Music Director : ಪತಿಯ ಪ್ರೋತ್ಸಾಹವಿದ್ದಿದ್ದಕ್ಕೇ ನೀಲಮ್ಮ ಸಂಗೀತ ನಿರ್ದೇಶಕಿಯಾದರು

First Woman : ಮೈಸೂರು ಪ್ರಾಂತ್ಯದಲ್ಲಿ ಸಾರ್ವಜನಿಕ ಸಂಗೀತ ಕಛೇರಿ ನೀಡಿದ ಮೊದಲ ಮಹಿಳೆ ಎನ್ನುವ ಹೆಗ್ಗಳಿಕೆ ನೀಲಮ್ಮ ಕಡಾಂಬಿಯವರದು. ಅವರ ಸಂಗೀತ ಕಛೇರಿಯನ್ನು ಜವಾಹರಲಾಲ್ ನೆಹರು, ಎಸ್.ರಾಧಾಕೃಷ್ಣನ್ ಇಬ್ಬರೂ ಆಲಿಸಿದ್ದರು.

Music Director : ಪತಿಯ ಪ್ರೋತ್ಸಾಹವಿದ್ದಿದ್ದಕ್ಕೇ ನೀಲಮ್ಮ ಸಂಗೀತ ನಿರ್ದೇಶಕಿಯಾದರು
ನೀಲಮ್ಮ ಕಡಾಂಬಿ ಮತ್ತು ಎನ್. ಎಸ್​. ಶ್ರೀಧರ ಮೂರ್ತಿ
ಶ್ರೀದೇವಿ ಕಳಸದ | Shridevi Kalasad

|

Mar 30, 2022 | 1:21 PM

ಸಂಗೀತ ನಿರ್ದೇಶಕಿ | Music Director : ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ 1911ರ ಜುಲೈ 7ರಂದು ಎಂ.ವಿ.ನೀಲಮ್ಮ ಕಡಾಂಬಿ ಜನಿಸಿದರು. ತಂದೆ ವೆಂಕಟಾಚಾರ್ಯ ವೀಣಾ ವಿದ್ವಾಂಸರಾಗಿದ್ದರು. ಪೊಲೀಸ್ ಅಧಿಕಾರಿಯಾಗಿದ್ದ ಅವರು ನಿವೃತ್ತಿಯ ನಂತರ ಮೇಲುಕೋಟೆ ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ಸೇವೆ ಸಲ್ಲಿಸಿದರು. ತಾಯಿ ಗೌರಮ್ಮ ಮತ್ತು ಅವರ ತವರಿನವರೂ ಕೂಡ ವೀಣೆಯಲ್ಲಿ ಪರಿಣತಿ ಪಡೆದವರೇ. ಅಣ್ಣ ಶ್ರೀನಿವಾಸ ಅಯ್ಯಂಗಾರ್ ಸಂಗೀತ ವಿದ್ವಾಂಸರು. ನೀಲಮ್ಮನವರು ತಂದೆ ಮತ್ತು ಅಣ್ಣನಿಂದ ಮೊದಲ ಸಂಗೀತ ಅಭ್ಯಾಸ ಪಡೆದರು. ವಿದ್ವಾನ್ ಲಕ್ಷ್ಮಿನಾರಾಯಣಪ್ಪ, ವೀಣೆ ವೆಂಕಟಗಿರಿಯಪ್ಪ, ಮೈಸೂರು ವಾಸುದೇವಾಚಾರ್ಯ, ಪಿಟಿಲು ಚೌಡಯ್ಯ, ವಿ.ರಾಮರತ್ನಂ ಮೊದಲಾದವರಲ್ಲಿ ಸಂಗೀತಾಭ್ಯಾಸ ಪಡೆದ ನಂತರ ವೀಣಾವಾದನದಲ್ಲಿ ಪರಿಣತಿ ಪಡೆದರು. ನೀಲಮ್ಮನವರಿಗೆ ಮುಖ್ಯವಾಗಿ ಅವರ ಪತಿಯ ಪ್ರೋತ್ಸಾಹ ದೊರಕಿತ್ತು. ಎನ್.ಎಸ್.ಶ್ರೀಧರ ಮೂರ್ತಿ, ಹಿರಿಯ ಪತ್ರಕರ್ತ

(ಭಾಗ 2)

ನೀಲಮ್ಮ ಅವರ ಪತಿ ಕಡಾಂಬಿ ಕೃಷ್ಣಯ್ಯಂಗಾರ್ ನಂಜನಗೂಡಿನ ಪ್ರಸಿದ್ಧ ವಕೀಲರು. ಕೆಲವು ವರ್ಷಗಳ ನಂತರ ಪತ್ನಿಯ ಸಂಗೀತ ಸಾಧನೆಗೆ ಅನುಕೂಲ ಆಗಲಿ ಎಂದು ಮೈಸೂರಿನಲ್ಲಿಯೇ ನೆಲೆಸಿದರು. ಸಂಗೀತ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಲು ಪತ್ನಿಯನ್ನು ಪ್ರೋತ್ಸಾಹಿಸಿದರು. ನೀಲಮ್ಮನವರು ಕೂಡ ಸಮರ್ಥವಾಗಿ ಪ್ರಯೋಜನ ಪಡೆದುಕೊಂಡರು. ಮೈಸೂರು ಪ್ರಾಂತ್ಯದಲ್ಲಿ ಸಾರ್ವಜನಿಕವಾಗಿ ಸಂಗೀತ ಕಛೇರಿ ನೀಡಿದ ಮೊದಲ ಮಹಿಳೆ ಎನ್ನುವ ಹೆಗ್ಗಳಿಕೆ ನೀಲಮ್ಮ ಕಡಾಂಬಿಯವರದು. ಕರ್ನಾಟಕಿ ಪದ್ದತಿಯಲ್ಲಿ ಸಂಗೀತ ಕಛೇರಿ ನೀಡುತ್ತಿದ್ದರೂ ನೀಲಮ್ಮನವರು ಹಿಂದೂಸ್ತಾನಿ ಮಟ್ಟುಗಳನ್ನು ಕೂಡ ಪ್ರಯೋಗ ಮಾಡುತ್ತಾ ಇದ್ದರು.

ಚಕ್ರವಾಕ, ಅಭೇರಿ, ಹಂಸಧ್ವನಿ ರಾಗಗಳಿಗೆ ಅವರು ಪ್ರಸಿದ್ಧಿ ಪಡೆದಿದ್ದರು. ತಮ್ಮ ವೀಣಾವಾದನದಲ್ಲಿ ವಿಶಿಷ್ಟ ರೀತಿಯಲ್ಲಿ ತನಿ ಸ್ವರಗಳನ್ನು ರೂಪಿಸುತ್ತಿದ್ದರು. ಮೈಸೂರು ಅರಮನೆಯಲ್ಲಿ ಅನೇಕ ಕಛೇರಿಗಳನ್ನು ನೀಡಿದ ನೀಲಮ್ಮನವರು ಮಹಾರಾಜರಿಂದ ಗೌರವ ಸನ್ಮಾನಗಳನ್ನು ಸ್ವೀಕರಿಸಿದ್ದರು. ಅವರ ಸಂಗೀತ ಕಛೇರಿ ದೆಹಲಿಯಲ್ಲಿ ನಡೆದಾಗ ಆಗಿನ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ರಾಷ್ಟ್ರಪತಿ ಎಸ್.ರಾಧಾಕೃಷ್ಣನ್ ಇಬ್ಬರೂ ಹಾಜರಿದ್ದು ತಮ್ಮ ಮೆಚ್ಚುಗೆ ಸೂಚಿಸಿದ್ದರು. ಕೊಲಂಬಿಯಾ ಕಂಪನಿ ಅವರ ವೀಣಾವಾದನ ಮತ್ತು ಗಾಯನದ ಗ್ರಾಮಾಫೋನ್ ಪ್ಲೇಟ್‍ಗಳನ್ನು ತಂದಿದ್ದು ಅವು ಆ ಕಾಲಕ್ಕೆ  ಬಹಳ ಜನಪ್ರಿಯವಾಗಿದ್ದವು. ‘ಭಕ್ತ ರಾಮದಾಸ’ ಮತ್ತು ‘ನಾಗ ಕನ್ನಿಕಾ’ ಚಿತ್ರಗಳಿಗೆ ಹಿನ್ನೆಲೆ ಗಾಯನ ಕೂಡ  ನೀಡಿದ ನೀಲಮ್ಮನವರು ‘ಸತಿ ತುಳಸಿ’ ಚಿತ್ರಕ್ಕೆ ಸಂಗೀತ ನೀಡಿದ್ದು ಮಾತ್ರವಲ್ಲದೆ ಹಿನ್ನೆಲೆ ಗಾಯನವನ್ನೂ ನೀಡಿದ್ದರು.  ಈ ಚಿತ್ರದಲ್ಲಿ ಅವರ ವೀಣಾವಾದನದ ಒಂದು ದೃಶ್ಯ ಕೂಡ ಇತ್ತು.

ಇದನ್ನೂ ಓದಿ : Chi. Udayashankar’s Birth Anniversary: ‘ದಪ್ಪ ಅಂದ್ರೆ ಇಷ್ಟು ದಪ್ಪ ಅಲ್ಲಪ್ಪ, ಈಗ ಘಟೋದ್ಗಜನ ಪಾತ್ರ ಕೊಡಬಹುದು ನಿನಗೆ’

1956ರಲ್ಲಿ ವಿಶಾಲ ಮೈಸೂರು ಏಕೀಕರಣವಾದ ಕಾರ್ಯಕ್ರಮದಲ್ಲಿ ಅವರ ಸಂಗೀತ ಕಛೇರಿ ಇತ್ತು. 1972ರಲ್ಲಿ ಕರ್ನಾಟಕ ಗಾನ ಕಲಾ ಪರಿಷತ್‍ನ ಅಧ್ಯಕ್ಷೆಯಾದ ನೀಲಮ್ಮನವರು ಈ ಗೌರವ ಪಡೆದ ಮೊದಲ ಮಹಿಳೆ ಎನ್ನಿಸಿಕೊಂಡಿದ್ದಾರೆ. ಅವರಿಗೆ ‘ಗಾನ ಕಲಾಭೂಷಣ’ ಗೌರವ ಕೂಡ ದೊರಕಿತ್ತು. 1987-88ರಲ್ಲಿ ಕರ್ನಾಟಕ ಸಂಗೀತ ಅಕಾಡೆಮಿ ಅವರನ್ನು ಗೌರವಿಸಿತ್ತು. ತಂಜಾವೂರಿನ ಸಂಗೀತ ಸಮ್ಮೇಳನದಲ್ಲಿ ‘ಬಾಲಕೇಸರಿ’ ಗೌರವ ಪಡೆದ ನೀಲಮ್ಮನವರನ್ನು ಟಿ.ವಿ.ಎಸ್.ಗ್ರೂಪ್‍ ಬೆಳ್ಳಿ ವೀಣೆ ನೀಡಿ ಗೌರವಿಸಿತ್ತು. ಶಾಸ್ತ್ರೀಯ ಸಂಗೀತದಲ್ಲಿ ಹೆಚ್ಚು ಹೆಚ್ಚು ಸಾಧನೆ ಮಾಡುತ್ತಾ ಹೋದಂತೆ ನೀಲಮ್ಮ ಚಿತ್ರರಂಗದಿಂದ ದೂರವಾದರು. ಕನ್ನಡ ಚಿತ್ರರಂಗ ಹೆಚ್ಚು ಮದ್ರಾಸ್ ಮುಖಿ ಆಗಿದ್ದೂ ಕೂಡ  ಇದಕ್ಕೆ ಕಾರಣವಾಗಿತ್ತು. ಅನೇಕ ಪ್ರತಿಭಾವಂತ ಶಿಷ್ಯರನ್ನು ತಯಾರು ಮಾಡಿದ ನೀಲಮ್ಮನವರು 1998ರ ಡಿಸಂಬರ್ 14ರಂದು ಮೈಸೂರನ ಕೆ.ಆರ್.ಆಸ್ಪತ್ರೆಯಲ್ಲಿ ನಿಧನರಾದರು.

ಸಂಗೀತ ಕ್ಷೇತ್ರದಲ್ಲಿ ನೀಲಮ್ಮ ಕಡಾಂಬಿಯವರ ಕುರಿತು ದಾಖಲೆಗಳಿವೆ. ಆದರೆ ಅವರು ಕನ್ನಡದ ಮೊದಲ ಸಂಗೀತ ನಿರ್ದೇಶಕಿ ಎನ್ನುವ ದೃಷ್ಟಿಯಿಂದ ಮಾಹಿತಿಗಳು ದಾಖಲಾಗಬೇಕು. ಅವರ ಕೊಡುಗೆ ಉಳಿದುಕೊಳ್ಳುವಂತೆ ಸ್ಮರಿಸುವ ಕೆಲಸ ಕೂಡ ಆಗಬೇಕಿದೆ.

(ಮುಗಿಯಿತು)

ಭಾಗ 1 : Music Director: ಕನ್ನಡದ ಮೊದಲ ಸಂಗೀತ ನಿರ್ದೇಶಕಿ ‘ನೀಲಮ್ಮ ಕಡಾಂಬಿ’ 

ಎಲ್ಲಾ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/kannada-music-directors 

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada