ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : ಕ್ರಮೇಣ ನಾನು ಅನುಭವದಿಂದ ತಿಳಿದುಕೊಂಡದ್ದೇನೆಂದರೆ, ಇಂಥ ಹೊತ್ತಿನಲ್ಲಿ ಸಪ್ಪಳವೇ ನನ್ನ ಬಹುದೊಡ್ಡ ಅಸ್ತ್ರವಾಗಬಹುದೆಂದು.ಈ ಸಪ್ಪಳವೇ ತಿರೀಛದಿಂದ ನನ್ನನ್ನು ರಕ್ಷಿಸಬಹುದು. ಆದರೆ ದುರ್ಭಾಗ್ಯವೆಂದರೆ ಕಟ್ಟಕಡೆಯ ಘಳಿಗೆಯಲ್ಲಿ ನನಗೆ ಈ ಅಸ್ತ್ರದ ನೆನಪಾಗುತ್ತಿತ್ತು. ಇನ್ನೇನು ಅದು ನನ್ನನ್ನು ಹಿಡಿಯಬೇಕು ಅನ್ನುವ ಹೊತ್ತಿನಲ್ಲಿ ನನ್ನ ಕೊನೆಯ ಉಸಿರಾಟ ನನಗೆ ಕೇಳಿಸುತ್ತಿತ್ತು. ಸಾವಿನ ಅಮಲೇರಿದ, ನಿರ್ಜೀವ ಆದರೆ ಹೆದರಿಕೆ ತುಂಬಿದ ಕತ್ತಲೆ ನನ್ನನ್ನು ಆವರಿಸುತ್ತಿತ್ತು. ಆಗನಿಸುತ್ತಿತ್ತು: ಕೆಳಗೇನೂ, ಕೆಳಗೆಲ್ಲೂ ಗಟ್ಟಿಮುಟ್ಟಾದ ಆಧಾರವಿಲ್ಲ. ನಾನು ಗಾಳಿಯಲ್ಲಿ ಓಲಾಡುತ್ತಿದ್ದೇನೆ. ನನ್ನ ಅಂತಿಮ ಕ್ಷಣ ಬಂದಂತಹ ಅನಿಸಿಕೆ ಆಗ. ಅಂಥ ನಾಜೂಕಿನ ಹೊತ್ತಿನಲ್ಲಿ ನನಗೆ ನನ್ನ ಅಂತಿಮ ಅಸ್ತ್ರದ ನೆನಪಾಗುತ್ತಿತ್ತು. ನಾನು ಚೀರಿ, ಒದರುತ್ತಿದ್ದೆ. ಈ ಸಪ್ಪಳದಿಂದಲೇ ನಾನು ಕನಸಿನಿಂದ ಹೊರಗೆ ಬರುತ್ತಿದ್ದೆ. ಆಗ ನನಗೆ ಎಚ್ಚರಾಗುತ್ತಿತ್ತು. ಎಷ್ಟೋ ಸಲ ಅವ್ವ ಏನಾಗಿದೆ ನಿನಗೆ ಎಂದು ಕೇಳುತ್ತಿದ್ದಳು. ಆಗ ಆದದ್ದೆಲ್ಲವನ್ನೂ ಸರಿಯಾಗಿ, ಒಂದೊಂದಾಗಿ ತಿಳಿಸಿ ಹೇಳುವ ಭಾಷೆ ನನ್ನ ಬಳಿ ಇರಲಿಲ್ಲ. ನನ್ನೀ ಅಸಾಮರ್ಥ್ಯವನ್ನು ನಾನು ಚೆನ್ನಾಗಿ ಅರಿತಿದ್ದೆ. ಅದಕ್ಕಾಗೇ ಒಂದು ನಮೂನೆಯ ಸಂಕಟ, ಅಸ್ವಸ್ಥತೆ, ವಿವಶತೆ ನನ್ನನ್ನು ಸುತ್ತುಗಟ್ಟುತ್ತಿತ್ತು. ಕೊನೆಗೆ ಸೋತು ನಾನು ಹೇಳುವುದಿಷ್ಟೆ : “ಏನೋವ್ವಾ… ಬಹಳ ಅಂಜಿಸುವ ಕನಸು ಬಿದ್ದಿತ್ತು.”
ಕಥೆ : ತಿರೀಛ | ಹಿಂದಿ ಮೂಲ : ಉದಯ ಪ್ರಕಾಶ | ಕನ್ನಡಕ್ಕೆ : ಮುಕುಂದ ಜೋಷಿ | ಸೌಜನ್ಯ : ದೇಶಕಾಲ ಸಾಹಿತ್ಯ ಪತ್ರಿಕೆ
(ಭಾಗ 2)
ಯಾಕೋ ಏನೋ ನಾನರಿಯೆ. ಆದರೆ ನನ್ನ ಸಂಶಯ ಅಂದರೆ, ನನ್ನ ಕನಸಿನಲ್ಲಿ ಬರುವ, ನನ್ನ ಗುರುತಿದ್ದ ಆ ತಿರೀಛ ಅಪ್ಪನನ್ನು ಕಚ್ಚಿರಬೇಕೆಂದು. ಆದರೆ ಒಂದು ಒಳ್ಳೆಯ ಸಂಗತಿ ಏನೆಂದರೆ ಆ ತಿರೀಛ ಅಪ್ಪನನ್ನು ಕಚ್ಚಿದಾಕ್ಷಣ ಅಪ್ಪ ಅದರ ಬೆನ್ನಟ್ಟಿ ಅದನ್ನು ಕೊಂದಿದ್ದರು. ಓಂದು ವೇಳೆ ಅಪ್ಪ ಅದರ ಬೆನ್ನಟ್ಟಿ ಅದನ್ನು ಕೊಂದಿರದಿದ್ದರೆ ಅದು ಓಡಿಹೋಗಿ ಉಚ್ಚೆ ಹೊಯ್ದು ಅದರಲ್ಲಿ ಹೊರಳಾಡಬಹುದಿತ್ತು. ಅನಂತರ ಅಪ್ಪ ಬದುಕುವುದು ಸಾಧ್ಯವೇ ಇರಲಿಲ್ಲ. ಅದಕ್ಕಾಗೇ ನನಗೆ ಅಪ್ಪನ ಬಗ್ಗೆ ಅಷ್ಟೊಂದು ಚಿಂತೆ ಉಳಿದಿರಲಿಲ್ಲ. ತದ್ವಿರುದ್ಧ, ನನ್ನಲ್ಲಿ ಒಂದು ರೀತಿಯ ಸಮಾಧಾನ ಮತ್ತು ಮುಕ್ತಿಯ ಆನಂದ ಹುಟ್ಟತೊಡಗಿತ್ತು. ಒಂದು ಕಾರಣವೆಂದರೆ ನನಗೆ ಅತ್ಯಂತ ಅಪಾಯಕಾರಿಯಾದ ನನ್ನ ಬಹಳ ಹಳೆಯ ವೈರಿ ಕೊನೆಗೂ ಸತ್ತು ಹೋಗಿತ್ತು. ಅದರ ಕೊಲೆಯಾಗಿತ್ತು. ಇನ್ನು ನಾನು ಕನಸಿನೊಳಗೆ, ಹೊರಗೆ ಎಲ್ಲಿಯೂ ಯಾವುದೇ ಹೆದರಿಕೆ ಇಲ್ಲದೇ ಸೀಟೀ ಹೊಡೆಯುತ್ತ ಅಡ್ಡಾಡಬಹುದಿತ್ತು.
ಆ ರಾತ್ರಿ ಬಹಳ ಹೊತ್ತಿನ ತನಕ ನಮ್ಮ ಜನರ ಗುಂಪು ಅಂಗಳದಲ್ಲಿಯೇ ಕುಳಿತಿತ್ತು. ಅಪ್ಪನಿಗಾಗಿ ಮಂತ್ರ ಮಾಟ ನಡೆದೇ ಇತ್ತು. ಕಚ್ಚಿದ ಗಾಯವನ್ನು ಸೀಳಿ ರಕ್ತವನ್ನು ಹೊರಗೆ ತೆಗೆಯಲಾಗಿತ್ತು. ಮತ್ತು ಬಾವಿಯಲ್ಲಿ ಹಾಕುವ ಕೆಂಪು ಔಷಧ (ಪೊಟ್ಯಾಶಿಯಮ್ ಪರ್‌ಮ್ಯಾಂಗನೇಟ್)ದಿಂದ ಗಾಯವನ್ನು ತುಂಬಲಾಗಿತ್ತು. ನಾನು ನಿಶ್ಚಿಂತನಾಗಿದ್ದೆ.
ಮರುದಿನ ಬೆಳಿಗ್ಗೆ ಅಪ್ಪ ಪಟ್ಟಣಕ್ಕೆ ಹೋಗಬೇಕಾಗಿತ್ತು. ಕೋರ್ಟಿನಲ್ಲಿ ತಾರೀಕಿತ್ತು. ಅವರ ಹೆಸರಿನಲ್ಲಿ ಸಮನ್ಸ್ ಬಂದಿತ್ತು. ನಮ್ಮೂರಿನಿಂದ ಎರಡು ಕಿಲೋ ಮೀಟರ್ ದೂರದ ಮಾರ್ಗದಲ್ಲಿ ಪಟ್ಟಣದ ಕಡೆಗೆ ಹೋಗುವ ಬಸ್ಸುಗಳು ಬರುತ್ತಿದ್ದವು. ಇಡೀ ದಿನದಲ್ಲಿ ಅವುಗಳ ಸಂಖ್ಯೆ ಹೆಚ್ಚೆಂದರೆ ಎರಡೋ ಮೂರೋ. ಆದರೆ ಆ ದಿನದ ಸಂತೋಷದ ಸಂಗತಿ ಎಂದರೆ ಅಪ್ಪ ಆ ಮಾರ್ಗ ಮುಟ್ಟುತ್ತಲೇ ಪಟ್ಟಣದ ಕಡೆಗೆ ಹೊರಟ ಒಂದು ಟ್ರ್ಯಾಕ್ಟರ್ ಅವರಿಗೆ ಸಿಕ್ಕಿತು. ಅದರಲ್ಲಿ ಕುಳಿತ ಜನ ಅಪ್ಪನ ಗುರುತಿನವರು. ಟ್ರ್ಯಾಕ್ಟರ್ ಎರಡು ಎರಡೂ ಮುಕ್ಕಾಲು ಗಂಟೆಯಲ್ಲಿ ಪಟ್ಟಣ ಮುಟ್ಟಬಹುದಿತ್ತು. ಅಂದರೆ ಕೋರ್ಟು ತೆರೆಯುವ ಬಹಳ ಮೊದಲು.
ಹೊರಟಾಗ, ರಸ್ತೆಯ ಮಧ್ಯೆ ತಿರೀಛದ ಮಾತು ಬಂತು. ಅಪ್ಪ ತಮ್ಮ ಮೊಣಕಾಲು ಅವರಿಗೆ ತೋರಿಸಿದರು. ಟ್ರ್ಯಾಕ್ಟರಿನಲ್ಲಿ ಪಂ. ರಾಮ ಅವತಾರರೂ ಇದ್ದರು. ಅವರು ಹೇಳಿದ್ದೇನೆಂದರೆ ತಿರೀಛದ ವಿಷದ ವಿಶೇಷತೆ ಅಂದರೆ ಒಮ್ಮೊಮ್ಮೆ ಹಿಂದಿನ ದಿನ ಅದು ಕಚ್ಚಿದ ಇಪ್ಪತ್ತನಾಲ್ಕು ಗಂಟೆಗಳ ನಂತರ ಅದು ಕಚ್ಚಿದ ಹೊತ್ತಿಗೇನೇ ತನ್ನ ಪ್ರಭಾವ ತೋರಿಸತೊಡಗುತ್ತದೆ. ಅದಕ್ಕಾಗಿ ಅಪ್ಪ ಅಷ್ಟು ನಿಶ್ಚಿಂತನಾಗಿರಬಾರದು. ಟ್ರ್ಯಾಕ್ಟರಿನಲ್ಲಿ ಕುಳಿತ ಜನ ಅಪ್ಪನ ಇನ್ನೊಂದು ತಪ್ಪಿನ ಕಡೆಗೆ ಬೊಟ್ಟು ಮಾಡಿ ತೋರಿಸಿದ್ದರು. ಅವರು ಹೇಳಿದ್ದೆಂದರೆ ಅಪ್ಪ ಅದನ್ನು ಕೊಂದು ಸರಿಯಾದ ಕೆಲಸವನ್ನೇ ಮಾಡಿದ್ದಾರೆ. ಆದರೆ ಅದರ ನಂತರವೂ ತಿರೀಛವನ್ನು ಹಾಗೆಯೇ ಬಿಡಬಾರದಾಗಿತ್ತು. ಅದನ್ನು ಸುಟ್ಟು ಹಾಕಬೇಕಾಗಿತ್ತು.
ಇದನ್ನೂ ಓದಿ : Literature: ನೆರೆನಾಡ ನುಡಿಯೊಳಗಾಡಿ; ಕೆಎಸ್ ವೈಶಾಲಿ ಅನುವಾದಿಸಿದ ರುಕಿಯಾ ಶೆಖಾವತ್ ಹುಸೇನ್ ಕಥೆ ‘ಸುಲ್ತಾನಳ ಕನಸು’
ಅವರೇ ಹೇಳಿದ ಪ್ರಕಾರ ಬಹಳಷ್ಟು ಕ್ರಿಮಿ ಕೀಟಗಳು, ಹುಳ ಹುಪ್ಪಟೆಗಳು, ಜೀವಜಂತುಗಳು ರಾತ್ರಿ ಚಂದ್ರನ ಬೆಳಕಿನಲ್ಲಿ ಪುನಃ ಜೀವ ತಾಳುತ್ತವೆ. ಬೆಳದಿಂಗಳಿನ ಇಬ್ಬನಿ ಮತ್ತು ಚಳಿ ಅವುಗಳಿಗೆ ಅಮೃತ ಸಮಾನ. ಬಹಳಷ್ಟು ಸಲ ಕಂಡಿದ್ದೇನೆಂದರೆ ಯಾವ ಹಾವನ್ನು ರಾತ್ರಿ ಸತ್ತಿದೆ ಅಂತ ಹಾಗೆಯೇ ಬಿಡುತ್ತೇವೆಯೋ ಅದರ ಶರೀರ ಚಂದಿರನ ಶೀತಲತೆಯಲ್ಲಿ ತೊಯ್ದು ಪುನರ್ಜೀವಿತವಾಗಿ ಹರಿಯತೊಡಗುತ್ತದೆ. ಮತ್ತದು, ಅಲ್ಲಿಂದ ಎಲ್ಲಿಗೋ ಹೋಗುತ್ತದೆ.
ನಂತರ ಅದು ಸೇಡು ತೀರಿಸಿಕೊಳ್ಳುವುದಕ್ಕಾಗಿ ಹೊಂಚು ಹಾಕುತ್ತಿರುತ್ತದೆ. ಟ್ರ್ಯಾಕ್ಟರಿನಲ್ಲಿ ಕುಳಿತ ಜನರ ಒಂದು ಅನುಮಾನವೆಂದರೆ ರಾತ್ರಿ ಮರುಹುಟ್ಟು ಪಡೆದ ಆ ತಿರೀಛ ಎದ್ದು, ಉಚ್ಚೆ ಹೊಯ್ದು ಅದರಲ್ಲಿ ಹೊರಳಾಡಿರಲಿಕ್ಕಿಲ್ಲ ತಾನೇ? ಒಂದು ವೇಳೆ ಹಾಗಾಗಿದ್ದರೆ 24 ಗಂಟೆ ಕಳೆಯುತ್ತಲೇ ತಿರೀಛದ ಜೀವ ಕಬಳಿಸುವ ವಿಷ ಅಪ್ಪನ ಶರೀರದಲ್ಲಿ ಏರತೊಡಗಬಹುದು. ಅದಕ್ಕಾಗೇ ಅವರು ಅಪ್ಪನಿಗೆ ಒಂದು ಸಲಹೆಯನ್ನು ನೀಡಿದರು. ಅಪ್ಪ ಆಗಿಂದಾಗ್ಯೆ ಊರಿಗೆ ಮರಳಬೇಕು. ಮತ್ತು ಸಂಯೋಗದಿಂದ ತಿರೀಛದ ಹೆಣ ಇನ್ನೂ ಅಲ್ಲೇ ಬಿದ್ದಿದ್ದರೆ ಅದನ್ನು ಕೂಡಲೇ ಸುಟ್ಟು ಬೂದಿ ಮಾಡಬೇಕು. ಆದರೆ ಕೋರ್ಟಿನ ತಾರೀಕಿನ ಮಹತ್ವದ ಬಗ್ಗೆ ಅಪ್ಪ ಅವರಿಗೆ ಹೇಳಿದರು. ಇದು ಅವರಿಗೆ ಬಂದ ಮೂರನೆಯ ಸಮನ್ಸು. ಒಂದು ವೇಳೆ ಈ ಸಲವೂ ಅವರು ಕೋರ್ಟಿನಲ್ಲಿ ಹಾಜರಾಗದಿದ್ದರೆ ಅವರ ಹೆಸರಿನಲ್ಲಿ ಜಾಮೀನಿಲ್ಲದ ವಾರಂಟ್ ಹೊರಡಬಹುದೆಂಬ ಹೆದರಿಕೆ ಅವರಿಗೆ. ಈ ಮೊದಲು ಸಲ್ಲಿಸಿದ ಎರಡು ತಾರೀಕುಗಳ ಫೀ ಕೂಡ ವಕೀಲರಿಗೆ ಕೊಟ್ಟಿರಲಿಲ್ಲ.
ಇದೊಂದು ವಿಚಿತ್ರವಾದ ಸ್ಥಿತಿಯಾಗಿತ್ತು. ಒಂದು ವೇಳೆ ಅಪ್ಪ ಆ ತಿರೀಛದ ಹೆಣ ಸುಡುವುದಕ್ಕಾಗಿ ಟ್ರ್ಯಾಕ್ಟರಿನಿಂದ ಇಳಿದು ಊರ ಕಡೆಗೆ ಹೊರಟಿದ್ದರೆ ಜಾಮೀನಿಲ್ಲದ ವಾರಂಟಿನ ಕಾರಣ ಅವರನ್ನು ಬಂಧಿಸಲೂ ಸಾಧ್ಯವಿತ್ತು. ಮತ್ತು ನಾವು ನಮ್ಮ ಮನೆ ಕಳೆದು ಕೊಳ್ಳಬಹುದಿತ್ತು. ಕೋರ್ಟ್ ನಮ್ಮ ವಿರುದ್ಧವಾಗಬಹುದಿತ್ತು.
ಆದರೆ ಪಂ. ರಾಮ ಅವತಾರ ಬರೇ ಒಬ್ಬ ವೈದ್ಯ ಮಾತ್ರ ಆಗಿರಲಿಲ್ಲ. ಜ್ಯೋತಿಷ್ಯ, ಪಂಚಾಂಗದ ಹೊರತಾಗಿ ವನಸ್ಪತಿಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡಿದ್ದರು. ಅವರೇ ಸೂಚಿಸಿದ ಒಂದು ಉಪಾಯ ಹೇಗಿತ್ತೆಂದರೆ ಅದರಿಂದ ಅಪ್ಪ ಕೋರ್ಟಿನಲ್ಲೂ ಹಾಜರಾಗಬಹುದು ಮತ್ತು ತಿರೀಛದ ವಿಷದಿಂದ ಇಪ್ಪತ್ತನಾಲ್ಕು ಗಂಟೆಗಳ ನಂತರವೂ ಬಚಾವಾಗಬಹುದು. ಅವರು ಹೇಳಿದ್ದೆಂದರೆ ಶಾಸ್ತ್ರ ಸಂಹಿತೆಯ ಸೂತ್ರದ ಪ್ರಕಾರ ವಿಷವೇ ವಿಷಕ್ಕೂ ಔಷಧಿಯಾಗುತ್ತದೆ. ಒಂದು ವೇಳೆ ಧತ್ತೂರಿಯ ಬೀಜಗಳು ಸಿಕ್ಕರೆ ಅದು ತಿರೀಛದ ವಿಷದ ಪ್ರಭಾವವನ್ನು ಅಳಿಸಿ ಹಾಕಬಹುದು.
ಇದನ್ನೂ ಓದಿ : Literature: ನೆರೆನಾಡ ನುಡಿಯೊಳಗಾಡಿ; ಮರಾಠಿ ಕಥೆಗಾರ ಜಿಎ ಕುಲಕರ್ಣಿಯವರ ‘ಚಂದ್ರಾವಳ’ ಕಥೆ
ಮುಂದಿನ ಊರಾದ ಸಾಮಸಪುರದಲ್ಲಿ ಟ್ರ್ಯಾಕ್ಟರನ್ನು ನಿಲ್ಲಿಸಲಾಯಿತು. ಒಬ್ಬ ಗಾಣಿಗನ ಹೊಲದಲ್ಲಿ ಸಿಕ್ಕ ಧತ್ತೂರಿಯ ಬೀಜಗಳನ್ನು ಕುಟ್ಟಿ ಪುಡಿ ಪುಡಿ ಮಾಡಿ ಹಳೆಯ ತಾಮ್ರದ ನಾಣ್ಯದ ಜೊತೆಗೆ ಕುದಿಸಿ ಕಷಾಯ ತಯಾರಿಸಲಾಯಿತು. ಕಷಾಯ ಬಹಳ ಕಹಿಯಾದ್ದರಿಂದ ಚಹಾದ ಜೊತೆಗೆ ಅದನ್ನು ಬೆರಸಿ ಅಪ್ಪನಿಗೆ ಕುಡಿಸಲಾಯಿತು. ನಂತರ ಎಲ್ಲರೂ ನಿಶ್ಚಿಂತರಾದರು. ಒಂದು ಬಹು ದೊಡ್ಡ ಗಂಡಾಂತರದಿಂದ ಅಪ್ಪನನ್ನು ಹೊರತರುವ ಪ್ರಯತ್ನ ನಡೆದಿತ್ತು.
ಹಾಗೆ ನೋಡಿದರೆ ನನಗೆ ತಿರೀಛದ ಬಗ್ಗೆ ಮೂರನೆಯ ಒಂದು ಸಂಗತಿಯೂ ತಿಳಿದಿತ್ತು. ಈ ಸಂಗತಿ ಹಾವಿನ ಒಂದು ಸಂಗತಿಯನ್ನು ನೆನಪಿಗೆ ತರುವಂಥದ್ದು. ಬಹುಶಃ ಈ ಕಾರಣಕ್ಕಾಗೇ ನಂತರ ಕ್ಯಾಮೆರಾದ ಶೋಧ ಆಗಿರಬಹುದು.
ಒಂದು ವೇಳೆ ಹಾವನ್ನು ಯಾರಾದರೂ ಹೊಡೆಯುತ್ತಿದ್ದರೆ ಆಗ ಅದು ಕೊನೆಯ ಸಲ ತನ್ನ ಜೊತೆಗಾರನ ಮುಖವನ್ನು ಬಹಳ ಧ್ಯಾನದಿಂದ, ತದೇಕ ಚಿತ್ತದಿಂದ ನೋಡುತ್ತದೆ. ಮನುಷ್ಯ ಅದರ ಕೊಲೆ ಮಾಡುತ್ತಿರುತ್ತಾನೆ. ಮತ್ತು ಹಾವು ಸ್ಥಿರ ದೃಷ್ಟಿಯಿಂದ ಆ ಮನುಷ್ಯನ ಮುಖದ ಒಂದೊಂದು ಗೆರೆಗಳನ್ನು ತನ್ನ ಕಣ್ಣಿನ ಒಳಗಿನ ಪರದೆಯಲ್ಲಿ ಸೆರೆ ಹಿಡಿಯುತ್ತ ಹೋಗುತ್ತದೆ. ಹಾವಿನ ಸಾವಿನ ನಂತರ ಅದರ ಕಣ್ಣಿನೊಳಗಡೆಯ ಪರದೆಯ ಮೇಲೆ ಆ ಮನುಷ್ಯನ ಮುಖದ ಚಿತ್ರ ಸ್ಪಷ್ಟವಾಗಿ ಅಂಕಿತಗೊಂಡಿರುತ್ತದೆ. ನಂತರ, ಅದನ್ನು ಕೊಂದವ ಅಲ್ಲಿಂದ ಹೋದ ಮೇಲೆ ಇನ್ನೊಂದು ಹಾವು ಬಂದು ಅದರ ಕಣ್ಣಿನೊಳಗಡೆ ಹಣಿಕಿ ಹಾಕುತ್ತದೆ. ಈ ರೀತಿ ಕೊಲೆಗಾರನ ಗುರುತು ಸಿಗುತ್ತದೆ. ನಂತರ ಎಲ್ಲ ಹಾವುಗಳೂ ಗುರುತಿಸತೊಡಗುತ್ತವೆ. ಆ ಮೇಲೆ ಆತ ಎಲ್ಲಿಯೇ ಹೋದರೂ ಕೊಲೆಯ ಸೇಡು ತೀರಿಸಿಕೊಳ್ಳುವ ಪ್ರತೀಕ್ಷೆಯಲ್ಲಿ ಅವೆಲ್ಲ ಇರುತ್ತವೆ. ಹೀಗೆ ಪ್ರತೀ ಹಾವು ಅವನ ವೈರಿ ಆಗುತ್ತದೆ.
ನನಗೊಂದು ಸಂಶಯವೆಂದರೆ ಆ ಸತ್ತ ತಿರೀಛದ ಕಣ್ಣಿನ ಒಳಗಿನ ಪರದೆಯ ಮೇಲೆ ಅಪ್ಪನ ಮುಖ ಅಂಕಿತವಾಗಿರಲಿಕ್ಕಿಲ್ಲ ತಾನೆ? ಇನ್ನೊಂದು ತಿರೀಛ ಅಲ್ಲಿ ಹೋಗಿ ಆ ಹೆಣದ ಕಣ್ಣಲ್ಲಿ ಹಣಿಕಿ ಹಾಕಿ ಗುರುತಿಸಬಹುದು. ಅಪ್ಪ ಆಗ ಯಾಕೆ ಜಾಗರೂಕನಾಗಿರಲಿಲ್ಲ ಅನ್ನುವುದೇ ನನ್ನನ್ನು ಅಸ್ವಸ್ಥನನ್ನಾಗಿ ಮಾಡಿತು; ಬೇಚೈನುಗೊಳಿಸಿ, ಚಿಂತೆ ಮೂಡಿಸಿತು. ತಿರೀಛವನ್ನು ಕೊಲ್ಲುವುದಷ್ಟೇ ಅಲ್ಲ, ಅದರ ಕಣ್ಣುಗಳನ್ನು ತುಳಿದು, ಮೆಟ್ಟಿ, ಒಡೆಯಬೇಕಾಗಿತ್ತು.
ಆದರೆ ಈಗೇನು ಮಾಡುವುದು ಸಾಧ್ಯ?
ಅಪ್ಪ ಪಟ್ಟಣಕ್ಕೆ ಹೋಗಿದ್ದರು. ಮತ್ತು ನನ್ನ ಮುಂದಿದ್ದ ಪ್ರಶ್ನೆ, ಗೊಂದಲ, ಆಹ್ವಾನ ಎಂದರೆ ಊರಿಗೆ ಹತ್ತಿರದ ಅಡವಿಯಲ್ಲಿ ಆ ತಿರೀಛವನ್ನು ಅಪ್ಪ ಎಲ್ಲಿ ಹೊಡೆದು ಕೊಂದಿದ್ದರೋ ಆ ಸ್ಥಳ ಹುಡುಕಿ ತೆಗೆಯುವುದು. ನಾನು ಥಾನೂನ ಜೊತೆಗೆ ಬಾಟ್ಲಿಯಲ್ಲಿ ಚಿಮಿಣಿ ಎಣ್ಣೆ , ಕಡ್ಡೀ ಪೆಟ್ಟಿಗೆ, ಕೋಲು ಹಿಡಿದುಕೊಂಡು ಅದನ್ನು ಹುಡುಕುತ್ತ ಅಲೆದಾಡತೊಡಗಿದೆ. ನಾನದನ್ನು ಅರಿತಿದ್ದೆ. ಚೆನ್ನಾಗಿ ಗುರುತಿಸಿದ್ದೆ. ಯಾಕೋ ಏನೋ, ಥಾನೂ ನಿರಾಶನಾಗಿದ್ದ. ನಂತರ ನನಗೆ ಅಚಾನಕ ಅನ್ನಿಸಿದ್ದೆಂದರೆ ಈ ಅಡವಿ ನನಗೆ ಬಹಳ ಪರಿಚಯದ್ದು. ಪ್ರತಿಯೊಂದು ಗಿಡ ಗುರುತಿನವು. ಇಲ್ಲಿಂದಲೇ ಬಹಳ ಸಲ ಕನಸಿನಲ್ಲಿ ನಾನು ತಿರೀಛದಿಂದ ಬಚಾವಾಗಲು ಓಡುತ್ತಿದ್ದೆ. ನಾನು ಕಣ್ಣು ಪಿಳುಕಿಸದೇ, ದಿಟ್ಟಿಸಿ ದಿಟ್ಟಿಸಿ ನೋಡಿದೆ. ಹೌದು, ಹೌದು. ಇದು ಅದೇ ಸ್ಥಳ. ಈ ಮೊದಲು ನಾನು ನೋಡಿದ್ದು. ನಾನು ಥಾನೂಗೆ ಹೇಳಿದೆ: ಇಲ್ಲಿಂದಲೇ ಒಂದು ಕಾಲುವೆ ದೂರ ದಕ್ಷಿಣದ ಕಡೆಗೆ ಹರಿಯುತ್ತದೆ. ಕಾಲುವೆ ಮೇಲೆ ದೊಡ್ಡ ದೊಡ್ಡ ಬಂಡೆಗಲ್ಲುಗಳಿದ್ದಲ್ಲಿ ಒಂದು ಯಾವುದೋ ಬಹಳ ಹಳೆಯ ಗಿಡವಿದೆ. ಅದರಲ್ಲಿ ದೊಡ್ಡದೊಡ್ಡ ಜೇನುಗೂಡುಗಳಿವೆ. ಅವುಗಳನ್ನು ನೋಡಿದರೆ ಅವೆಲ್ಲ ಎಷ್ಟೋ ಶತಮಾನಗಳ ಹಿಂದಿನವು ಅನ್ನಿಸುತ್ತದೆ. ನನಗೆ ಅಲ್ಲಿನ ಆ ಕಂದುಬಣ್ಣದ ಬಂಡೆಗಲ್ಲು ಪರಿಚಯದ್ದು. ಅದು ಇಡೀ ಮಳೆಗಾಲ ಕಾಲುವೆಯಲ್ಲಿ ಅರ್ಧ ಮುಳುಗಿರುತ್ತದೆ. ಮತ್ತು ಮಳೆಗಾಲ ಮುಗಿಯುತ್ತಲೇ ಅದು ತಲೆ ಎತ್ತಿ ಹೊರಗೆ ಬರುತ್ತದೆ. ಅದರ ಸಣ್ಣ ಸಣ್ಣ ಸಂದಿಗೊಂದಿಗಳಲ್ಲಿ ಸಹ ಕೆಸರು; ತರತರದ ಚಿತ್ರವಿಚಿತ್ರ ವನಸ್ಪತಿಗಳು; ಬಂಡೆಗಲ್ಲಿನ ಮೇಲೆ ಹಸುರು ಹಾವಸೆಯ ಒಂದು ತೆಳ್ಳಗಿನ ಪದರ. ಇದೇ ಬಂಡೆಗಲ್ಲಿನ ಒಂದು ಪಾಳು ಬಿದ್ದಂತಹ ಸ್ಥಳದಲ್ಲಿ ಆ ತಿರೀಛ ಇರುತ್ತಿತ್ತು. ಇದನ್ನು ನಾನು ಹೇಳಹೊರಟರೆ ಥಾನೂ ಇದನ್ನು ನನ್ನ ಕಲ್ಪನಾವಿಲಾಸ ಅನ್ನುತ್ತಿದ್ದ.
ಇದನ್ನೂ ಓದಿ : New Book: ಅಚ್ಚಿಗೂ ಮೊದಲು; ಕೆಕೆ ಗಂಗಾಧರನ್ ಅನುವಾದಿಸಿದ ‘ಬಿರಿಯಾನಿ’ ಕಥಾಸಂಕಲನ ಸದ್ಯದಲ್ಲೇ ಓದಿಗೆ
ಆದರೆ ಬಹುಬೇಗ ಆ ಕಾಲುವೆ ಕಂಡಿತು. ಆ ಹಳೆಯ ಮುದುಕ ಗಿಡ, ಅದರಲ್ಲಿನ ಜೇನುತುಪ್ಪದ ಕೊಡೆಗಳು, ಮತ್ತು ಆ ಬಂಡೆಗಲ್ಲು ಕೂಡ. ಆಚೆ ನೆಲದ ಮೇಲೆ ಬಿದ್ದುಕೊಂಡಿತ್ತು ಆ ತಿರೀಛದ ಹೆಣ. ಅದನ್ನು ನೋಡಿ ನನ್ನೊಳಗೆ ಹಿಂಸೆಯ ಮತ್ತು ಆನಂದದ ಝನ್ ಝನ್ ಝಂಕಾರ ಹರಿಯತೊಡಗಿತು.
ಥಾನೂ ಮತ್ತು ನಾನು ಒಣಗಿದ ಎಲೆ ಮತ್ತು ಕಟ್ಟಿಗೆಯನ್ನು ಜಮಾಯಿಸಿದೆವು. ಅವುಗಳ ಮೇಲೆ ಬಹಳಷ್ಟು ಚಿಮಣಿ ಎಣ್ಣೆಯನ್ನು ಸುರುವಿ ಬೆಂಕಿ ಹಚ್ಚಿದೆವು. ತಿರೀಛ ಅದರಲ್ಲಿ ಸುಡುತ್ತಿತ್ತು. ಸುಡುವ ವಾಸನೆ ಗಾಳಿಯಲ್ಲಿ ಹಬ್ಬತೊಡಗಿತ್ತು. ನನ್ನ ಮನಸ್ಸು ಜೋರಾಗಿ ಚೀರುವಂತಾಯಿತು. ಆದರೆ ಹೆದರಿದೆ ನಾನು. ಎಲ್ಲಿಯಾದರೂ ಎಚ್ಚರಾಗಿ ಇದೊಂದು ಕನಸೆಂದು ಸಾಬೀತಾಗಬಾರದೆಂದು. ನಾನು ಥಾನೂನನ್ನು ನೋಡಿದೆ. ಆತ ಅಳುತ್ತಿದ್ದ.
ನನ್ನ ಕನಸಿನಲ್ಲಿ ಇದೇ ಸ್ಥಳದಿಂದ ಹೊರಗೆ ಬಂದು ಆ ತಿರೀಛ ನನ್ನನ್ನು ಬೆನ್ನಟ್ಟಿ ಬರುತ್ತಿತ್ತು. ಆಶ್ಚರ್ಯವೆಂದರೆ ಇಷ್ಟೊಂದು ದಿನಗಳಿಂದ ಅದು ನನ್ನನ್ನು ಬೆನ್ನಟ್ಟಿ ಬರುತ್ತಿದ್ದರೂ, ಅದು ಇರುವ ಜಾಗ ನನಗೆ ಗೊತ್ತಿದ್ದರೂ ನಾನೆಂದೂ ಅದನ್ನು ಕೊಲ್ಲುವ ಪ್ರಯತ್ನ ಮಾಡಿರಲಿಲ್ಲ.
ಅದಕ್ಕಾಗೇ ಇಂದು ನನಗೆ ಅಪಾರ ಆನಂದವಾಗಿತ್ತು.
ಪಂ. ರಾಮ ಅವತಾರರ ಹೇಳಿಕೆಯ ಪ್ರಕಾರ ಟ್ರ್ಯಾಕ್ಟರ್ ಸರಿಯಾಗಿ ಒಂಭತ್ತೂ ಮುಕ್ಕಾಲಕ್ಕೆ ಸುಂಕದ ಕಟ್ಟೆಯನ್ನು ದಾಟಿತ್ತು. ಅಲ್ಲಿ ಸುಂಕ ಕೊಡುವುದಕ್ಕಾಗಿ ಕೆಲವು ಸಮಯ ನಿಲ್ಲಬೇಕಾಗಿತ್ತು. ಟ್ರ್ಯಾಕ್ಟರ್ನಿಂದ ಇಳಿದು ಅಪ್ಪ ಮೂತ್ರ ವಿಸರ್ಜನೆಗಾಗಿ ಹೋಗಿದ್ದರು. ಮರಳಿದಾಗ ತಲೆ ಸುತ್ತುತ್ತಿದೆ ಎಂದು ಹೇಳಿದ್ದರು. ಆಗ ಕಷಾಯ ಕುಡಿದು ಸಾಧಾರಣ ಒಂದೂವರೆ ಗಂಟೆಯಾಗಿತ್ತು.
ಟ್ರ್ಯಾಕ್ಟರ್ ಅಪ್ಪನನ್ನು ಪಟ್ಟಣದಲ್ಲಿ ಇಳಿಸಿದಾಗ ಹತ್ತು ಹೊಡೆದು ಐದೋ ಏಳೋ ಮಿನಿಟುಗಳಾಗಿದ್ದುವು. ಟ್ರ್ಯಾಕ್ಟರಿನಲ್ಲಿ ಕುಳಿತ ಪಲಡಾ ಊರಿನ ಮಾಸ್ತರ ನಂದಲಾಲರ ಪ್ರಕಾರ ಟ್ರ್ಯಾಕ್ಟರ್ ಅಪ್ಪನನ್ನು ಮಿನರ್ವಾ ಥಿಯೇಟರಿನ ಕೂಟದಲ್ಲಿ ಇಳಿಸಿದಾಗ ಅವರು ಹೇಳಿದ್ದು: ಗಂಟಲು ಒಣಗುತ್ತಿದೆ ಎಂದು. ಸ್ವಲ್ಪ ಉದ್ವಿಗ್ನರೂ ಆಗಿದ್ದರು. ಕಾರಣ ಕೋರ್ಟಿಗೆ ಹೋಗುವ ಹಾದಿ ಅವರಿಗೆ ಗೊತ್ತಿರಲಿಲ್ಲ. ಮತ್ತು ಹೆಜ್ಜೆ ಹೆಜ್ಜೆಗೆ ಪಟ್ಟಣದ ಜನರನ್ನು ಕೇಳುತ್ತ ಹೋಗುವುದು ಅವರಿಗೆ ಕೇವಲ ತ್ರಾಸದಾಯಕವಲ್ಲ, ಪೀಡಾದಾಯಕವೂ ಆಗಿತ್ತು.
*
(ಮುಕುಂದ ಜೋಷಿ ಫೋಟೋ ಸೌಜನ್ಯ : ಜಯಂತ ಕಾಯ್ಕಿಣಿ)
ಈ ಕಥೆಯ ಎಲ್ಲಾ ಭಾಗಗಳು ಮತ್ತು ಇನ್ನಿತರ ಅನುವಾದಿತ ಕಥೆಗಳನ್ನು ಓದಲು ಕ್ಲಿಕ್ ಮಾಡಿ
Published On - 12:34 pm, Fri, 17 June 22