ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಬಿರಿಯಾನಿ ತಿಂದು 20 ವರ್ಷದ ಯುವತಿ ಸಾವು
ಯುವತಿಯೊಬ್ಬಳು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಬಿರಿಯಾನಿಯನ್ನು ಸೇವಿಸಿ ಸಾವನ್ನಪ್ಪಿರುವ ಘಟನೆ ಕೇರಳದಲ್ಲಿ ನಡೆದಿದೆ. ಇದೀಗ ಈ ಬಗ್ಗೆ ದೂರು ದಾಖಲಿಸಲಾಗಿದ್ದು ತನಿಖೆ ನಡೆಸಲಾಗುತ್ತಿದೆ.
ಪೆರುಂಬಳ: ಯುವತಿಯೊಬ್ಬಳು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಬಿರಿಯಾನಿಯನ್ನು (biryani ordered online) ಸೇವಿಸಿ ಸಾವನ್ನಪ್ಪಿರುವ ಘಟನೆ ಕೇರಳದಲ್ಲಿ ನಡೆದಿದೆ. ಇದೀಗ ಈ ಬಗ್ಗೆ ದೂರು ದಾಖಲಿಸಲಾಗಿದ್ದು ತನಿಖೆ ನಡೆಸಲಾಗುತ್ತಿದೆ. 20 ವರ್ಷದ ಯುವತಿ ಶನಿವಾರ ಸ್ಥಳೀಯ ಹೋಟೆಲ್‌ನ ಬಿರಿಯಾನಿ ಖಾದ್ಯವಾದ ಕುಜಿಮಂತಿಯನ್ನು ಸೇವಿಸಿ ಸಾವನ್ನಪ್ಪಿದ್ದಾಳೆ. ಕೇರಳದ ಪೆರುಂಬಳದ ಅಂಜು ಶ್ರೀಪಾರ್ವತಿ ಅವರು ಡಿಸೆಂಬರ್ 31 ರಂದು ಕಾಸರಗೋಡಿನ ರೋಮ್ಯಾನ್ಸಿಯಾ ಎಂಬ ರೆಸ್ಟೋರೆಂಟ್‌ನಿಂದ ಆನ್‌ಲೈನ್‌ನಲ್ಲಿ ಖರೀದಿಸಿದ ಕುಜಿಮಂತಿ ಬಿರಿಯಾನಿಯನ್ನು ಸೇವಿಸಿದ ನಂತರ ಆಕೆಗೆ ಹೊಟ್ಟೆ ನೋವು ಪ್ರಾರಂಭವಾಗಿತ್ತು, ತಕ್ಷಣ ಮನೆಯವರು ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು,ಯುವತಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಪೊಲೀಸರು ತಿಳಿಸಿದ್ದರು.
ಆಕೆಯ ಪೋಷಕರು ದೂರು ನೀಡಿದ ನಂತರ ಪ್ರಕರಣ ದಾಖಲಿಸಲಾಗಿದೆ. ಯುವತಿಯು ಶನಿವಾರ ಮುಂಜಾನೆ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ಪಿಟಿಐಗೆ ತಿಳಿಸಿದ್ದಾರೆ, ಮರಣೋತ್ತರ ಪರೀಕ್ಷೆಯ ವರದಿಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಯುವತಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು, ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ಅಲ್ಲಿಂದ ಮಂಗಳೂರಿನ ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವಳು ಸಾವನ್ನಪ್ಪಿದ್ದಾಳೆ.
ಇದನ್ನು ಓದಿ:ವೆಜ್ ಬಿರಿಯಾನಿಯಲ್ಲಿ ಮೂಳೆಗಳು ಪತ್ತೆ, ರೆಸ್ಟೋರೆಂಟ್ ವಿರುದ್ಧ ದೂರು ದಾಖಲು
ಕೇರಳದ ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ವರದಿ ಸಲ್ಲಿಸುವಂತೆ ಆಹಾರ ಸುರಕ್ಷತಾ ಆಯುಕ್ತರಿಗೆ ನಿರ್ದೇಶನ ನೀಡಲಾಗಿದೆ. ಘಟನೆ ಮತ್ತು ಬಾಲಕಿಗೆ ನೀಡಿದ ಚಿಕಿತ್ಸೆಯ ಬಗ್ಗೆಯೂ ಡಿಎಂಒ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಜಾರ್ಜ್ ಪತ್ತನಂತಿಟ್ಟದಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಆಹಾರದಲ್ಲಿ ವಿಷವಿತ್ತು ಎಂಬ ಆರೋಪ ಹೊತ್ತಿರುವ ಹೋಟೆಲ್‌ಗಳ ಪರವಾನಗಿಯನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ (ಎಫ್‌ಎಸ್‌ಎಸ್‌ಎ) ಅಡಿಯಲ್ಲಿ ರದ್ದುಗೊಳಿಸಲಾಗುವುದು ಎಂದು ಅವರು ಹೇಳಿದರು.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:43 pm, Sat, 7 January 23