AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Music: ನಾಕುತಂತಿಯ ಮಿಡಿತ; ‘ಸೌತನ ಘರ, ಸಾಸ ನನದ ಮೊರಿ ಜನಮಕೀ ಬೈರನ… ಏನಿದೆಲ್ಲ?’

Bandish : ಹಿಂದೂಸ್ತಾನಿ ಸಂಗೀತದಲ್ಲಿರುವ ಕೆಲ ಅಸಂಬದ್ಧ ಸಾಹಿತ್ಯವನ್ನು ಮಕ್ಕಳಿಗೆ ಕಲಿಸಲು ಅವರ ಮನಸ್ಸು ಹಿಂದೇಟು ಹಾಕಿತು. ಆಗ ಅವರಿಂದ ಬಂದಿಶ್ ರಚನೆಗೊಂಡವು. ನೂರು ಬಂದಿಶ್​ಗಳು ಕಳೆದ ವರ್ಷ್​ ಯೂಟ್ಯೂಬ್​ಗೆ ಅಪ್​ಲೋಡ್ ಆಗಿವೆ.

Music: ನಾಕುತಂತಿಯ ಮಿಡಿತ; ‘ಸೌತನ ಘರ, ಸಾಸ ನನದ ಮೊರಿ ಜನಮಕೀ ಬೈರನ... ಏನಿದೆಲ್ಲ?’
ಕಲಾವಿದ ನಾರಾಯಣ ಪಂಡಿತ
TV9 Web
| Updated By: ಶ್ರೀದೇವಿ ಕಳಸದ|

Updated on:Mar 17, 2022 | 2:09 PM

Share

ನಾಕುತಂತಿಯ ಮಿಡಿತ | Naakutantiya Midita : ಕುಮಾರ ಗಂಧರ್ವರು ರಚಿಸಿದ ಬಂದಿಶ್, ಠುಮ್ರಿ, ಸಗುಣ-ನಿರ್ಗುಣ ಬಂದಿಶ್‌ಗಳೆಲ್ಲವೂ ನಾರಾಯಣ ಪಂಡಿತರ ಬಾಯಲ್ಲೇ ಇರುತ್ತಿದ್ದವು. ಪ್ರತಿಯೊಂದು ಬಂದಿಶ್‌ಗಳ ಆಂತರ್ಯವನ್ನು ಅವರು ಅರಿತಿದ್ದರು ಎನ್ನುವುದೇ ಅವರ ಸಂಗೀತದಲ್ಲಿನ ವಿಶೇಷತೆ. ರಚನೆಯನ್ನು ಅವರು ಪ್ರಸ್ತುತ ರಾಗವನ್ನು ಬೆಳೆಸಲು ಇರುವ ಮಾರ್ಗಸೂಚಿ ಅಥವಾ ರಾಗದ ಚೌಕಟ್ಟು ಎಂದು ನೋಡುತ್ತಿರಲಿಲ್ಲ. ಬಂದಿಶ್‌ನ್ನು, ಅದರಲ್ಲಿನ ಸ್ವರ ರಚನೆ, ಲಯದ ಕಟ್ಟೋಣ, ರಾಗದ ಭಾವ ಮತ್ತು ಶಬ್ದವು ಹೊರಸೂಸುವ ಅರ್ಥ ಇವೆಲ್ಲದರ ಮಧುರ ಪಾಕವಾಗಿ ಕಾಣುತ್ತಿದ್ದರು. ಅದನ್ನು ಸವಿಯುವಾಗ ಮೇಲಿನ ಯಾವ ಅಂಶಗಳೂ ಪ್ರತ್ಯೇಕವಾಗಿ ಎದ್ದು ಕಾಣದೆ, ಪಾಕದ ಪಕ್ವತೆ-ಸವಿ ಮಾತ್ರ ದೊರೆಯುತ್ತಿತ್ತು. ಪ್ರತಿಯೊಂದು ರಚನೆಯ ಆಶಯಕ್ಕೆ ತಕ್ಕಂತೆ ಅದನ್ನು ಭಾವದಲ್ಲಿ ಮುಳುಗಿಸಿ ಮುಂದಿಡುತ್ತಿದ್ದರು. ಸಂಗೀತ ಎನ್ನುವುದು ಸರ್ಕಸ್ಸು ಆಗಬಾರದು, ಸಂಗೀತವು ವ್ಯಾಕರಣದ ಹಂತವನ್ನು ಮೀರಿ ಹೋದಾಗ ಮಾತ್ರ ನಿಜವಾದ ಅರ್ಥದ ‘ಸಂಗೀತ’ ಎನಿಸಿಕೊಳ್ಳುತ್ತದೆ ಎನ್ನುವುದು ಪಂಡಿತರ ಮಾತು. ಶ್ರೀಮತಿ ದೇವಿ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಾವಿದೆ (Shrimathi Devi)

(ಮಿಡಿತ 6, ಭಾಗ 2)

ಅವರು ಯಾವಾಗಲೂ ಹೇಳುತ್ತಿದ್ದದ್ದು, ಸಂಗೀತಕ್ಕೆ ಬೇಕಾದ ಧ್ವನಿಯು ಎಣ್ಣೆಯಲ್ಲಿ ಅದ್ದಿದ ನೆಣೆ(ಬತ್ತಿ)ಯ ಹಾಗೆ ಇರಬೇಕು ಎನ್ನುವುದು. ಎಣ್ಣೆಯೊಳಗೆ ಮುಳುಗೆದ್ದ ಬತ್ತಿಯಂತೆ ಭಾವದಲ್ಲಿ ಮುಳುಗಿ ಹೊರಬರುವ ಧ್ವನಿಯಿಂದ ಮಾತ್ರ ಸರಿಯಾದ ಭಾವಾಭಿವ್ಯಕ್ತಿ ಸಾಧ್ಯ ಎಂಬುದು ಅವರ ಅಭಿಮತವಾಗಿತ್ತು. ಸಾಹಿತ್ಯದಲ್ಲಿನ ಭಾವನೆಯ ಅಭಿವ್ಯಕ್ತಿಗೆ ಬೇಕಾದಂತೆ ಧ್ವನಿಯನ್ನು ಸಪೂರ-ತೋರ ಮಾಡಬೇಕು ಎನ್ನುತ್ತಿದ್ದ ಪಂಡಿತರು, ಅದನ್ನು ಸಮರ್ಥವಾಗಿ ಮಾಡಿ ತೋರಿಸುತ್ತಿದ್ದರು. ಹೀಗೆ ಮಾಡುವುದರಿಂದ ಸಾಹಿತ್ಯದ ಅರ್ಥವನ್ನು ಕೇಳುಗರೊಳಗೆ ಇಳಿಸಲು ಸಾಧ್ಯವಾಗುತ್ತದೆ. ಧ್ವನಿಯನ್ನು ಏರಿಳಿಸಿ, ದಪ್ಪ-ತೆಳ್ಳಗೆ ಮಾಡುವುದರ ಮೂಲಕ ಪ್ರಸ್ತುತಿಯಲ್ಲಿ ‘ನಾಟಕೀಯತೆ’ ತರಲು ಸಾಧ್ಯವಾಗುತ್ತದೆ ಎನ್ನುತ್ತಿದ್ದರು.

ಬಂದಿಶ್‌ನ ಶಬ್ದವನ್ನು ‘ಡ್ರಮಟೈಸ್’ ಮಾಡುವುದು ಅನ್ನುವುದು ಪಂಡಿತರು ಯಾವಾಗಲೂ ಆಡುತ್ತಿದ್ದ ಮಾತು. ಅದಕ್ಕಾಗಿ ಗಂಟಲು ತಯಾರಿ ಹೇಗೆ ಮಾಡಬೇಕು ಎಂದು ಕೇಳಿದರೆ, ಅವರು ಹೇಳುವುದು ‘ಎಲ್ಲವೂ ಇರುವುದು ತಲೆಯಲ್ಲಿ. ಧ್ವನಿ ಅಥವಾ ಶಾರೀರ ಎನ್ನುವುದು ಅಂದರೆ ಪಶು ಇದ್ದಂತೆ. ಒಮ್ಮೆ ಅದನ್ನು ಹೊಡೆದು ಬಡಿದು ಪಳಗಿಸಿದ ನಂತರ ಅದು ಬುದ್ಧಿ ಹೇಳಿದಂತೆ ಕೇಳಬೇಕು. ಅದರ ನಿಯಂತ್ರಣ ಇರುವುದು ತಲೆಯಲ್ಲಿರುವ ವಿಚಾರದಲ್ಲಿ. ವಿಚಾರದಲ್ಲಿ ಪ್ರಬುದ್ಧತೆ, ಸೂಕ್ಷ್ಮತೆ ಬಂದಹಾಗೇ ಅದು ಗಾಯನದಲ್ಲೂ ಕಾಣತೊಡಗುತ್ತದೆ. ಅದಕ್ಕಾಗಿ ನಾವು ಸೂಕ್ಷ್ಮಸಂವೇದಿಗಳಾಗಬೇಕು ಹೊರತೂ ಆಲೋಚನೆ ಇಲ್ಲದ 10 ಗಂಟೆ ಅಭ್ಯಾಸದಿಂದ ಈ ಸೂಕ್ಷ್ಮತೆ ಬರಲಾರದು’.

ಭಾಗ 1 : Music: ನಾಕುತಂತಿಯ ಮಿಡಿತ; ಗುರುಪೂರ್ಣಿಮೆಯ ದಿನ ಸಿಕ್ಕ ಗುರು ನಾರಾಯಣ ಪಂಡಿತರು

Naakutantiya Midita Column Classical Vocalist Shrimathi Devi introduced Hindustani Musician Narayan Pandith

ಹಿಂದೂಸ್ತಾನಿ ಕಲಾವಿದರಾದ ನಾರಾಯಣ ಪಂಡಿತ ಮತ್ತು ಚಂದ್ರಶೇಖರ ಪುರಾಣಿಕಮಠ

ಆರೋಗ್ಯದ ಸಮಸ್ಯೆಯಿಂದಾಗಿ ವಯೋಲಿನ್ ಬಿಡಬೇಕಾಗಿ ಬಂದಾಗ ಪಂಡಿತರು ಮುಂಬೈ ಬಿಟ್ಟು ತಮ್ಮ ಊರಾದ ಗೋಕರ್ಣಕ್ಕೆ ಬಂದು ಗಾಯನದ ಪಾಠವನ್ನು ಆರಂಭಿಸಿದಾಗ ಹಿಂದೂಸ್ತಾನಿ ಸಂಗೀತದ ರಚನೆಗಳಲ್ಲಿನ ಅಸಂಬದ್ಧವೆನಿಸುವ ಸಾಹಿತ್ಯವನ್ನು ಮಕ್ಕಳಿಗೆ ಕಲಿಸಲು ಮನಸ್ಸು ಹಿಂದೇಟು ಹಾಕಿತು. ‘ಸೌತನ ಘರ್’, ‘ಸಾಸ ನನದ ಮೊರಿ ಜನಮಕಿ ಬೈರನ’, ‘ಪಾಯಲ್‌ಕಿ ಝನ್‌ಕಾರ್’ ಮುಂತಾದವುಗಳಿಂದ ಹೊರತಾದ ಜೀವನ-ಸೌಂದರ್ಯವಿದೆ ಎಂದು ಭಾವಿಸಿದ ಪಂಡಿತರು ಜೀವನದ ಹಲವು ಮಗ್ಗುಲುಗಳನ್ನು ತೋರಿಸುವ ಲಾಲಿತ್ಯಪೂರ್ಣ ಬಂದಿಶ್‌ಗಳನ್ನು ರಚಿಸಿದರು. ಇವುಗಳಲ್ಲಿ ಸುಂದರವಾದ ಲಯದ ಕಲ್ಪನೆ, ರಾಗದ ಹೊಸ ಮುಖಗಳು ಮಾತ್ರವಲ್ಲದೆ ಹೊಸ ಬಗೆಯ ಸಾಹಿತ್ಯವಿತ್ತು.

ಮುಂದೆ ‘ನಾದಪಿಯಾ’ ಎಂಬ ಅಂಕಿತವನ್ನು ಇಟ್ಟುಕೊಂಡು ವಿವಿಧ ಪ್ರಸಿದ್ಧ ಮತ್ತು ಅಪರೂಪದ ರಾಗಗಳಲ್ಲಿ ಸುಮಾರು 200ರಷ್ಟು ಬಂದಿಶ್‌ಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ಸುಮಾರು ನೂರರಷ್ಟು ಬಂದಿಶ್‌ಗಳು ಕನ್ನಡದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗದಿಂದ ಡಾ.ಶಾರದಾ ಭಟ್ ಅವರ ಸಂಪಾದಕತ್ವದಲ್ಲಿ ಪ್ರಕಟವಾಗಿದೆ. ಹಿಂದಿನ ವರ್ಷ ಇವುಗಳಲ್ಲಿ ನೂರು ಬಂದಿಶ್‌ಗಳನ್ನು ಪಂಡಿತರ ಹಸ್ತಾಕ್ಷರದಲ್ಲಿರುವ ಹಿಂದಿ ನೊಟೇಷನ್ ಜೊತೆಗೆ ಆಡಿಯೋ ರೆಕಾರ್ಡಿಂಗ್​ಗಳನ್ನು ಯೂಟ್ಯೂಬ್‌ಗೆ (Nadapiya Pandith Narayana Panditji Bandishes) ಅಪ್ಲೋಡ್ ಮಾಡಿದ್ದೇವೆ. ಪಂಡಿತರ ಇನ್ನೊಬ್ಬ ಶಿಷ್ಯರಾದ ರವಿಕಿರಣ್ ಅವರೂ ಹಲವಾರು ಬಂದಿಶ್​ಗಳನ್ನು ವಿಸ್ತಾರವಾಗಿ ಹಾಡಿ ಯೂಟ್ಯೂಬ್ ನಲ್ಲಿ ಪ್ರಕಟಿಸಿದ್ದಾರೆ.

ಯಾವಾಗಲೂ ಸಂಗೀತದೊಳಗೇ ಮುಳುಗಿರುತ್ತಿದ್ದ ಪಂಡಿತರು ಬೆಳಿಗ್ಗೆ ಎದ್ದ ಕೂಡಲೇ ತಂಬೂರ ಹಚ್ಚುತ್ತಿದ್ದರು. ಬಂದಿಶ್ ಕಟ್ಟಲು ಶಬ್ದವೊಂದು ಚೆನ್ನಾಗಿ ಸಿಕ್ಕರೆ, ಅವರದನ್ನು ಗುನುಗುತ್ತಾ, ಎದುರಿಗಿರುವ ಮೇಜನ್ನು ಕುಟ್ಟಿಕೊಂಡು ಮುಂದುವರಿಸಲು ಬೇಕಾದ ಎಳೆಯನ್ನು ಹುಡುಕುತ್ತಿದ್ದರು. ಬಂದಿಶ್ ಚೆನ್ನಾಗಿ ಬಂದುಬಿಟ್ಟರೆ ಖುಷಿಯಿಂದ ಶಿಷ್ಯರಿಗ್ಯಾರಾದರೂ ಫೋನ್ ಮಾಡಿ ಹಾಡಿ ತೋರಿಸುತ್ತಿದ್ದರು. ‘ನೀನು ಬಂದಾಗ ಕಲಿಸುವೆ’ ಎನ್ನುತ್ತಿದ್ದರು. ಪುರಾಣಿಕಮಠ್ ಸರ್ ಮತ್ತು ಪಂಡಿತಜ್ಜನ ಮಧ್ಯೆ ಪ್ರೀತಿಯ ಸಂಬಂಧವಿತ್ತು. ಪಂಡಿತರ ಬಂದಿಶ್‌ಗಳನ್ನು ಸರ್ ತುಂಬಾ ಮೆಚ್ಚಿಕೊಳ್ಳುತ್ತಿದ್ದರು. ಪಂಡಿತರು ಯಾವಾಗಲೂ ಹೇಳುವ ಮಾತು, ‘ಸಂಗೀತವೆಂಬುದೊಂದು ಆನಂದ ಯಾತ್ರೆ’. ಈ ಮಾತನ್ನು ಸರಿಯಾದ ಅರ್ಥದಲ್ಲಿ ಬದುಕಿದವರು ನಾರಾಯಣ ಪಂಡಿತರು ಮತ್ತು ಪುರಾಣಿಕಮಠ್ ಸರ್ ಅವರುಗಳು.

(ಮುಗಿಯಿತು)

(ಮುಂದಿನ ಮಿಡಿತ : 31.3.2022)

ಪ್ರತಿಕ್ರಿಯೆಗಾಗಿ : tv9kannadadigital@gmail.com

ಎರಡೂ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/naakutantiya-midita

Published On - 2:05 pm, Thu, 17 March 22