ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : ಆ ದಿನ ತಂಪಾದ ವಾತಾವರಣವಿತ್ತು. ಗಾಳಿ ತಣ್ಣಗಿತ್ತು. ಆದರೆ ತೇವ ಇರಲಿಲ್ಲ. ನಾನು ಬಹುದೂರದವರೆಗೂ ಲಾರಿಯಲ್ಲಿ ಬಂದುದರಿಂದ ಅಷ್ಟೇನೂ ದಣಿದಿರಲಿಲ್ಲ. ಅದರಿಂದ ಆ ಬೆಟ್ಟದತ್ತ ಉತ್ಸಾಹದಿಂದ ನಡೆಯತೊಡಗಿದೆ. ತೊರೆಯ ಬಳಿ ನಿಂತು ನೋಡಿದಾಗ ಆ ಬೆಟ್ಟ ತುಂಬ ಹತ್ತಿರವಿದ್ದಂತೆಯೂ, ತೀರ ಮರಗಳಿಲ್ಲದಂತೆಯೂ ಕಂಡಿತ್ತು. ಒಂದು ತಾಸು ನಡೆದ ಬಳಿಕ ಎರಡೂ ತಪ್ಪೆಂದು ತಿಳಿಯಿತು. ಮರಗಳು ಒಂದಕ್ಕೊಂದು ರೆಂಬೆ ಕೈ ಜೋಡಿಸಿ ಬೆರಳುಗಳನ್ನು ಹೆಣೆದು ನಡು ಬಳಸಿ ನಿಂತಿದ್ದವು. ಸುಕ್ಕುಗೊಂಡ ಕೂದಲಂತೆ ಮುಳ್ಳುಗಿಡಗಳು ಬಳ್ಳಿಗಳು ಒಂದಕ್ಕೊಂದು ಹೆಣೆದು ದಾರಿಗೆ ಅಡ್ಡವಾಗಿದ್ದವು. ಮಧ್ಯದಲ್ಲಿ ಬೈತಲೆಯಂತೆ ರಸ್ತೆ ಇತ್ತು. ಎರಡು ಸ್ಥಳಗಳಲ್ಲಿ ತೊರೆ ನೀರು ಕುಡಿದು, ಕುಳಿತು ವಿಶ್ರಮಿಸಿ ಮುಂದೆ ಹೋದೆ. ಮಲಯನ್‌ನನ್ನು ಈ ಕಾಡಲ್ಲಿ ಹೇಗೆ ಕಂಡುಹಿಡಿಯುವುದೆಂಬ ಸಂದೇಹ ಉಂಟಾಯಿತು. ಆದರೆ ಈ ದಾರಿ ಆ ದೈವೀ ಪ್ರತಿಷ್ಠೆಯತ್ತ ಹೋಗುವುದಕ್ಕಾಗಿಯೇ ಮಾಡಿದ್ದು ಎಂದೂ ಅನಿಸುತ್ತಿತ್ತು. ದಣಿದು ಕುಳಿತವನು ಕೆಂಪಾದ ಕಿವಿಗಳು ತಣ್ಣಗಾಗುತ್ತಿರುವುದನ್ನು ಅನುಭವಿಸುತ್ತ ನಿರುದ್ದಿಶ್ಯವಾಗಿ ಕಾಡಿನತ್ತ ನೋಡಿದಾಗ ಆ ಕಿರುಪ್ರತಿಷ್ಠೆ ಕಾಣಿಸಿತು.
ಕಥೆ: ವಿಷಸರ್ಪ (ನಚ್ಚರವಂ) | ತಮಿಳು ಮೂಲ: ಜಯಮೋಹನ್ | ಕನ್ನಡಕ್ಕೆ: ಪಾವಣ್ಣನ್ ಮತ್ತು ಚಿಂತಾಮಣಿ ಕೊಡ್ಲೆಕೆರೆ | ಸೌಜನ್ಯ : ದೇಶಕಾಲ, ಸಾಹಿತ್ಯ ಪತ್ರಿಕೆ.
(ಭಾಗ 4)
ಎದ್ದು ನಿಂತು ದಿಟ್ಟಿಸಿ ನೋಡಿದೆ. ಒಂದು ಸಣ್ಣ ಕಲ್ಲನ್ನು ಅಗಲವಾದ ಕಲ್ಲಿನ ಮೇಲೆ ಇಡಲಾಗಿತ್ತು. ಬಹುಪಾಲು ಶಿವಲಿಂಗ. ಆದರೆ ಹಲವು ವರ್ಷಗಳಿಂದ ಯಾರೂ ಸ್ಪರ್ಶಿಸಿಯೇ ಇಲ್ಲವೇನೋ ಎಂಬಂತೆ ಪಾಚಿಗಟ್ಟಿ, ಗಿಡ ಬಳ್ಳಿಗಳಿಂದ ಆವೃತವಾಗಿ, ಒಣಗಿದೆಲೆಗಳಿಂದ ಮುಚ್ಚಿ ಹೋಗಿತ್ತು. ಹತ್ತಿರದ ಹಳ್ಳದಲ್ಲಿ ಗಿಡಗಳು ದಟ್ಟವಾಗಿ ಬೆಳೆದು ಪುಟ್ಟ ಬಿಳಿಯ ಹೂಗಳು ಅರಳಿದ್ದವು. ಸಾವಿರ ವರ್ಷದ ಜಿಗಣೆ ಲಿಂಗದ ಮೇಲೆ ಚಲಿಸುತ್ತಿತ್ತು. ಅಲ್ಲೊಂದು ದೊಡ್ಡ ಅಶ್ವತ್ಥ ಮರವೂ ನಿಂತಿದ್ದಿರಬಹುದೆಂದು ಊಹಿಸಿದೆ. ಆ ಮರ ಒಣಗುತ್ತಿರಬಹುದು. ಶಿವಲಿಂಗ ಒಣಗುವುದಿಲ್ಲ.
ಮತ್ತೆ ನಡೆಯತೊಡಗಿದೆ. ನನ್ನ ಕಣ್ಣುಗಳು ಸ್ವೇಚ್ಛೆಯಾಗಿ ಹುಡುಕಾಡತೊಡಗಿದವು. ದಾರಿ ಬದಿಯಲ್ಲಿ ಅದರಂತೆಯೇ ಇದ್ದ ಏಳೆಂಟು ಶಿವಲಿಂಗಗಳನ್ನು ಕಂಡೆ. ಹಾಗಾದರೆ ಕಾಡೊಳಗೆ ಇನ್ನೂ ಹಲವಾರು ಇರಬಹುದು. ಮರಗಳಂತೆ ಅಥವಾ ಹುಗಿದ ಬೇರುಗಳಂತೆ ಮಣ್ಣೊಳಗೆ ಇನ್ನೂ ಸಾವಿರಾರು ಲಿಂಗಗಳು ಹುದುಗಿರಬಹುದು. ಕೊನೆಗಾಣದ ಅಶಾಂತತೆ ಉಂಟಾಯಿತು.
ನನಗೆ ಮಲಯನ್ ಸಿಗುವ ಹೊತ್ತಿಗೆ, ಅವರು ಪೂಜೆ ಮುಗಿಸಿದ್ದರು. ವಿಶಾಲವಾಗಿ ಹರಡಿ ಬೆಳೆದಿದ್ದ ವೇಂಗೈ ಮರದಡಿಯಲ್ಲಿ ಇಟ್ಟ ಆ ಕಲ್ಲುಗಳು ಒಂದೇ ಹೊತ್ತಿಗೆ ದೊಡ್ಡ ಶಿವಲಿಂಗದಂತೆಯೂ ಬರಿಯ ಕಲ್ಲುಗಳಂತೆಯೂ ತೋರುತ್ತಿದ್ದವು. ಮಲಯನ್ ಮರದ ಬೊಡ್ಡೆಗೆ ತಲೆ ಚಾಚಿ ಮಲಗಿದ್ದರು. ಮರ ಹತ್ತುವಾಗ ರಕ್ಷಣೆಗೆ ಸುತ್ತಿಕೊಳ್ಳುವಂತೆ ಧರಿಸಿದ್ದ ಗಲೀಜು ವಸ್ತ್ರ ಕೊರಳಲ್ಲಿತ್ತು. ನಡುವಲ್ಲಿ ಕೆಂಪು ವಸ್ತ್ರ ಕಟ್ಟಿದ್ದರು. ತಲೆಯ ಮೇಲಿದ್ದ ತೆಚ್ಚಿ ಹೂಮಾಲೆ ದಿಟ್ಟಿಸಿ ನೋಡಿದಾಗ ಕಂಡಿತು. ಹತ್ತಿರ ಹೋಗಿ ‘ಮಲಯ’ ಎಂದೆ.
ಅವರು ತಮ್ಮ ಕೆಂಪು ಕಣ್ಣಗಳನ್ನು ತೆರೆದು ನನ್ನತ್ತ ನೋಡಿದರು. ಮತ್ತೆ ಕಣ್ಣು ಮುಚ್ಚಿದರು. ನಾನು ಸ್ವಲ್ಪ ದೂರದಲ್ಲಿ ದೊಡ್ಡ ಬೊಡ್ಡೆಯೊಂದರ ಮೇಲೆ ಕುಳಿತೆ. ಕಾಡಿನ ಮಣ್ಣಿನಂತೆ ಶರೀರ. ಬೇರಿನಂತೆ ನರಗಳು. ಕುತ್ತಿಗೆಯ ವಸ್ತç ಕೂಡ ಯಾವುದೋ ಬೇರಂತೆಯೇ ಇತ್ತು. ಅವರ ಕಪ್ಪು ಬಣ್ಣ ಕಾಡಿನೊಂದಿಗೆ ಸಹಜವಾಗಿ ಹೊಂದುವಂತಿತ್ತು. ನನ್ನ ತಿಳಿ ನೀಲಿ ಬಣ್ಣದ ವಸ್ತ್ರ ಮತ್ತು ಮೈಬಣ್ಣ ಬೇರೆ ಎಂಬಂತಿತ್ತು. ಈಗ ಇಲ್ಲಿಗೇನಾದರೂ ಒಂದು ಆನೆ ಬಂದರೆ ಅದು ನನ್ನನ್ನೇ ಹಿಡಿದು ಹೇನಿನಂತೆ ಚಟ್‌ಗೊಳಿಸೀತು. ಆನೆಗೆ ಬಿಳಿ ಬಣ್ಣ ಇಷ್ಟವಾಗದು. ಅದರಿಂದಲೇ ಕಾಡಿಗೆ ಕಟ್ಟುವ ತಡೆಗೋಡೆಗಾಗಲೀ, ತಡೆ ಬಾಗಿಲಿಗಾಗಲೀ ಬೂದಿ ಬಣ್ಣ ಬಳಿಯುವುದು. ಹಾಗಿದ್ದರೂ ಆನೆ ಅಸಹನೆಯಿಂದ ಅವುಗಳನ್ನು ನಾಶ ಮಾಡಲೆತ್ನಿಸುತ್ತದೆ. ಕಾಡಲ್ಲದ ಎಲ್ಲವನ್ನೂ ಅದು ದ್ವೇಷಿಸುವುದು.
ಮಲಯನ್ ಎದ್ದು ಕೂತಾಗ ತೊಡೆಯ ಮೇಲೆ ಜಾರಿ ಬಿದ್ದ ಕೊರಳ ವಸ್ತ್ರ ಬಳುಕುತ್ತಿತ್ತು. ಮತ್ತೆ ಎತ್ತಿ ಸುತ್ತಿಕೊಂಡು ನಡೆಯತೊಡಗಿದರು. ನಾನು ಹಿಂದೆಯೇ ನಡೆದೆ. ಬಹುಪಾಲು ಓಡಿದೆ. ಅವರ ಮನಸ್ಥಿತಿ ಬದಲಿಸಲೆಂದು ‘ಸಾಮಾನುಗಳನ್ನು ಮನೆಯಲ್ಲಿ ಕೊಟ್ಟಿದ್ದೇನೆ’ ಎಂದೆ. ಆದರೆ ಅವರಿಗೆ ಕೇಳಿಸಿದಂತೆ ತೋರಲಿಲ್ಲ.
ನಾನು ಬಂದ ದಾರಿಯ ವಿರುದ್ಧ ದಿಕ್ಕಿನಲ್ಲಿ ಮಲಯನ್ ನಡೆದರು. ಮಲಯನ್ ಮನೆಯ ಬಳಿ ಹರಿಯುವ ತೊರೆ ಅಲ್ಲಿಂದಲೇ ಕಂಡಿತು. ಅದು ನೂರಾರು ಅಡಿ ಆಳದಲ್ಲಿ ಬಿದ್ದ ಬೆಳ್ಳಿ ಜರಿಯಂತೆ ತೋರಿತು. ನೀಲಿಯ ವಿಭಿನ್ನ ಬಣ್ಣಗಳಲ್ಲಿ ಸಣ್ಣ ಸಣ್ಣ ಗುಡ್ಡಗಳು. ಅಗಸ್ತ್ಯ ಗುಡ್ಡ ಕೂಡ ತಿಳಿ ನೀಲಿ ಪರದೆ. ಗುಡ್ಡಗಳೇ ಬಗೆ ಬಗೆಯ ಪರದೆಗಳು. ಸರಸರ ಪರದೆ ತೆಗೆದರೆ ಏನು ಕಾಣಿಸುವುದು?
ಇದನ್ನೂ ಓದಿ : Literature: ನೆರೆನಾಡ ನುಡಿಯೊಳಗಾಡಿ; ‘ನಾನೇ ದೂರ, ನಾ ಇವರ ಪರಿಧಿಯೊಳಗೇ ಇಲ್ಲಾ’
‘ಅದು ಅಡ್ಡದಾರಿಯೇ?’ ಎಂದೆ, ಮಲಯನ ಬಳಿ.
ಅವರು ಉತ್ತರಿಸದೆ ಬಿದಿರು ಮರಗಳ ಒಳ ಹಾದಿಯಲ್ಲಿ ನಡೆದರು. ಬೇಗ ಬೇಗ ಕತ್ತಲಾವರಿಸತೊಡಗಿತು. ತಲೆಯ ಮೇಲೆ ಬಿದಿರೆಲೆಗಳ ಹಸಿರು ಕತ್ತಲು, ಇಕ್ಕೆಲಗಳಲ್ಲೂ ಬಿದಿರುಗಳ ಹಸಿರು ಗೆರೆ ಗೋಡೆ.
‘ಈ ಪ್ರತಿಷ್ಠೆಯೇ ನಿಮ್ಮ ಕುಲ ದೇವತೆಯೇ?’ ಎಂದು ಕೇಳಿದೆ.
ಮಲಯನ್ ಅದಕ್ಕೂ ಉತ್ತರಿಸಲಿಲ್ಲ, ನನ್ನನ್ನು ಆಗಷ್ಟೇ ನೋಡುವಂತೆ ತಿರುಗಿ ನೋಡಿದರು. ಬಿದಿರುಕಾಡಲ್ಲಿ ಬಿದಿರುಗಳ ತಿಕ್ಕಾಟದಿಂದ ಹುಟ್ಟಿದ ಸದ್ದು ಗಾಳಿಯಲ್ಲಿ ಬಗೆಬಗೆಯ ದನಿಗಳನ್ನು ಸೃಷ್ಟಿಸುತ್ತಿತ್ತು. ನೋವಿಂದ ಮುಲುಗುವಂತೆ, ಗರ್ಜಿಸುವಂತೆ ಅಬ್ಬರಿಸುವಂತೆ. ಮಲಯನ್‌ನ ಕಣ್ಣುಗಳಲ್ಲಿ ನನ್ನನ್ನು ಗುರುತಿಸಿದ ಲಕ್ಷಣವೇ ಇಲ್ಲ. ಮೃಗವೊಂದರ ದೃಷ್ಟಿ. ಇಲ್ಲ, ನಾನೇ ಮೃಗವೇ?
ದನಿಯೆತ್ತುವುದೇ ಸಾಹಸವೆನಿಸಿತು. ಆದರೂ ಮಾತಾಡಬಯಸಿದೆ. ಮಾತಾಡಿದರೆ ಮಾತ್ರವೇ ಸನ್ನಿವೇಶ ಸಡಿಲಗೊಳ್ಳುವುದು ಸಾಧ್ಯ. ‘ಈ ದೇವರು ಯಾರು?’ ಎಂದೆ. ಮಲಯನ್ ಮುಖ ತಿರುಗಿಸಲಿಲ್ಲ. ಆದರೆ ಅವರ ಹಿಂದಿದ್ದ ನಾನು ಆ ದನಿಯನ್ನು ಕೇಳಿದೆ. ‘ನಾನೇ’.
ನನ್ನ ಶರೀರ ತಣ್ಣಗಾಗಿ ಕಂಪಿಸುತ್ತಿದ್ದ ಕ್ಷಣದಲ್ಲಿ ಹಲವಾರು ಕಡೆಗಳಿಂದ ಹಲವು ಬಗೆಯ ದನಿಗಳಲ್ಲಿ ಅದೇ ಶಬ್ದ ಮತ್ತೆ ಮತ್ತೆ ಪ್ರತಿಧ್ವನಿಸಿತು.
ನಾನು ಹಿಂದಿರುಗಿ ಓಡಿ ದಾರಿಯಲ್ಲಿ ಬಿದ್ದು ಎದ್ದು… ಸಿಟ್ರಂಬಲ ಎಂಬ ಜಾಗಕ್ಕೆ ಬಂದು ಬಿದ್ದೆ. ಲಾರಿಯವರು ಊರಿಗೆ ಸಾಗಿಸಿದರು. ನನ್ನ ಸ್ನೇಹಿತರು ‘ಮನೋಭ್ರಮೆ’ ಎಂದರು. ಕಾಡಲ್ಲಿ ಹಲವಾರು ಧ್ವನಿಗಳು ಕೇಳಬಹುದು. ಇರಬಹುದು, ಎಷ್ಟೆಷ್ಟೋ ರೀತಿ ಚರ್ಚಿಸಬಹುದು. ವಿವರಿಸಲೂಬಹುದು. ಎಲ್ಲವೂ ಭ್ರಮೆಯೇ. ಆ ಕ್ಷಣದಲ್ಲಿ ಮಲಯನ್ ಕತ್ತಲ್ಲಿ ಸುತ್ತಿದ್ದ ಗಲೀಜು ವಸ್ತ್ರ ಹೆಡೆಯೆತ್ತಿ ಕಣ್ಣುಗಳನ್ನೂ, ಎರಡು ನಾಲಗೆಗಳನ್ನೂ ತೋರಿ ‘ಭುಸ್’ ಅಂದಿದ್ದು ಕೂಡ.
*
ಕೆಲವು ವಿಶಿಷ್ಟ ಪದಗಳು
1. ಸಾರೆ ಹಾವು: ಹಾವಿನ ಒಂದು ಪ್ರಭೇದ (Ratsnake), ‘ನಾಗಿಣಿ’.
2. ಕಳುಮರೆ: Obeander
3. ಪೋತಿ: ಶಿವನ ಪೂಜಾರಿ
4. ಕೋಳಂಬಿ: ಬೀಡಿ ಕಂಪನಿ ಹೆಸರು
(ಮುಗಿಯಿತು)
ಪ್ರತಿಕ್ರಿಯೆಗಾಗಿ : tv9kannadadigital@gmail.com
ಈ ಕಥೆಯ ಎಲ್ಲಾ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/nerenaada-nudiyolagaadi