Literature: ನೆರೆನಾಡ ನುಡಿಯೊಳಗಾಡಿ; ಕಾಫ್ಕಾ ಕಥೆ ‘ಹಳೆಯ ಹಸ್ತಪ್ರತಿ’ ಅನುವಾದಿಸಿದ್ದಾರೆ ಎಚ್ಎಸ್ ರಾಘವೇಂದ್ರ ರಾವ್

|

Updated on: Mar 04, 2022 | 10:15 AM

Franz Kafka -An Old Leaf : ದೇಶವನ್ನು ಕಾಪಾಡಿಕೊಳ್ಳೋದು ಹೇಗೆ ಅಂತ ನಮಗೆ ಗೊತ್ತಿಲ್ಲ. ಉಡಾಫೆಯಲ್ಲೇ ಕಾಲ ಕಳೆದುಹೋಯ್ತು. ದಿನದಿನದ ಕೆಲಸಗಳಲ್ಲಿ ಮುಳುಗಿಬಿಟ್ಟಿದ್ವಿ. ಆದರೆ, ಈಚೆಗೆ ಆಗ್ತಾ ಇರೋ ಘಟನೆಗಳು ಮನಸ್ಸು ಕೆಡಿಸೋದಕ್ಕೆ ಶುರುಮಾಡಿವೆ.

Literature: ನೆರೆನಾಡ ನುಡಿಯೊಳಗಾಡಿ; ಕಾಫ್ಕಾ ಕಥೆ ‘ಹಳೆಯ ಹಸ್ತಪ್ರತಿ’ ಅನುವಾದಿಸಿದ್ದಾರೆ ಎಚ್ಎಸ್ ರಾಘವೇಂದ್ರ ರಾವ್
ಲೇಖಕ ಫ್ರಾನ್ಝ್ ಕಾಫ್ಕಾ, ಅನುವಾದಕ ಡಾ. ಎಚ್. ಎಸ್. ರಾಘವೇಂದ್ರ ರಾವ್
Follow us on

ನೆರೆನಾಡ ನುಡಿಯೊಳಗಾಡಿ | NereNaada Nudiyolagaadi :  ಫ್ರಾನ್ಸ್  ಕಾಫ್ಕಾ ಹುಟ್ಟಿದ್ದು ಬೊಹೇಮಿಯಾದ ರಾಜಧಾನಿ ಪ್ರೇಗ್​ನ ಮಧ್ಯಮವರ್ಗದ ಯಹೂದಿ ಕುಟುಂಬದಲ್ಲಿ. ತಂದೆ ಹರ್ಮನ್ ಉದ್ಯಮಿ. ತಾಯಿ ಜೂಲಿ. ಹರ್ಮನ್​ಗಿಂತ ಜೂಲಿ ಹೆಚ್ಚು ವಿದ್ಯಾವಂತೆ. ಮೊದಲ ಮಗನಾಗಿ ಹುಟ್ಟಿದ ಕಾಫ್ಕಾನ ಬೆನ್ನಿಗೆ ಮೂವರು ತಂಗಿಯರಿದ್ದರು. ವ್ಯಾಪಾರಕ್ಕಾಗಿ ತಂದೆತಾಯಿ ಪ್ರವಾಸದಲ್ಲಿರುತ್ತಿದ್ದುದರಿಂದ ದಾದಿಗಳ ಆರೈಕೆಯಲ್ಲೇ ಅವರು ಹೆಚ್ಚು ಬೆಳೆದದ್ದು. ಅಪ್ಪನ ಅಧಿಕಾರಯುತ ಧೋರಣೆ ಕಾಫ್ಕಾಗೆ ಹಿಡಿಸುತ್ತಿರಲಿಲ್ಲವೆಂಬುದನ್ನು ಅವರ ಬರೆವಣಿಗೆಗಳಲ್ಲಿ ಕಾಣಬಹುದು. ಮಾತೃಭಾಷೆ ಜರ್ಮನ್ ಆಗಿದ್ದರೂ, ಝೆಕ್ ಭಾಷೆಯಲ್ಲೂ Franz Kafka  ಪ್ರಾವಿಣ್ಯ ಹೊಂದಿದ್ದರು.  ಅವರು ಬದುಕಿದ್ದಾಗ ಪ್ರಕಟಿಸಿದ್ದು ಸಣ್ಣ ಕಥೆಗಳನ್ನು ಮತ್ತು ‘ದಿ ಮೆಟಮಾರ್ಫಾಸಿಸ್’ ಕಾದಂಬರಿ. ಆದರೆ ತಮ್ಮ ಸಾವಿನ ದಿನಗಳು ಹತ್ತಿರವಾಗುತ್ತಿದ್ದಂತೆ, ಸ್ನೇಹಿತ ಮ್ಯಾಕ್ಸ್ ಬ್ರಾಡ್​ಗೆ, ‘ನಾನು ಬರೆದ ಪತ್ರ, ನನಗೆ ಬಂದ ಪತ್ರ, ಡೈರಿ, ಫೋಟೋ, ಕೈಬರಹವನ್ನೆಲ್ಲಾ ಸುಡಬೇಕು’ ಎಂದು ವಿನಂತಿಸಿಕೊಂಡರು. ಆದರೆ ಹಾಗಾಗದೆ, ಆನಂತರವೇ ಅವರ ಕೃತಿಗಳು ಪ್ರಕಟವಾಗಿದ್ದು ಹೆಚ್ಚು. ಈಗ ಇಲ್ಲಿರುವ ಕಥೆ 1917ರಲ್ಲಿ ಬರೆದಿದ್ದರೂ ಇಂದಿಗೂ ಪ್ರಸ್ತುತ.

ಕಥೆ : ಹಳೆಯ ಹಸ್ತಪ್ರತಿ | ಮೂಲ : ಫ್ರಾನ್ಝ್ ಕಾಫ್ಕಾ | ಕನ್ನಡಕ್ಕೆ : ಡಾ. ಎಚ್. ಎಸ್. ರಾಘವೇಂದ್ರ ರಾವ್

(ಭಾಗ 1)

ಹೌದು. ದೇಶವನ್ನು ಕಾಪಾಡಿಕೊಳ್ಳೋದು ಹೇಗೆ ಅಂತ ನಮಗೆ ಗೊತ್ತಿಲ್ಲ. ಉಡಾಫೆಯಲ್ಲೇ ಕಾಲ ಕಳೆದುಹೋಯ್ತು. ಇಲ್ಲಿಯ ತನಕ ಅದರ ಬಗ್ಗೆ ತಲೆಕೆಡಿಸಿಕೊಂಡೇ ಇಲ್ಲ. ದಿನದಿನದ ಕೆಲಸಗಳಲ್ಲಿ ಮುಳುಗಿಬಿಟ್ಟಿದ್ವಿ. ಆದರೆ, ಈಚೆಗೆ ಆಗ್ತಾ ಇರೋ ಘಟನೆಗಳು ಮನಸ್ಸು ಕೆಡಿಸೋದಕ್ಕೆ ಶುರುಮಾಡಿವೆ.

ನಾನು ಚಮ್ಮಾರ. ನನ್ನ ಅಂಗಡಿ, ಅರಮನೆ ಎದುರುಗಡೆ ಇರೋ ಚೌಕದಲ್ಲಿದೆ. ದಿನಾ ಬೆಳಿಗ್ಗೆ ಸೂರ್ಯ ಹುಟ್ಟೋ ಹೊತ್ತಿಗೆ, ಅಂಗಡಿ ಬಾಗಿಲು ತೆಗೀತೀನಿ. ಅಷ್ಟು ಹೊತ್ತಿಗಾಗಲೇ, ಸರ್ಕಲ್ಲಿಗೆ ಬರೋ ಎಲ್ಲಾ ದಾರಿಗಳೂ ಬಂದ್. ಎಲ್ಲಿ ನೋಡಿದ್ರೂ ಸೈನಿಕರೇ ಕಾಣಿಸ್ತಾರೆ, ಅವರು ನಮ್ಮ ಸೈನಿಕರಲ್ಲ, ಉತ್ತರದೇಶದಿಂದ ಬಂದಿರೋರು ಅಂತ, ನೋಡಿದಕೂಡಲೇ ಗೊತ್ತಾಗತ್ತೆ. ರಾಜಧಾನಿ, ಗಡಿ ಪ್ರದೇಶದಿಂದ ಅಷ್ಟು ದೂರ ಇದೆ. ಆದರೂ ಇವರೆಲ್ಲಾ ನಮ್ಮ ನಡುವೆ ಬಂದುಬಿಟ್ಟಿದಾರೆ. ಅಷ್ಟೇ ಅಲ್ಲ, ದಿನೇ ದಿನೇ, ಅವರ ಸಂಖ್ಯೆ ಜಾಸ್ತಿ ಆಗ್ತಾ ಇದೆ. ಹೇಗೆ ಅಂತ ನನಗಂತೂ ಅರ್ಥವಾಗ್ತಿಲ್ಲ.

ಅದು ಅವರ ಸ್ವಭಾವ. ಅವರಿಗೆ, ಜನ ವಾಸ ಮಾಡೋ ಮನೆಗಳು ಅಂದರೆ ದ್ವೇಷ. ನೀಲಿ ಆಕಾಶದ ಕೆಳಗೆ ಟೆಂಟ್ ಹಾಕಿಕೊಂಡು, ಜೀವನ ನಡೆಸ್ತಾರೆ. ಮೂರು ಹೊತ್ತೂ ಅದೇ ಕೆಲಸ. ಕತ್ತಿ ಸಾಣೆ ಹಿಡಿಯೋದು, ಬಾಣಾ ಚೂಪು ಮಾಡೋದು, ಕುದುರೆಸವಾರಿ ಪ್ರಾಕ್ಟೀಸ್ ಮಾಡೋದು. ಈ ಸರ್ಕಲ್, ಯಾವಾಗಲೂ ಶಾಂತವಾಗಿ ಇರ್‍ತಿತ್ತು. ಒಂಚೂರು ಕೊಳೆ ಕಸಾ ಇರ್‍ತಿರಲಿಲ್ಲ. ಇವರು, ಅದನ್ನು ಕುದುರೆಲಾಯ ಮಾಡಿಬಿಟ್ಟಿದಾರೆ. ನಾವು, ಆಗೀಗ ಅಂಗಡಿ ಇಂದ ಹೊರಗೆಬಂದು, ಅಲ್ಪಸ್ವಲ್ಪ ಕ್ಲೀನ್ ಮಾಡೋಕೆ ಪ್ರಯತ್ನ ಪಡ್ತೀವಿ. ಬರ್‍ತಾ ಬರ್‍ತಾ, ಅದೂ ಕಡಿಮೆ ಆಗ್ತಾ ಇದೆ. ಅದರಿಂದ ಏನೂ ಪ್ರಯೋಜನ ಇಲ್ಲ. ನಮಗೂ ಅಪಾಯ ಜಾಸ್ತಿ. ಅವರ ಕುದುರೆಕಾಲಿಗೆ ಸಿಕ್ಕು ಕೆಳಗೆ ಬೀಳಬೇಕು ಅಥವಾ ಅವರ ಚಾಟೀಏಟು ತಿಂದು ಕೈಯೋ ಕಾಲೋ ಮುರ್‍ಕೋಬೇಕು.

ಇದನ್ನ ಓದಿ : Literature: ನೆರೆನಾಡ ನುಡಿಯೊಳಗಾಡಿ; ಪ್ರೇಮಿಸುತ್ತ ಕನಸುಗಳಿಗೂ ಜಾಗವಿರದಂತೆ ಬಿಗಿದಪ್ಪಿ ನಿದ್ದೆಗೆ ಜಾರುತ್ತಿದ್ದರು

ಈ ಅಲೆಮಾರಿಗಳ ಜತೆ ಮಾತಾಡೋದು ಸಾಧ್ಯವೇ ಇಲ್ಲ. ಅವರಿಗೆ ನಮ್ಮ ಭಾಷೆ ಗೊತ್ತಾಗಲ್ಲ. ಹಾಗೆ ನೋಡಿದೆ, ಅವರಿಗೆ ತಮ್ಮದೇ ಆದ ಭಾಷೆಯೂ ಇಲ್ಲ. ಅವರ ನಡುವಿನ ಸಂಭಾಷಣೆ ಅಂದ್ರೆ, ಕಳ್ಳ ಕಾಗೆಗಳು ಕವಕವ ಅನ್ನೋ ಹಾಗೆ. ಆ ಶಬ್ದ, ಯಾವಾಗಲೂ ಕಿವಿ ಒಳಗೆ ಚೀರ್‍ತಾಇರತ್ತೆ. ನಮ್ಮ ಬದುಕಿನ ರೀತಿ, ಸಂಘ-ಸಂಸ್ಥೆಗಳು, ಇವೆಲ್ಲ ಅವರಿಗೆ ಅರ್ಥವಾಗೋದಿಲ್ಲ. ಅವರಿಗೆ ಅರ್ಥ ಮಾಡಿಕೊಳ್ಳೋ ಉದ್ದೇಶವೂ ಇಲ್ಲ. ನೀವು, ಕೈಮುರಿಯೋ ತನಕ ಸನ್ನೆ ಮಾಡಿ, ಗಂಟಲು ಹರಿಯೋ ತನಕ ಶಬ್ದ ಮಾಡಿ. ಏನೂ ಮಾಡಿದರೂ ಅಷ್ಟೆ. ಹೊಳೇಲಿ ಹುಣಿಸೇಹಣ್ಣು ತೊಳೆದ ಹಾಗೆ. ಕೆಲವು ಸಲ, ವಿಕಾರವಾಗಿ ಮುಖ ಮಾಡ್ತಾರೆ. ಕಣ್ಣುಗುಡ್ಡೆ ಹೊರಗಡೆ ಬರತ್ತೆ, ತುಟೀ ಸುತ್ತಲೂ ನೊರೆ ಬರತ್ತೆ. ಆದರೆ, ಅದಕ್ಕೆ ಯಾವ ಅರ್ಥವೂ ಇಲ್ಲ. ಅವರು ನಿಮ್ಮನ್ನು ಹೆದರಿಸೋದಕ್ಕೂ ಟ್ರೈ ಮಾಡ್ತಿರಲ್ಲ. ಹಾಗೆ ಮಾಡೋದು ಯಾಕೆ ಅಂದೆ, ಅದು ಅವರ ಸ್ವಭಾವ. ಅಷ್ಟೆ. ಅವರಿಗೆ ಏನು ಬೇಕೋ ಅದನ್ನು ತಗೋತಾರೆ. ಬಲವಂತ ಮಾಡಿದರು, ಅಂತ ಹೇಳೋಕೂ ಅಗಲ್ಲ. ಅವರಿಗೆ ಇಷ್ಟವಾದ್ದಕ್ಕೆ ಕೈ ಹಾಕ್ತಾರೆ. ನೀವು ಸುಮ್ನೆ ನಿಂತ್ಕೊಂಡು ನೋಡ್ತೀರಿ. ಅಲ್ಲೀಗೆ ಮುಗೀತು.

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

ಇದನ್ನೂ ಓದಿ : Literature: ನೆರೆನಾಡ ನುಡಿಯೊಳಗಾಡಿ; ಅವನಿಗೀಗ ಗಾಢ ನಿದ್ರೆಯ ಹೊರತು ಏನೂ ಬೇಕಿರಲಿಲ್ಲ