಿತಿ ಇದ್ದಾಗ, ಒಂದು ದಿನವೂ ಅಭ್ಯಾಸ ಬಿಡದಂತೆ ವರ್ಷಗಟ್ಟಲೆ ಅದನ್ನೇ ಮಾಡುವ ಸಂಗೀತಗಾರ ಕೊನೆಯವರೆಗೂ ಆರ್ಥಿಕ ತೊಂದರೆಯಲ್ಲೇ ಬದುಕುವುದು ಚಿಂತನೆಗೆ ಹಚ್ಚುತ್ತದೆ.
ಜೀವನಕ್ಕಾಗಿ ಶೈಕ್ಷಣಿಕ ಪದವಿಗಳನ್ನು ಪಡೆಯಲೇಬೇಕು ಎನ್ನುತ್ತಿದ್ದ ಗುರುಗಳಾದ ಪುರಾಣಿಕಮಠ್ ಸರ್, ಸಂಗೀತ ಪರೀಕ್ಷೆಗಳನ್ನು ಕೊಡುವುದರಿಂದ ಕಲಿತ ಪಾಠ ಗಟ್ಟಿಯಾಗುತ್ತದೆ, ಶಾಸ್ತ್ರ ಜ್ಞಾನ ಬರುತ್ತದೆ ಎನ್ನುತ್ತಿದ್ದರು. ನಾನು ವಿದ್ವತ್ ಕಟ್ಟಿದಾಗ ಪರೀಕ್ಷಾ ಕೇಂದ್ರ ಧಾರವಾಡದಲ್ಲಿ ಇಲ್ಲದ ಕಾರಣ, ಹಾವೇರಿಗೆ ಹೋಗಬೇಕಾಗಿತ್ತು. ಎಲ್ಲಾ ರಾಗಗಳ ತಯಾರಿ ಮಾಡಿಸಿದ ಪುರಾಣಿಕಮಠ್ ಸರ್, ಕೊನೆಗೆ ‘ನಾನೂ ಬರ್ತೀನಿ ನಡಿ, ರೊಕ್ಕ-ಗಿಕ್ಕ ಕೇಳಿ ಬಿಟ್ಟಾರು’ ಎನ್ನುತ್ತಾ ಜೊತೆಯಲ್ಲಿ ಬಂದಿದ್ದರು. ಲಂಚವಿಲ್ಲದೆ ಪರೀಕ್ಷೆಯೇ ಇಲ್ಲ ಎನ್ನುವಂತಾಗಿರುವ ನಮ್ಮ ಕರ್ನಾಟಕ ಸರ್ಕಾರದ ಇಂಥಹ ಸಂಗೀತ ಪರೀಕ್ಷೆಗಳಿಂದ ಪಡೆಯುವುದಾದರೂ ಏನಿದೆ ಎಂಬುವುದನ್ನೂ ಯೋಚಿಸಬೇಕಾಗುತ್ತದೆ. ಇಂಥಹ ಪರೀಕ್ಷೆಗಳು ಕಲಿಕೆಯ ‘ಮಾನದಂಡ’ವಲ್ಲ ಎನ್ನುವುದನ್ನು ಪೋಷಕರಿಗೆ ತಿಳಿಸುವ ಜವಾಬ್ದಾರಿ ಶಿಕ್ಷಕರದ್ದಾಗಿರುತ್ತದೆ.
ಇದನ್ನೂ ಓದಿ : Music Director : ಪತಿಯ ಪ್ರೋತ್ಸಾಹವಿದ್ದಿದ್ದಕ್ಕೇ ನೀಲಮ್ಮ ಸಂಗೀತ ನಿರ್ದೇಶಕಿಯಾದರು
ಓರೆ-ಕೋರೆ, ಒಳಿತು-ಕೆಡುಕು ಎಲ್ಲಾ ಕ್ಷೇತ್ರಗಳಲ್ಲಿ ಇರುವಂತೆ ಸಂಗೀತ ಕ್ಷೇತ್ರದಲ್ಲೂ ಇದೆ. ಆದರೆ, ‘ಸಂಗೀತ’ದ ಸ್ಥಾನ ಇವುಗಳೆಲ್ಲದುದರಿಂದ ತುಂಬಾ ಎತ್ತರದಲ್ಲಿದೆ ಎನ್ನುವ ನಂಬಿಕೆಯೊಂದೇ ನಮ್ಮನ್ನು ಮುನ್ನಡೆಸುತ್ತಿರುವ ಚಾಲಕ ಶಕ್ತಿ. ಕುಂದು ಕೊರತೆಗಳು ಮುಚ್ಚಿಟ್ಟಷ್ಟು ಬೆಳೆಯುತ್ತವೆ. ಸಮಾಜದಲ್ಲಿ ಬರುವ ಹಲವು ಧಾರೆಗಳಲ್ಲೊಂದಾದ ಸಂಗೀತ ಲೋಕವನ್ನು ವಾಟರ್ ಟೈಟ್ ಕಂಪಾರ್ಟ್ಮೆಂಟ್ ನಲ್ಲಿಡದೆ, ಹರಿಯಲು ಬಿಟ್ಟು, ಮುಕ್ತವಾಗಿ ಬೆರೆತರೆ ಅದರಿಂದ ಒಳ್ಳೆಯದೇ ಆಗಬಹುದು. ಇದನ್ನು ಇನ್ನೊಂದು ರೀತಿಯಿಂದ ಹೇಳುವುದಾದರೆ ಸಂಗೀತಗಾರರಲ್ಲಿ ‘ಬಿಲೊಂಗಿಂಗ್‌ನೆಸ್’ (ಪಾಲ್ಗೊಳ್ಳುವಿಕೆ ಅಥವಾ ಒಳಗೊಳ್ಳುವಿಕೆ) ಹೆಚ್ಚಾಗಬೇಕು ಎಂದು ನನಗನಿಸುತ್ತದೆ. ಹೀಗಾಗುವುದರಿಂದ ಸಂಗೀತಲೋಕವನ್ನು ಜನರ ಹತ್ತಿರಕ್ಕೆ ತರುವುದು ಸಾಧ್ಯವಾಗುತ್ತದೆ ಮಾತ್ರವಲ್ಲದೆ, ಸಂಗೀತಗಾರರಿಗೂ ‘ಸಂಗೀತ ಕಾರ್ಯಕ್ರಮ ಒಂದಕ್ಕೆ ತಾನು ಪಡೆಯುವ ಸಂಭಾವನೆ ಇಷ್ಟು’ ಎಂದೋ ಅಥವಾ ವಿದ್ಯಾರ್ಥಿಯ ಬಳಿ ‘ನೀನು ಕಳೆದ ತಿಂಗಳ ಫೀಸ್ ಕೊಟ್ಟಿಲ್ಲ’ ಎಂದೋ ಹೇಳುವುದು ಸುಲಭವಾಗಬಹುದು. ಬದುಕಲು ನಡೆಸುತ್ತಿರುವ ಹೋರಾಟವನ್ನು ಮರೆ ಮಾಚಿ, ವಿಶೇಷವಾದ ಉಡುಗೆ ಉಟ್ಟು, ಆಭರಣ ಕುಂಕುಮ ವಿಭೂತಿ ಧರಿಸಿ ‘ಗಂಧರ್ವರೆಂದರೆ ಹೀಗೇ ಇರುತ್ತಾರೇನೋ’ ಎನ್ನುವಂತೆ ರೊಮಾಂಟಿಸೈಸ್ ಮಾಡಿಕೊಂಡು, ಕಲೆಯ ಸಂಗದಲ್ಲಿ ತಾವು ದಿವ್ಯ ಆನಂದದಲ್ಲಿ ಇರುವಂತೆ ಬಿಂಬಿಸಿಕೊಳ್ಳುವ ಅನಿವಾರ್ಯತೆ ಬರಲಾರದು.
‘ಇದು ದೈವಿಕ ಕಲೆ, ಎಲ್ಲರಿಗೂ ಒಲಿಯದು, ತಪಸ್ಸು ಮಾಡಬೇಕು, ಪೂರ್ವಜನ್ಮದ ಪುಣ್ಯ’ ಎನ್ನುವ ಮಾತುಗಳು ಎಳೆಯ ಮಕ್ಕಳಿಂದ ಸಂಗೀತವನ್ನು ದೂರ ಮಾಡಬಹುದು. ಇಷ್ಟಪಟ್ಟು, ಪ್ರೀತಿಯಿಂದ ಇದನ್ನು ಕಲಿಯಲು ಸಾಧ್ಯವಿದೆ ಎನ್ನುವ ಭಾವನೆಯನ್ನು ಮೂಡಿಸುವುದರಿಂದ ಸಂಗೀತಗಾರರು ಮತ್ತು ಸಂಗೀತವೆರಡೂ ಜನರ ಹತ್ತಿರಕ್ಕೆ ಬರುತ್ತದೆ. ‘ಸಂಗೀತದಲ್ಲಿ ಹಾಡದೇ ಉಳಿದದ್ದು ಇಲ್ಲವಾದರೂ ಆಡದೇ ಉಳಿದದ್ದು ಬೇಕಾದಷ್ಟಿದೆ’ ಎಂಬುದು ನನಗೆ ಯಾವಾಗಲೂ ಅನಿಸುವ ಅಂಶ. ತುಂಬಾ ಆಳವಾದ ತಾತ್ವಿಕ, ಅಧ್ಯಾತ್ಮಿಕ ವಿಷಯಗಳನ್ನು ಮಾತ್ರವಲ್ಲದೆ ಸಣ್ಣ-ಪುಟ್ಟ ವಿಷಯಗಳಾದ ಮನೆಯ ಆಗು-ಹೋಗು, ಆರೋಗ್ಯ ಸಮಸ್ಯೆ, ಗಂಡ ಹೆಂಡತಿ ಜಗಳ, ಸೀರೆ-ಚಿನ್ನ ಹೀಗೆ ಏನನ್ನು ಬೇಕಾದರೂ ಮಾತಾಡಿ ಹಂಚಿ ಮುಕ್ತವಾಗುವ ನಾವು ಸಂಗೀತದಂಥ ದೊಡ್ಡ ಕ್ಷೇತ್ರದಲ್ಲಿ ಯಾವುದೇ ಹೇರಲಾದ ಅಭಿಪ್ರಾಯಗಳಿಲ್ಲದೆ, ಪೂರ್ವಾಗ್ರಹಗಳಿಲ್ಲದೆ, ಮುಕ್ತವಾಗಿ ಮಾತನಾಡಿ ಹಂಚಿಕೊಳ್ಳಲಾರೆವು. ಸಂಗೀತಗಾರರು ಪರಸ್ಪರ ಮತ್ತು ಹೊರ ಜಗತ್ತಿನೊಂದಿಗೆ ಇಲ್ಲಿನ ಸುಖ-ದುಃಖವನ್ನು, ಆಗು-ಹೋಗುಗಳನ್ನು ಮಾತನಾಡಿದಾಗ ಅಂತರ ದೂರವಾಗಬಲ್ಲದು ಮತ್ತು ಸಂಗೀತದ ಅರಿವು-ಹರಹು ವಿಸ್ತಾರವಾಗಬಲ್ಲುದು ಎನ್ನುವ ಅಭಿಪ್ರಾಯ ನನ್ನದು.
ಜೀವನದ ಭದ್ರತೆಗೆ ಉದ್ಯೋಗ ಬೇಕು, ಉದ್ಯೋಗ ಪಡೆಯಲು ಪರೀಕ್ಷೆ ಬೇಕು ಆದರೆ ಸಂಗೀತದಲ್ಲಿ ಪರೀಕ್ಷೆ ಮಾನದಂಡ ಅಲ್ಲವೆಂದಾದಾಗ ಕಲಿಕೆಯನ್ನು-ಪ್ರಗತಿಯನ್ನು ಅಳೆಯುವ ಮಾನದಂಡ ಯಾವುದು, ಔಪಚಾರಿಕ ಶಿಕ್ಷಣದಲ್ಲಿ ಸಂಗೀತವನ್ನು ಅಳವಡಿಸಿಕೊಂಡಾಗ ಯಾವ ಆಧಾರದಲ್ಲಿ ಶಿಕ್ಷಕರನ್ನು ನೇಮಿಸಿಕೊಳ್ಳಬೇಕು, ಸಂಗೀತಗಾರರ ಗಾಯನದ ಮೇಲಿಂದ ಯೋಗ್ಯತೆ ಗುರುತಿಸುವುದಾದರೆ ಹಾಗೆ ಮಾಡುವವರು ಯಾರು, ಒಬ್ಬೊಬ್ಬರ ಆಯ್ಕೆ-ಆಸಕ್ತಿ ಬೇರೆ ಬೇರೆ ಇರುವಾಗ ಅವರ ತೀರ್ಮಾನವನ್ನು ಒಪ್ಪಿಕೊಳ್ಳುವುದು ಹೇಗೆ ಇವೆಲ್ಲಾ ಪ್ರಶ್ನೆಗಳು ಬರುತ್ತವೆ. ಇವೆಲ್ಲಾ ಸಾಧ್ಯವಿಲ್ಲದ ಮಾತು ಎಂದಾದರೆ ಈಗಿನ ಸಮಾಜದಲ್ಲಿ ಮೊದಲಿನಂತೆ ಗುರು ಸಹವಾಸದಲ್ಲಿ ವಿದ್ಯೆ ಕಲಿತು, ರೂಪುಗೊಳ್ಳಲು ಸಾಧ್ಯವೇ ಮತ್ತು ಇದಕ್ಕಾಗಿ ಯಾವ ವ್ಯವಸ್ಥೆ ಈಗ ಇದೆ ಎನ್ನುವುದನ್ನೂ ಪ್ರಶ್ನಿಸಿಕೊಳ್ಳಬೇಕಾಗುತ್ತದೆ. ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಲಾಗದ ಕ್ಷೇತ್ರ ಇದಾಗಿದ್ದರೆ ಇದನ್ನು ಉಳಿಸಿಕೊಳ್ಳುವ ಅವಶ್ಯಕತೆ ಇಲ್ಲವೇ, ಇದ್ದರೆ ಅದಕ್ಕಾಗಿ ಶ್ರಮ ವಹಿಸಬೇಕಾದವರು ಯಾರು ಮತ್ತೆ ಹೇಗೆ ಎನ್ನುವ ಪ್ರಶ್ನೆಗಳೂ ಕಾಡುತ್ತವೆ.
ಇದನ್ನೂ ಓದಿ : Music: ನಾಕುತಂತಿಯ ಮಿಡಿತ; ಯಾಕೋ ಈಗಲೇ ಗದುಗಿನ ‘ಅಜ್ಜೋರ ಜಾತ್ರೆ’ ನೆನಪಾಗುತ್ತಿದೆ
ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಮಾತುಕತೆಯೊಂದರಲ್ಲಿ ಟಿ.ಎಂ.ಕೃಷ್ಣ ಅವರು, ‘ಕಲಿಕೆ ಸರಳವಾದಷ್ಟು ವಿದ್ಯಾರ್ಥಿಗಳು ಬೇಗ ಕಲಿಯುತ್ತಾರೆ’ ಎಂದಿದ್ದರು. ನನ್ನ ಗುರುಗಳಾದ ಪುರಾಣಿಕಮಠ್ ಸರ್ ಕಲಿಕೆಯ ಬಗ್ಗೆ ಯೋಚಿಸುವಾಗ ಈ ಮಾತು ನೂರಕ್ಕೆ ನೂರರಷ್ಟು ಸತ್ಯ ಎಂದೆನಿಸುತ್ತದೆ. ಅವರು ಯಾವುದನ್ನೂ ನೋಟ್ಸ್ ಮಾಡಿ ಕೊಡುತ್ತಿರಲ್ಲಿಲ್ಲ. ‘ತಲೆಗಿಂತ ಮುಂಡಾಸ್ ಭಾರ’ ಎನ್ನುವಂತೆ ದಪ್ಪ ದಪ್ಪ ಶಾಸ್ತ್ರಗ್ರಂಥಗಳನ್ನು ಪಕ್ಕದಲ್ಲಿ ಇಟ್ಟುಕೊಂಡಿರುತ್ತಿರಲಿಲ್ಲ. ಪುಸ್ತಕ ನೋಡುವ ಆಸಕ್ತಿ ಯಾರಿಗಾದರೂ ಇದೆ ಎಂದು ಗೊತ್ತಾದರೆ, ತಾವೇ ಪುಸ್ತಕಗಳನ್ನು ಹುಡುಕಿ ತಂದು ಕೈಯಲ್ಲಿಡುತ್ತಿದ್ದರು. ಅವರಷ್ಟು ಕಡಿಮೆ ಸಮಯದಲ್ಲಿ ವಿಲಂಬಿತ್ ತಾಳ ಮನದಟ್ಟು ಮಾಡಿಸುವ ಗುರುಗಳು ತುಂಬಾ ವಿರಳ. ಎಂಥ ರಾಗವನ್ನಾದರೂ ಸರಳವಾಗಿ ಹೇಳಿಕೊಟ್ಟು ತಾವೇ ಹಾಡುವಂತೆ ಮಾಡುತ್ತಿದ್ದರು. ‘ಹಾಡ್ಕೊಂತಾ ಹೋಗ್, ಬರ್ತದ್’ ಅನ್ನುವುದು ಅವರ ಮಾತಾಗಿತ್ತು. ಹೀಗೆ ಹಾಡಿಕೊಂಡು ಹೋಗುವುದೆಲ್ಲವೂ ಶಾಸ್ತ್ರಪ್ರಕಾರ ಇರುವುದು ಖಂಡಿತಾ ಸಾಧ್ಯವಿಲ್ಲವಾದರೂ, ಸಣ್ಣಸಣ್ಣ ಹೆಜ್ಜೆಯಾದರೂ ತಾವಾಗಿ ನಡೆಯುವುದು ವಿದ್ಯಾರ್ಥಿಗಳಿಗೆ ರೂಢಿಯಾಗುತ್ತಿತ್ತು. ಮತ್ತು ಎಷ್ಟೊಂದು ಶಿಷ್ಯರಿದ್ದರೂ ಯಾರೂ ಮತ್ತೊಬ್ಬರ ಕಾಪಿ ಎನಿಸುತ್ತಿರಲಿಲ್ಲ. ಇನ್ನೂ ಮುಂದುವರಿಸಬಯಸುವವರು ತಮ್ಮ ಶೈಲಿಯನ್ನು ರೂಪುಸಿಕೊಳ್ಳುವ ಅವಕಾಶವಂತೂ ಇದರಿಂದಾಗಿ ಇದ್ದೇ ಇತ್ತು. ಪುರಾಣಿಕಮಠ ಅವರಂಥಹ ಗುರುಗಳಿಂದಾಗಿ ಅದೆಷ್ಟೋ ಸಂಗೀತದ ಹಿನ್ನೆಲೆ ಇಲ್ಲದ ಆಸಕ್ತರು ಸಂಗೀತ ಪಡೆಯುವಂತಾಯ್ತು.
ಕಲೆಯ ಉಪಾಸಕರ ಜೀವನದಲ್ಲಿ ‘ಗುರು’ವಿನ ಪಾತ್ರ ತುಂಬಾ ದೊಡ್ಡದು. ‘ಗುರು’ ತತ್ವಕ್ಕೆ ವಿಶೇಷವಾದ ಸ್ಥಾನ ಕಲಾಭ್ಯಾಸಿಗಳ ಬದುಕಿನಲ್ಲಿದೆ. ಯಾವ ಕ್ಷಣದಲ್ಲೂ ‘ಒಂಟಿ’ ಎನಿಸದಂತೆ ರಕ್ಷಿಸಿ-ಪೋಷಿಸಿ ಪೊರೆಯುವ ಶಕ್ತಿ ಅದು. ನನ್ನ ಬದುಕಿನಲ್ಲಿ ಚೈತನ್ಯ ತುಂಬುತ್ತಾ ಮುನ್ನಡೆಸುತ್ತಿರುವ ಆ ಶಕ್ತಿ ಎದುರಿನಲ್ಲಿ ಮಣಿದು ಶಿರ ಬಾಗುತ್ತಿದ್ದೇನೆ.
(ಈ ಅಂಕಣ ಇಲ್ಲಿಗೆ ಮುಕ್ತಾಯವಾಯಿತು)
ಪ್ರತಿಕ್ರಿಯೆಗಾಗಿ : tv9kannadadigital@gmail.com
ಈ ಅಂಕಣದ ಎಲ್ಲಾ ಭಾಗಗಳನ್ನೂ ಇಲ್ಲಿ ಓದಿ : https://tv9kannada.com/tag/naakutantiya-midita
Published On - 3:03 pm, Thu, 28 April 22