ಡಾರ್ಜಿಲಿಂಗ್ ಭೂಕುಸಿತದಿಂದ ಮೃತಪಟ್ಟವರ ಸಂಖ್ಯೆ 20ಕ್ಕೆ ಏರಿಕೆ; ನಾಳೆ ಸಿಎಂ ಮಮತಾ ಬ್ಯಾನರ್ಜಿ ಭೇಟಿ
ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನಲ್ಲಿ ಭಾರೀ ಭೂಕುಸಿತ ಉಂಟಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ಭೂತಾನ್ ಅಣೆಕಟ್ಟು ಉಕ್ಕಿ ಹರಿಯುತ್ತಿರುವುದರಿಂದ ಬಂಗಾಳದಲ್ಲಿ ಪ್ರವಾಹದ ಎಚ್ಚರಿಕೆ ನೀಡಲಾಗಿದೆ. ನಾಳೆ (ಅಕ್ಟೋಬರ್ 6) ಡಾರ್ಜಿಲಿಂಗ್ಗೆ ಸಿಎಂ ಮಮತಾ ಬ್ಯಾನರ್ಜಿ ಭೇಟಿ ನೀಡಲಿದ್ದಾರೆ.

ಡಾರ್ಜಿಲಿಂಗ್, ಅಕ್ಟೋಬರ್ 5: ಪಶ್ಚಿಮ ಬಂಗಾಳದ ಮಿರಿಕ್ ಮತ್ತು ಡಾರ್ಜಿಲಿಂಗ್ ಬೆಟ್ಟಗಳಲ್ಲಿ ಇಂದು ನಿರಂತರ ಮಳೆಯಿಂದ ಭಾರಿ ಭೂಕುಸಿತ (Landslide) ಸಂಭವಿಸಿದೆ. ಮನೆಗಳು ಕೊಚ್ಚಿಹೋಗಿವೆ, ರಸ್ತೆ ಸಂಪರ್ಕ ಕಡಿತಗೊಂಡಿವೆ, ಹಳ್ಳಿಗಳು ದ್ವೀಪದಂತಾಗಿದೆ. ಪ್ರವಾಸಕ್ಕೆ ಬಂದಿದ್ದ ನೂರಾರು ಪ್ರವಾಸಿಗರು ಸಿಲುಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭೂಕುಸಿತದಿಂದ ಮೃತಪಟ್ಟವರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ಗಂಭೀರವಾಗಿ ಗಾಯಗೊಂಡವರ ಸಂಖ್ಯೆಯೂ ಅಧಿಕವಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ತಾಂತ್ರಿಕ ವೈಫಲ್ಯದಿಂದಾಗಿ ಭೂತಾನ್‌ನ ತಾಲಾ ಜಲವಿದ್ಯುತ್ ಅಣೆಕಟ್ಟು ತುಂಬಿ ಹರಿಯಲು ಪ್ರಾರಂಭಿಸಿದ ನಂತರ ಉತ್ತರ ಬಂಗಾಳದಲ್ಲಿ ಪ್ರವಾಹದ ಅಲರ್ಟ್ ಘೋಷಿಸಲಾಗಿದೆ. ನಾಳೆ (ಸೋಮವಾರ) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಡಾರ್ಜಿಲಿಂಗ್ಗೆ ಭೇಟಿ ನೀಡಿ ಸಂತ್ರಸ್ತರ ಜೊತೆ ಮಾತನಾಡಲಿದ್ದಾರೆ.
ಇದನ್ನೂ ಓದಿ: ಡಾರ್ಜಿಲಿಂಗ್ ಭೂಕುಸಿತ; ಪ್ರಾಣದ ಹಂಗು ತೊರೆದು ಎನ್ಡಿಆರ್ಎಫ್ನಿಂದ ರಕ್ಷಣಾ ಕಾರ್ಯಾಚರಣೆ
ದುರ್ಗಾ ಪೂಜೆ ಮತ್ತು ಪೂಜೆಯ ನಂತರದ ಹಬ್ಬಗಳನ್ನು ಆನಂದಿಸಲು ಡಾರ್ಜಿಲಿಂಗ್ ಬೆಟ್ಟಗಳಿಗೆ ಸೇರಿದ್ದ ನೂರಾರು ಪ್ರವಾಸಿಗರು, ಭಾರೀ ಮಳೆಯಿಂದಾಗಿ ಭಾರಿ ಭೂಕುಸಿತ ಸಂಭವಿಸಿದ್ದರಿಂದ ಸಿಲುಕಿಕೊಂಡಿದ್ದಾರೆ. ಸಾಲು ಸಾಲು ರಜೆ ಇದ್ದುದರಿಂದ ಕೋಲ್ಕತ್ತಾ ಮತ್ತು ಬಂಗಾಳದ ಇತರ ಭಾಗಗಳಿಂದ ಹಲವಾರು ಕುಟುಂಬಗಳು ಮಿರಿಕ್, ಘೂಮ್ ಮತ್ತು ಲೆಪ್ಚಜಗತ್‌ನಂತಹ ಜನಪ್ರಿಯ ಸ್ಥಳಗಳಿಗೆ ಭೇಟಿ ನೀಡಿದ್ದರು. ಆದರೆ ಶನಿವಾರದಿಂದ ಮಳೆ ಸುರಿಯತೊಡಗಿದ್ದರಿಂದ ಅನೇಕ ಪ್ರವಾಸಿಗರು ಅಲ್ಲೇ ಸಿಲುಕಿಕೊಂಡಿದ್ದಾರೆ.
ಇದನ್ನೂ ಓದಿ: ಡಾರ್ಜಿಲಿಂಗ್‌ನಲ್ಲಿ ಭಾರೀ ಭೂಕುಸಿತ ಉಂಟಾಗಿ 9 ಜನ ಸಾವು; ಪ್ರಧಾನಿ ಮೋದಿ ಸಂತಾಪ
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂತ್ರಸ್ತರಿಗೆ ಪರಿಹಾರವನ್ನು ಘೋಷಿಸಿದ್ದು, ಮೊತ್ತದ ಪ್ರಮಾಣವನ್ನು ಇನ್ನೂ ತಿಳಿಸಿಲ್ಲ. ಭೂಕುಸಿತದ ಪರಿಸ್ಥಿತಿಯನ್ನು ನಿರ್ಣಯಿಸಲು ಅಕ್ಟೋಬರ್ 6ರಂದು ಉತ್ತರ ಬಂಗಾಳಕ್ಕೆ ಭೇಟಿ ನೀಡುವುದಾಗಿ ಅವರು ಹೇಳಿದ್ದಾರೆ. ಪ್ರಧಾನಿ ಮೋದಿ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ಕೂಡ ಡಾರ್ಜಿಲಿಂಗ್ ದುರಂತಕ್ಕೆ ಸಂತಾಪ ಸೂಚಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




