ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : 19ನೇ ಶತಮಾನದ ಉತ್ತರಾರ್ಧ ಮತ್ತು 20 ನೇ ಶತಮಾನದ ಪೂರ್ವಾರ್ಧದಲ್ಲಿ ತನ್ನ ವಿಶಿಷ್ಟ ಬರವಣಿಗೆಯ ಶೈಲಿಯಿಂದ ಗುರುತಿಸಿಕೊಂಡ ರಶಿಯನ್ ಲೇಖಕ ಆ್ಯಂಟನ್ ಚೆಕಾವ್ (Anton Chekhov) ಬರೆದ ಕಥೆಗಳು ಇಂದಿಗೂ ಅತಿ ಪ್ರಸ್ತುತ. ಬಹುಮುಖ್ಯವಾಗಿ ಮನುಷ್ಯ ಸ್ವಭಾವದ ಸಂಕೀರ್ಣತೆ, ದಿನನಿತ್ಯದ ಬದುಕಿನ ಆಗುಹೋಗುಗಳಲ್ಲಿ ಅಡಗಿರುವ ಸರಳ ಸಂಗತಿಗಳಲ್ಲಿಯ ಸೂಕ್ಷ್ಮ ವಿಚಾರಗಳು, ಜೊತೆಜೊತೆಗೆ ದುಃಖಾಂತದ ಕಥಾ ಹೂರಣದಲ್ಲಿಯೇ ನುಸುಳುವ ನವಿರಾದ ಹಾಸ್ಯವನ್ನು ಉಣಬಡಿಸುವ ನಿರೂಪಣಾ ವಿಧಾನಗಳು ಅವರನ್ನು ಜಗತ್ತಿನ ಅತಿ ಶ್ರೇಷ್ಠ ಕಥೆಗಾರರ ಪಂಕ್ತಿಯಲ್ಲಿ ನಿಲ್ಲಿಸಿವೆ. ಬರಹಗಾರರಾಗಲಿ, ಕಲಾವಿದರಾಗಲಿ ಜಗತ್ತಿನ ಧೋರಣೆ, ಲೋಪಗಳನ್ನು ಪ್ರಶ್ನಿಸಬೇಕೇ ಹೊರತು ಅವುಗಳಿಗೆ ಸಮರ್ಥನೆ ನೀಡಬಾರದು ಮತ್ತು ವಿಶಿಷ್ಟ ನಿಲುವು, ಸಿದ್ಧಾಂತಗಳಿಗೆ ಉತ್ತರವನ್ನಾಗಲಿ, ಸಮಜಾಯಿಷಿಯನ್ನಾಗಲಿ ಕೊಡಬಾರದು ಎನ್ನುವುದು ಇವರ ನಿಲುವಾಗಿತ್ತು. ಪ್ರಸ್ತುತ ಕಥೆ ‘ತುಂಟ ಹುಡುಗ’ನನ್ನು ಅನುವಾದಿಸಿದ ಪ್ರೊ. ನಾಗರೇಖಾ ಗಾಂವಕರ ಕೃಷಿ ಕುಟುಂಬದಿಂದ ಬಂದವರು. ದಾಂಡೇಲಿಯಲ್ಲಿ ಇಂಗ್ಲಿಷ್ ಉಪನ್ಯಾಸಕಿ. ಏಣಿ, ಪದಗಳೊಂದಿಗೆ ನಾನು, ಬರ್ಫದ ಬೆಂಕಿ, ಪಾಶ್ಚಿಮಾತ್ಯ ಸಾಹಿತ್ಯ ಲೋಕ, ಆಂಗ್ಲ ಸಾಹಿತ್ಯಲೋಕ ‘ಮೌನದೊಳಗೊಂದು ಅಂತರ್ಧಾನ’ ಪ್ರಕಟಿತ ಕೃತಿಗಳು.
ಕಥೆ : ತುಂಟ ಹುಡುಗ | ಮೂಲ : ಆ್ಯಂಟನ್ ಚೆಕಾವ್ | ಕನ್ನಡಕ್ಕೆ : ಪ್ರೊ. ನಾಗರೇಖಾ ಗಾಂವಕರ
ಐವಾನ್ ಲ್ಯಾಪಕಿನ್ ನೋಡೋಕೆ ತುಂಬಾ ಚೆನ್ನಾಗಿದ್ದ ಮತ್ತು ಕೊಂಚ ಸೊಟ್ಟ ಮೂಗುಳ್ಳ ಆ ಹುಡುಗಿ ಎನಾ ಜಂಬ್ಲಿಟ್ಸಿಯಾ, ಇಬ್ಬರೂ ನದಿ ದಂಡೆಯ ಗುಂಟ ಇಳಿಜಾರಿನ ದಾರಿಯಲ್ಲಿ ಸಾಗಿ ಬೆಂಚೊಂದರ ತುದಿಯ ಮೇಲೆ ಕೂತರು. ಆ ಬೆಂಚೋ ನೀರಿನ ಮಟ್ಟಕ್ಕೆ ಇತ್ತು. ದಟ್ಟವಾಗಿ ಹಬ್ಬಿದ ಎಳೆಯ ವಿಲ್ಲೋ ಮರಗಳ ನಡುವೆ ನೀರಿನ ಮಟ್ಟಕ್ಕೆ ಸರಿಯಾಗಿ ನಿಂತಿತ್ತು. ಅದೆಷ್ಟು ಸುಂದರವಾದ ಸ್ಥಳವಾಗಿತ್ತೆಂದರೆ, ಯಾರಾದರೂ ಅಲ್ಲಿ ಹೋಗಿ ಕುಳಿತರೆ ಈ ಜಗತ್ತನ್ನೆ ಮರೆತ ಬಿಟ್ಟ ಹಾಗೇ ಅನಿಸುತ್ತಿತ್ತು. ಕೇವಲ ಮೀನುಗಳು.. ಅಷ್ಟೇ ಮತ್ತು ನೀರಿನ ಮೇಲೆ ಮಿಂಚಿನಂತೆ ಹಾರುವ ಉದ್ದ ಕಾಲಿನ ನೊಣಗಳಿಗೆ ಮಾತ್ರ ಅಲ್ಲಿ ಕೂತವರು ಕಾಣಬಹುದಿತ್ತು. ಈ ಎಳೆಯ ಹುಡುಗರು ಮೀನು ಹಿಡಿಯುವ ರಾಡು, ಬಲೆ, ಗಾಳದ ಹುಳಗಳಿಂದ ತುಂಬಿದ ಕ್ಯಾನು, ಹೀಗೇ ಗಾಳ ಹಾಕೋದಿಕ್ಕೆ ಏನೇನು ಬೇಕೋ ಆ ಸಲಕರಣೆಗಳ ಜೊತೆ ಸಿದ್ದರಾಗಿ ಬಂದಿದ್ರು. ಖುಷಿಯಿಂದ ಬೆಂಚಿನ ಮೇಲೆ ಕೂತು ಗಾಳ ಹಾಕತೊಡಗಿದರು.
“ನನಂಗಂತೂ ತುಂಬಾ ಖುಷಿಯಾಗಿದೆ. ಕೊನೆಗೂ ನಮ್ಮಿಬ್ಬರಿಗೂ ಒಂದು ಏಕಾಂತ ಸಿಕ್ಕಿತು”. ಹಿಂದೆ ತಿರುಗಿ ನೋಡುತ್ತಾ ಲ್ಯಾಪಕಿನ್ ಮಾತಿಗೆ ಶುರುಮಾಡಿದ.
ನಾಗರೇಖಾ ಅವರ ಕವನಗಳನ್ನೂ ಓದಿ : Poetry; ಅವಿತ ಕವಿತೆ : ಪ್ರೀತಿ ಎಂಬ ಜೀವಾಮೃತಕ್ಕೆ ಹಂಬಲಿಸುವಾಗ ಕವಿತೆ ಹುಟ್ಟುತ್ತದೆ
“ಎನಾ, ನಿನಗೊಂದು ವಿಚಾರ ಹೇಳಬೇಕಿತ್ತು ನನಗೆ, ತುಂಬಾ ಮುಖ್ಯವಾದ ವಿಚಾರ. ಅದೇನೆಂದರೆ ಮೊದಲನೆ ಸಲ ನಿನ್ನ ನೋಡ್ದಾಗ.
“ಅಗೋ! ನೋಡು, ನೋಡು.ಮೀನು ಕಚ್ಚಿ ಹಿಡಿಯಿತು!” –
“ನನಗೆ ನನ್ನ ಬಗ್ಗೆ, ನಾನು ಅನ್ನೋದರ ಬಗ್ಗೆ, ನನ್ನ ಅಸ್ತಿತ್ವದ ಬಗ್ಗೆ ಆಗಲೇ ಅರಿವಾಗಿದ್ದು ನೋಡು. ನನ್ನಿಡೀ ಬದುಕಿನ ಶ್ರಮ, ಸಂಘರ್ಷ ಎಲ್ಲಾನೂ ಯಾರಿಗಾಗಿ ಮುಡಿಪಾಗಿಡಬೇಕು ಅಂತ ಬಯಸಿದ್ದೆನೋ , ಆ ಚಂದದ ಬೊಂಬೆ ನೀನಾಗಿದ್ದೆ.’’–
“ಓ! ಕಚ್ಚುತ್ತಾ ಇರೋದು .. ತುಂಬಾ ದೊಡ್ಡದೇ ಅಂತಾ ಕಾಣುತ್ತೇ!”
“ನಿನ್ನ ನೋಡ್ತಾನೇ ನನ್ನ ಜೀವನದಲ್ಲೇ ನಾನು ಮೊದಲ್ನೇ ಸಲ ಪ್ರೀತಿ ಅನ್ನೋದರಲ್ಲಿ ಬಿದ್ದಿದ್ದೆ. ಪೂರಾ ಹುಚ್ಚಾನೂ ಆಗಿದ್ದೆ!”–
“ಈಗಲೇ ಎಳೀಬೇಡ ಬಿಡು, ಇನ್ನಷ್ಟು ಗಟ್ಟಿ ಕಚ್ಚಿ ಹಿಡಿಲಿ!” –
“ಹೇಳು, ಪ್ರಿಯೆ, ನಿನ್ನಲ್ಲಿ ಕೇಳತಾ ಇದ್ದೀನಿ, ನಾನು ಹೀಗೆ ಬಯಸೋದು, ಅದರರ್ಥ ನನ್ನ ಪ್ರೀತಿಗೆ ಪ್ರತಿಯಾಗಿ ಅಂತ ಅಲ್ಲ- ಅದಕ್ಕೆ ನಾನು ಯೋಗ್ಯನೂ ಅಲ್ಲ. ನಾನಂಥಾ ಕನಸೂ ಕಾಣೋಕೆ ಸಾಧ್ಯನೂ ಇಲ್ಲ- ಆದರೂ.. ಹೇಳು ಹಾಗೊಮ್ಮೆ ನಾನಂದುಕೊಂಡರೆ-
“ಎಳೆ!”
ಎನಾ ಜೋರಾಗಿ ಕಿರುಚುತ್ತಾ ಗಾಳದ ಕೊಂಡಿ ಹಿಡಿದ ಕೈಯನ್ನು ಗಾಳಿಯಲ್ಲಿ ಪಕ್ಕನೇ ಮೇಲಕ್ಕೆತ್ತಿದಳು, ಬೆಳ್ಳಿ ಮತ್ತು ಹಸಿರು ಬಣ್ಣ ಮಿಶ್ರಿತ ಮೀನೊಂದು ಸೂರ್ಯನ ಕಿರಣಗಳಿಗೆ ಫಳಫಳನೇ ಹೊಳೆಯುತ್ತಾ ತೂಗಾಡತೊಡಗಿತು.
“ಅದೃಷ್ಟವೋ ಅದೃಷ್ಟ! ಇದು ಪರ್ಚ, ಓಹ್ ಬೇಗ ಬೇಗ, ತಪ್ಪಿಸ್ಕೊಳ್ತಿದೆ!”
ಆಗಲೇ ಪರ್ಚ (ಒಂದು ಜಾತಿಯ ಮೀನು) ಗಾಳದ ಕೊಂಡಿಯಿಂದ ಕೆಳಗೆ ಬಿತ್ತು. ಹುಲ್ಲಿನ ಮೇಲೆ ನದಿ ಕಡೆನೇ ಹೊರಳಾಡ್ತಾ ಸಾಗಿ ಮತ್ತೆ ನೀರಿನಲ್ಲಿ ಜಿಗಿದು ತಟ್ಟನೇ ಮಿಂಚಿ ಮರೆಯಾಯಿತು. ಹೇಗಾದರೂ ಅದನ್ನು ಹಿಡಿಲೇಬೇಕು ಅಂದುಕೊಂಡ ಲ್ಯಾಪಕಿನ್. ಹಾಗೇ ಹೋಗ್ತಾ ಅಚಾನಕ್ ಆಗಿ ಮೀನು ಹಿಡಿಯೋ ಬದಲು ಎನಾಳ ತೋಳು ಹಿಡಿದುಬಿಟ್ಟ. ಅಷ್ಟೇ! ಆಕಸ್ಮಿಕವಾಗಿ ಆಕೆಯ ತೋಳನ್ನು ತನ್ನ ತುಟಿಗಳಿಗೆ ಒತ್ತಿ ಹಿಡ್ಕೊಂಡ. ಎನಾ ಕೊಸರಿಕೊಂಡಳು ಆದರೆ ಅದು ತಡವಾಗಿತ್ತು. ಈಗ ಅವರ ತುಟಿಗಳು ಪರಸ್ಪರ ಆಕಸ್ಮಿಕವಾಗಿಯೇ ಬೆಸೆದುಕೊಂಡವು. ಎಲ್ಲವೂ ಆಕಸ್ಮಿಕ! ಆಕಸ್ಮಿಕ ಎಂಬಂತೆ ನಡೆದುಹೋಗಿತ್ತು. ಪ್ರಥಮ ಚುಂಬನದ ತರುವಾಯ ಇನ್ನೊಂದು ಮತ್ತೊಂದು. ಅದರ ಹಿಂದೆ ಒಬ್ಬರಿಗೊಬ್ಬರು ಮಾತು ಕೊಟ್ಟುಕೊಂಡರು. ಪರಸ್ಪರ ನಂಬಿಕೆ… ನಿಷ್ಠೆ ಕೆಲವೊಮ್ಮೆ ಈ ನಿಷ್ಠೆಯಲ್ಲಿ ಕಾಣುವ ಮೋಸ ಇದೆಲ್ಲದರ ಬಗ್ಗೆ ಮಾತಾಡಿಕೊಂಡರು. ಎಲ್ಲವೂ ಸುಮಧುರ ಕ್ಷಣಗಳು!
ಇದನ್ನೂ ಓದಿ : Literature : ನೆರೆನಾಡ ನುಡಿಯೊಳಗಾಡಿ: ನಾ. ದಾಮೋದರ ಶೆಟ್ಟಿ ಅನುವಾದಿಸಿದ ಮಲಯಾಳಂ ಕಥೆ ‘ಕ್ಷೌರಿಕ’
ಆದರೆ ಈ ಜಗತ್ತಿನಲ್ಲಿ ಯಾವುದೂ ಕೂಡಾ ಪೂರ್ಣಪ್ರಮಾಣದ ಆನಂದದ ಅಸ್ತಿತ್ವ ಇಲ್ಲವೇ ಇಲ್ಲ! ಆ ಆನಂದದೊಳಗೆ ವಿಷವೂ ಕೆಲವು ಸಲ ಅಡಗಿರುತ್ತದೆ ಇಲ್ಲವೇ ಹೊರಗಿನ ಸಂದರ್ಭ ಸಂಗತಿಗಳು ಈ ಆನಂದಕ್ಕೆ ವಿಷ ಬಡಿಸಲೂಬಹುದು. ಇಲ್ಲೂ ಹಾಗೇ ಆಗಿತ್ತು. ಈ ಯುವಜೋಡಿಗಳು ಒಬ್ಬರಿಗೊಬ್ಬರು ಮುದ್ದಿಸಿಕೊಳ್ಳುತ್ತಿದ್ದರು. ಆಗ ತಟ್ಟನೇ ಜೋರಾದ ನಗುವಿನ ಅಟ್ಟಹಾಸ ಕೇಳಿತು. ಆಶ್ಚರ್ಯದಿಂದ ಇಬ್ಬರೂ ನದಿ ಕಡೆ ನೋಡಿದರು: ಅವರ ಮುಂದೆ ಸೊಂಟದವರೆಗಿನ ನೀರಲ್ಲಿ, ಬೆತ್ತಲೆಯಾಗಿಯೇ ಆ ಹುಡುಗ ನಿಂತಿದ್ದ: ಆತ ಕೊಲಿಯಾ, ಶಾಲೆಗೆ ಹೋಗುತ್ತಿರುವ ಎನಾಳ ಸಹೋದರ! ಕಪಟ ನಗು ಚೆಲ್ಲಿ ನಿಂತಿದ್ದ .ಅವನ ಕಣ್ಣುಗಳು ಇವರ ಮೇಲೆ ನೆಟ್ಟಿದ್ದವು.
“ಆಹಾ! ಒಬ್ಬರಿಗೊಬ್ಬರು ಚುಂಬಿಸಿಕೊಳ್ಳತಾ ಇದ್ದೀರಿ ಅಲ್ಲವಾ? ಸರಿ ಸರಿ. ಇದನ್ನು ಅಮ್ಮನಿಗೆ ಹೇಳ್ತೀನಿ’’
ನಾಚಿಕೆಯಿಂದ ಕೆಂಪಾದ ಲ್ಯಾಪಕಿನ್ ತಡವರಿಸುತ್ತಲೇ ಅಂದ, “ನೀನು ಒಳ್ಳೆಯ ಹುಡುಗ, ಹೀಗೆ ನೀನು ಜಾಸೂಸಿ ಸರಿಯಲ್ಲ. ಹೀಗೆ ಅಡಗಿ ಕೂತು ನೋಡುವುದು ಇನ್ನೂ ಕೆಟ್ಟದ್ದು, ನನಗೆ ಗೊತ್ತು ನೀನು ಒಳ್ಳೆಯ ಹುಡುಗ ಮತ್ತು ಧೀರ ಹುಡುಗ ಅಂತ’’
“ಹಾಗಾದರೆ ನನಗೊಂದು ರೂಬಲ್ (ಹಣ) ಕೊಡು ಅಂದರೆ ಮಾತ್ರ ನಾನೇನನ್ನೂ ಯಾರಿಗೂ ಹೇಳುವುದಿಲ್ಲ’’ ಆ ಧೀರ ಹುಡುಗ ಬೇಡಿಕೆ ಇಟ್ಟನಲ್ಲದೆ, “ಆದರೆ ಕೊಡದಿದ್ದರೆ ಮಾತ್ರ ಎಲ್ಲನೂ ಹೇಳಿಬಿಡ್ತಿನಿ” ಅಂದ.
ಲ್ಯಾಪಕಿನ್ ತನ್ನ ಕಿಸೆಯಿಂದ ಒಂದು ರೂಬಲ್ ತೆಗೆದು ಕೊಲಿಯಾಗೆ ಕೊಟ್ಟ. ಹುಡುಗ ತನ್ನ ಒದ್ದೆಒದ್ದೆ ಕೈಗಳಲ್ಲಿಯೇ ಅದನ್ನು ಹಿಡಿದುಕೊಂಡ. ಜೋರಾಗಿ ಶಿಳ್ಳೆ ಹೊಡೆದ. ನೀರಲ್ಲಿ ಈಜುತ್ತಾ ಹೊರಟುಹೋದ. ಆದರೆ ಆ ಹೊತ್ತು ಮತ್ತೆ ಆ ಜೋಡಿ ಚುಂಬಸಿಕೊಳ್ಳಲೇ ಇಲ್ಲ.
ಮಾರನೇ ದಿನ ಕೊಲಿಯಾನಿಗೋಸ್ಕರವೇ ಲ್ಯಾಪಕಿನ್ ಪಟ್ಟಣದಿಂದ ಪೇಂಟ್ ಮಾಡುವ ಡಬ್ಬ ತಂದುಕೊಟ್ಟ. ಜೊತೆಗೊಂದು ಚೆಂಡು. ಅವನ ಅಕ್ಕ ತನ್ನಲ್ಲಿದ್ದ ಎಲ್ಲ ಹಳೆಯ ಮಾತ್ರೆಡಬ್ಬಗಳನ್ನು ಕೊಟ್ಟಳು. ಮುಂದಿನ ಬಾರಿ ಇವರಿಬ್ಬರು ಅವನಿಗೆ ಚಿಕ್ಕನಾಯಿಯ ತಲೆ ಇರುವ ಮೊಳೆಗಳನ್ನು ಕಾಣಿಕೆಯಾಗಿ ಕೊಡಬೇಕಿತ್ತು. ಈ ಆಟವನ್ನಾ ಈ ದುಷ್ಟ ಹುಡುಗ ಸಹಜವಾಗಿಯೇ ಆನಂದಿಸಲಿಕ್ಕೆ ಶುರುಮಾಡಿದ. ಅಷ್ಟೇ ಅಲ್ಲ, ಹೆಚ್ಚುಹೆಚ್ಚು ಕಾಣಿಕೆಗಳ ಪಡೆಯುವ ಸಲುವಾಗಿ ಅವರ ಮೇಲೆ ಜಾಸೂಸಿ ಮಾಡುವ ಕೆಲಸವನ್ನು ಹಾಗೆ ಮುಂದುವರೆಸಿದ. ಲ್ಯಾಪಕಿನ್ ಮತ್ತು ಎನಾ ಎಲ್ಲಿಗೇ ಹೋದರೂ ಅಲ್ಲೆಲ್ಲಾ ಅವರ ಹಿಂಬಾಲಿಸಲಿಕ್ಕೆ ತೊಡಗಿದ. ಅವರಿಬ್ಬರನ್ನೂ ಒಂದು ಕ್ಷಣ ಮಾತ್ರವೂ ಅವರಷ್ಟಕ್ಕೆ ಬಿಡಲಿಲ್ಲ.
“ಕೆಟ್ಟ ಹುಡುಗ! ಇಷ್ಟು ಸಣ್ಣವನಿದ್ದರೂ ಎಷ್ಟು ಲುಚ್ಚಾ!” ಕೋಪದಿ ಹಲ್ಲು ಕಡಿಯುತ್ತಾ ಲ್ಯಾಪಕಿನ್ ಗೊಣಗುತ್ತಿದ್ದ. “ಇದರಿಂದ ನಮಗೇನಿಲ್ಲ ಬಿಡು” ಅಂತಲೂ ಹೇಳುತ್ತಿದ್ದ.
ಹೀಗೆ ಇಡೀ ಜೂನ ತಿಂಗಳು ಕೊಲಿಯಾ ಈ ಪ್ರೇಮಿಗಳ ಗೋಳು ಹೊಯ್ದುಕೊಂಡ. ಮೋಸದ ನಡೆಯಿಂದ ಅವರನ್ನು ಹೆದರಿಸಿದ. ಅವರ ಮೇಲೆ ಗೂಢಾಚಾರ ಮಾಡಿದ. ಮತ್ತೆ ಉಡುಗೊರೆಗಾಗಿ ಸತಾಯಿಸಿದ. ಕೊಟ್ಟಷ್ಟು ಅವನಿಗೆ ಸಾಲುತ್ತಿರಲಿಲ್ಲ. ಕೊನೆಗೊಮ್ಮೆ ಗಡಿಯಾರವನ್ನು ಕಾಣಿಕೆ ನೀಡಲು ಒತ್ತಾಯಿಸಿದ. ಅವರಿಬ್ಬರೂ ಪಾಪ, ಅದನ್ನೂ ತಂದುಕೊಟ್ಟರು.
ಅದೊಂದು ದಿನ ಊಟದ ಸಮಯ ಆಗಿತ್ತು. ಮೇಜಿನ ಮೇಲೆ ದೋಸೆಗಳಿದ್ದವು. ಕೊಲಿಯಾ ಕಣ್ಣು ಮಿಟುಕಿಸಿ ನಗುತ್ತಾ, ಲ್ಯಾಪಕಿನ್‌ಗೆ ಹೇಳಿದ,
“ಎಲ್ಲ ವಿಚಾರ ಅವರಿಗೆ ಹೇಳಿಬಿಡಲಾ? ಆಂ, ಏನು?”
ಈಗಂತೂ ಕೋಪದಿಂದ ಕೆಂಡಾಮಂಡಲನಾದ ಲ್ಯಾಪಕಿನ್. ದೋಸೆಯ ಬದಲಿಗೆ ತನ್ನ ಕರವಸ್ತ್ರವನ್ನೇ ಕೊಲಿಯಾನ ಬಾಯಿಗೆ ತುರುಕಿದ. ಎನಾ ಮೇಜಿನ ಮೇಲೆ ಕೂತವಳು ಅಲ್ಲಿಂದ ಜಿಗಿದು ಬೇರೊಂದು ಕೋಣೆಗೆ ಓಡಿದಳು.
ಇದನ್ನೂ ಓದಿ : Literature: ನೆರೆನಾಡ ನುಡಿಯೊಳಗಾಡಿ; ಕೆಎಸ್ ವೈಶಾಲಿ ಅನುವಾದಿಸಿದ ರುಕಿಯಾ ಶೆಖಾವತ್ ಹುಸೇನ್ ಕಥೆ ‘ಸುಲ್ತಾನಳ ಕನಸು’
ಆ ಯುವಜೋಡಿ ಹಾಗೂ ಹೀಗೂ ಈ ಪರಿಸ್ಥಿತಿಯಲ್ಲಿಯೇ ಅಗಸ್ಟ ಕೊನೆಯವರೆಗೂ ಕಳೆದರು. ಕೊನೆಗೂ ಲ್ಯಾಪಕಿನ್‌ಗೆ ಎನಾಳ ಕೈ ಹಿಡಿಯುವ ತನ್ನ ಆಸೆಯನ್ನು ಅವಳ ಹೆತ್ತವರ ಮುಂದಿಡುವ ದಿನ ಬಂದೇ ಬಿಟ್ಟಿತು. ಆ ದಿನ ಬಹಳ ಸಂತೋಷದ ದಿನವಾಗಿತ್ತು! ಲ್ಯಾಪಕಿನ್ ತನ್ನ ಪ್ರೇಯಸಿಯ ಹೆತ್ತವರಲ್ಲಿ ಈ ವಿಷಯವನ್ನು ಮುಂದಿಟ್ಟ. ಅವರ ಒಪ್ಪಿಗೆ ಪಡಿಯುತ್ತಲೇ, ಲ್ಯಾಪಕಿನ್ ಕೊಲಿಯಾನ ಹುಡುಕಿ ಹೂದೋಟಕ್ಕೆ ಧಾವಿಸಿದ. ಕೊಲಿಯಾ ಕಾಣುತ್ತಿದ್ದಂತೆ ಸಂತೋಷದಲ್ಲಿ ಹೆಚ್ಚೇನು ಅತ್ತೇ ಬಿಟ್ಟ. ಆ ಕಳ್ಳ ಹುಡುಗನ ಕಿವಿಯ ಹಿಡಿದು ಎಳೆದು ತಂದ. ಎನಾ ಕೂಡಾ ಕೊಲಿಯಾನ ಹುಡುಕುತ್ತಾ ಅಲ್ಲಿಗೆ ಬಂದವಳು, ಅವನನ್ನು ನೋಡುತ್ತಲೇ ಆತನ ಇನ್ನೊಂದು ಕಿವಿಎಳೆದು ಗಟ್ಟಿ ಹಿಡಿದಳು. ಕೊಲಿಯಾ ಅಳುತ್ತಾ ತಪ್ಪಿಗೆ ಕ್ಷಮಿಸುವಂತೆ ಬೇಡಿಕೊಳ್ಳತೊಡಗಿದ. ಆ ಸಂತಸ ಪ್ರೇಮಿಗಳ ಮುಖದಲ್ಲಿ ಎದ್ದು ಕಾಣುತ್ತಿತ್ತು.
ಅಯ್ಯೋ! ದೇವರೇ… ಇನ್ನೊಮ್ಮೆ ಇಂಥ ಕೆಲಸ ಮಾಡೋದಿಲ್ಲ. ಅಯ್ಯೋ ಅಮ್ಮಾ, ಕ್ಷಮಿಸಿ ಬಿಡಿ!” ಕೊಲಿಯಾ ಕಾಲಿಗೆ ಬಿದ್ದು ಬೇಡಿಕೊಂಡ.
ಆ ಉಡಾಳ ಹುಡುಗನ ಕಿವಿ ಹಿಡಿದು ಎಳೆಯುತ್ತಿರುವಾಗಿನ ಆ ಕೆಲವೇ ಕೆಲವು ಕ್ಷಣಗಳಲ್ಲಿ ಅನುಭವಿಸಿದ ಖುಷಿಯನ್ನು, ಇಂತಹ ಆನಂದವನ್ನು, ರೋಚಕ ಪರವಶತೆಯನ್ನು ತಮ್ಮ ಅನುರಾಗದ ಸಲ್ಲಾಪದ ಯಾವ ಸಂದರ್ಭದಲ್ಲೂ ಯಾವತ್ತೂ ಅನುಭವಿಸಿರಲಿಲ್ಲವೆಂದು ಆನಂತರ ಆ ಜೋಡಿಗೆ ಅರಿವಾಯಿತು.
ಪ್ರತಿಕ್ರಿಯೆಗಾಗಿ : tv9kannadadigital@gmail.com
ಈ ಅಂಕಣದ ಎಲ್ಲಾ ಅನುವಾದಿತ ಕಥೆಗಳನ್ನು ಓದಲು ಕ್ಲಿಕ್ ಮಾಡಿ
Published On - 1:19 pm, Fri, 10 June 22