FIFA ವಿಶ್ವಕಪ್ ಫುಟ್‌ಬಾಲ್ ಜತೆಯಾಗಿ ವೀಕ್ಷಿಸುವುದಕ್ಕಾಗಿ ₹23 ಲಕ್ಷ ವ್ಯಯಿಸಿ ಮನೆ ಖರೀದಿಸಿದ ಕೇರಳದ ಗೆಳೆಯರ ಬಳಗ

| Updated By: ರಶ್ಮಿ ಕಲ್ಲಕಟ್ಟ

Updated on: Nov 20, 2022 | 9:06 PM

ಕೇರಳದ ಕೊಚ್ಚಿಯ ಮುಂಡಕ್ಕಮುಗಲ್ ಗ್ರಾಮದ 17 ನಿವಾಸಿಗಳು ₹ 23 ಲಕ್ಷ ಕೊಟ್ಟು ಮನೆಯೊಂದನ್ನು ಖರೀದಿಸಿದ್ದಾರೆ. ಅವರು ಒಂದೇ ಸ್ಥಳದಲ್ಲಿ ಒಟ್ಟಿಗೆ ಫಿಫಾ ಪಂದ್ಯಗಳನ್ನು ವೀಕ್ಷಿಸಬಹುದು ಎಂಬ ಉದ್ದೇಶದಿಂದ ಈ ಮನೆ ಖರೀದಿಸಲಾಗಿದೆ.

FIFA ವಿಶ್ವಕಪ್ ಫುಟ್‌ಬಾಲ್ ಜತೆಯಾಗಿ ವೀಕ್ಷಿಸುವುದಕ್ಕಾಗಿ ₹23 ಲಕ್ಷ ವ್ಯಯಿಸಿ ಮನೆ ಖರೀದಿಸಿದ ಕೇರಳದ ಗೆಳೆಯರ ಬಳಗ
ಮನೆಯ ಮುಂದೆ ಕೇರಳದ ಫುಟ್​​ಬಾಲ್ ಪ್ರೇಮಿಗಳು
Follow us on

FIFA ವಿಶ್ವಕಪ್ 2022 (2022 FIFA World Cup) ಕತಾರ್‌ನಲ್ಲಿ (Qatar) ಶುರುವಾಗಿದ್ದು ಫುಟ್‌ಬಾಲ್ ಅಭಿಮಾನಿಗಳು ಆಟವನ್ನು ವೀಕ್ಷಿಸಲು ಸಜ್ಜಾಗಿದ್ದಾರೆ. ತಮ್ಮ ನೆಚ್ಚಿನ ಆಟಗಾರರ ಕಟೌಟ್‌ಗಳು ಮತ್ತು ಪೋಸ್ಟರ್‌ಗಳಿಂದ ಬೀದಿಗಳನ್ನು ಅಲಂಕರಿಸುವುದರಿಂದ ಮುಂಗಡವಾಗಿ ದುಬಾರಿ ಟಿಕೆಟ್‌ಗಳನ್ನು ಖರೀದಿಸುವವರೆಗೆ, ಫುಟ್‌ಬಾಲ್ ಅಭಿಮಾನಿಗಳು ಕ್ರೀಡೆಯ ಮೇಲಿನ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಎಲ್ಲಾ ರೀತಿಯ ಹುಚ್ಚುತನದ ಕೆಲಸಗಳನ್ನು ಮಾಡುತ್ತಾರೆ. ಕೇರಳದಲ್ಲಿ(Kerala) ಸಿಕ್ಕಾಪಟ್ಟೆ ಫುಟ್‌ಬಾಲ್ ಕ್ರೇಜ್  ಇದ್ದು, ಆಟದ ಮೇಲಿನ ಪ್ರೀತಿಯಿಂದ ಇಲ್ಲಿನ ಜನರು ಮನೆಯೊಂದನ್ನೇ ಖರೀದಿಸಿದ್ದು ಸುದ್ದಿಯಾಗಿದೆ. ಎಎನ್‌ಐ ವರದಿಯ ಪ್ರಕಾರ ಕೇರಳದ ಕೊಚ್ಚಿಯ ಮುಂಡಕ್ಕಮುಗಲ್ ಗ್ರಾಮದ 17 ನಿವಾಸಿಗಳು ₹ 23 ಲಕ್ಷ ಕೊಟ್ಟು ಮನೆಯೊಂದನ್ನು ಖರೀದಿಸಿದ್ದಾರೆ. ಅವರು ಒಂದೇ ಸ್ಥಳದಲ್ಲಿ ಒಟ್ಟಿಗೆ ಫಿಫಾ ಪಂದ್ಯಗಳನ್ನು ವೀಕ್ಷಿಸಬಹುದು ಎಂಬ ಉದ್ದೇಶದಿಂದ ಈ ಮನೆ ಖರೀದಿಸಲಾಗಿದೆ. ಫುಟ್‌ಬಾಲ್ ಪ್ರೇಮಿಗಳಾಗಿ ಈ ಸ್ನೇಹಿತರು ಹೊಸದಾಗಿ ಖರೀದಿಸಿದ ಮನೆಯನ್ನು ವಿಶ್ವಕಪ್‌ನಲ್ಲಿ ಭಾಗವಹಿಸುವ 32 ತಂಡಗಳ ಧ್ವಜಗಳ ಜೊತೆಗೆ ಫುಟ್‌ಬಾಲ್ ತಾರೆಗಳಾದ ಲಿಯೋನೆಲ್ ಮೆಸ್ಸಿ ಮತ್ತು ಕ್ರಿಸ್ಟಿಯಾನೊ ರೊನಾಲ್ಡೊ ಅವರ ಭಾವಚಿತ್ರಗಳೊಂದಿಗೆ ಅಲಂಕರಿಸಿದ್ದಾರೆ. ಮನೆಯಲ್ಲಿ ಎಲ್ಲರೂ ಒಟ್ಟಿಗೆ ಪಂದ್ಯ ವೀಕ್ಷಿಸಲು ದೊಡ್ಡ ಪರದೆಯ ಟಿವಿ ಅಳವಡಿಸಲಾಗಿದೆ.

ನಾವು FIFA ವಿಶ್ವಕಪ್ 2022 ಗಾಗಿ ವಿಶೇಷವಾದದ್ದನ್ನು ಮಾಡಲು ಯೋಚಿಸಿದ್ದೇವೆ. ನಮ್ಮಲ್ಲಿ 17 ಜನರು ಈಗಾಗಲೇ ₹ 23 ಲಕ್ಷಕ್ಕೆ ಮಾರಾಟದಲ್ಲಿರುವ ಮನೆಯನ್ನು ಖರೀದಿಸಿದ್ದು ಅದನ್ನು FIFA ತಂಡಗಳ ಧ್ವಜಗಳಿಂದ ಅಲಂಕರಿಸಿದ್ದೇವೆ. ನಾವು ಇಲ್ಲಿ ಒಟ್ಟಿಗೆ ಸೇರಲು ಮತ್ತು ಪಂದ್ಯವನ್ನು ವೀಕ್ಷಿಸಲು ಯೋಜಿಸಿದ್ದೇವೆ. ಅದಕ್ಕಾಗಿ ದೊಡ್ಡ ಪರದೆಯ ಟಿವಿ ಖರೀದಿಸಿರುವುದಾಗಿ ಶೆಫೀರ್ ಪಿಎ ಎಂಬವರು ಹೇಳಿರುವುದಾಗಿ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. ಮನೆಯನ್ನು ಖರೀದಿಸುವ ಮೊದಲು, ಈ ಗುಂಪು ಒಟ್ಟಾಗಿ ಫುಟ್‌ಬಾಲ್ ವೀಕ್ಷಿಸುತ್ತಿತ್ತು. ಇವರು ಕಳೆದ 15-20 ವರ್ಷಗಳಿಂದ ಜತೆಯಾಗಿಯೇ ಫುಟ್‌ಬಾಲ್ ವೀಕ್ಷಿಸುತ್ತಿದ್ದಾರೆ. ಹೀಗೆ ಜತೆಯಾಗಿ ಆಟ ನೋಡುವುದಕ್ಕಾಗಿಯೇ ಇವರು ಮನೆಯೊಂದನ್ನು ಖರೀದಿಸಿದ್ದಾರೆ.

ಭವಿಷ್ಯದಲ್ಲಿ, ನಮ್ಮ ಮುಂದಿನ ಪೀಳಿಗೆ ಕೂಡ ಈ ಕೂಟವನ್ನು ಆನಂದಿಸಬಹುದು. ನಮ್ಮ ಈ ಒಗ್ಗಟ್ಟು ಮುಂದುವರಿಯುತ್ತದೆ. ನಾವು ದೊಡ್ಡ ಟಿವಿ ಖರೀದಿಸಲು ಯೋಜಿಸುತ್ತಿದ್ದೇವೆ. ಎಲ್ಲಾ ತಲೆಮಾರುಗಳ ವೀಕ್ಷಕರು ಇಲ್ಲಿಗೆ ಬಂದು ಒಟ್ಟಿಗೆ ಆಟವನ್ನು ಆನಂದಿಸಲು ನಾವು ವ್ಯವಸ್ಥೆ ಮಾಡುತ್ತೇವೆ ಎಂದು ಶೆಫೀರ್ ಪಿಎ ಹೇಳಿದರು. ವಿಶ್ವಕಪ್ ಮುಗಿದ ನಂತರ ಈ ಮನೆಯನ್ನು ಏನು ಮಾಡುತ್ತೀರಿ ಎಂದು ಕೇಳಿದಾಗ ಈ ಮನೆಯು ಸಾಮಾಜಿಕ ಸೇವೆಗಳು, ತುರ್ತು ಸೇವೆಗಳು ಮತ್ತು ಕ್ರೀಡಾಕೂಟಗಳಿಗೆ ಸ್ಥಳವಾಗಲಿದೆ ಎಂದು ಹೇಳಿದ್ದಾರೆ ಶೆಫೀರ್. ಮನೆಯನ್ನು ಖರೀದಿಸಿದ ಗೆಳೆಯರ ಗುಂಪಿನಲ್ಲಿ ಒಬ್ಬರಾಗಿದ್ದಾರೆ ಶೆಫೀರ್.

FIFA ವಿಶ್ವಕಪ್ 2022 ಕತಾರ್‌ನಲ್ಲಿ ನವೆಂಬರ್ 20 ರಿಂದ ಡಿಸೆಂಬರ್ 18 ರವರೆಗೆ ನಡೆಯಲಿದೆ. ಉದ್ಘಾಟನಾ ಸಮಾರಂಭವು ಇಂದು ಸಂಜೆ 7:30 ಕ್ಕೆ ಪ್ರಾರಂಭವಾಗಿದೆ. ಮುಂದಿನ ತಿಂಗಳಿನಲ್ಲಿ, 32 ದೇಶಗಳ ರಾಷ್ಟ್ರೀಯ ತಂಡಗಳ ಆಟಗಾರರು ಸ್ಪರ್ಧಿಸುತ್ತಿದ್ದು ಡಿಸೆಂಬರ್ 18 ರಂದು ಫೈನಲ್ ಪಂದ್ಯ ನಡೆಯಲಿದೆ
ಅಲ್ ಖೋರ್‌ನ ಅಲ್ ಬೇತ್ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಈಕ್ವೆಡಾರ್ ತಂಡ ಆತಿಥೇಯ ಕತಾರ್ ವಿರುದ್ಧ ಸೆಣಸಲಿದೆ. ಮಧ್ಯಪ್ರಾಚ್ಯದ ದೇಶವೊಂದು ಫಿಫಾ ವಿಶ್ವಕಪ್‌ಗೆ ಆತಿಥ್ಯ ವಹಿಸುತ್ತಿರುವುದು ಇದೇ ಮೊದಲು.

Published On - 9:03 pm, Sun, 20 November 22