Qatar Mail : ಕತಾರ್ ಮೇಲ್ ; ಏಯ್, ನಮ್ಮ ಮನೆಯಲ್ಲಿರೋದು ಲ್ಯಾಂಡ್ ಕ್ರೂಸರ್, ನಿಮ್ಮ ಕಾರು ಯಾವುದೋ?

|

Updated on: Jan 21, 2022 | 11:27 AM

Car : ‘ಇದೇನೂ ಯಾವುದೋ ಸಿನಿಮಾ ದೃಶ್ಯವೋ, ಇಲ್ಲವೇ ಕಾಲೇಜಿಗೆ ಹೋಗುವ ಹುಡುಗರ ಅಥವಾ ಬಿಸಿನೆಸ್ ಮ್ಯಾಗ್ನೆಟ್​ಗಳ ಮಾತುಕತೆ ಅಂದುಕೊಂಡಿರಾ? ಇದು ಒಂದನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳು ಆನ್ಲೈನ್ ಕ್ಲಾಸಿನ ಬಿಡುವಿನ ಸಮಯದಲ್ಲಿ ನಡೆಸುತ್ತಿದ್ದ ಗಂಭೀರ ಚರ್ಚೆ.’ ಚೈತ್ರಾ ಅರ್ಜುನಪುರಿ

Qatar Mail : ಕತಾರ್ ಮೇಲ್ ; ಏಯ್, ನಮ್ಮ ಮನೆಯಲ್ಲಿರೋದು ಲ್ಯಾಂಡ್ ಕ್ರೂಸರ್, ನಿಮ್ಮ ಕಾರು ಯಾವುದೋ?
ಧೂಳೆಬ್ಬೆಸಿಕೊಂಡು ಹೋಗುತ್ತಿರುವ ಲ್ಯಾಂಡ್ ಕ್ರೂಸರ್​ಗಳು ಫೋಟೋ : ಚೈತ್ರಾ ಅರ್ಜುನಪುರಿ
Follow us on

ಕತಾರ್ ಮೇಲ್ | Qatar Mail : ಮುಖ ನೋಡಿ ಮಣೆ ಹಾಕುವುದು ಬೇರೆ ಎಲ್ಲಾ ಕಡೆ ನಡೆದರೆ, ಇಲ್ಲಿ ಕಾರು ನೋಡಿ ಮಣೆ ಹಾಕುತ್ತಾರೆ ಎಂದರೆ ತಪ್ಪಾಗುವುದಿಲ್ಲ. ಪ್ರಪಂಚದ ಅತೀ ದುಬಾರಿ ಕಾರುಗಳ ಒಡೆಯರಾಗಿದ್ದರೂ, ಒಂದಾದಾರೂ ಟೊಯೋಟಾ ಲ್ಯಾಂಡ್ ಕ್ರೂಸರ್ ಇಲ್ಲದ ಕತಾರಿ ಕುಟುಂಬಗಳಿಲ್ಲವೇನೋ. ಟೊಯೋಟಾ ಲ್ಯಾಂಡ್ ಕ್ರೂಸರ್ ಇಲ್ಲಿ ಪ್ರತಿಷ್ಠೆಯ ಸಂಕೇತವೂ ಹೌದು, ಅಧಿಕಾರದ ಭಾಷೆಯೂ ಹೌದು. ರಸ್ತೆಗಳಲ್ಲಿ ಹಿಂಬದಿಯಿಂದ ಲ್ಯಾಂಡ್ ಕ್ರೂಸರ್ ಬರುತ್ತಿದೆಯೆಂದರೆ, ಬೇರೆ ಕಾರುಗಳು ತಾವಾಗಿಯೇ ಅದಕ್ಕೆ ಮುಂದೆ ಹೋಗಲು ಅನುವು ಮಾಡಿಕೊಡುವುದು ಇಲ್ಲಿ ಸಾಮಾನ್ಯ ದೃಶ್ಯ. ಮಾತ್ರವಲ್ಲ, ಹಿಂದಿನಿಂದ ಲೈಟ್ ಫ್ಲ್ಯಾಶ್ ಬಂದರೆ ಶೇ. 90 ಬಾರಿ ಅದು ಲ್ಯಾಂಡ್ ಕ್ರೂಸರ್ ನಿಂದಲೇ ಎನ್ನುವುದು ತಿಳಿದುಬಿಡುತ್ತದೆ. ಅಷ್ಟೇ ಏಕೆ, ದಾರಿಯಲ್ಲಿ ಯಾರದಾದರೂ ಕಾರು ಕೆಟ್ಟು ನಿಂತರೆ ನೆರವಿಗೆ ಬಂದು ನಿಲ್ಲುವುದು ಲೆಕ್ಸಸ್, ಬಿಎಂಡಬ್ಲ್ಯೂ, ಫೆರಾರಿಗಳಲ್ಲ, ಇದೇ ಲ್ಯಾಂಡ್ ಕ್ರೂಸರ್. ಮರಳುಗಾಡಿನಲ್ಲಿ ಯಾರದಾದರೂ ಕಾರಿನ ಚಕ್ರ ಹೂತು ಹೋದರೆ ಅದನ್ನು ಹೊರಗೆ ತೆಗೆಯಲು, ಸುರಕ್ಷಿತ ಸ್ಥಳಕ್ಕೆ ಎಳೆದುಕೊಂಡು ಹೋಗಲು ಬರುವುದೂ ಇದೇ ಲ್ಯಾಂಡ್ ಕ್ರೂಸರ್.

ಚೈತ್ರಾ ಅರ್ಜುನಪುರಿ, ಪತ್ರಕರ್ತೆ, ನೈಟ್ ಫೋಟೋಗ್ರಾಫರ್,

(ಪತ್ರ-2)

ಎ: “ನಿನ್ನ ಮೆಚ್ಚಿನ ಕಾರು ಯಾವುದು?”

ಬಿ: “ಲಂಬೋರ್ಗಿನಿ ಮತ್ತು ಫೆರಾರಿ. ನಿನ್ನದು?”

ಎ: “ಆಸ್ಟಿನ್ ಮಾರ್ಟಿನ್. ಮಸೆರಾಟಿಯೂ ಇಷ್ಟ.”

ಸಿ: “ನನಗೆ ಲ್ಯಾಂಡ್ ಕ್ರೂಸರ್ ಮತ್ತು ಲೆಕ್ಸಸ್ ಬಹಳ ಇಷ್ಟ.”

ಎ: “ನಮ್ಮನೇಲಿ ಲ್ಯಾಂಡ್ ಕ್ರೂಸರ್ ಇದೆ, ಅದಕ್ಕೇ ನನಗೆ ಆಸ್ಟಿನ್ ಮಾರ್ಟಿನ್ ಮತ್ತು ಮಸೆರಾಟಿ ಇಷ್ಟ. ಮುಂದೆ ಇವನ್ನು ನಾನು ಕೊಂಡುಕೊಳ್ತೀನಿ.”

ಬಿ: “ಏ, ನಿಮ್ಮನೇಲಿರೋದು ಲ್ಯಾಂಡ್ ಕ್ರೂಸರ್ ಅಲ್ಲ, ಅದು ಪ್ರ್ಯಾಡೋ, ನಮ್ಮ ಮನೆಯಲ್ಲಿರೋದು ಲ್ಯಾಂಡ್ ಕ್ರೂಸರ್. ನಿಮ್ಮ ಕಾರು ಯಾವುದು?”

ಇದೇನೂ ಯಾವುದೋ ಸಿನಿಮಾ ದೃಶ್ಯವೋ, ಇಲ್ಲವೇ ಕಾಲೇಜಿಗೆ ಹೋಗುವ ಹುಡುಗರ ಅಥವಾ ಬಿಸಿನೆಸ್ ಮ್ಯಾಗ್ನೆಟ್​ಗಳ ಮಾತುಕತೆ ಅಂದುಕೊಂಡಿರಾ? ಇದು ಒಂದನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳು ಆನ್ಲೈನ್ ಕ್ಲಾಸಿನ ಬಿಡುವಿನ ಸಮಯದಲ್ಲಿ ನಡೆಸುತ್ತಿದ್ದ ಗಂಭೀರ ಚರ್ಚೆ. ಇವರ ಮಾತುಕತೆ ಕೇಳಿ ಅಲ್ಲೇ ಪಕ್ಕದಲ್ಲಿ ಫೋಟೋ ಎಡಿಟ್ ಮಾಡುತ್ತಾ ಕುಳಿತಿದ್ದ ನಾನು ಸುಸ್ತೋ ಸುಸ್ತು. ಮಕ್ಕಳ ಆ ಚರ್ಚೆ ಒಮ್ಮೆಗೇ ನನ್ನನ್ನು ದಶಕದ ಹಿಂದಿನ ನೆನಪುಗಳಿಗೆ ದೂಡಿತು. ಕತಾರಿಗೆ ನಾನು ಬಂದ ಹೊಸದರಲ್ಲಿ ಪತಿಯ ಗೆಳೆಯನೊಬ್ಬನ ಮನೆಗೆ ಹೋಗಿದ್ದೆವು. ಅಲ್ಲಿ ಆತ ತನ್ನ ಮಕ್ಕಳ ಕ್ಲಾಸಿನಲ್ಲಿ ಪುಟಾಣಿಗಳು ನಡೆಸುವ ಇಂಥಾದ್ದೇ ಚರ್ಚೆಯನ್ನು ನಮಗೆ ತಿಳಿಸಿದಾಗ ನಾವು ಅಚ್ಚರಿ ಪಟ್ಟಿದ್ದೆವು. ನಮಗೆ ಮಕ್ಕಳಾದ ಮೇಲೆ ಅವು ಶಾಲೆಗೆ ಹೋಗುವ ಮುನ್ನ ಪೋಲೋ ಬದಲಾಯಿಸಿ ಒಂದು ದೊಡ್ಡ ಕಾರನ್ನು ಖರೀದಿಸುವುದು ನಮ್ಮ ಗುರಿಯಾಗಿರಬೇಕೆಂದು ಆತ ಕಿವಿಮಾತು ಹೇಳಿದಾಗ ನಾವು ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದೆವು.

ಕತಾರಿಗೆ ಬಂದ ಹೊಸದರಲ್ಲಿ ಗಂಡನ ಬಳಿಯಿದ್ದದ್ದು ಪುಟ್ಟ ವೋಕ್ಸ್‌ವ್ಯಾಗನ್ ಪೋಲೋ. ಹಳದಿ ಬಣ್ಣದ ಆ ಪುಟ್ಟ ಕಾರು ಎಲ್ಲಿಗೇ ಹೋದರೂ ಅದು ಅವನದೆಂದು ತಿಳಿದುಬಿಡುತ್ತಿತ್ತು. ಟ್ರಾಫಿಕ್ ಸಿಗ್ನಲ್ಲಿನಲ್ಲಿ ನಿಂತಾಗ, ಹಿಂದಿರುವ ಅಥವಾ ಮುಂದಿರುವ, ಅಥವಾ ಎದುರಿನ ಅಥವಾ ಪಕ್ಕದ ರಸ್ತೆಯಲ್ಲಿ ಅದೇ ಸಮಯದಲ್ಲಿ ಪ್ರಯಾಣಿಸುತ್ತಿರುವ ಅವನ ಸ್ನೇಹಿತರು ಅವನ ಫೋನಿಗೆ ಕರೆ ಮಾಡಿ ತಾವು ಅವನನ್ನು ಕಾಣುತ್ತಿರುವುದಾಗಿ ತಿಳಿಸಿಬಿಡುತ್ತಿದ್ದರು. ರಸ್ತೆಯಲ್ಲಿ ನಮ್ಮ ಪುಟ್ಟ ಕಾರು ಹೋಗುವಾಗ ಫೋನ್ ಬಂದರೆ, ಇಲ್ಲವೇ ಹಿಂಬದಿಯೊಂದ ಸಣ್ಣದಾಗಿ ಲೈಟ್ ಫ್ಲ್ಯಾಶ್ ಆದರೆ ಇಲ್ಲವೇ ಕೇಳಿಯೂ ಕೇಳದಂತೆ ಹಾರ್ನ್ ಸದ್ದಾದರೆ (ಇಲ್ಲಿ ರಸ್ತೆಗಳಲ್ಲಿ ಯಾರೂ ಸಾಮಾನ್ಯವಾಗಿ ಹಾರ್ನ್ ಮಾಡುವುದಿಲ್ಲ) ಯಾರಾದರೂ ಸ್ನೇಹಿತರು ಎಂದು ಅರ್ಥವಾಗಿಬಿಡುತ್ತಿತ್ತು. ಅಸಲಿಗೆ, ಆ ಕಾರಿನ ಮೊದಲ ಮಾಲೀಕ ಅದನ್ನು ಖರೀದಿಸಿದ ಎರಡೇ ವರ್ಷಕ್ಕೆ ನನ್ನ ಗಂಡನಿಗೆ ಮಾರಿದ್ದರ ಕಾರಣವೂ ಅದೇ ಆಗಿತ್ತು. ಅದರ ವಿಶಿಷ್ಟ ಬಣ್ಣದಿಂದಾಗಿ ಆತ ಆಫೀಸಿನಲ್ಲಾಗಲಿ ಅಥವಾ ಮನೆಯಲ್ಲಾಗಲಿ ಸುಳ್ಳು ಹೇಳುವಂತಿರಲಿಲ್ಲ, ಆ ಗಾಡಿ ಈ ಪುಟ್ಟ ದೇಶದಲ್ಲಿ ಒಬ್ಬರಲ್ಲ ಒಬ್ಬರ ಕಣ್ಣಿಗೆ ಸಿಕ್ಕಿ ಬೀಳುತ್ತಿತ್ತು!

ಆದರೆ ರಸ್ತೆಗಳಿಲ್ಲದ ಮರಳುಗಾಡಿನಲ್ಲಿ, ಕಲ್ಲು ಮುಳ್ಳುಗಳ ಪ್ರದೇಶಗಳಿಗೆಲ್ಲಾ ಹೋಗಲು ಫೋರ್​ವೀಲ್ ಡ್ರೈವ್ ಬೇಕೇಬೇಕೆಂದು ಹೇಳುತ್ತಿದ್ದ ಜನರನ್ನೂ ಬೆರಗುಗೊಳಿಸುವಂತೆ ಅದು ನಮ್ಮಿಬ್ಬರನ್ನು ಕತಾರಿನ ಮೂಲೆ ಮೂಲೆಗಳಿಗೂ – ಕಲ್ಲುಮುಳ್ಳುಗಳ ರಸ್ತೆಗಳೇ ಇಲ್ಲದ ಜಿಕ್ರೀತ್ ಅಥವಾ ಗ್ಯಾಲಾಕ್ಟಿಕ್ ಕೋರ್ ಪ್ರದೇಶವಿರಲಿ, ಅಥವಾ ದೂರದ ಜುಬಾರ ಕೋಟೆ, ಫಿಲಂ ಸಿಟಿ, ಘೋಸ್ಟ್ ವಿಲೇಜ್, ಉಮ್ಮ್ ಬಾಬ್ ಅಥವಾ ಇತರೆ ನಿರ್ಜನ ಪ್ರದೇಶಗಳು – ಬಹಳ ಸರಾಗವಾಗಿ ಕೊಂಡೊಯ್ಯುತ್ತಿತ್ತು. ಅದಕ್ಕೆ ಕಾರಣ ಅದು ಮ್ಯಾನುಯೆಲ್ ಗಾಡಿ (ಇಲ್ಲಿರುವ ಶೇ. 99 ಕಾರುಗಳು ಆಟೋಮ್ಯಾಟಿಕ್ ಗಾಡಿಗಳೇ) ಎನ್ನುವುದನ್ನು ಅಲ್ಲಗಳೆಯಲಾಗುವುದಿಲ್ಲ.

ನಮ್ಮ ಪುಟ್ಟ ಕಾರು ಸರ್ವೀಸಿಗೆ ಹೋದ ಒಂದು ಸಂದರ್ಭದಲ್ಲಿ ಗಂಡನ ಗೆಳೆಯನೊಬ್ಬ ತನ್ನ ಕಾರಿನಲ್ಲಿ ನಮ್ಮನ್ನು ಹೊಸ ಸ್ಥಳವೊಂದಕ್ಕೆ ಕರೆದುಕೊಂಡು ಹೋಗುವುದಾಗಿ ತಿಳಿಸಿದ. ನಾನು ಎಂದಿನಂತೆ ಕ್ಯಾಮೆರಾ ಕೈಯಲ್ಲಿಡಿದು ಕಾರು ಹತ್ತಿದೆ. ಹೊಸದೊಂದು ಬೀಚ್, ಪಾರ್ಕ್ ಸುತ್ತಾಡಿದ ಮೇಲೆ, ಆ ಸಂಜೆ ಅವನೆತ್ತ ಗಾಡಿ ತಿರುಗಿಸಿದನೋ ಏನು ಕಥೆಯೋ, ಎದುರಿಗೆ ಎರಡಾಳೆತ್ತರದ ಮೈಲಿಯುದ್ದಕ್ಕೂ ಹಬ್ಬಿದ್ದ ಕಾಂಪೌಂಡು. ದಾರಿ ತಪ್ಪಿದೆ ಎಂದು ಈ ಗಂಡಸರು ಒಪ್ಪುವುದಿಲ್ಲ ನೋಡಿ, ಒಟ್ಟಿನಲ್ಲಿ ಯಾವುದೋ ಆತ್ಮವಿಶ್ವಾಸದಲ್ಲಿ ಕಾಂಪೌಂಡಿನ ಪಕ್ಕದಲ್ಲಿ ಧೂಳೆಬ್ಬಿಸಿಕೊಂಡು ಮುಂದೆ ಸಾಗುತ್ತಿದ್ದ. ಕತಾರಿನಲ್ಲೇ ಹುಟ್ಟಿ ಬೆಳೆದಿದ್ದರಿಂದ ಗೆಳೆಯನಿಗೆ ಇಲ್ಲಿನ ಮೂಲೆಮೂಲೆಗಳ ಪರಿಚಯವೂ ಇತ್ತು, ಹಾಗಾಗಿ ಗೂಗಲ್ ಮ್ಯಾಪ್ ಬಳಸುತ್ತಿರಲಿಲ್ಲ ಎಂದು ಈಗ ಅನ್ನಿಸುತ್ತದೆ. ಎದುರಿಗೆ ದೊಡ್ಡ ಕಬ್ಬಿಣದ ಗೇಟ್ ಕಂಡಿತು, ಅಲ್ಲೇ ವಿಚಾರಿಸಬಹುದು ಎಂದುಕೊಂಡೆ. ಗೆಳೆಯ ಮುಗುಳ್ನಗುತ್ತಾ ಚಕ್ಕನೆ ಗಾಡಿಗೆ ಬ್ರೇಕ್ ಹಾಕಿ ಗೇಟ್ ಮುಂದೆ ಕಾರು ನಿಲ್ಲಿಸಿದ. ಕಾರು ನಿಂತ ಅರ್ಧ ನಿಮಿಷದಲ್ಲಿ ಗೇಟ್ ತೆರೆದ ಕಾವಲುಗಾರ, “ಸಲಾಂ ವಾಲೇಕುಂ, ಮುದೀರ್. ಆಸಿಫ್, ಮುದೀರ್, ಆಸಿಫ್,” (ಸಲಾಂ ವಾಲೇಕುಂ, ಒಡೆಯ. ಕ್ಷಮಿಸಿ, ಒಡೆಯ, ಕ್ಷಮಿಸಿ) ಎನ್ನುತ್ತಾ ಕಣ್ಣು ಮುಚ್ಚಿಬಿಡುವಷ್ಟರಲ್ಲಿ ಆ ಗೇಟನ್ನು ತೆರೆದು ಒಳಗೆ ಹೋಗುವಂತೆ ಸ್ವಲ್ಪವೇ ನಡು ಬಗ್ಗಿಸಿ ನಿಂತ. ಅವನ ಮಾತು, ನಡವಳಿಕೆ ಕಂಡು ನಾವು ಕಕ್ಕಾಬಿಕ್ಕಿ. ಕಾರು ಓಡಿಸುತ್ತಿದ್ದ ಗೆಳೆಯ ಆಗಲಿ ಎಂಬಂತೆ ಕೈಯಾಡಿಸಿ ಗಾಡಿಯನ್ನು ನೇರವಾಗಿ ಒಳಗೆ ನುಗ್ಗಿಸಿದ.

ಗೇಟಿನ ಒಳಗೆ ಇಕ್ಕೆಲಗಳಲ್ಲೂ ಖರ್ಜೂರದ ಮರಗಳ ಸಾಲು. ಬಹುಶಃ ಖರ್ಜೂರದ ದೊಡ್ಡ ಫಾರ್ಮ್ ಇರಬಹುದು ಎಂದುಕೊಂಡರೆ ಮುಂದೆ ಸಾಗುತ್ತಿದ್ದಂತೆಯೇ ಆಳೆತ್ತರ ಬೆಳೆದು ನಿಂತಿರುವ ಹುಲ್ಲುಗಾವಲು. ಅಲ್ಲೊಂದು ಇಲ್ಲೊಂದು ನಡುವೆ ಕೆಂಪು ಮತ್ತು ಹಳದಿ ಬಣ್ಣದ ಹೂವಿನ ಪೊದೆಗಳು. ಈ ಪೋಸ್ಟ್ ಕಾರ್ಡ್ ಪಿಕ್ಚರ್  ಎನ್ನುವಂತಹ ದೃಶ್ಯ. ಹೊರಗಿನ ಕಲ್ಲು ಮುಳ್ಳಿನ ಮರುಭೂಮಿಗೂ ಒಳಗಿರುವ ಲೋಕಕ್ಕೂ ಅಜಗಜಾಂತರ ವ್ಯತ್ಯಾಸ. ಕಿಟಕಿಯ ಗಾಜು ತೆರೆದು ವಾವ್ ಎನ್ನುತ್ತಾ ಕ್ಯಾಮೆರಾದಲ್ಲಿ ಚಿತ್ರಗಳನ್ನು ಸೆರೆ ಹಿಡಿಯುತ್ತಿದ್ದರೆ, ಗುಂಪು ಗುಂಪಾಗಿ ಹುಲ್ಲು ಮೇಯುತ್ತಿರುವ ಜಿಂಕೆಗಳ ಹಿಂಡು. ಆ ದೃಶ್ಯವನ್ನು ಕಂಡು ನನ್ನ ಕಣ್ಣಿಗೆ ಭ್ರಮೆ ಏನಾದರೂ ಆಗುತ್ತಿದೆಯೇ ಅಂದುಕೊಂಡೇ, “ಇಲ್ಲಿ ಜಿಂಕೆಗಳನ್ನೂ ಸಾಕಿದ್ದಾರಲ್ಲ!” ಎಂದೆ. ಗಂಡನ ಗೆಳೆಯ, “ಚೇಚಿ, ಇವು ಆರಿಕ್ಸ್. ಜಿಂಕೆಗಳ ಜಾತಿ. ನೋಡಿ ಎಷ್ಟೊಂದು ಸಾಕಿದ್ದಾರೆ, ಇದು ಯಾರದೋ ಖಾಸಗಿ ಫಾರ್ಮ್ ಇರಬೇಕು,” ಎಂದು ಸ್ಪಷ್ಟಪಡಿಸಿದ. ಕತಾರ್​ನ ರಾಷ್ಟ್ರೀಯ ಪ್ರಾಣಿಯಾದ ಈ ಅರೇಬಿಯನ್ ಆರಿಕ್ಸ್ ನೋಡಲು ಜಿಂಕೆಯ ಹಾಗೆಯೇ ಇದ್ದು ಕಠಿಣವಾದ ಮರುಭೂಮಿ ಪರಿಸರದಲ್ಲಿ ವಾಸಿಸುವ ನಾಲ್ಕು ಜಾತಿಯ ಹುಲ್ಲೆಗಳಲ್ಲಿ ಒಂದು. ಆದರೆ ಇದರ ಕೊಂಬುಗಳು ಈಟಿಯ ಹಾಗೆ ಚೂಪಾಗಿ ಉದ್ದವಾಗಿರುತ್ತವೆ. ಇದು ಜೋರ್ಡಾನ್, ಒಮಾನ್, ಯುನೈಟೆಡ್ ಅರಬ್ ಎಮಿರೇಟ್ಸ್ ಹಾಗೂ ಬಹರೇನ್​ಗಳ ರಾಷ್ಟ್ರೀಯ ಪ್ರಾಣಿಯೂ ಹೌದು.

ಕತಾರಾ ಹಿಲ್ಸ್​ನಿಂದ ಕಾಣುವ ಕತಾರ ಕಲ್ಚರಲ್ ವಿಲೇಜ್​ನ ವಿಹಂಗಮ ನೋಟ. ಫೋಟೋ : ಚೈತ್ರಾ ಅರ್ಜುನಪುರಿ

ಸ್ವಲ್ಪ ಮುಂದೆ ಸಾಗಿದ ಮೇಲೆ ಆರಿಕ್ಸ್​ಗಳನ್ನು ಹತ್ತಿರದಿಂದ ತೋರಿಸಲು ಕಾರು ನಿಲ್ಲಿಸಿದ. ನಾನು ಚಕಚಕನೆ ಅವುಗಳ ಒಂದಷ್ಟು ಚಿತ್ರಗಳನ್ನು ತೆಗೆದು, ಗೆಳೆಯನ ಕೈಗೆ ಕ್ಯಾಮೆರಾ ಕೊಟ್ಟು ಪತಿಯ ಪಕ್ಕದಲ್ಲಿ ನಿಂತು ಫೋಟೋಗಾಗಿ ಹಲ್ಲು ಗಿಂಜಿದೆ. ಅವನು ಫೋಟೋ ತೆಗೆಯುತ್ತಿದ್ದಂತೆಯೇ, ಪಕ್ಕದಲ್ಲಿ ಒಂದು ಲ್ಯಾಂಡ್ ಕ್ರೂಸರ್ ಭರ್ರನೆ ಧೂಳೆಬ್ಬಿಸಿಕೊಂಡು ನಮ್ಮನ್ನು ಹಾದು ಹೋಯಿತು. ನಾವು ಮತ್ತೆ ಗಾಡಿ ಹತ್ತಿ ಆ ಕಾರು ಹೋದ ದಿಕ್ಕಿನಲ್ಲಿಯೇ ಸಾಗಿದೆವು.

ಒಂದೆರಡು ನಿಮಿಷ ಸಾಗಿದ ಮೇಲೆ ಎದುರಿಗೆ ಹದಿನೈದಿಪ್ಪತ್ತು ಲ್ಯಾಂಡ್ ಕ್ರೂಸರ್​ಗಳು ನಿಂತಿರುವುದು ಕಾಣಿಸಿತು. ಅಲ್ಲೇ ಒಂದು ದೊಡ್ಡ ಕಟ್ಟಡ, ಪಕ್ಕದಲ್ಲಿ ಒಂದು ಪುಟ್ಟ ಮಸೀದಿ, ಏಳೆಂಟು ಪುಟ್ಟ ಹುಡುಗರು ಆಟವಾಡಿಕೊಳ್ಳುತ್ತಿದ್ದರು. ಅದು ಕತಾರಿಗಳ ಮಜ್ಲಿಸ್ ಎನ್ನುವುದು ತಿಳಿಯಿತು. ಒಂದಷ್ಟು ಮಂದಿ ಆರಾಮವಾಗಿ ಕೂತು ಹರಟೆ ಹೊಡೆಯುತ್ತಿದ್ದರು. ಅರಬ್ಬೀ ಭಾಷೆಯಲ್ಲಿ ಮಜ್ಲಿಸ್ ಎಂದರೆ “ಕುಳಿತುಕೊಳ್ಳುವ ಸ್ಥಳ” ಎಂದರ್ಥ. ಸ್ನೇಹಿತರು, ಕುಟುಂಬದವರು ಮತ್ತು ಸಮುದಾಯದ ಸದಸ್ಯರು ಸ್ಥಳೀಯ ಸಮಸ್ಯೆಗಳನ್ನು ಚರ್ಚಿಸಲು ಅಥವಾ ಸುದ್ದಿ ವಿನಿಮಯ ಮಾಡಿಕೊಳ್ಳಲು ಹಾಗೂ ಅತಿಥಿಗಳನ್ನು ಬರಮಾಡಿಕೊಳ್ಳಲು ಆಗಾಗ ಮಜ್ಲಿಸ್​ನಲ್ಲಿ ಸೇರುತ್ತಾರೆ. ಪ್ರತಿಯೊಂದು ಅರಬ್ಬೀ ಮನೆಯಲ್ಲೂ ಅವರವರ ಅಂತಸ್ತಿಗೆ ತಕ್ಕ ಹಾಗೆ ಮಜ್ಲಿಸ್​ಗಾಗಿ ಪ್ರತ್ಯೇಕ ಕೋಣೆಗಳಿರುತ್ತವೆ, ಇಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲ. ಮಹಿಳೆಯರಿಗಾಗಿ ಪ್ರತ್ಯೇಕ ಮಜ್ಲಿಸ್​ಗಳಿರುತ್ತವೆ, ಅಲ್ಲಿ ಪುರುಷರಿಗೆ ಪ್ರವೇಶವಿಲ್ಲ!

ನಮ್ಮ ಕಾರು ಅಲ್ಲಿ ನಿಂತೊಡನೆಯೇ ಅವರೆಲ್ಲರ ಕಣ್ಣೂ ನಮ್ಮತ್ತ ತಿರುಗಿದವು. “ಚೇಚಿ, ಕ್ಯಾಮೆರಾ ಒಳಗಿಡಿ,” ಗೆಳೆಯ ಎಚ್ಚರಿಸಿದ. ನಾನು ಸರಕ್ಕನೆ ಕ್ಯಾಮೆರಾ ಬ್ಯಾಗಿಗೆ ತುರುಕಿದೆ. ಇಪ್ಪತ್ತರ ಆಸುಪಾಸಿನ ಯುವಕನೊಬ್ಬ ಬಂದು ನಾವು ಯಾರೆಂದು ವಿಚಾರಿಸಿದ. ದೋಹಾದಿಂದ ಸುತ್ತಾಡಲು ಬಂದಿದ್ದೇವೆಂದೂ, ದಾರಿ ತಪ್ಪಿ ಒಳಗೆ ಬಂದೆವೆಂದೂ ಹ್ಯಾಪ್ ಮೋರೆ ಹಾಕಿಕೊಂಡು ಗೆಳೆಯ ತನಗೆ ತಿಳಿದ ಹರುಕು ಮುರುಕು ಅರಬ್ಬೀ ಭಾಷೆಯಲ್ಲಿ ಬಡಬಡಿಸತೊಡಗಿದ. ಹಿಂದೆ ಕೂತಿದ್ದ ನನಗೆ ಎದೆಯಲ್ಲಿ ಢವಢವ. ಅಷ್ಟರಲ್ಲಿ ಮತ್ತೊಬ್ಬ ಬಂದು ವಿಚಾರ ಏನೆಂದು ಕೇಳಿದ ಕಹ್ವಾ – ಅರೇಬಿಕ್ ಕಾಫಿ – ಕುಡಿಯಲು ನಮ್ಮನ್ನು ಕರೆದ. ನಾವು ಆತನ ಆಹ್ವಾನಕ್ಕಾಗಿ ವಂದಿಸಿ, ಅಲ್ಲಿಗೆ ಅಪ್ಪಣೆಯಿಲ್ಲದೆ ಬಂದಿದ್ದಕ್ಕಾಗಿ ಕ್ಷಮೆ ಕೇಳಿ ಗಾಡಿ ತಿರುಗಿಸಿದೆವು.

ನಮ್ಮನ್ನು ವಿಚಾರಿಸಿದ ಕತಾರಿ ಯುವಕರಿಬ್ಬರೂ ನಮ್ಮ ಹಿಂದೆಯೇ ಲ್ಯಾಂಡ್ ಕ್ರೂಸರ್​ನಲ್ಲಿ ಬರುತ್ತಿದ್ದರು. ಗೇಟಿನ ಬಳಿ ತಲುಪಿದ ಮೇಲೆ ಗೆಳೆಯ ಕಾರು ನಿಲ್ಲಿಸಿದ. ಹಿಂಬದಿಯಿಂದ ಬಂದ ಕಾರು ನಮ್ಮ ಪಕ್ಕದಲ್ಲಿ ನಿಂತು ಯುವಕರಿಬ್ಬರೂ ಏನು ಎಂಬಂತೆ ನಮ್ಮತ್ತ ನೋಡಿದರು. ಕಾವಲುಗಾರನ ತಪ್ಪಿಲ್ಲ ಆತನಿಗೆ ಗದರಿಸಬಾರದೆಂದು ಗೆಳೆಯ ವಿನಂತಿಸಿಕೊಂಡಾಗ, ಯುವಕರಿಬ್ಬರೂ ನಕ್ಕು, ನಮ್ಮೆದುರೇ ಕಾವಲುಗಾರನಿಗೆ, ಮತ್ತೆ ಯಾರೂ ಅತಿಥಿಗಳಿಲ್ಲವೆಂದು ತಿಳಿಸಿ ಗೇಟನ್ನು ಇನ್ನು ಹಾಕಬಹುದೆಂದು ಆದೇಶಿಸಿ ನಾವು ಹೊರಗೆ ಹೋಗುವ ಮುನ್ನವೇ ಕಾರು ತಿರುಗಿಸಿಕೊಂಡು ಭರ್ರನೆ ಹೊರಟು ಹೋದರು. ನಮ್ಮ ಪುಣ್ಯಕ್ಕೆ ಅತಿಕ್ರಮ ಪ್ರವೇಶ ಎಂದು ಅವರು ನಮ್ಮನ್ನು ಪೊಲೀಸರಿಗೆ ಒಪ್ಪಿಸಲಿಲ್ಲವೆಂದು ಸಮಾಧಾನದ ನಿಟ್ಟುಸಿರು ಬಿಟ್ಟೆವು.

ಅದಾದ ಬಳಿಕ ನಾನು ಆ ಫಾರಂನಲ್ಲಿ ತೆಗೆದಿದ್ದ ಚಿತ್ರಗಳನ್ನು ಅದೆಷ್ಟು ಬಾರಿ ನೋಡಿ ಕಣ್ಣು ತುಂಬಿಕೊಂಡಿದ್ದೆನೋ. ಪ್ರತಿ ಬಾರಿ ಅವುಗಳನ್ನು ನೋಡಿದಾಗಲೂ ಇಂತಹ ಮರಳುಗಾಡಿನೊಳಗೆ ಅಂತಹ ಒಂದು ಲೋಕವಿದೆ ಎನ್ನುವುದನ್ನು ನನಗೆ ನಂಬುವುದಕ್ಕೇ ಆಗುತ್ತಿರಲಿಲ್ಲ, ಆದರೆ ನಾನು ತೆಗೆದ ಚಿತ್ರಗಳು ಅದು ಕನಸಲ್ಲವೆಂದು ಅಣಕಿಸುತ್ತಿದ್ದವು. ಅಂತಿಮ ಹಂತ ತಲುಪಿದ್ದ ನನ್ನ ಪಿಎಚ್​.ಡಿ ಪ್ರಬಂಧವೂ ಸೇರಿದಂತೆ, ನನ್ನ ಲ್ಯಾಪ್ಟಾಪ್, ಹಾರ್ಡ್ ಡ್ರೈವ್, ಲಗೇಜುಗಳೆಲ್ಲಾ ಶಾರ್ಜಾ ಏರ್ಪೋರ್ಟಿನಲ್ಲಿ ಕಳುವಾದಾಗ, ನಾನು ಕಳೆದುಕೊಂಡಿದ್ದು ನನ್ನ ಸಂಪೂರ್ಣ ಅಧ್ಯಯನದ ಸಾಮಗ್ರಿಗಳನ್ನು ಮಾತ್ರವಲ್ಲ, ಅಷ್ಟು ವರ್ಷಗಳವರೆಗೆ ನಾನು ತೆಗೆದಿದ್ದ ಸಾವಿರಾರು ಚಿತ್ರಗಳನ್ನೂ! ಆ ದಿನ ನಾವು ಭೇಟಿ ಕೊಟ್ಟ ಆ ಫಾರ್ಮ್, ಅಲ್ಲಿ ತೆಗೆದ ಚಿತ್ರಗಳು ಈಗ ಕೇವಲ ಮನದ ಮೂಲೆಯಲ್ಲಿ ಭದ್ರವಾಗಿವೆ.

ಕತಾರಾ ಹಿಲ್ಸ್​ನಿಂದ ಕಾಣುವ ಕತಾರ ಕಲ್ಚರಲ್ ವಿಲೇಜ್​ನ ವಿಹಂಗಮ ನೋಟ. ಫೋಟೋ : ಚೈತ್ರಾ ಅರ್ಜುನಪುರಿ

ಮುಖ ನೋಡಿ ಮಣೆ ಹಾಕುವುದು ಬೇರೆ ಎಲ್ಲಾ ಕಡೆ ನಡೆದರೆ, ಇಲ್ಲಿ ಕಾರು ನೋಡಿ ಮಣೆ ಹಾಕುತ್ತಾರೆ ಎಂದರೆ ತಪ್ಪಾಗುವುದಿಲ್ಲ. ಪ್ರಪಂಚದ ಅತೀ ದುಬಾರಿ ಕಾರುಗಳ ಒಡೆಯರಾಗಿದ್ದರೂ, ಒಂದಾದಾರೂ ಟೊಯೋಟಾ ಲ್ಯಾಂಡ್ ಕ್ರೂಸರ್ ಇಲ್ಲದ ಕತಾರಿ ಕುಟುಂಬಗಳಿಲ್ಲವೇನೋ. ಟೊಯೋಟಾ ಲ್ಯಾಂಡ್ ಕ್ರೂಸರ್ ಇಲ್ಲಿ ಪ್ರತಿಷ್ಠೆಯ ಸಂಕೇತವೂ ಹೌದು, ಅಧಿಕಾರದ ಭಾಷೆಯೂ ಹೌದು. ರಸ್ತೆಗಳಲ್ಲಿ ಹಿಂಬದಿಯಿಂದ ಲ್ಯಾಂಡ್ ಕ್ರೂಸರ್ ಬರುತ್ತಿದೆಯೆಂದರೆ, ಬೇರೆ ಕಾರುಗಳು ತಾವಾಗಿಯೇ ಅದಕ್ಕೆ ಮುಂದೆ ಹೋಗಲು ಅನುವು ಮಾಡಿಕೊಡುವುದು ಇಲ್ಲಿ ಸಾಮಾನ್ಯ ದೃಶ್ಯ. ಮಾತ್ರವಲ್ಲ, ಹಿಂದಿನಿಂದ ಲೈಟ್ ಫ್ಲ್ಯಾಶ್ ಬಂದರೆ ಶೇ. 90 ಬಾರಿ ಅದು ಲ್ಯಾಂಡ್ ಕ್ರೂಸರ್ ನಿಂದಲೇ ಎನ್ನುವುದು ತಿಳಿದುಬಿಡುತ್ತದೆ. ಅಷ್ಟೇ ಏಕೆ, ದಾರಿಯಲ್ಲಿ ಯಾರದಾದರೂ ಕಾರು ಕೆಟ್ಟು ನಿಂತರೆ ನೆರವಿಗೆ ಬಂದು ನಿಲ್ಲುವುದು ಲೆಕ್ಸಸ್, ಬಿಎಂಡಬ್ಲ್ಯೂ, ಫೆರಾರಿಗಳಲ್ಲ, ಇದೇ ಲ್ಯಾಂಡ್ ಕ್ರೂಸರ್. ಮರಳುಗಾಡಿನಲ್ಲಿ ಯಾರದಾದರೂ ಕಾರಿನ ಚಕ್ರ ಹೂತು ಹೋದರೆ ಅದನ್ನು ಹೊರಗೆ ತೆಗೆಯಲು, ಸುರಕ್ಷಿತ ಸ್ಥಳಕ್ಕೆ ಎಳೆದುಕೊಂಡು ಹೋಗಲು ಬರುವುದೂ ಇದೇ ಲ್ಯಾಂಡ್ ಕ್ರೂಸರ್.

ಮನೆಗೆ ಹತ್ತಿರವಿರುವುದರಿಂದ ಆಗಾಗ ಕತಾರಾ ಕಲ್ಚರಲ್ ವಿಲೇಜ್​ಗೆ ಚಿತ್ರಗಳನ್ನು ತೆಗೆಯಲು ಹೋಗುತ್ತಿರುತ್ತೇನೆ. ಅಲ್ಲಿರುವ ಕತಾರಾ ಹಿಲ್ಸ್ ನ ಬೇತ್ ಎಲ್ ತಲ್ಲೆ ರೆಸ್ಟೋರೆಂಟ್ ಬಳಿಯಿಂದ ಸುತ್ತಮುತ್ತಲಿನ ಪ್ರದೇಶದ ವಿಹಂಗಮ ಪಕ್ಷಿನೋಟ ದೊರಕುತ್ತದೆ. ಕೊರೊನಾ ವಕ್ಕರಿಸುವ ಮುನ್ನ ಒಮ್ಮೆ ಕತಾರಾಗೆ ಗಂಡ ಮತ್ತು ಮಗನ ಜೊತೆಯಲ್ಲಿ ಹೋಗಿದ್ದೆ. ಕಾರನ್ನು ಪಾರ್ಕಿಂಗ್ ಲಾಟಿನಲ್ಲಿ ನಿಲ್ಲಿಸಿ ಕತಾರಾ ಹಿಲ್ಸ್ ಕಡೆಗೆ ಪಾದಚಾರಿಗಳ ಕಿರು ದಾರಿಯಲ್ಲಿ ಮೂವರೂ ಹೆಜ್ಜೆ ಹಾಕಿದೆವು. ಆ ಚಿಕ್ಕ ಗುಡ್ಡದ ಬುಡದಲ್ಲಿದ್ದ ಕಾವಲುಗಾರ ನಮ್ಮನ್ನು ತಡೆದು ರೆಸ್ಟೋರೆಂಟ್ ಫುಲ್ ಆಗಿದೆ, ನಾವು ಮುಂದೆ ಹೋಗುವ ಹಾಗಿಲ್ಲವೆಂದು ತಿಳಿಸಿದ. ಅವನು ನಮ್ಮ ಜೊತೆ ಮಾತನಾಡುತ್ತಿರುವ ಸಮಯದಲ್ಲಿಯೇ ಲ್ಯಾಂಡ್ ಕ್ರೂಸರ್ ಸೇರಿದಂತೆ ಮೂರ್ನಾಲ್ಕು SUVಗಳು ನಮ್ಮನ್ನು ಹಾದು ಹೋದವು. ಅವುಗಳತ್ತ ಗಂಡ ಬೊಟ್ಟು ಮಾಡಿದಾಗ ಅವರು ಮುಂಗಡವಾಗಿ ಟೇಬಲ್ ಕಾದಿರಿಸಿದ್ದಾರೆ ಎಂದು ಕಾವಲುಗಾರ ಗಡುಸಾಗಿ ಹೇಳಿದ. ನಾವು ಆಗಲಿ ಎನ್ನುತ್ತಾ ನಮ್ಮ ಕಾರನ್ನು ನಿಲ್ಲಿಸಿದ್ದ ಸ್ಥಳಕ್ಕೆ ಹೋದೆವು. “ಮನೆಗೋ, ಕತಾರಾ ಹಿಲ್ಸ್ ಗೋ?” ಎಂದು ಕೇಳಿದ ಮಗನಿಗೆ, “ವೇಟ್ ಅಂಡ್ ವಾಚ್,” ಎಂದವನೇ ಕಾರನ್ನು ನೇರವಾಗಿ ಕತಾರಾ ಹಿಲ್ಸ್ ಕಡೆಗೆ ತಿರುಗಿಸಿದ. ಹತ್ತು ನಿಮಿಷದ ಬಳಿಕ ಅದೇ ಸ್ಥಳ, ಅದೇ ಕಾವಲುಗಾರ… ಆದರೆ ಈ ಬಾರಿ ಅವನು ನಮ್ಮನ್ನು ತಡೆಯಲಿಲ್ಲ! ವಿಚಿತ್ರವೆನಿಸಿದರೂ, ಇದು ಇಲ್ಲಿ ಮಾಮೂಲು ಎಂದುಕೊಂಡು ಮೂವರೂ ಮೇಲೆಲ್ಲಾ ಸುತ್ತಾಡಿ, ಒಂದಷ್ಟು ಚಿತ್ರಗಳನ್ನು ತೆಗೆದು, ಮನೆಗೆ ಮರಳಿದೆವು.

ನನ್ನ ಗಂಡ ಮತ್ತವನ ಗೆಳೆಯ ನೋಡಲು ಅರಬ್ಬೀಗಳ ಹಾಗೆ ಕಾಣುತ್ತಿದ್ದರು ಎಂದು ಆ ಕಾವಲುಗಾರ ನಮ್ಮ ಕಾರನ್ನು ಖಾಸಗಿ ಫಾರಂ ಒಳಗೆ ಬಿಟ್ಟನೋ, ಅಥವಾ ಗೆಳೆಯನ ಲ್ಯಾಂಡ್ ಕ್ರೂಸರ್ ನೋಡಿ ಒಳಗೆ ಬಿಟ್ಟನೋ? ನಾವು ಕಾಲ್ನಡಿಗೆಯಲ್ಲಿ ಹೋಗುತ್ತಿದ್ದೆವು ಎಂದು ಕತಾರಾದಲ್ಲಿ ಆ ಕಾವಲುಗಾರ ನಮ್ಮನ್ನು ತಡೆದನೋ ಅಥವಾ ನಮ್ಮ ಕಾರನ್ನು ನೋಡಿ ಮೇಲೆ ಹೋಗಲು ಬಿಟ್ಟನೋ? ಉತ್ತರ ಮತ್ತು ಊಹೆ ಎರಡನ್ನೂ ನಿಮಗೇ ಬಿಟ್ಟಿದ್ದೇನೆ.

p.s.: ಇಲ್ಲ, ನಮ್ಮ ಬಳಿ ಈಗಲೂ ಆ ದೈತ್ಯ ಲ್ಯಾಂಡ್ ಕ್ರೂಸರ್ ಇಲ್ಲ!

ಹಿಂದಿನ ಪತ್ರ : Qatar Mail : ‘ನೀನು ನಮ್ಮಿಬ್ಬರ ವಿಡಿಯೋ ತೆಗೆದಿದ್ದೀಯಾ, ಮೊದಲು ಡಿಲೀಟ್ ಮಾಡು’ ಹೀಗೆಂದು ಆಕೆ ಗುಡುಗಿದಳು

Published On - 6:00 am, Fri, 21 January 22