Music: ನಾಕುತಂತಿಯ ಮಿಡಿತ; ಮಜ್ಜಿಗೆ ಪೂರ್ತಕ್ಕೆ ರಾಮಾಯಣ ಮತ್ತು ಬಂದಿಶ್‌ನ ಒಳಹೂರಣ
Bandish : ನಮ್ಮದಲ್ಲದ ಭಾಷೆಯಲ್ಲಿರುವ ಈ ರಚನೆಗಳನ್ನು ಅರ್ಥ ಮಾಡಿಕೊಳ್ಳುವುದು ಮಾತ್ರವಲ್ಲ ಸದ್ಯ ಅಪ್ರಸ್ತುತವೆನ್ನಿಸುವ ಯಾವುದೋ ಕಾಲಘಟ್ಟದ ಸಾಮಾಜಿಕ ಸಂದರ್ಭ, ಅದರ ಪ್ರಾಮುಖ್ಯ ಅರಿಯುವುದು ಸುಲಭದ ಮಾತೇನಲ್ಲ.
ನಾಕುತಂತಿಯ ಮಿಡಿತ | Naakutantiya Midita : ಗುರುಗಳಾದ ಪುರಾಣಿಕಮಠ ಸರ್ ಪಟದೀಪ್ ರಾಗದಲ್ಲಿ ‘ಕವನ ಸುಖ ಪಾಯೋ’ ಎಂಬ ಒಂದು ಪಾರಂಪಾರಿಕ ರಚನೆಯೊಂದನ್ನು ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದರು. ಪುಟ್ಟಮಕ್ಕಳಿಗೆ ಛೋಟಾಖ್ಯಾಲ್ ಕಲಿಸಿ ಒಂದಷ್ಟು ರಾಗಗಳ ಪರಿಚಯ ಮಾಡಿಸಿದ ನಂತರ ವಿಲಂಬಿತ್‌ಗೆ ಹೋಗುವ ಮೊದಲು ಝಪ್‌ತಾಲ್ ಮಧ್ಯಲಯದಲ್ಲಿ ಇಂಥ ಬಂದಿಶ್‌ಗಳನ್ನು ಹೇಳಿಕೊಟ್ಟು ಸ್ವತಂತ್ರ ಆಲಾಪ ಮಾಡಲು ಉತ್ತೇಜಿಸುವುದು ಅವರ ಪದ್ಧತಿಯಾಗಿತ್ತು. ‘ಕವನ ಸುಖ ಪಾಯೋ, ರಾಮ ಕಾ ಧ್ಯಾನ ಕರ, ಆ ರಾಮ ಇತನಾಹಿ’ ಎಂಬ ಸಾಲುಗಳುಳ್ಳ ಈ ಬಂದಿಶ್‌ನ ಎರಡನೇ ಅರ್ಧದಲ್ಲಿ ಇಡೀ ರಾಮಾಯಣದ ಕಥೆ ಬಹಳ ಸಂಕ್ಷಿಪ್ತ ರೂಪದಲ್ಲಿ ಬರುತ್ತದೆ. ದಶ ಸೀಸಕೊ ಕಾಟಕೆ, ವಾಲಿ ಕೊ ಮಾರಲಿಯೆ, ಭೇಜೆ ಹನುಮಾನ ಕೊ, ಲಂಕಾ ಜಲಾದಿಯೆ. ಇದನ್ನು ಕಲಿಸುವಾಗ ಪುರಾಣಿಕಮಠ ಸರ್ ಬಂದಿಶ್‌ನ ನಾಕು ಸಾಲಿನಲ್ಲಿ ಕ್ಯಾಪ್ಸುಲ್ ರೂಪದಲ್ಲಿ ಅಡಕವಾದ ಸ್ವಾರಸ್ಯವನ್ನು ಮಕ್ಕಳಿಗೆ ಹೇಳುತ್ತಾ, ತಾವು ಎಲ್ಲೋ ಕೇಳಿದ ತಮಾಷೆಯ ಕತೆಯೊಂದನ್ನು ಹೇಳಿ ಖುಷಿಪಡುತ್ತಿದ್ದರು. ಶ್ರೀಮತಿ ದೇವಿ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಾವಿದೆ (Shrimathi Devi)
(ಮಿಡಿತ 7)
ಈ ತಮಾಷೆ ಕತೆಗಳನ್ನು ಅವರು ಕರೆಯುತ್ತಿದ್ದದ್ದು ‘ಮಜ್ಜಿಗೆ ಪೂರ್ತಕ್ಕೆ ರಾಮಾಯಣ’ ಎಂಬ ಹೆಸರಿನಲ್ಲಿ. ಬಹಳ ದಿವಸಗಳ ಹಿಂದೆ ಒಂದೂರಲ್ಲಿ ಹರಿದಾಸರೊಬ್ಬರಿದ್ದರಂತೆ. ಅವರು ಊರ ದೇವಸ್ಥಾನದಲ್ಲಿ ವಿಶೇಷದ ದಿನಗಳಲ್ಲಿ ಹರಿಕಥಾ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದರಂತೆ. ಒಂದು ದಿನ ಇವರ ಮನೆಗೆ ಹೊತ್ತು ತಪ್ಪಿ ಯಾರೋ ಊಟಕ್ಕೆ ಬಂದುಬಿಟ್ಟರಂತೆ. ಆದಿನ ಅವರ ಮನೆಯಲ್ಲಿ ಮಜ್ಜಿಗೆ ಮಾತ್ರ ಖಾಲಿಯಾಗಿಬಿಟ್ಟಿತ್ತಂತೆ. ಅವರ ಹೆಂಡತಿ ಮಜ್ಜಿಗೆ ಕೇಳಿ ತರಲು ಪಕ್ಕದ ಮನೆಯಾಕೆ ಬಳಿ ಕೇಳಿದಾಗ, ಆಕೆ ಬಾಗಿಲಲ್ಲೇ ಈಕೆಯನ್ನು ನಿಲ್ಲಿಸಿಕೊಂಡು ‘ನಿನ್ನೆ ನಿನ್ನ ಪತಿ ದೇವಸ್ಥಾನದಲ್ಲಿ ಹೇಳಿದ ಕತೆ ನನಗೆ ಹೇಳು, ನಿನ್ನೆ ನನಗೆ ಬರಲಾಗಲಿಲ್ಲ’ ಎನ್ನುತ್ತಾಳೆ. ಮನೆಯಲ್ಲಿ ಎಲೆ ಮುಂದೆ ನೆಂಟರನ್ನು ಕೂರಿಸಿ ಬಂದಿದ್ದ ಹರಿದಾಸರ ಪತ್ನಿ, ‘ರಾಮ ಇದ್ನಂತೆ, ಅವನ ಹೆಂಡತಿ ಸೀತೆ ಇದ್ದಳಂತೆ. ವನವಾಸಕ್ಕೆ ಹೋದ್ರಂತೆ. ಅಲ್ಲಿ ರಾವಣ ಬಂದು ಸೀತೆಯನ್ನು ಅಪಹರಿಸಿಕೊಂಡು ಹೋದನಂತೆ. ರಾಮ, ಲಕ್ಷ್ಮಣ, ಹನುಮಂತರೊಂದಿಗೆ ಹೋಗಿ ಸೀತೆಯನ್ನು ಬಿಡಿಸಿದನಂತೆ. ಈಗ ಮಜ್ಜಿಗೆ ಕೊಡವ್ವಾ..’ ಎನ್ನುತ್ತಾಳೆ.
ಸರ್ ಇದನ್ನು ನೆನೆಸಿಕೊಂಡು ಹೇಳುವಾದ ಬೆಳ್ಳಗೆ ಗುಂಡಗೆ ಇರುವ ಅವರ ಮುಖ ನಗುವಿನಿಂದ ತುಂಬಿ ಕೆಂಪು ಕೆಂಪಾಗುವುದು ಕಣ್ಣಿಗೆ ಕಟ್ಟುತ್ತದೆ. ಪಂ. ವೆಂಕಟೇಶ ಕುಮಾರ್ ಅವರೂ ಈ ಬಂದಿಶ್‌ನ್ನು ಕಾರ್ಯಕ್ರಮಗಳಲ್ಲಿ ಹಾಡುವುದನ್ನು ಕೇಳಬಹುದು.
ಹಿಂದೂಸ್ತಾನಿ ಸಂಗೀತದಲ್ಲಿನ ರಚನೆಗಳಿಗೆ ‘ಬಂದಿಶ್’ ಎನ್ನುತ್ತಾರೆ. ಇದು ಹೆಚ್ಚಾಗಿ ಹಿಂದಿಯ ಉಪಭಾಷೆಗಳಾದ ಬೃಜ್, ಅವಧಿ ಭಾಷೆಗಳಲ್ಲಿ ರಚನೆಯಾಗಿವೆ. ಪಂಜಾಬಿ, ಭೋಜಪುರಿ ಮುಂತಾದ ಕೆಲವು ಭಾಷೆಗಳಲ್ಲೂ ಬೆರಳೆಣಿಕೆಯಷ್ಟು ಬಂದಿಶ್‌ಗಳನ್ನು ನೋಡಬಹುದು. ಪರಂಪರೆಯ ಬಂದಿಶ್‌ಗಳಲ್ಲಿನ ಸಾಹಿತ್ಯ ಜಾಸ್ತಿ ಪ್ರೀತಿ-ಪ್ರೇಮ, ಪ್ರಿಯತಮನೆಡೆಗಿನ ಅನುರಾಗ, ಕೃಷ್ಣನ ರಾಸಲೀಲೆ-ಕೊಳಲು, ಪ್ರಕೃತಿ-ಋತು ವರ್ಣನೆ ಇವುಗಳಿಂದ ಕೂಡಿದ್ದು. ಮುಂದಿನ ದಿನಗಳಲ್ಲಿ ಪಂ. ವಿಷ್ಣು ದಿಗಂಬರ್ ಪಲುಸ್ಕರ್ ಅವರು ಹಲವಾರು ಭಕ್ತಿ ರಚನೆಗಳನ್ನು ಬಂದಿಶ್‌ಗಳ ಜಾಗದಲ್ಲಿ ತಂದರು. ಆನಂತರ ಬಂದ ಬಂದಿಶ್ ರಚನಾಕಾರರು, ಹಳೆಯ ಬಂದಿಶ್‌ಗಳಲ್ಲಿನ ಅಪ್ರಸ್ತುತವೆನಿಸುವ ಸಾಹಿತ್ಯವನ್ನು ಕಂಡು, ಬೇರೆ ವಸ್ತುವಿಷಯಗಳನ್ನು ಬಳಸಿಕೊಂಡು ಬಂದಿಶ್‌ಗಳನ್ನು ರಚಿಸಿದರು. ಮಾನವ ಜೀವನಕ್ಕೆ ಹತ್ತಿರವೆನಿಸುವ ಅನೇಕ ಸೂಕ್ಷ್ಮಸಂವೇದಿ ವಿಚಾರಗಳನ್ನು, ತಾತ್ವಿಕ ವಿಷಯಗಳನ್ನು ಇವುಗಳಲ್ಲಿ ಅಡಕಗೊಳಿಸಿದರು.
ಬಂದಿಶ್‌ನ್ನು ರಾಗದ ವಿಸ್ತಾರಕ್ಕಿರುವ ‘ನಕ್ಷೆ’ಎಂದು ಭಾವಿಸುವ ಕಾರಣ, ಸಂಗೀತದಲ್ಲಿ ಇದರ ಪಾತ್ರ ಬಹುಮುಖ್ಯವಾದದ್ದು. ರಾಗವನ್ನು ವಿಸ್ತರಿಸಲು ಬೇಕಾಗುವ ರಾಗ-ತಾಳ-ಸಾಹಿತ್ಯಗಳ ಚೌಕಟ್ಟನ್ನು ಬಂದಿಶ್ ಕೊಡುತ್ತದೆ. ಬಂದಿಶ್‌ಗಳ ಮೇಲ್ಮೈಯಲ್ಲಿ ಎದ್ದು ಕಾಣುವ ಸಾಹಿತ್ಯ ಭಾಗ, ಶಬ್ದಗಳ ಮೂಲಕ ಕಥೆಯನ್ನು ಹೇಳಬಲ್ಲುದು, ಜಾಣ್ಮೆಯಿಂದ ಯಾವುದೋ ಒಂದು ಸನ್ನಿವೇಶವನ್ನು ಕಣ್ಣ ಮುಂದೆ ಕಟ್ಟಿ ನಿಲ್ಲಿಸಬಲ್ಲುದು. ಬಂದಿಶ್ ಒಳಗಿನ ರಾಗದ ಸ್ವರೂಪ, ಲಯದ ರಚನೆ, ಸ್ವರ ಭಾವ ಇವುಗಳ ಶಕ್ತಿ-ತೀವ್ರತೆ, ಶಬ್ದಗಳ ಮೂಲಕ ಸೃಷ್ಟಿಸುವ ಕತೆಗಳಿಗಿಂತ ದೊಡ್ಡದೇ ಆದರೂ, ‘ಕಿರಿದರೊಳ್ ಪಿರಿದರ್ಥಮಂ’ ಎಂಬಂತೆ ನಾಲ್ಕು ಸಾಲುಗಳಲ್ಲಿ ಇಡೀ ಘಟನೆಯೊಂದನ್ನು ಹಿಡಿದಿಡುವಂಥ ಬಂದಿಶ್‌ಗಳ ಅಧ್ಯಯನವೂ ತುಂಬಾ ಆಸಕ್ತಿಕರವಾದದ್ದು.
ಇನ್ನೊಂದು ಈ ರೀತಿಯ ಕತೆ ಹೇಳುವ ಧ್ರುಪದ್‌ನ ಬಂದಿಶ್‌ನ್ನು ರಾಗ ಮಾಲ್‌ಕೌಂಸ್ ನಲ್ಲಿ ಸರ್ ಕಲಿಸಿದ್ದರು.
ಆಯೆ ರಘುವೀರ ಧೀರ, ಲಂಕಾಧೀಶ ಅವಧಮಾನ ಸಂಗ ಸಖ ಅಂಗದ ಸುಗರೀವ ಔರ ಹನುಮಾನ ರಹಸ ರಹಸ ಜಾವತ ಯುವತೀಜನ ಬಂಧನ ಬಿತಾನ ದೇವ ಕುಸುಮ ಬರಖತ ಜನ ಜಾತೆ ರಹೆ ನಭವಿಮಾನ.
ರಾಮನು ಸುಗ್ರೀವ ಮತ್ತು ಹನುಮಾನರೊಡಗೂಡಿ ಬರುವ ದೃಶ್ಯವಿಲ್ಲಿದೆ. ರಾವಣನನ್ನು ಸೋಲಿಸಿ ತಲೆ ಕೆಳಗಾಗಿಸಿ ಬಿಟ್ಟನು ಎನ್ನಲಾಗಿದೆ. ಸೀತೆಯನ್ನು ಬಿಡಿಸಿಕೊಂಡು ಬರುವ, ಆಕಾಶದಲ್ಲಿ ವಿಮಾನದಿಂದ ಪುಷ್ಪವೃಷ್ಟಿಯಾಗುವ ವರ್ಣನೆ ಇಲ್ಲಿದೆ.
ಇದನ್ನೂ ಓದಿ : Music: ನಾಕುತಂತಿಯ ಮಿಡಿತ; ‘ಸೌತನ ಘರ, ಸಾಸ ನನದ ಮೊರಿ ಜನಮಕೀ ಬೈರನ; ಏನಿದೆಲ್ಲ?’
ಹಿಂದಿನ ಶತಮಾನದವರೆಗೂ ಹೆಚ್ಚಾಗಿ ಮೌಖಿಕವಾಗಿಯೇ ಇದ್ದ ಸಾಗಿ ಬಂದ ಸಂಗೀತದಲ್ಲಿ, ಬಾಯಿಯಿಂದ ಬಾಯಿಗೆ ಬರುವಾಗ ಎಷ್ಟೋ ಬಂದಿಶ್‌ಗಳು ಅರ್ಥವನ್ನು ಕಳೆದುಕೊಂಡಿವೆ, ಕೆಲವು ಅರ್ಥವನ್ನು ಬದಲಾಯಿಸಿಕೊಂಡಿವೆ. ಅಲ್ಲದೆ ಇಂದು ಬಳಕೆಯಲ್ಲಿ ಇಲ್ಲದ ಶಬ್ದಗಳು ಬಂದಿಶ್‌ಗಳಲ್ಲಿ ಬಳಕೆಯಾಗಿರುವ ಕಾರಣ ಎಷ್ಟೋ ಬಂದಿಶ್‌ಗಳ ಅರ್ಥ ನಮಗಾಗುವುದಿಲ್ಲ. ನಮ್ಮದಲ್ಲದ ಭಾಷೆಯಲ್ಲಿರುವ ಈ ರಚನೆಗಳನ್ನು ಅರ್ಥ ಮಾಡಿಕೊಳ್ಳುವುದು ಮಾತ್ರವಲ್ಲ ಇವತ್ತಿನ ಸಮಯದಲ್ಲಿ ಎಲ್ಲೂ ಪ್ರಸ್ತುತವೆನಿಸದ ಯಾವುದೋ ಕಾಲಘಟ್ಟದ ಸಾಮಾಜಿಕ ಸಂದರ್ಭ ಮತ್ತು ಅದರ ಪ್ರಾಮುಖ್ಯವನ್ನು ಅರಿಯುವುದು ಸುಲಭದ ಮಾತೇನಲ್ಲ.
ನನ್ನ ಸಂಗೀತಾಭ್ಯಾಸದ ಆರಂಭದ ದಿನಗಳಲ್ಲಿ ಕಲಿತ ಬಂದಿಶ್‌ಗಳಲ್ಲಿ ಹಲವನ್ನು ಅರ್ಥ ಮಾಡಿಕೊಂಡು ಕಲಿತಿದ್ದರೆ, ಇನ್ನು ಕೆಲವು ಮುಂದೆ ಸುಮಾರು ವರ್ಷಗಳ ನಂತರ ಅರ್ಥವಾಗಿ ‘ಅಯ್ಯೋ, ಇದರ ಅರ್ಥ ಹೀಗಾ’ ಎಂದೆನಿಸಿದ್ದೂ ಇವೆ. ಅವುಗಳಲ್ಲಿ ಒಂದು ರಾಗ ಭೂಪ್‌ನಲ್ಲಿರುವ ಪ್ರಸಿದ್ಧ ಪಾರಂಪರಿಕ ರಚನೆ ‘ಜಬಸೆ ಸಬ ನಿರಪತ ನಿರಾಸ ಭಯೆ’ ಎಂಬುದು. ನಿರಪತ, ನಿರಾಸ ಎಂಬುದನ್ನು ನಾನು ಏನೋ ನಿರ್ಗುಣತ್ವವನ್ನು ಹೇಳುವ ಶಬ್ದಗಳೆಂದು ಭಾವಿಸಿದ್ದೆ. ಇತ್ತೀಚೆಗೆ ಗುರುಗಳಾದ ರವಿಕಿರಣ್ ಸರ್ ಅದರ ಅರ್ಥವನ್ನು ಹೇಳಿದಾಗ ತುಂಬಾ ಮೋಜೆನಿಸಿತ್ತು. ಈ ಬಂದಿಶ್‌ನ ಮುಂದಿನ ಭಾಗದಲ್ಲಿ ‘ಗುರುಪದ ಚರಣ ವಂದೆ ಆಯೆ ರಘುಪತಿ ಚಾಪ ಸಮೀಪ’ ಎಂಬ ಶಬ್ದಗಳಿವೆ. ಇದು ರಾಮ-ಸೀತೆ ಸ್ವಯಂವರದ ವರ್ಣನೆ. ‘ಯಾವಾಗ ಎಲ್ಲಾ ನೃಪರು(ನಿರಪತ) ನಿರಾಶರಾದರೋ ಆಗ ರಘುಪತಿ ಗುರುಗಳಿಗೆ ವಂದಿಸಿ, ಬಿಲ್ಲಿನ ಸಮೀಪ ಬಂದನು’ ಎಂಬ ಅರ್ಥ ಇದು ಹೊಂದಿದೆ.
ಹೊಸಹೊಸ ಬಗೆಯ ಮನೋಹರವಾದ ಬಂದಿಶ್‌ಗಳನ್ನು ರಚಿಸಿದ ನನ್ನ ಇನ್ನೊಬ್ಬ ಗುರುಗಳಾದ ನಾರಾಯಣ ಪಂಡಿತರ ಬಂದಿಶ್ ಒಂದರಲ್ಲಿ ಬಾಲ್ಯದ ಗೆಳೆಯನೊಬ್ಬ ಅಕಸ್ಮಾತಾಗಿ ಸಿಕ್ಕಿದ ಸಂತೋಷವೊಂದು ಹೀಗೆ ದಾಖಲಾಗಿದೆ.
ಮೋರೆ ಮಂದಿರ ಆಯೋ ಆಯೋರಿ ಬಾಲಸಖಾ ಅಚಾನಕ್ ಆಯೋರಿ ಅಂಗನಮೆ ಝೂಲಾ ಝುಲಾವೂ ಬಾಲಾಪನ ಕೆ ಮೀಠಿ ಮೀಠಿ ಬತಿಯಾ ಕರತ ಮನ ಕೋ ರಿಝಾವೂ
ಕುಶಲತೆಯಿಂದ ಕಥೆಯ ಹಂದರವನ್ನೇ ನೇಯಬಲ್ಲ ಈ ಬಂದಿಶ್‌ಗಳು ರಾಗದ ಪ್ರಸ್ತುತಿಗೆ ರಂಗನ್ನು ತುಂಬುತ್ತವೆ, ಕಣ್ಣಮುಂದೆ ಪಾತ್ರ ಪ್ರಪಂಚವನ್ನು-ವಿವಿಧ ಭಾವಗಳನ್ನು ನಿರ್ಮಿಸಿ ‘ಶ್ರಾವ್ಯ’ವನ್ನು ‘ದೃಶ್ಯ’ವಾಗಿಸುತ್ತವೆ, ಪ್ರಸ್ತುತಿಗೆ ಜೀವ ತುಂಬುತ್ತವೆ.
ಪ್ರತಿಕ್ರಿಯೆಗಾಗಿ : tv9kannadadigital@gmail.com
ಹಿಂದಿನ ಮಿಡಿತ : Music: ನಾಕುತಂತಿಯ ಮಿಡಿತ; ಗುರುಪೂರ್ಣಿಮೆಯ ದಿನ ಸಿಕ್ಕ ಗುರು ನಾರಾಯಣ ಪಂಡಿತರು
(ಮುಂದಿನ ಮಿಡಿತ : 14.4.2022)
Published On - 9:47 am, Thu, 31 March 22