AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shantadevi Kanavi Death Anniversary: ‘ಬೀದಿಗಿಳಿಯೋದರಿಂದ ಸ್ವಾತಂತ್ರ್ಯ ಸಿಗ್ತದೇನೂ? ಮಹಿಳೆಯರು ವೈಚಾರಿಕತೆ ಬೆಳೆಸಿಕೊಳ್ಳಬೇಕು’

Woman and Respect : ‘ಸುಶಿಕ್ಷಿತ ಮಹಿಳೆಯರು ಸಾಮಾಜಿಕ ಮನ್ನಣೆ, ಗೌರವ ಬಯಸುವುದರಿಂದ ಮೌನವಾಗಿ ಸಹಿಸ್ತಾರ. ಕೆಳವರ್ಗದವರಂತೆ ಇವರು ಗಟ್ಟಿ ಅಲ್ಲ. ನಾನು ನಿರೀಕ್ಷಿಸಿದ ಬದುಕಿನ ಸೂಕ್ಷ್ಮ ಅದು.’ ಶಾಂತಾದೇವಿ ಕಣವಿ

Shantadevi Kanavi Death Anniversary: ‘ಬೀದಿಗಿಳಿಯೋದರಿಂದ ಸ್ವಾತಂತ್ರ್ಯ ಸಿಗ್ತದೇನೂ? ಮಹಿಳೆಯರು ವೈಚಾರಿಕತೆ ಬೆಳೆಸಿಕೊಳ್ಳಬೇಕು’
ಲೇಖಕಿಯರಾದ ಶಾಂತಾದೇವಿ ಕಣವಿ ಮತ್ತು ಹೇಮಾ ಪಟ್ಟಣಶೆಟ್ಟಿ
ಶ್ರೀದೇವಿ ಕಳಸದ
|

Updated on: May 22, 2022 | 12:12 PM

Share

ನಿಮ್ಮ ನೆನಪು ಸದಾ | Nimma Nenpu Sada : ಶಾಂತಾದೇವಿ ಕಣವಿ (Shantadevi Kanavi) ಮನುಷ್ಯ ಸಂಬಂಧಗಳನ್ನು ನವಿರಾಗಿ, ಮಾರ್ದವತೆಯಿಂದ ಹೆಣೆಯುತ್ತಾರೆ. ಕುಟುಂಬ, ಕೌಟುಂಬಿಕ ಸಂಬಂಧ ಅವರ ಹಲವು ಕತೆಗಳ ಕೇಂದ್ರ. ಮಹಿಳೆಯರ ಬದುಕಿನ ಹಲವು ಮಗ್ಗಲುಗಳನ್ನು ಅವರು ಅನಾವರಣಗೊಳಿಸಿದ್ದಾರೆ. ಗ್ರಾಮೀಣ ಮಹಿಳೆ, ನಗರದ ಸುಶಿಕ್ಷಿತ ಮಹಿಳೆ, ಅಲ್ಲದೆ ನಿಮ್ನ ವರ್ಗದ ಮಹಿಳೆಯರ ವಿಭಿನ್ನ ಸ್ತ್ರೀಲೋಕಗಳನ್ನು ಅವರು ತಮ್ಮ ಕತೆಗಳಲ್ಲಿ ಚಿತ್ರಿಸಿದ್ದಾರೆ. ಹಳ್ಳಿಯ ಹೆಂಗಳೆಯರ ಬದುಕು, ಬವಣೆ, ಅನಿವಾರ್ಯ ಆತಂಕಗಳು, ಸೋಲುತ್ತಲೇ ಬಾಳುವ ಅವರ ಛಲಗಳನ್ನು ಶಾಂತಾದೇವಿಯವರು ಹೃದ್ಯವಾಗಿ ಕಟ್ಟಿಕೊಟ್ಟಿದ್ದಾರೆ. ಪುರುಷ ಪ್ರಧಾನ ಸಮಾಜದ ನಮ್ಮ ಕುಟುಂಬ ವ್ಯವಸ್ಥೆಯಲ್ಲಿ ಎಲ್ಲ ಜಾತಿ-ವರ್ಗಗಳ ಹೆಣ್ಣು ಅನುಭವಿಸುತ್ತಿರುವ ನೋವು, ಸಂಕಟ, ತುಮುಲ ಮತ್ತು ಸ್ವಂತ ಇಚ್ಛೆಗಳ ಹನನ ಹಾಗೂ ಎದುರಿಸುತ್ತಿರುವ ಅಸಡ್ಡೆ, ಅಪಮಾನ, ಯಾತನೆ, ದೈಹಿಕ-ಮಾನಸಿಕ ದೌರ್ಜನ್ಯ, ಹಿಂಸೆ ಮುಂತಾದ ಹಲವು ಘೋರಗಳ ಮೇಲೆ ಅವರು ಕ್ಷ-ಕಿರಣ ಬೀರಿದ್ದಾರೆ. ಅವರ ಕತೆಗಳಲ್ಲಿ ಭಾವನಾತ್ಮಕ ತಾಕಲಾಟ, ಸಂಘರ್ಷಗಳಿವೆ. ಆದರೆ ಅವು ವಸ್ತುಸ್ಥಿತಿಯನ್ನು ಬದಲಿಸುವ ಅಥವಾ ಪ್ರತಿಭಟಿಸಿ ಸಿಡಿದೇಳುವತ್ತ ಕಾರ್ಯಪ್ರವೃತ್ತ ಆಗುವುದಿಲ್ಲ. ಅಸಮಾಧಾನ ಒತ್ತಿಟ್ಟುಕೊಂಡು ಹೊಂದಾಣಿಕೆ ಮಾಡಿಕೊಳ್ಳುವುದಕ್ಕೆ ಶಾಂತಾದೇವಿ ಒತ್ತು ನೀಡುತ್ತಾರೆ.

17.2.1993 ರಲ್ಲಿ ಲೇಖಕಿ ಶಾಂತಾದೇವಿ ಕಣವಿ ಅವರನ್ನು ಮೊಟ್ಟಮೊದಲ ಬಾರಿಗೆ ಲೇಖಕಿ ಹೇಮಾ ಪಟ್ಟಣಶೆಟ್ಟಿ ಸಂದರ್ಶಿಸಿದ್ದರು. ಇದು ಸದ್ಯದಲ್ಲೇ ಪ್ರಕಟಗೊಳ್ಳಲಿರುವ ಹೇಮಾ ಅವರ ‘ಅಕ್ಕರದ ಸುಯಿಧಾನ’ ಕೃತಿಯಲ್ಲಿ ಅಡಕವಾಗಿದೆ. 

*

ಇದನ್ನೂ ಓದಿ
Image
Dr. Veena Shanteshwar: ‘ನಮ್ಮ ಮನೆಗಳಲ್ಲಿ ಅಗಸರ ಕತ್ತೆ ಇಲ್ಲ’ ಎದೆ ಮುಟ್ಟಿಕೊಂಡು ಹೇಳಿಬಿಡಿ ಒಮ್ಮೆ!
Image
Dr. Veena Shanteshwar‘s Birthday: ‘ನನ್ನ ಬದುಕಿನ ಅನುಭವ ಸಾಂದ್ರಗೊಳಿಸಿ ಬರೆಯುವ ಉದ್ದೇಶ ಖಂಡಿತ ಇದೆ’
Image
Chennaveera Kanavi Death: ‘ಅರಿವೇ ಗುರು, ನುಡಿ ಜ್ಯೋತಿರ್ಲಿಂಗ, ದಯವೇ ಧರ್ಮದ ಮೂಲತರಂಗ’
Image
Vaidehi‘s Birthday : ವೈದೇಹಿ ಎಂಬ ‘ಇರುವಂತಿಗೆ’ ಅರಳಿದ ಕಥೆ ಇಲ್ಲಿದೆ, ಓದಿ ಸವಿತಾ ನಾಗಭೂಷಣ ಬರಹ

(ಭಾಗ 3)

ನಿಮ್ಮ ಹೆಚ್ಚಿನ ಕತೆಗಳಲ್ಲಿ ಹೆಣ್ಣು ಕೇಂದ್ರವಾಗಿದ್ದರೂ ನೀವು ಕುಟುಂಬ ಮತ್ತು ಕೌಟುಂಬಿಕ ಆವರಣವನ್ನೇ ನಾಯಕ ಸ್ಥಾನದಲ್ಲಿ ಇಡ್ತೀರಿ. ಆದರೂ ನಂತರದ ನಿಮ್ಮ ಕತೆಗಳಿಗೆ ಹೊರಚಾಚುವಿಕೆ ಅಂದರ ಸಮಾಜಮುಖಿತ್ವ ಪ್ರಾಪ್ತ ಆಗೇದ. ಅದು ಹೇಗೆ ಸಾಧ್ಯ ಆಯ್ತು?

ಕಾಲ ಕಾಲಕ್ಕೆ ಸಾಹಿತ್ಯದ ಓದು ನನ್ನ ಅರಿವನ್ನು ವಿಸ್ತರಿಸ್ತಾ ಬಂತು. ಅನೇಕ ಪ್ರದೇಶಗಳಲ್ಲಿ ನಾನು ಬೆಳೆದದ್ದರಿಂದ, ಅಲ್ಲಲ್ಲಿಯ ವಿಭಿನ್ನ ಸ್ತರದ, ಸಂಪ್ರದಾಯದ, ಸ್ವಭಾವದ ಜನರನ್ನು ಕಂಡಿದ್ದೆ. ಮನುಷ್ಯ ಸಂಬಂಧಗಳನ್ನು ಅರ್ಥ ಮಾಡಿಕೊಂಡಿದ್ದೆ. ಆ ಎಲ್ಲ ಅನುಭವಗಳು ಗರಿಗೆದರಿ ನನ್ನ ಬರವಣಿಗೆಯಲ್ಲಿ ನಾ ಮುಂದು ತಾ ಮುಂದು ಅಂತ ನೆನಪಾಗಿ ಬರೆಸಿಕೊಳ್ಳತಿದ್ದುವು. ಮತ್ತ ವಯಸ್ಸಿನ ಜೊತೆಗೆ ಮಾಗುವಿಕೆನೂ ಸಾಧ್ಯ ಆಗ್ತದ. ಹಂಗಽ ಕುಟುಂಬದ ಕಿಟಕಿ ಮೂಲಕನೇ ಸಮಾಜವನ್ನು ನೋಡುವ ನನ್ನದೇ ದೃಷ್ಟಿ ನನ್ನಲ್ಲಿ ಬೆಳೀತು. ಅದರ ಗಾಢ ಅನುಭವದಿಂದ ಜನರ ಆಚಾರ-ವಿಚಾರ, ಸಾಮಾಜಿಕ ವರ್ತನೆಗಳಿಗೆ ನನ್ನ ಆಲೋಚನೆ ಮೇಳವಿಸಿ ಬರೆದ ಕತೆಗಳಿಗೆ ಸಾಮಾಜಿಕ ಆಯಾಮ ದಕ್ಕಿತು.

ನಿಮ್ಮ ‘ಕಿತ್ತು ಹಚ್ಚಿದ ಗಿಡ’, ನಾನು ಇಷ್ಟಪಟ್ಟ ಕತೆ. ಪಿತೃಪ್ರಧಾನ ಕುಟುಂಬ ವ್ಯವಸ್ಥೆಯಲ್ಲಿ ಹೆಣ್ಣು ತಾನು ಹುಟ್ಟಿದ ಒಂದು ಮನೆಯಿಂದ ಗಂಡನ ನೆಲೆಯಾದ ಮತ್ತೊಂದು ಮನೆಗೆ ಬಂದು ಬಾಳ್ವೆ ಮಾಡಬೇಕಾದ ಅನಿವಾರ್ಯ ಸಂಕಷ್ಟವನ್ನು ಅದು ರೂಪಕಾತ್ಮಕವಾಗಿ ಧ್ವನಿಸ್ತದೆ. 

ಹೌದು, ಬಹಳ ಜನ ಮೆಚ್ಚಿಕೊಂಡಾರ ಆ ಕತೆನ.

ಸಾಂಪ್ರದಾಯಿಕ ವ್ಯವಸ್ಥೆಯಲ್ಲಿಯ ಗಂಡಿನ ಪುರುಷಾಹಂಕಾರ, ಹೆಣ್ಣಿನ ಮೇಲಿನ ನಿಯಂತ್ರಣ ಮುಂತಾದ ಸ್ತ್ರೀವಿರೋಧಿ ಧೋರಣೆಗಳನ್ನು ನೀವು ಬಯಲುಗೊಳಿಸುತ್ತೀರಿ. ಸ್ತ್ರೀಪರ ಸಂವೇದನೆ ಢಾಳಾಗಿ ಕಾಣ್ತದೆ. ಆದರೆ ನಿಮ್ಮ ಕತೆಗಳಲ್ಲಿ ಹೆಣ್ಣು ತನ್ನ ಮೇಲಿನ ಹಿಂಸೆಯನ್ನು ವಿರೋಧಿಸುವುದಿಲ್ಲ, ಪ್ರತಿಭಟಿಸುವುದಿಲ್ಲ. ಸಿಟ್ಟು, ಸೆಡವುಗಳಲ್ಲಿಯೇ ಅವಳು ಸಮಾಧಾನ ಪಟ್ಟುಕೊಳ್ಳುತ್ತಾಳೆ. ಯಾಕೆ ಹೀಗೆ?

ನೀವು ಹೇಳುವ ಪ್ರತಿಭಟನೆಯಿಂದ ಯಾವ ಪ್ರಯೋಜನವೂ ಇಲ್ಲ. ಹೆಣ್ಣು ತನ್ನ ದಾಂಪತ್ಯ, ಅಷ್ಟೇ ಯಾಕೆ ಕೆಲವೊಮ್ಮೆ ಜೀವನಕ್ಕೇ ಎರವಾಗಬೇಕಾಗುತ್ತದೆ. ಆಗ ಇನ್ನೊಂದು ರೀತಿಯ ತಾಪತ್ರಯ, ವ್ಯಥೆ. ಒಂಟಿಯಾಗಿ ಸಮಾಜವನ್ನು ಎದುರಿಸಬೇಕಾದ ಪ್ರಮೇಯ ಎದುರಾಗುತ್ತದೆ. ನನ್ನ ಕತೆಗಳಲ್ಲಿ ಹೆಣ್ಣು ಮಕ್ಕಳು ಪ್ರತಿಭಟನೆ ಮಾಡಿದ್ದೂ ಇದೆ. ಹರಕೆ ಕತೆಯಲ್ಲಿ ಬಸವಿ ಬಿಡುವ ಕೆಟ್ಟ ಸಂಪ್ರದಾಯದ ವಿರುದ್ಧ ಕಮಲಾ ತನ್ನ ತಾಯಿಯ ವಿರುದ್ಧವೇ ಉಗ್ರ ಪ್ರತಿಭಟನೆ ಮಾಡ್ತಾಳೆ. ಯಶಸ್ವಿನೂ ಆಗ್ತಾಳೆ.

ಇದನ್ನೂ ಓದಿ : Inspiration; ನಾನೆಂಬ ಪರಿಮಳದ ಹಾದಿಯಲಿ: ಆರು ರೂಪಾಯಿಗೆ ದಿನಗೂಲಿ ಅರವತ್ತರ ನಂತರ ಬರೆವಣಿಗೆ

ಆದರೆ, ಸುಶಿಕ್ಷಿತ ಮಧ್ಯಮ ವರ್ಗದ ಮಹಿಳೆಯರಲ್ಲಿ ಅಪೇಕ್ಷಿಸಬಹುದಾದ ಆತ್ಮಸನ್ಮಾನ, ಸ್ವಾಭಿಮಾನ ರಕ್ಷಣೆಯ ಪ್ರಯತ್ನ ಕಾಣುವುದಿಲ್ಲ. ಅವರ ಅಸಹಾಕತೆ, ದ್ವಂದ್ವ ಮಾತ್ರ ಸ್ಪಷ್ಟವಾಗಿ ಕಾಣ್ತಾವೆ. ಗ್ರಾಮೀಣ, ಅದರಲ್ಲೂ ಕೆಳ ವರ್ಗದ ಹೆಣ್ಣುಮಕ್ಕಳಲ್ಲಿ ಕಂಡುಬರುವ ಅಂತಃಸತ್ವ ಇವರಲ್ಲಿ ಇಲ್ಲ.

ನಿಮ್ಮ ಪ್ರಶ್ನೆಯಲ್ಲೇ ಉತ್ತರನೂ ಇದೆ. ಸುಶಿಕ್ಷಿತ ಮಹಿಳೆಯರು ಸಾಮಾಜಿಕ ಮನ್ನಣೆ, ಗೌರವ ಬಯಸುವುದರಿಂದ ಮೌನವಾಗಿ ಸಹಿಸ್ತಾರ. ಕೆಳವರ್ಗದವರಂತೆ ಇವರು ಗಟ್ಟಿ ಅಲ್ಲ. ನಾನು ನಿರೀಕ್ಷಿಸಿದ ಬದುಕಿನ ಸೂಕ್ಷ್ಮ ಅದು.

ಅಂದರೆ ಶಿಕ್ಷಣ, ಆರ್ಥಿಕ ಸಂಪಾದನೆ, ಹೆಣ್ಣಿಗೆ ಬಲ ನೀಡುವುದಿಲ್ಲ ಅಂತೀರೇನು?

ಯಾಕಿಲ್ಲ? ಹೆಣ್ಣು ತನ್ನ ಮನೋಬಲ, ಸಂಕಲ್ಪ ಶಕ್ತಿಗಳಿಂದಲೇ ತನ್ನ ಅಂತರಂಗದ ತುಮುಲಗಳನ್ನು ಶಮನ ಮಾಡಿಕೊಳ್ಳಬೇಕು. ತನ್ನ ತಿಳಿವಳಿಕೆ, ವಿವೇಕದ ಮೂಲಕವೇ ದಾರಿ ಕಂಡುಕೊಳ್ಳಬೇಕು. ಓದು, ಶಿಕ್ಷಣ ಅದಕ್ಕೆ ಸಹಾಯ ಮಾಡ್ತಾವ.

(ದೂರುವ ದನಿ) ದಾಂಪತ್ಯದ ಬಿಕ್ಕಟ್ಟು, ಸಂಸಾರದ ಇಕ್ಕಟ್ಟು, ಒಟ್ಟು ಜೀವನದ ಸಮಸ್ಯೆಗಳಿಗೆ ನೀವು ಸಾಂತ್ವನ ಅಥವಾ ಸ್ವ ಸಮಾಧಾನದ ಸೂತ್ರವನ್ನೇ ಮಂತ್ರದಂಡ ಅಂತೀರೀ…

(ಮೆಲುನಗು)

ಹೆಣ್ಣಿನ ನೋವು, ವ್ಯಥೆಗಳಿಗೆ ಪುರುಷ ಮಾತ್ರ ಕಾರಣ ಅಲ್ಲ, ಹೆಣ್ಣೂ ಕಾರಣ ಆಗ್ತಾಳೆ ಅನ್ನೂದುನ್ನ ನಿಮ್ಮ ಬಾರಕೋಲು ಕತೆ ಅನಾವರಣಗೊಳಸ್ತದ. ಒಂದು ಹಿಂಸೆ ಮತ್ತೊಂದು ಹಿಂಸೆಗೆ ಖೋ ಕೊಟ್ಟಂಗ ದೌರ್ಜನ್ಯದ ಸರಣಿ.. ಬದುಕಿನ ಘೋರ ವಾಸ್ತವವನ್ನು ತೆರೆದಿಡತದ.

ಹೌದು, ನಮ್ಮ ಕುಟುಂಬ ವ್ಯವಸ್ಥೇನೇ ಹಂಗದ. ಪುರುಷನ ದಬ್ಬಾಳಿಕೆ ಮಾತ್ರ ಅಲ್ಲ, ಒಂದು ಹೆಣ್ಣಿನ ಮೇಲೆ ಮತ್ತೊಬ್ಬ ಹೆಣ್ಣೂ ದೌರ್ಜನ್ಯ ನಡಸತಾಳ. ಅತ್ತೆ ಸೊಸೆಯನ್ನು, ಸೊಸೆ ಅತ್ತೆಯನ್ನು ಕಾಡುವುದು, ಹೊಡೆಯುವುದು, ಬೈದಾಟ ಎಲ್ಲವೂ ನೈಜ ಸ್ಥಿತಿಗಳೇ.

ಸ್ತ್ರೀ ಸ್ವಾತಂತ್ರ್ಯ, ವಿಮೋಚನಾ ಚಳುವಳಿಗಳ ಬಗ್ಗೆ ನಿಮ್ಮ ಅಭಿಪ್ರಾಯ ಏನು?

ಬೀದಿಗಿಳಿಯುವುದರಿಂದ ಸ್ವಾತಂತ್ರ್ಯ ಸಿಗ್ತದೇನೂ? ಮಹಿಳೆಯರು ವೈಚಾರಿಕತೆಯನ್ನು ಬೆಳೆಸಿಕೊಳ್ಳಬೇಕು. ಹತ್ತರ ಕೂಡ ಹನ್ನೊಂದಾಗೂದಲ್ಲ. ಒಂದು ಕ್ರಿಯೆಗೆ ಯಾಕೆ ಎಂದು ಕೇಳಬೇಕು, ಪ್ರಶ್ನಿಸಬೇಕು. ತನ್ನ ವ್ಯಕಿತ್ವ ತಾನೇ ರೂಪಿಸಿಕೊಳ್ಳಬೇಕು. ಸಾಮಾಜಿಕ ಅರಿವು ಗೃಹಿಣೀಗೂ ಬೇಕು.

ಸ್ತ್ರೀವಾದಿ ಚಿಂತನೆಯ ಬಗ್ಗೆ ನಿಮ್ಮ ನಿಲುವು ಏನು?

ಸ್ತ್ರೀವಾದಿ ವಿಚಾರ ನಮಗ ಇನ್ನೂ ಹೊಸತು. ಅದರ ಸ್ಪಷ್ಟ ವಿವರ ಸಿಕ್ಕಿಲ್ಲ.

ನೀವು ಇಂಗ್ಲಿಷ್, ಹಿಂದಿ ಸಾಹಿತ್ಯವನ್ನೂ ಓದಿಕೊಂಡೀರಿ, ಅವುಗಳ ಪ್ರಭಾವ ನಿಮ್ಮ ಬರವಣಿಗೆ ಮೇಲೆ ಆಗೇದೇನು?

ಇಂಗ್ಲಿಷ್ ಸಾಹಿತ್ಯದ್ದು ಪಾಶ್ಚಿಮಾತ್ಯ ಸಂಸತಿ. ಅಲ್ಲಿಯ ಪರಿಸರ, ಜೀವನ ಕ್ರಮ, ಸಾಮಾಜಿಕ ಸಂಪ್ರದಾಯಗಳು ನಮ್ಮ ಆಚಾರ-ವಿಚಾರ, ಜೀವನ ವಿಧಾನಗಳಿಗಿಂತ ಭಿನ್ನ. ಹಿಂದೀ ಸಾಹಿತ್ಯದಲ್ಲೂ ಸ್ವಲ್ಪ ಮಟ್ಟಿಗೆ ಪ್ರಾದೇಶಿಕತೆಯಿಂದಾಗಿ ಜೀವನ ಪದ್ಧತಿಯಲ್ಲಿ ಅಂತರ ಇದೆ. ಆದರೆ ಮನುಷ್ಯನ ವರ್ತನೆಯಲ್ಲಿ ಹೆಚ್ಚಿನ ಅಂತರ ಇಲ್ಲ. ಮೂಲಭೂತ ಸ್ವಭಾವ ಒಂದೇ ಆಗಿರ್‍ತದ. ನಾನು ಭಾರತೀಯ ಪರಂಪರೆಯನ್ನೇ ಮೆಚ್ಚುವವಳು. ಮಾನವೀಯತೆ ಎಲ್ಲ ಭಾಷೆಗಳ ಸಾಹಿತ್ಯಕ್ಕೂ ಅಡಿಪಾಯ. ನನ್ನದೂ ಅದೇ ನಂಬಿಕೆ. ನಾನು ನಂಬಿದ ತತ್ವಗಳನ್ನು ವಾಸ್ತವವಾದಿ ಹಿನ್ನೆಲೆಯಲ್ಲಿ ನನ್ನ ಕತೆಗಳಲ್ಲೂ ಬಿಂಬಿಸತೇನಿ. ನಾನು ಬದುಕಿದ್ದೂ ಹಾಗೇ.

ಇದನ್ನೂ ಓದಿ : Feminism; ನಾನೆಂಬ ಪರಿಮಳದ ಹಾದಿಯಲಿ: ನಿರ್ದಿಷ್ಟ ಸಾಮಾಜಿಕ ಪ್ರಕ್ರಿಯೆಗಳಿಂದ ಆಕೆ ಹೆಣ್ಣಾಗುತ್ತಾಳೆ ವಿನಾ ಹುಟ್ಟಿನಿಂದಲ್ಲ

ಪತಿ ಪತ್ನಿ ಇಬ್ಬರೂ ಸಾಹಿತಿಗಳಾಗಿರುವುದು ಪರಪ್ಪರ ಪೂರಕವೋ ಅಥವಾ ಅಡ್ಡಿಯೋ?

ಅದು ಅವರವರ ವೈಯಕ್ತಿಕ ಸಂಬಂಧದ ಮೇಲೆ ಇರ್‍ತದ. ನಿಮಗೂ ಇಬ್ಬರಿಗೂ ಅದರ ಅನುಭವ ಅದ ಅಲ್ಲಾ… ನಮ್ಮ ನಮ್ಮ ಸ್ವಭಾವ ಬೇರೆ ಇರುವುದರಿಂದ, ಆ ಬಗ್ಗೆ ಒಬ್ಬರಿಗೊಬ್ಬರು ಸಲಹೆ-ಸಹಕಾರ ನೀಡತೇವಿ; ಹೊರತು ಗಂಭೀರ ಚರ್ಚೆ ಮಾಡುವುದಿಲ್ಲ.

(ನಗುತ್ತ) ನಮ್ಮದು ಶಾಂತಕ್ಕ… ಸಲಹೆ ಹೌದು, ಸಹಕಾರ ಇಲ್ಲ… (ಶಾಂತಕ್ಕನ ಮುಖದಲ್ಲಿ ಅಚ್ಚರಿ) ಇಲ್ಲ ಇಲ್ಲ, ಚರ್ಚೆ ಮಾಡತೇವಿ. ಆದರೆ ಎಲ್ಲ ಸಲಹೆನೂ ಇಬ್ಬರೂ ಒಪ್ಪಿಕೊಳ್ಳುವುದಿಲ್ಲ.

(ಸಮ್ಮತಿಯ ನಗು)

ನಿಮ್ಮ ಕತೆ ಯಾವ ಯಾವ ಭಾಷೆಗೆ ಅನುವಾದಗೊಂಡಿವೆ? ಟೀವಿ, ಸಿನೆಮಾದಂಥ ಮಾಧ್ಯಮಗಳಲ್ಲಿ ಬಂದಿವೆ ಏನು?

ಹಿಂದೀ, ಇಂಗ್ಲಿಷ್, ಮಲಯಾಳಂ, ತಮಿಳು ಭಾಷೆಗಳಿಗೆ ಅನುವಾದ ಆಗ್ಯಾವ. ನನ್ನ ಐದರ ನೋಟು ಕತೆ ಬೆಂಗಳೂರು ದೂರದರ್ಶನದಿಂದ ಪ್ರಸಾರ ಆಗಿದೆ. ಹೌದ್ರಿ, ಇಪ್ಪತ್ತರ ನೋಟು ಹೆಸರಿನೊಳಗ ಪ್ರಸಾರ ಆಗಿತ್ತು. ಅದರೊಳಗ ನಾನು ಮುಖ್ಯ ಪಾತ್ರ ಮಾಡಿದ್ದೆ, ಈಗ ಎರಡು ವರ್ಷದ ಹಿಂದ. ಯಶವಂತ ಸರದೇಶಪಾಂಡೆ ಡೈರೆಕ್ಟ್ ಮಾಡಿದ್ದ. ಹಾಂ, ನಾನೂ ನೋಡಿದ್ದೆ.

ನೀವು ಅಕ್ಷರಶಃ ಕಣವಿಯವರ ಸಹಗಮನೆ! ಆದರೆ ನಿಮ್ಮನ್ನು ಹತ್ತಿರದಿಂದ ನೋಡಿದಾಗ ಬೇರೆಯಾಗೇ ಕಾಣ್ತೀರಿ. ನಿಮ್ಮ ಮನೋಭಾವ, ದೃಢತೆ, ಸಂಕಲ್ಪಶಕ್ತಿ, ಜಿಗುಟುತನ… ಮಕ್ಕಳು ಮತ್ತು ಕೌಟುಂಬಿಕ ವಿಷಯದಲ್ಲಿ ನಿಮ್ಮ ಮಾತೇ ಅಂತಿಮ ಅಂತ ಕೇಳೇನಿ… ನಮ್ಮಲ್ಲೂ ಭಿನ್ನಾಭಿಪ್ರಾಯ ಬರ್‍ತಾವ. ಆದರ ಭಾಳ ಹೊತ್ತು ನಿಲ್ಲೂದಿಲ್ಲ. ನಮ್ಮಿಬ್ಬರ ನಡುವ ಒಂದು ಒಪ್ಪಂದ ಮಾಡಿಕೊಂಡೇವಿ. ಮನೆ ಒಳಗೆ ನನ್ನ ಕಾರ್ಯಕ್ಷೇತ್ರ, ಹೊರಗಿನದು ಅವರದು. ಮಕ್ಕಳ ಲಾಲನೆ-ಪಾಲನೆಯ ಸಂಪೂರ್ಣ ಜವಾಬ್ದಾರಿಯನ್ನು ಪುರುಷ ಹೆಣ್ಣಿಗೇ, ತಾಯಿಗೇ ಬಿಟ್ಟುಬಿಡಬೇಕು ಅನ್ನುವುದರಲ್ಲಿ ನನಗೆ ಬಹಳ ವಿಶ್ವಾಸ ಅದ.

ಶಾಂತಕ್ಕ, ಇನ್ನು ಕೊನೆಯ ಒಂದು ಪ್ರಶ್ನೆ ವೈಯಕ್ತಿಕವಾದದ್ದು. ನೀವು ಸದಾ ಮಂದಸ್ಮಿತರು. ಸಮಾಧಾನ ನಿಮ್ಮ ಸ್ಥಾಯೀಭಾವ. ಇದು ಯಾವಾಗಲೂ ಹೆಂಗ ಸಾಧ್ಯ? ರೂಢಿಗತನೋ ಅಥವಾ ಒಂದು ರೀತಿ ರಕ್ಷಾಕವಚನೋ, ಅಂದ್ರ ಡಿಫೆನ್ಸ್ ಮೆಕ್ಯಾನಿಜಂ ಥರ? ಹೂಂ (ನಗುತ್ತ) ಇಲ್ಲ, ಹಂಗೇನಿಲ್ಲ. ನಾನು ಮಹತ್ವಾಕಾಂಕ್ಷಿ ಅಲ್ಲ. ಜೀವನದಿಂದ ನನಗೆ ವೈಯಕ್ತಿಕವಾಗಿ ವಿಶೇಷ ನಿರೀಕ್ಷೆಗಳಿಲ್ಲ. ಬಂದದ್ದನ್ನು ಸ್ವೀಕರಿಸುತ್ತ ಅದನ್ನೇ ಅನುಭವಿಸಿ ಸಹ್ಯ ಮಾಡಿಕೊಳ್ಳುವುದು ಮೊದಲಿನಿಂದಲೂ ನನ್ನ ಸ್ವಭಾವನೇ ಆಗೇದ. ಬಹುಶಃ ಶಾಂತಕ್ಕನ ನಗೆಯ ನಿನಾದ ಕೇಳಿಯೇ ಕಣವಿಯವರು ಹೊರಗೆ ಹಾಲ್‌ಗೆ ಬಂದರು. ಅವರ ಕೈಯಲ್ಲಿ ಚಹದ ಕಪ್ಪುಗಳು ಜೊತೆಗೆ ಚೂಡಾ! ಸರ್ ನೀವೂ..? ಅಂದೆ ತುಸು ಅಚ್ಚರಿಯಲ್ಲಿ. ಹೂಂ, ನಾನು ಭಾಳ ಛುಲೋ ಚಹಾ ಮಾಡ್ತೇನ್ರೀ. ಹಂಗಂತ ಇವರೂ ಅಂತಾರ. ಕಣವಿಯವರ ತುಂಟ ನೋಟ ಗೃಹದೇವಿಯತ್ತ. ಶಾಂತಕ್ಕ ಹೌದುಹೌದು ಅಂತ ಸಾಥ್ ನೀಡಿದರು!

(ಮುಗಿಯಿತು)

ಪ್ರತಿಕ್ರಿಯೆಗಾಗಿ : tv9kannadadigital@gmail.com

ಈ ಸಂದರ್ಶನದ ಎಲ್ಲಾ ಭಾಗಗಳನ್ನು ಇಲ್ಲಿ ಓದಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ