Shantadevi Kanavi Death Anniversary : ‘ನಾನು ಸಂಪ್ರದಾಯವಾದಿ ಅಲ್ಲ, ಗುಡಿಗೆ ಹೋಗುವುದಿಲ್ಲ’
Financial Freedom : ‘ಮಹಿಳೆ ಹೊರಗೆ ದುಡಿಯುವುದು ಅಗತ್ಯ. ಆದರೆ ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಅಲ್ಲ. ಅದು ಆಕೆಯನ್ನು ಕಲೆಯಿಂದ ದೂರ ಉಳಿಯುವಂತೆ ಮಾಡುತ್ತದೆ. ವ್ಯಕ್ತಿತ್ವ, ಆಂತರಿಕ ವಿಕಾಸ ಕಲೆಯ ಮೂಲಕ ಸಾಧ್ಯ; ನೌಕರಿಯಿಂದ ಅಲ್ಲ.’ ಶಾಂತಾದೇವಿ ಕಣವಿ
ನಿಮ್ಮ ನೆನಪು ಸದಾ | Nimma Nenpu Sada : ಕನ್ನಡದಲ್ಲಿ ಮಹಿಳೆಯರು ಆಗಷ್ಟೆ ಸಾಹಿತ್ಯ ರಚನೆಗೆ ತೊಡಗಿದ ಅಪರೂಪದ ಕಾಲದಲ್ಲಿ ಶಾಂತಾದೇವಿ ಕಣವಿ (Shantadevi Kanavi)ಯವರು ಸಣ್ಣಕತೆಗಳನ್ನು ಬರೆಯತೊಡಗಿದರು. ಮೂರು ದಶಕಗಳ ತಮ್ಮ ಕಥಾಪಯಣದಲ್ಲಿ ಆರು ಕಥಾ ಸಂಗ್ರಹ- ಸಂಜೆ ಮಲ್ಲಿಗೆ (1967), ಬಯಲು ಆಲಯ (1973), ಮರುವಿಚಾರ (1978), ಜಾತ್ರೆ ಮುಗಿದಿತ್ತು (1981), ಕಳಚಿ ಬಿದ್ದ ಪೈಜಣ (1983), ನಿಲೀಮಾ ತೀರ (1992); ಭಾರತ ಭಾರತಿ ಮಾಲಿಕೆಯಿಂದ ಮಕ್ಕಳಿಗಾಗಿ ಪುಸ್ತಿಕೆ- ನಿಜಗುಣ ಶಿವಯೋಗಿ (1974); ಮತ್ತು ಒಂದು ಹರಟೆ ಸಂಗ್ರಹ- ಅಜಗಜಾಂತರ (1983) ಕೃತಿಗಳನ್ನು ಪ್ರಕಟಿಸಿದರು. ಕತೆ ಹೇಳಬೇಕೆನ್ನುವ ತುಡಿತವೇ ಅವರ ಎಲ್ಲ ಕತೆಗಳ ಜೀವನಾಡಿ. ಬದುಕಿನಲ್ಲಿಯ ದಿನನಿತ್ಯದ ಆಗುಹೋಗು, ಸುತ್ತಮುತ್ತಲ ಘಟನೆಗಳು, ಹೆಣ್ಣುಮಕ್ಕಳ ಅಳಲು ಅವರ ಕತೆಗಳಿಗೆ ಮೂಲಪ್ರೇರಣೆ. ನೇರ ನಿರೂಪಣೆ ಅವರ ಕತೆಗಳ ಸಾಮಾನ್ಯ ಲಕ್ಷಣ. ಅವರ ಕತೆಗಳಲ್ಲಿ ಭಾವನಾತ್ಮಕ ಸಂಘರ್ಷವಿದೆ, ವೈಚಾರಿಕ ಘರ್ಷಣೆ ಇಲ್ಲ. ತಾತ್ವಿಕ ಚರ್ಚೆ, ಯಾವುದೇ ಟೆನ್‌ಶನ್ ಅಥವಾ ತುರೀಯಾವಸ್ಥೆಯ ಸನ್ನಿವೇಶ ಚಿತ್ರಣದತ್ತ ಅವರ ಒಲವು ಹರಿದಿಲ್ಲ.
17.2.1993 ರಲ್ಲಿ ಲೇಖಕಿ ಶಾಂತಾದೇವಿ ಕಣವಿ ಅವರನ್ನು ಮೊಟ್ಟಮೊದಲ ಬಾರಿಗೆ ಲೇಖಕಿ ಹೇಮಾ ಪಟ್ಟಣಶೆಟ್ಟಿ ಸಂದರ್ಶಿಸಿದ್ದರು. ಇದು ಸದ್ಯದಲ್ಲೇ ಪ್ರಕಟಗೊಳ್ಳಲಿರುವ ಹೇಮಾ ಅವರ ‘ಅಕ್ಕರದ ಸುಯಿಧಾನ’ ಕೃತಿಯಲ್ಲಿ ಅಡಕವಾಗಿದೆ.
*
(ಭಾಗ 2)
ಸಂಸಾರದಲ್ಲಿ ಎಷ್ಟೇ ಕಷ್ಟ, ನೋವು ಅಥವಾ ಹಿಂಸೆಯನ್ನು ಅನುಭವಿಸಿದರೂ ಸಹ ಹೆಣ್ಣು ಮಮತೆಯ ಮೂಲಕ, ಸಹನೆ-ತ್ಯಾಗ, ಮುಖ್ಯವಾಗಿ ತಿಳುವಳಿಕೆಯ ಮೂಲಕ ಹಾಗೂ ಹೊಂದಾಣಿಕೆಯಿಂದ ಅದನ್ನು ಸರಿಪಡಿಸಿಕೊಳ್ಳಬಹುದು ಎಂಬ ಧೋರಣೆ ನಿಮ್ಮ ಕತೆಗಳ ಮೂಲ ಸ್ರೋತ, ಒಳಹರಿವು. ಗೃಹಿಣೀ ಗೃಹಮುಚ್ಯತೇ ಆಗಲಿ, ಗೃಹವಾದಿನಿ, ಗೃಹತಪಸ್ವಿನಿ ಎಂಬುದಾಗಲೀ ಆದರ್ಶದ ಮಾತಾಯ್ತು. ಈ ಆರ್ಷೇಯ ಮೌಲ್ಯ ಇಪ್ಪತ್ತನೆಯ ಶತಮಾನದ ಅಂಚಿನಲ್ಲೂ ಸಾಧವೇ?
ನನಗಂತೂ ಅದು ಸರಿ ಅನಸ್ತದ. ಅದರಿಂದನಽ ಸಾಮಾಜಿಕ ಸ್ವಾಸ್ಥ್ಯನೂ ಸಾಧ್ಯ ಆಗ್ತದ.
ಅಂದರೆ ಮಹಿಳೆಯ ಆರ್ಥಿಕ ಸ್ವಾತಂತ್ರ್ಯವನ್ನು ನೀವು ಅನುಮೋದಿಸುವುದಿಲ್ಲ ಏನು? ಹೆಣ್ಣುಮಕ್ಕಳು ನೌಕರಿ ಮಾಡಬಾರದೇ?
ಮಹಿಳೆ ಆರ್ಥಿಕ ಅನುಕೂಲಕ್ಕಾಗಿ, ಮನೆಯನ್ನು ಸರಿದೂಗಿಸಲಿಕ್ಕೆ ನೌಕರಿ ಮಾಡುವುದು, ಹೊರಗೆ ದುಡಿಯುವುದು ಅಗತ್ಯ ಅದ. ಆದರೆ ಅವಳ ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಅಲ್ಲ. ಅದರಿಂದ ಮಹಿಳೆ ಕಲೆಯಿಂದ ದೂರ ಉಳಿದಳು. ಸಾಂಸ್ಕೃತಿಕ ವಾತಾವರಣ ಉಳಿಸಿಕೊಳ್ಳಲಿಲ್ಲ. ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವುದು, ಆಂತರಿಕ ವಿಕಾಸ ಕಲೆಯ ಮೂಲಕ ಸಾಧ್ಯ; ನೌಕರಿಯಿಂದ ಅಲ್ಲ.
ಒಂದು ಕತೆಯ ಹೊಳಹು, ಎಳೆ ಸಿಗತಿದ್ದಂತೆ ಕತೆ ಬರೀಲಿಕ್ಕೆ ಸುರು ಮಾಡತೀರೋ ಅಥವಾ ಅದು ಪೂರ್ಣ ರೂಪ ಪಡೆಯುವ ತನಕ ಕಾಯತೀರೋ?
ಈಗ ನಾನು ಹೇಳಿದೆನಲ್ಲ, ಒಂದು ಘಟನೆ- ಅದು ಸಾಮಾನ್ಯವಾದದ್ದೇ ಇರಲಿ, ಭಿನ್ನ ಅಥವಾ ವಿಶಿಷ್ಟವಾದದ್ದೇ ಇರಲಿ, ನನ್ನ ಗಮನ ಸೆಳೆದರೆ, ಅದನ್ನು ಕೇಂದ್ರವಾಗಿ ಇಟ್ಟುಕೊಂಡು ಬರೀಲಿಕ್ಕೆ ಆರಂಭ ಮಾಡ್ತೇನೆ. ಮೂಲ ವಸ್ತು ನಿರ್ಧಾರ ಆದ ಮೇಲೆ, ಅದಕ್ಕೆ ಅನುಗುಣವಾಗಿ ಪಾತ್ರಗಳ ಸೃಷ್ಟಿ ತಾನೇ ತಾನಾಗಿ ಆಗ್ತದೆ. ಕಲ್ಪನೆಯೂ ಸೇರಿಕೊಳ್ತದ. ಕತೆ ಬೆಳಿತದ. ಆದರೆ ನನಗೆ ಮುಕ್ತಾಯ ಕೆಲವೊಮ್ಮೆ ಕೈ ಹಿಡೀತದ. ಆಗ ಅದನ್ನು ಅಲ್ಲೇ ಬಿಟ್ಟು, ಸ್ವಲ್ಪ ದಿನ ಅದರ ಬಗ್ಗೇ ಧೇನಸತಿತೇನಿ. ಯಾರೊಂದಿಗೋ ಮಾತಾಡತಿರಬೇಕಾದರೆ ಅಥವಾ ಏನನ್ನೋ ಓದತಿಬೇಕಾದರೆ ಆ ಕತೆಯ ಮುಕ್ತಾಯ ಥಟ್ಟಂತ ಹೊಳೀತದ. ಕತೆ ಆರಂಭ ನನ್ನ ಕೈಯಲ್ಲಿದ್ದಂತೆ, ಕೊನೆ ಹೆಂಗಾಗ್ತದ ಅಂತ ಹೇಳಲಿಕ್ಕೆ ಬರೂದುಲ್ಲ.
ಹಳ್ಳಿಗಾಡಿನ ಹೆಣ್ಣುಮಕ್ಕಳ ನೋವು ನಲಿವು, ಕಷ್ಟ ಸುಖಗಳನ್ನು ನೀವು ಕತೆಗಳಲ್ಲಿ ಕಟ್ಟಿ ಕೊಡತೀರಿ. ಶ್ಯಾಮಲಾದೇವಿ ಬೆಳಗಾಂವಕರ ನಂತರ ನೀವೇ ಈ ಥರದ ಕತೆಗಳನ್ನು ಸಶಕ್ತವಾಗಿ ಬರೆದವರು. ಗ್ರಾಮೀಣ ಜೀವನ ಚಿತ್ರಣ ನಿಮಗೆ ಹೇಗೆ ಸಾಧ್ಯ ಆಯಿತು? ಅದರಲ್ಲೂ ಹಳ್ಳಿಯ ಭಾಷೆ… ಬೈಗಳನ್ನೂ ಸಹಿತ ನೀವು ಸಹಜವಾಗಿ ಬಳಸ್ತೀರಿ…
ನಮ್ಮ ತಂದೆಗೆ ತಾಲೂಕಾ ಸ್ಥಳಗಳಿಗೆ ವರ್ಗ ಆಗತಿತ್ತು. ಆಗ ಎಲ್ಲ ಕಡೆನೂ ನಮ್ಮ ಇಡೀ ಕುಟುಂಬ ಸ್ಥಳಾಂತರ ಹೊಂದತಿತ್ತು. ಅಲ್ಲೆಲ್ಲ ಗ್ರಾಮಿಣ ಸೊಗಡು, ಜೀವನ ವಿಧಾನನಽ ಇರ್‍ತಿತ್ತು. ಅಲ್ಲಿಯ ಸಂಪ್ರದಾಯಗಳನ್ನು ಕಣ್ಣಾರೆ ನೋಡೇನಿ. ಅದಕ್ಕೂ ಮೊದಲ ನಮ್ಮ ಅವ್ವನ ಬಳಗ, ಮತ್ತ ಅಪ್ಪನ ಹಿರಿಯರೆಲ್ಲ ಹಳ್ಳಿಯವರಽ ಅಲ್ಲ, ಸೋದರತ್ತೆಯರ, ನಮ್ಮ ಅತ್ತಿ- ಕಣವಿಯವರ ತಾಯಿನೂ ಹಳ್ಳಿಯಿಂದ ಬಂದವರೇ. ಇವರೆಲ್ಲರ ಒಡನಾಟ ಈಗಲೂ ಅದ. ಹಳ್ಳಿಯ ಬದುಕೇ ಮುಕ್ತವಾಗಿರ್‍ತದ. ಮುಚ್ಚುಮರೆ ಕಡಿಮೆ. ಭಾಷೆನೂ ಹಂಗಽ. ಎಗ್ಗಿಲ್ಲದೆ ಮಾತಾಡತಾರ ಅವರು. ನಗರದವರಿಗೆ ಒರಟು, ಅಶಿಷ್ಟ ಅನ್ನಿಸಿದರೂ ಆ ವಸ್ತುವಿನ ನಿರ್ವಹಣೆಗೆ ತಕ್ಕಂತೆ ಬೈಗುಳಗಳೂ ಭಾಷೆಯ ಜೊತೆಗೇ ಅಗತ್ಯದಂತೆ ಮೂಡಿಬಂದಾವ.
ಇದನ್ನೂ ಓದಿ : Dr. Veena Shanteshwar : ತಾನು ಲೋಕವಿರೋಧಿ ಆಗುತ್ತೇನೆ ಎಂದು ಗೊತ್ತಿದ್ದೂ ವೀಣಾ ಇಂಥ ಪ್ರಯೋಗ ನಡೆಸಿದರು
ಸಾಹಿತಿಗೆ ಸಾಮಾಜಿಕ ಜವಾಬ್ದಾರಿ ಇರಬೇಕು ಅನ್ನುವುದರ ಬಗ್ಗೆ ಕಾಲಕಾಲಕ್ಕೆ ಚರ್ಚೆ ನಡೀತಾನೇ ಇರ್‍ತದೆ. ಆ ಬಗ್ಗೆ ನಿಮ್ಮ ಅಭಿಪ್ರಾಯ ಏನು?
ಅದರ ಬಗ್ಗೆ ಎರಡು ಮಾತಿಲ್ಲ. ಸಾಹಿತಿ ಸಮಾಜದ ಒಂದು ಘಟಕನೇ ಆಗಿರತಾನ. ಅದರ ಆಗುಹೋಗುಗಳು ಅವನ ಮೇಲೂ ಪರಿಣಾಮ ಬೀರ್‍ತಾವ. ಅನೇಕ ಸಮಸ್ಯೆಗಳು, ಗೊಂದಲಗಳು… ಅವುಗಳಿಗೆ ಅವನು ಹೇಗೆ ಪ್ರತಿಕ್ರಿಯೆ ನೀಡ್ತಾನ ಅನ್ನೂದು ಭಾಳ ಮುಖ್ಯ. ಸಮಾಜದಲ್ಲಿ ಅಹಿತಕರವಾದದ್ದು ಏನಾದರೂ ನಡೆದಾಗ ಅವನು ತಿಳುವಳಿಕೆ ಅಥವಾ ಎಚ್ಚರಿಕೆ ಕೊಡಬೇಕಾಗ್ತದ.
ಅದನ್ನು ಬರೆ ಸಾಹಿತ್ಯದ ಮೂಲಕ ಮಾಡಿದರೆ ಸಾಕೋ, ಏನು ಸಂಘ-ಸಂಸ್ಥೆಗಳ ಒಡನಾಟದ ಮೂಲಕ, ಅಲ್ಲಿ ಕ್ರಿಯಾಶೀಲ ಆಗುವ ಮೂಲಕ ಮಾಡಿದರ ಛೂಲೋನೋ? ಎಲ್ಲ ಸಾಹಿತ್ಯಿಕ ಚಳುವಳಿಗಳೂ ಸಂಘಟನೆಯ ಮೂಲಕನೇ ಯಶಸ್ಸು ಕಂಡವು.
ಎರಡೂ ನೆಲೆಗಳಲ್ಲಿ ಈ ಪ್ರಯತ್ನ ಮಾಡಬೇಕು ಅಂತ ನನಗ ಅನಸ್ತದ.
ಧಾರವಾಡದೊಳಗ ಈಗಂತೂ ಆಯಾ ಏರಿಯಾಕ್ಕೆ ಒಂದೊಂದು ಮಹಿಳಾ ಮಂಡಳ ಆಗ್ಯಾವ. ಅಕ್ಕನ ಬಳಗ ಬಹಳ ವರ್ಷಗಳಿಂದ ಸಾಂಸ್ಕೃತಿಕ ಪ್ರತಿಭೆಗಳಿಗೆ ಪ್ರೋತ್ಸಾಹ ಕೊಡುವುದರೊಂದಿಗೆ ಹಲವು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದೆ. ಮುಖ್ಯವಾಗಿ, ಕರ್ನಾಟಕ ವಿದ್ಯಾವರ್ಧಕ ಸಂಘ- ಅಲ್ಲಿ ಮೊದಲಿನಿಂದಲೂ ಅನೇಕ ಸಾಹಿತ್ಯಕ ಕಾರ್ಯಕ್ರಮಗಳು ತೆರಪಿಲ್ಲದೆ ನಡೀತಾವ. ನೀವು ಎಂದೋ ಒಮ್ಮೊಮ್ಮೆ ಅಲ್ಲೆ ಕಾಣಸ್ತೀರಿ…
ಹೌದು, ಆಗ ಮಕ್ಕಳು ಸಣ್ಣವರಿದ್ದರು. ಅವರನ್ನು ಮನೆಯೊಳಗೆ ಬಿಟ್ಟು ಹೋಗಲಿಕ್ಕೆ ಸಾಧ್ಯವೇ ಇರಲಿಲ್ಲ. ಇಡೀ ದಿವಸ ಮನೆಗೆಲಸನಽ ಆಗತಿತ್ತು. ಅಲ್ಪ ಸ್ವಲ್ಪ ವೇಳೆ ಸಿಕ್ಕರ ಓದೂದು, ಬರೆಯುವುದು… ಹಿಂಗಾಗಿ ನಾನು ಸಾರ್ವಜನಿಕ ಕಾರ್ಯಕ್ರಮಕ್ಕೆ, ಹೊರಗೆ ಹೋಗಿದ್ದೇ ಕಡಿಮೆ. ಗೀತಕ್ಕ (ಗೀತಾ ಕುಲಕರ್ಣಿ) ಮತ್ತು ಶಾಂತಕ್ಕ (ಶಾಂತಾದೇವಿ ಮಾಳವಾಡ) ಕರೀತಿದ್ದರು, ಒತ್ತಾಯ ಮಾಡತಿದ್ದರು…
ಮತ್ತ ಈಗ?
ಈಗ ನನಗ ಅರವತ್ತಾಯಿತು. ಇನ್ನು ಹೊಸ ಹವ್ಯಾಸ ಹಚ್ಚಿಕೊಳ್ಳಲಿಕ್ಕೆ ಆಗೂದುಲ್ಲ.
ಓದು, ಬರವಣಿಗೆ ಬಿಟ್ಟು ಮತ್ತೆ ನಿಮ್ಮ ಇನ್ನಿತರ ಹವ್ಯಾಸಗಳೇನು?
ಸಂಗೀತ. ಹಾಡು ಹಾಡೂದು, ಹಾಡು ಕೇಳೂದು ನನಗ ಭಾಳ ಸೇರ್‍ತದ. ವಚನ, ದಾಸರಪದ ಹಾಡತಿರ್‍ತೇನಿ. ಗುನುಗುನಸತೇನಿ. ಕಣವಿಯವರ ಕೆಲವು ಪದ್ಯಗಳಿಗೆ ನಾನೇ ಧಾಟಿ ಹಚ್ಚೇನಿ. ಹೊಲಿಗೆ, ಹೆಣಿಕೆನೂ ಮಾಡೇನಿ. ನಮುನಮೂನಿ ಸ್ವೇಟರ್ ಹೆಣದೇನಿ. ಮನೆ ಅಚ್ಚುಕಟ್ಟಾಗಿ ಇಡೂದುನೂ ಒಂದು ಆಸಕ್ತಿನೇ.
ಇದನ್ನೂ ಓದಿ : Vaidehi’s Birthday: ‘ಬರಹಗಾರರು ವಿಷಯಗಳ ಸೂಕ್ಷ್ಮನಾಡಿ ಮುಟ್ಟಿ ಜೀವಕಲೆಯಾಗಿಸಬೇಕು’ ವೈದೇಹಿ
ನಿಮ್ಮ ಕತೆಗಳಲ್ಲಿ ಆದರ್ಶ ನಾರಿ, ಅಥವಾ ಸದ್ಗೃಹಸ್ಥೆಯ ಚಿತ್ರ, ಜೀವನ ಮೌಲ್ಯಗಳ ಬಿತ್ತರಣೆ ಎದ್ದು ಕಾಣತಾವ. ಅದೇ ನಿಮ್ಮ ಬರವಣಿಗೆ ಆಶಯ, ಅದೇ ನಿಮ್ಮ ಜೀವನ ದರ್ಶನ ಅನಸ್ತದೆ.
ನಾನು ಹುಟ್ಟಿ ಬೆಳೆದ ಕುಟುಂಬದ ಪರಿಸರ, ಮೌಲ್ಯಗಳೇ ನನ್ನ ಮೇಲೆ ಗಾಢ ಪರಿಣಾಮ ಬೀರಿವೆ. ನಾನು ಸಂಪ್ರದಾಯವಾದಿ ಅಲ್ಲ. ಗುಡಿಗೆ ಹೋಗುವುದಿಲ್ಲ. ನಮ್ಮ ತಂದೆಯ ಪ್ರಭಾವ, ಬಸವಣ್ಣನ ಪ್ರಭಾವ ನನ್ನ ಮೇಲೆ ಭಾಳ ಆಗೇದ. ನಂತರನೂ ಅವು ನನ್ನ ವೈಯಕ್ತಿಕ ನಂಬಿಕೆ, ಆಚರಣೆಗಳಾಗಿ ಬೆಳೆದು ಬಂದಾವ. ಆಧುನಿಕ ಬದುಕಿನಲ್ಲಿ ಇತ್ತೀಚೆಗೆ ಕುಟುಂಬ ವಿಘಟನೆ ಹೆಚ್ಚತಾ ಇವೆ. ಉದ್ಯೋಗಸ್ಥ ಮಹಿಳೆಯ ಜೀವನ ಯಾಂತ್ರಿಕ ಆಗ್ತಾ ಇರೂದು ಒಂದು ರೀತಿಯದಾದರೆ, ಆರ್ಥಿಕ ಸ್ವಾತಂತ್ರ್ಯ ಪಡೆದ ಹೆಣ್ಣು ಕುಟುಂಬ ವಿಮುಖಳಾಗ್ತಾ ಇರೂದೂ ವಾಸ್ತವನೇ. ಕುಟುಂಬವನ್ನು ಕಟ್ಟಬಲ್ಲವಳು, ಕಾಪಾಡಬಲ್ಲವಳು ಹೆಣ್ಣೇ. ಅವಳು ಪತ್ನಿಯಾಗಿ, ತಾಯಿಯಾಗಿ ಮಕ್ಕಳಲ್ಲಿ, ಮನೆಯಲ್ಲಿ ಸದಾಚಾರವನ್ನು ರೂಢಿಸಬೇಕು. ಅದರಿಂದ ಇಡೀ ಕುಟುಂಬ ನೆಮ್ಮದಿಯಿಂದ ಬದುಕಬಹುದು. ಆದರೆ ನನ್ನ ಬರವಣಿಗೆಯಲ್ಲಿ ಇದೆಲ್ಲ ಉಪದೇಶದ ಪ್ರವರ ಆಗಬಾರದು, ಅಂತ ನಾನು ಲಕ್ಷ್ಯವಹಿಸತಿದ್ದೆ. ಕುಟುಂಬ ಒಡೀಬಾರದು ಎಂಬ ನಂಬಿಕೆಯನ್ನೇ ಬರೆದೆ. ಬಾಲ್ಯದಲ್ಲಿ ನನಗೆ ಸಿಕ್ಕ ಸಂಸ್ಕಾರವೇ ಅಂಥದ್ದು.
(ಭಾಗ 3 ಓದಲು ಇಲ್ಲಿ ಕ್ಲಿಕ್ ಮಾಡಿ)
ಪ್ರತಿಕ್ರಿಯೆಗಾಗಿ : tv9kannadadigital@gmail.com
ಈ ಸಂದರ್ಶನದ ಎಲ್ಲಾ ಭಾಗಗಳನ್ನು ಇಲ್ಲಿ ಓದಿ
Published On - 11:24 am, Sun, 22 May 22