Music: ನಾಕುತಂತಿಯ ಮಿಡಿತ; ಯಾಕೋ ಈಗಲೇ ಗದುಗಿನ ‘ಅಜ್ಜೋರ ಜಾತ್ರೆ’ ನೆನಪಾಗುತ್ತಿದೆ

Pt. Puttaraja Gawayi : ‘ಪುಟ್ಟರಾಜ ಗವಾಯಿಗಳು ಧ್ಯಾನ ಮಾಡುವಾಗ ಮೂರು ಫೂಟು ಮೇಲೆ ಹೋಗುತ್ತಾರಂತೆ, ನಿಜವೇ’ ಎಂದಾಗ ಪುರಾಣಿಕಮಠ ಸರ್, ‘ಅವರು ಹಾಗೆ ಮೇಲೆ ಹೋಗುವುದು ನಿಜವೇ ಇರಬಹುದು. ಆದರೆ, ಅವರು ಕೆಳಗೇ ಇದ್ದರೂ ಮಹಾತ್ಮರೇ’ ಎಂದಿದ್ದರು.

Music: ನಾಕುತಂತಿಯ ಮಿಡಿತ; ಯಾಕೋ ಈಗಲೇ ಗದುಗಿನ ‘ಅಜ್ಜೋರ ಜಾತ್ರೆ’ ನೆನಪಾಗುತ್ತಿದೆ
ಪಂಡಿತ ಪುಟ್ಟರಾಜ ಗವಾಯಿಗಳು
Follow us
ಶ್ರೀದೇವಿ ಕಳಸದ
|

Updated on:Apr 28, 2022 | 1:02 PM

ನಾಕುತಂತಿಯ ಮಿಡಿತ | Naakutantiya Midita : ಪುಟ್ಟರಾಜ ಗವಾಯಿಗಳು ಎಂಬುದು ಕೇವಲ ಒಂದು ವ್ಯಕ್ತಿಯ ಹೆಸರಲ್ಲ, ಅದೊಂದು ‘ಶಕ್ತಿ’. ಕರ್ನಾಟಕದಲ್ಲಿ ನಡೆದು ಬಂದ ಹಿಂದೂಸ್ತಾನಿ ಸಂಗೀತ ಧಾರೆಯ ಮೂಲ ಸ್ರೋತ, ಸ್ಫೂರ್ತಿ ಕೇಂದ್ರ. ಅವರು ಏನು ಎಂಬುದನ್ನು ಅರಿಯಲು ಹೋದಷ್ಟು ವ್ಯಾಪ್ತಿವಿಶಾಲವೆನಿಸುವವರು. ಸಂಗೀತಾಸಕ್ತರು, ಸಂಗೀತ ಕಲಿಯುವ ವಿದ್ಯಾರ್ಥಿಗಳೆಲ್ಲರೂ ಪಂಚಾಕ್ಷರಿ ಗವಾಯಿಗಳು ಮತ್ತು ಪುಟ್ಟರಾಜ ಗವಾಯಿಗಳ ಹೆಸರನ್ನು ತುಂಬಾ ಸರಿ ಕೇಳಿರುತ್ತಾರಾದರೂ ಉತ್ತರ ಕರ್ನಾಟಕಕ್ಕೆ ಹೆಜ್ಜೆ ಇಟ್ಟರಷ್ಟೇ ಅವರ ವ್ಯಕ್ತಿತ್ವ ಹಾಗೂ ಅವರು ಮಾಡಿದ ಕೆಲಸದ ಅನುಭವ ಪಡೆಯಲು ಸಾಧ್ಯ. ಬೆಳಗ್ಗಿನಿಂದ ರಾತ್ರಿಯವರೆಗೆ ಪ್ರತಿನಿತ್ಯ ಸಂಗೀತ ಪಾಠ ಮಾಡುತ್ತಿದ್ದ ನನ್ನ ಗುರುಗಳಾದ ಚಂದ್ರಶೇಖರ ಪುರಾಣಿಕಮಠ ಅವರ ದಿನ ಪ್ರಾರಂಭವಾಗುತ್ತಿದ್ದುದೇ ಅವರ ಗುರುಗಳಾದ ಪಂಚಾಕ್ಷರಿ ಮತ್ತು ಪುಟ್ಟರಾಜ ಗವಾಯಿಗಳ ಭಾವಚಿತ್ರಗಳಿಗೆ ವಂದಿಸಿ ತಮ್ಮ ದಿನದ ಸಂಗೀತಾಭ್ಯಾಸ ಆರಂಭಿಸುವುದರೊಂದಿಗೆ. ಶ್ರೀಮತಿ ದೇವಿ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಾವಿದೆ (Shrimathi Devi)

(ಮಿಡಿತ 8)

ಸಂಗೀತದ ಶ್ರೇಷ್ಠ ಕಲಾವಿದರು ಎಂದು ಗುರುತಿಸಲ್ಪಡುವವರು ದೊಡ್ಡ ದೊಡ್ಡ ವೇದಿಕೆಗಳಲ್ಲಿ ಹಾಡಿರುತ್ತಾರೆ, ಹೆಸರಾದ ಪ್ರಶಸ್ತಿ-ಪುರಸ್ಕಾರಗಳನ್ನು ಪಡೆದಿರುತ್ತಾರೆ. ದೊಡ್ಡ ಗುರುಗಳೆನಿಸಿಕೊಂಡವರು ಹತ್ತಾರು ಭರವಸೆಯ ಶಿಷ್ಯರನ್ನು ತರಬೇತುಗೊಳಿಸಿದವರಾಗಿರುತ್ತಾರೆ. ಸಾವಿರಾರು ಅಭಿಮಾನಿಗಳನ್ನೂ ಇವರು ಹೊಂದಿರಬಹುದು. ಆದರೆ, ಹಲವಾರು ಜಿಲ್ಲೆಗಳ ವ್ಯಾಪ್ತಿಯಲ್ಲಿನ ಊರುಗಳ ಜನರೆಲ್ಲರೂ ಒಬ್ಬ ವ್ಯಕ್ತಿಗೆ ಶರಣಾಗುವುದು ಕೇವಲ ‘ಸಂಗೀತ’ದಿಂದ ನಡೆಯುವ ಸಂಗತಿಯಲ್ಲ. ಅಲ್ಲಿ ಸಂಗೀತದ ಮೂಲಕ ‘ಎಲ್ಲರನ್ನು ಒಳಗು ಮಾಡಿಕೊಳ್ಳುವಂಥ’ದ್ದೇನೋ ನಡೆದಿದೆ ಎಂಬುದು ಸ್ಪಷ್ಟವಾಗುತ್ತದೆ. ಈ ಕೆಲಸವನ್ನು ಮಾಡಿದವರು ಪಂಚಾಕ್ಷರಿ ಮತ್ತು ಪುಟ್ಟರಾಜ ಗವಾಯಿಗಳು. ಅವರು ಸಾವಿರಾರು ವಿದ್ಯಾರ್ಥಿಗಳನ್ನು ಸಾಕಿ ಸಲಹಿದ್ದಾರೆ, ನೂರಾರು ಸಂಗೀತಗಾರರನ್ನು ನಾಡಿಗೆ ನೀಡಿದ್ದಾರೆ, ತಾವು ಪ್ರಶಸ್ತಿ ಸನ್ಮಾನಗಳನ್ನು ಪಡೆದಿದ್ದಾರೆ, ಸಂಘ ಸಂಸ್ಥೆಗಳನ್ನು ಕಟ್ಟಿದ್ದಾರೆ ಮತ್ತು ಎಲ್ಲಕ್ಕೂ ಹೆಚ್ಚಿನದಾದ ವಿಶ್ವಾಸ-ಪ್ರೀತಿಗಳನ್ನು ಜನರ ಮನದಲ್ಲಿ ನೆಟ್ಟು, ಬೆಳೆದು ಅವುಗಳ ಫಲವನ್ನು ಸೂರೆಗೊಂಡಿದ್ದಾರೆ.

ಗವಾಯಿಗಳಿಬ್ಬರ ಬಳಿ ಸಂಗೀತವನ್ನು ಕಲಿಯುವ ಭಾಗ್ಯ ಪಡೆದ ಪುರಾಣಿಕಮಠ್ ಸರ್ ಅವರ ಬಳಿ ಶಿಷ್ಯರು ಯಾರೋ ‘ಪುಟ್ಟರಾಜ ಗವಾಯಿಗಳು ಧ್ಯಾನ ಮಾಡುವಾಗ ಮೂರು ಫೂಟು ಮೇಲೆ ಹೋಗುತ್ತಾರಂತೆ, ನಿಜವೇ’ ಎಂದಾಗ ಗುರುಗಳು ‘ಅವರು ಹಾಗೆ ಮೇಲೆ ಹೋಗುವುದು ನಿಜವೇ ಇರಬಹುದು. ಆದರೆ, ಅವರು ಕೆಳಗೇ ಇದ್ದರೂ ಮಹಾತ್ಮರೇ’ ಎಂದಿದ್ದರು. ಈ ಮಾತಿನ ಮೂಲಕ ನನಗೆ ಪುಟ್ಟರಾಜರಂಥ ಮಹಾತ್ಮರನ್ನು ನೋಡಬೇಕಾದ ದೃಷ್ಟಿ ದೊರಕಿತು.

ಪುಟ್ಟರಾಜ ಗವಾಯಿಗಳು ಪಂಚಾಕ್ಷರಿ ಗವಾಯಿಗಳಿಂದ ಕರ್ನಾಟಕಿ-ಹಿಂದೂಸ್ತಾನಿ ಎರಡೂ ಪದ್ಧತಿಗಳಲ್ಲಿ ಸಂಗೀತ ಕಲಿತವರು. ಹಾರ್ಮೋನಿಯಂ, ತಬಲಾ, ಸರೋದ್, ಸಿತಾರ್, ಸಾರಂಗಿ ಮುಂತಾದ ಹಲವು ವಾದ್ಯಗಳನ್ನು ನುಡಿಸಬಲ್ಲವರಾದರು. ಬ್ರೈಲ್ ಲಿಪಿ ಕಲಿತು ಪುಸ್ತಕ ರಚನೆ ಮಾಡಿದರು. ಕನ್ನಡ, ಹಿಂದಿ, ಸಂಸ್ಕೃತ ಭಾಷೆಗಳಲ್ಲಿ ಸಮನಾದ ಪಾಂಡಿತ್ಯ ಪಡೆದು ಅನೇಕ ಸಂಗೀತ ಮತ್ತು ಪುರಾಣ ಸಂಬಂಧಿತ ಕೃತಿ ರಚನೆ ಮಾಡಿದರು. ನಾಟಕ ಸಂಘವನ್ನು ಎತ್ತರಕ್ಕೆ ಕೊಂಡೊಯ್ದರು. ಶಾಲಾ ಕಾಲೇಜುಗಳನ್ನು ಸ್ಥಾಪಿಸಿದರು. ಗದಗಲ್ಲಿ ಸ್ಥಾಪನೆಯಾದ ‘ವೀರೇಶ್ವರ ಪುಣ್ಯಾಶ್ರಮ’ವನ್ನು ಪ್ರಮುಖವಾದ ಸಾಂಸ್ಕೃತಿಕ, ಅಧ್ಯಾತ್ಮಿಕ ಕೇಂದ್ರವನ್ನಾಗಿ ಬೆಳೆಸಿದರು. ಎಲ್ಲಕ್ಕಿಂತ ಮುಖ್ಯವಾಗಿ ಸಮಾಜದಲ್ಲಿ ಯಾರಿಗೂ ಬೇಡವಾದ ಅಂಗವಿಕಲ, ಅಂಧ, ಕುಂಟ ಮಕ್ಕಳಿಗೆ ಆಶ್ರಯ ನೀಡಿ ಊಟ-ವಸತಿಯ ಜೊತೆಗೆ ವಿದ್ಯೆಯನ್ನೂ ನೀಡಿದರು. ಆಶ್ರಮದಲ್ಲಿನ ವಿದ್ಯಾರ್ಥಿಗಳ ಊಟೋಪಚಾರಕ್ಕಾಗಿ ಹಳ್ಳಿ-ಹಳ್ಳಿಗಳಲ್ಲಿ ಸಂಚರಿಸಿ ಧಾನ್ಯ, ಬೇಳೆ, ಕಾಳುಗಳನ್ನು ಸಿರಿವಂತರಿಂದ ತಂದರು. ಯಾವುದೇ ರೀತಿಯ ಸಂಗೀತದ ಹಿನ್ನೆಲೆಯಿಲ್ಲದ ನೂರಾರು ಮಕ್ಕಳಲ್ಲಿ ಸಾಹಿತ್ಯ-ಸಂಗೀತದ ಮೂಲಾಕ್ಷರಗಳನ್ನು ಬಿತ್ತಿದರು.

ಇದನ್ನೂ ಓದಿ : Ali Akbar Khan Birth Centenary: ನಿಮ್ಮ ಟೈಮ್​ಲೈನ್; ‘ಪುರುಸೊತ್ತು ಸಿಗಲೆಂದು ತಂತಿ ತುಂಡರಿಸುವುದನ್ನು ಕಲಿತೆ!’

ಪ್ರತಿಭಾವಂತರಾದವರು ಆಶ್ರಮದಲ್ಲಿ ಗವಾಯಿಗಳು ನಿರ್ಮಿಸಿದ ವಾತಾವರಣದಲ್ಲಿ ಅರಳುತ್ತಾ, ಮೇಲೇರುತ್ತಾ ಸಾಗಿದರು. ಅವರು ಪ್ರತಿನಿತ್ಯ ಮಾಡುವ ಇಷ್ಟಲಿಂಗ ಪೂಜೆ ನಡೆಯುವಷ್ಟು ಕಾಲ ಅಲ್ಲಿ ಯಾರಾದರೂ ಅಖಂಡವಾಗಿ ಸಂಗೀತ ಸೇವೆ ಮಾಡಲೇಬೇಕಾಗಿತ್ತು. ಪ್ರತಿದಿನ ಗಂಟೆಗಟ್ಟಲೆ ಸಂಗೀತ ಗಾಯನ, ವಾದನ ನಡೆಸಿ ವಿದ್ಯಾರ್ಥಿಗಳು ಧಾರಣಾ ಶಕ್ತಿ ಪಡೆದದ್ದನ್ನು ಇಂದಿಗೂ ಕೃತಜ್ಞತೆಯಿಂದ ಸ್ಮರಿಸುತ್ತಾರೆ.

ವೀರೇಶ್ವರ ಪುಣ್ಯಾಶ್ರಮಕ್ಕೆ ಹೋಗುವ, ಅಜ್ಜೋರ ಆಶೀರ್ವಾದ ಪಡೆಯುವ, ಅವರ ತುಲಾಭಾರ ನೋಡುವ ಹಲವು ಸಂದರ್ಭಗಳು ನನಗೆ ದೊರಕಿವೆ. ಪ್ರತಿವರ್ಷ ಜೂನ್ ತಿಂಗಳಲ್ಲಿ ಪಂಚಾಕ್ಷರಿ ಗವಾಯಿಗಳ ನೆನಪಿನಲ್ಲಿ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಬಹು ದೊಡ್ಡ ಪ್ರಮಾಣದ ಸಂಗೀತ ಕಾರ್ಯಕ್ರಮಗಳು ನಡೆಯುತ್ತವೆ. ದೇಶದ ಎಲ್ಲಾ ಕಡೆಯಿಂದ ದಿಗ್ಗಜ ಕಲಾವಿದರು ಇಲ್ಲಿ ಬಂದು ಕಾರ್ಯಕ್ರಮ ನೀಡುತ್ತಾರೆ. ಎಲ್ಲಾ ಕಡೆ ಹರಡಿರುವ ಅಜ್ಜೋರ ಶಿಷ್ಯಂದಿರು ಈ ಸಮಯದಲ್ಲಿ ಅಲ್ಲಿ ಬಂದು ತಮ್ಮ ಸಂಗೀತ ಸೇವೆ ನೀಡುತ್ತಾರೆ. ಕೊನೆಯ ದಿನದಂದು ಆಹೋರಾತ್ರಿ ನಡೆಯುವ ಕಾರ್ಯಕ್ರಮದ ಕೊನೆಯಲ್ಲಿ ಪುಟ್ಟರಾಜ ಗವಾಯಿಗಳ ಮಂಗಲ ಸಂಗೀತದೊಂದಿಗೆ ಜಾತ್ರೆ ಸಂಪನ್ನವಾಗುವುದು ವಾಡಿಕೆ. ಪುಟ್ಟರಾಜ ಗವಾಯಿಗಳು ಲಿಂಗೈಕ್ಯರಾಗುವವರೆಗೂ ಹೀಗೆಯೇ ನಡೆಯುತ್ತಿದ್ದ ಈ ಜಾತ್ರೆಯ ಸಂಭ್ರಮ, ಸೊಬಗನ್ನು ಕಂಡೇ ತೀರಬೇಕು. ಆಶ್ರಮಕ್ಕೆ ಬಂದು ಗುರುಗಳಿಬ್ಬರಾದ ಹಾನಗಲ್ ಕುಮಾರ ಸ್ವಾಮಿಗಳು, ಪಂಚಾಕ್ಷರಿ ಗವಾಯಿಗಳ ಗದ್ದುಗೆಯ ದರ್ಶನ ಮಾಡಿ, ಸಂಗೀತ ಕೇಳಲು ಇಲ್ಲಿ ನೆರೆಯುವ ಹೆಚ್ಚಿನವರು ಮಾಸಲು ಧೋತಿ, ತಲೆಯಲ್ಲಿ ಟೊಪಗಿ ಧರಿಸಿದ ಹಳ್ಳಿಯ ರೈತಾಪಿ ಜನರು.

ಪುಟ್ಟರಾಜರ ದರ್ಶನ ಪಡೆಯಲು ನೂಕು ನುಗ್ಗಲಿನಲ್ಲಿ ಕಾದು ನಿಲ್ಲುವ ಭಕ್ತರು, ಅವರ ಪಾದುಕೆಗಳ ಮೇಲೆ ತಲೆ ಇಟ್ಟು ನಮಸ್ಕರಿಸಿ ಅವರಿಂದ ವಿಭೂತಿ ಪಡೆಯುತ್ತಾರೆ. ಪುಟ್ಟರಾಜ ಗವಾಯಿಗಳ ತುಲಾಭಾರಕ್ಕೆ ವರ್ಷಗಳ ಮೊದಲೇ ಕಾದಿರಿಸಬೇಕಾಗಿತ್ತೆಂದು ಹೇಳುವುದನ್ನು ಕೇಳಿದ್ದೇನೆ. ಒಮ್ಮೆ ಬೆಳಗಾವಿ ಜಿಲ್ಲೆಯ ಮೂಡಲಗಿ ಎಂಬ ಊರಿನಲ್ಲಿ ನಡೆದ ತುಲಾಭಾರ ಮತ್ತು ಆಹೋರಾತ್ರಿ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ನನಗಾಗಿತ್ತು. ಆ ದಿನ ಪಂಡಿತರುಗಳಾದ ವೆಂಕಟೇಶ ಕುಮಾರ್, ಕುಮಾರ ದಾಸ್, ಬಾಲಚಂದ್ರ ನಾಕೋಡ್, ಶಾಫೀಕ್ ಖಾನ್ ಇವರೆಲ್ಲರ ಜೊತೆಯಲ್ಲೇ ಪ್ರಯಾಣ ಮಾಡಿದ್ದೆ. ಕಿರಿಯಳಾದ ನಾನು ಕಾರ್ಯಕ್ರಮದಲ್ಲಿ ಎಲ್ಲರಿಗಿಂತ ಮೊದಲು ರಾಗ ಬಾಗೇಶ್ರೀ ಹಾಡಿದ್ದೆ. ಎಲ್ಲರ ಕಾರ್ಯಕ್ರಮದ ಕೊನೆಯಲ್ಲಿ ಅಜ್ಜೋರು ರಾಗ ಪೀಲೂವನ್ನು ಹಾರ್ಮೋನಿಯಂನಲ್ಲಿ ನುಡಿಸಿ ಜೊತೆಯಲ್ಲೇ ತಾವೂ ಹಾಡಿದ್ದರು.

ಇದನ್ನೂ ಓದಿ : Music: ನಾಕುತಂತಿಯ ಮಿಡಿತ; ‘ಸೌತನ ಘರ, ಸಾಸ ನನದ ಮೊರಿ ಜನಮಕೀ ಬೈರನ ಏನಿದೆಲ್ಲ?’

ಪಂಚಾಕ್ಷರಿ ಗವಾಯಿಗಳ ಹುಟ್ಟೂರಾದ ಹಾವೇರಿ ಜಿಲ್ಲೆಯ ಕಾಡಶೆಟ್ಟಿಹಳ್ಳಿಯಲ್ಲಿ ಪ್ರತಿವರ್ಷ ರಾತ್ರೆ ಇಡೀ ಸಂಗೀತ ಮತ್ತು ತುಲಾಭಾರ ಕಾರ್ಯಕ್ರಮಗಳು ನಡೆಯುತ್ತವೆ. ಇಲ್ಲಿ ಎರಡು ಬಾರಿ ಹಾಡುವ ಅವಕಾಶ ನನಗೆ ಒದಗಿತ್ತು. ಅಲ್ಲಿ ಕಾರ್ಯಕ್ರಮಕ್ಕಿಂತ ಮೊದಲು ಗವಾಯಿಗಳು ಹುಟ್ಟಿದ ಮನೆಯನ್ನು ನೋಡಿ ನಂತರ ಪುಟ್ಟರಾಜ ಗವಾಯಿಗಳ ದರ್ಶನ ಮಾಡಲು ಕಾಯುತ್ತಿದ್ದಾಗ ಒಂದಷ್ಟು ಹಳ್ಳಿ ಜನ, ಹೆಂಗಸೊಬ್ಬಳನ್ನು ಎಳೆದು ತಂದರು. ಕೆದರಿದ ಕೂದಲಿನ ಆಕೆ ದೊಡ್ಡದಾಗಿ ಗಂಡಸು ದನಿಯಲ್ಲಿ ಕಿರಿಚುತ್ತಿದ್ದು, ಎಲ್ಲರ ಕೈ ತಪ್ಪಿಸಿಕೊಳ್ಳಲು ಕೊಸರಾಡುತ್ತಿದ್ದಳು. ಅಜ್ಜೋರ ಬಳಿಗೆ ಆಕೆಯನ್ನು ಎಳೆದು ತಂದ ಕೂಡಲೆ ಅವರು ಆಕೆಯ ತಲೆ ಮೇಲೆ ಕೈ ಇಟ್ಟಬಿಟ್ಟರು. ನೋಡುತ್ತಿದ್ದಂತೆ ಹೆಂಗಸು ಶಾಂತವಾಗಿ ಏನೂ ಆಗದವಳಂತೆ ಇದ್ದುಬಿಟ್ಟಳು. ಹಲವಾರು ವರ್ಷಗಳ ಕಾಲ ಗದಗದ ಆಶ್ರಮಲ್ಲಿದ್ದು ನಂತರ ಸಂಗೀತದಲ್ಲಿ ಎಂ.ಎ ಮಾಡಲು ಧಾರವಾಡಕ್ಕೆ ಬಂದು ಪುರಾಣಿಕಮಠ ಸರ್ ಬಳಿ ಕ್ಲಾಸ್‌ಗೆ ಬರುವ ಗೆಳೆಯರ ಬಾಯಲ್ಲಿ ಇಂಥಹ ಹಲವಾರು ಘಟನೆಗಳ ಬಗ್ಗೆ ಕೇಳುತ್ತಿದ್ದೆ.

ಪುಟ್ಟರಾಜ ಅಜ್ಜೋರ ದೇಹಾಂತ್ಯವಾದದ್ದು 2010 ಸೆಪ್ಟೆಂಬರ್‌ನಲ್ಲಿ. ಆಗ ಪುಣೆಯಲ್ಲಿ ಸಂಗೀತಾಭ್ಯಾಸ ಮಾಡುತ್ತಿದ್ದ ನಾನು ಧಾರವಾಡಕ್ಕೆ ಬಂದಿದ್ದೆ. ಸ್ನೇಹಿತರ ಜೊತೆ ಅಜ್ಜೋರ ಕೊನೆಯ ದರ್ಶನಕ್ಕೆ ಹೋದಾಗ ನೋಡಿದ ಚಿತ್ರ ಮನಸ್ಸಿನಿಂದ ಎಂದಿಗೂ ಮರೆಯಾಗದ್ದು. ಊರಿಡೀ ಅವರ ಅಂತಿಮಯಾತ್ರೆಯಲ್ಲಿ ಭಾಗವಹಿಸಲು ಬಂದ ಜನರಿಂದ ತುಂಬಿತ್ತು. ಆ ದಿನ ಊರಿನಲ್ಲಿನ ಹೆಚ್ಚಿನ ಆಟೋ (ಟಂಟ)ಗಳು ಪ್ರಯಾಣಿಕರನ್ನು ಉಚಿತವಾಗಿ ಬಸ್​ಸ್ಟ್ಯಾಂಡ್​ನಿಂದ ಆಶ್ರಮದ ಬಳಿಯಲ್ಲಿದ್ದ ಎಪಿಎಂಸಿ ಆವರಣಕ್ಕೆ ಕರೆದೊಯ್ಯುತ್ತಿದ್ದರು. ಆಸುಪಾಸಿನಲ್ಲಿದ್ದ ಮನೆಗಳವರು ತಮ್ಮಿಂದ ಸಾಧ್ಯವಾದಷ್ಟು ಉಪ್ಪಿಟ್ಟು, ಚಿತ್ರಾನ್ನ, ಅವಲಕ್ಕಿಗಳನ್ನು ಮಾಡಿಕೊಂಡು ಮನೆ ಮುಂದೆ ನಿಂತು ಅದು ಮುಗಿಯುವವರೆಗೆ ಹಸಿದವರಿಗೆ ಹಂಚುತ್ತಿದ್ದರು. ಅಜ್ಜೋರ ಅಂತಿಮ ಯಾತ್ರೆ ನೋಡಲು ಮನೆ ತಾರಸಿ ಹತ್ತಿ, ಮರ ಹತ್ತಿ ಜನ ಕಾಯುತ್ತಿದ್ದರು. ಕೆಳಗಡೆ ಕಾಲು ಹಾಕುವಷ್ಟೂ ಜಾಗವಿರಲಿಲ್ಲ. ‘ಸಂಗೀತ’ವೆಂಬ ಮಾಯಾಜಾಲವನ್ನು ಬಳಸಿ ಸಮಾಜವನ್ನೇ ತಮ್ಮ ಕಾರ್ಯಕ್ಷೇತ್ರವನ್ನಾಗಿಸಿಕೊಂಡ ಅಜ್ಜೋರು ಹೊರಗೆ ಕುರುಡರಾಗಿದ್ದರೂ ಒಳಗಣ್ಣಿನಿಂದ ಬೆಳಗಿ-ಬೆಳಗಿಸಿದ ರೀತಿ ಎದುರಿಗೆ ತೆರೆದುಕೊಂಡಿತ್ತು.

(ಮುಂದಿನ ಮಿಡಿತ : 28.4.2022)

ಪ್ರತಿಕ್ರಿಯೆಗಾಗಿ : tv9kannadadigital@gmail.com

ಹಿಂದಿನ ಮಿಡಿತ : Music: ನಾಕುತಂತಿಯ ಮಿಡಿತ; ಮಜ್ಜಿಗೆ ಪೂರ್ತಕ್ಕೆ ರಾಮಾಯಣ ಮತ್ತು ಬಂದಿಶ್​ನ ಒಳಹೂರಣ

Published On - 12:11 pm, Thu, 14 April 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ