ಡೆಹ್ರಾಡೂನ್: ಉತ್ತರಾಖಂಡ್ನಲ್ಲಿ ವಿಪರೀತ ಮಳೆ ಸುರಿಯುತ್ತಿದೆ. ಈ ಮಧ್ಯೆ ಒಟ್ಟು 12 ಮಂದಿ ಚಾರಣಿಗರ ಮೃತದೇಹ ಪತ್ತೆಯಾಗಿದ್ದು, ಇನ್ನೂ ಹಲವರು ನಾಪತ್ತೆಯಾಗಿದ್ದಾರೆ. ಅವರಿಗೆ ಭಾರತೀಯ ವಾಯುಪಡೆ (IAF) ಹುಡುಕಾಟ ನಡೆಸುತ್ತಿದೆ. ಉತ್ತರಾಖಂಡ್ನ ಗುಡ್ಡಗಾಡು ಪ್ರದೇಶಗಳಲ್ಲಿ ಹುಡುಕಾಟ ನಡೆಯುತ್ತಿದ್ದು, ಟ್ರೆಕ್ಕಿಂಗ್ ಹೋಗಿ ಸಿಲುಕಿದವರ ರಕ್ಷಣಾ ಕಾರ್ಯಾಚರಣೆಗೆ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ. ಈಗ ಸಿಕ್ಕಿರುವ 12 ಮೃತದೇಹಗಳಲ್ಲಿ ಮಹಿಳೆಯೊಬ್ಬರ ಶವವೂ ಇದ್ದು, ಇವರು ದೆಹಲಿಯವರು ಎನ್ನಲಾಗಿದೆ. ಹಾಗೇ 9 ಮಂದಿ ಪಶ್ಚಿಮ ಬಂಗಾಳದವರಾಗಿದ್ದಾರೆ. ಇನ್ನಿಬ್ಬರು ಎಲ್ಲಿಯವರು ಎಂಬ ಮಾಹಿತಿ ಲಭ್ಯವಾಗಿಲ್ಲ.
ಉತ್ತರಾಖಂಡ ಡಿಜಿಪಿ ಅಶೋಕ್ ಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದು, ಇಲ್ಲಿ ಚಾರಣ ಗುಂಪುಗುಂಪಾಗಿ ನಡೆಯುತ್ತದೆ. 11 ಚಾರಣಿಗರನ್ನೊಳಗೊಂಡ ಒಂದು ಗುಂಪು ಹರ್ಸ್ಲಿಯಿಂದ ನಾಪತ್ತೆಯಾಗಿತ್ತು. ಇವರಲ್ಲಿ ಏಳು ಮಂದಿ ಮೃತಪಟ್ಟಿದ್ದು, ಎಲ್ಲರ ಮೃತದೇಹಗಳೂ ಪತ್ತೆಯಾಗಿವೆ. ಇಬ್ಬರನ್ನು ರಕ್ಷಿಸಲಾಗಿದೆ ಮತ್ತು ಇಬ್ಬರು ಇನ್ನೂ ಸಿಕ್ಕಿಲ್ಲ. ಹಾಗೇ, ಇನ್ನೊಂದು 11 ಚಾರಣಿಗರನ್ನೊಳಗೊಂಡ ಗುಂಪು ಕೂಡ ಟ್ರೆಕಿಂಗ್ಗೆ ಹೋಗಿತ್ತು. ಅವರು ಲಮಖಾಗ ಪಾಸ್ ಬಳಿ ನಾಪತ್ತೆಯಾಗಿದ್ದರು. ಅವರಲ್ಲಿ 5 ಮಂದಿ ಮೃತಪಟ್ಟಿದ್ದು, ಎಲ್ಲರ ಶವಗಳೂ ಪತ್ತೆಯಾಗಿವೆ ಎಂದು ಮಾಹಿತಿ ನೀಡಿದ್ದಾರೆ. ಎರಡೂ ಗುಂಪಿನವರೂ ಅಕ್ಟೋಬರ್ 11ರಂದು ಚಾರಣ ಶುರು ಮಾಡಿದ್ದರು ಎಂದೂ ಮಾಹಿತಿ ನೀಡಿದ್ದಾರೆ.
ಸಮುದ್ರಮಟ್ಟದಿಂದ 16,500 ಅಡಿ ಎತ್ತರದಲ್ಲಿರುವ ಲಮ್ಖಗಾ ಪಾಸ್ನಲ್ಲಿ ನಿನ್ನೆ ಐಎಎಫ್ ಐದು ಮೃತದೇಹಗಳನ್ನು ಪತ್ತೆ ಮಾಡಿತ್ತು. ಹಾಗೇ ಬದುಕುಳಿದವರನ್ನು ರಕ್ಷಿಸಿತ್ತು. ಇದು 17 ಟ್ರೆಕ್ಕರ್ಸ್ ಇರುವ ಗುಂಪಾಗಿದ್ದು, ದಾರಿತಪ್ಪಿಸಿಕೊಂಡಿದ್ದರು. ಭಾರಿ ಹಿಮಪಾತ ಮತ್ತು ಪ್ರತಿಕೂಲ ಹವಾಮಾನದಿಂದಾಗಿ ಎಲ್ಲಿಯೂ ಹೋಗಲಾಗದೆ ಪರದಾಡುತ್ತಿದ್ದರು. ಸದ್ಯಕ್ಕಂತೂ ಉತ್ತರಾಖಂಡ್ನಲ್ಲಿ ಹಲವು ಕಡೆಗಳಲ್ಲಿ ಹೀಗೆ ಚಾರಣಿಗರು ಸಿಲುಕಿದ್ದು, ಅವರ ರಕ್ಷಣೆಗಾಗಿ ಐಎಎಫ್ ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದೆ.
ಇದನ್ನೂ ಓದಿ: ಅನ್ಯ ಕೋಮಿನ ಯುವತಿ ಜತೆಗೆ ಯುವಕನ ಪ್ರೀತಿ ಪ್ರೇಮ; ಪೋಷಕರು ವಾರ್ನ್ ಮಾಡಿದ ಬಳಿಕ ಯುವಕ ನಾಪತ್ತೆ
Published On - 11:14 am, Sat, 23 October 21