ಸಂಸತ್ ದಾಳಿಗೆ 22 ವರ್ಷ: ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಪ್ರಧಾನಿ ಮೋದಿ, ಸ್ಪೀಕರ್ ಓಂ ಬಿರ್ಲಾ

ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ ಮತ್ತು ಜೈಶ್-ಎ-ಮೊಹಮ್ಮದ್ ಸಂಘಟನೆಗಳ ಭಯೋತ್ಪಾದಕರು ಡಿಸೆಂಬರ್ 13, 2001 ರಂದು ಸಂಸತ್ತಿನ ಸಂಕೀರ್ಣದ ಮೇಲೆ ದಾಳಿ ಮಾಡಿದ್ದು, ಈ ದಾಳಿಯಲ್ಲಿ ಒಂಬತ್ತು ಜನರು ಸಾವಿಗೀಡಾಗಿದ್ದಾರೆ. ಸಂಸತ್ ಮೇಲೆ ದಾಳಿ ನಡೆದು ಇಂದಿಗೆ 22 ವರ್ಷ. ಈ ಸಂದರ್ಭದಲ್ಲಿ ಮೋದಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಸಂಸತ್ ದಾಳಿಗೆ 22 ವರ್ಷ: ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಪ್ರಧಾನಿ ಮೋದಿ, ಸ್ಪೀಕರ್ ಓಂ ಬಿರ್ಲಾ
ನರೇಂದ್ರ ಮೋದಿ
Follow us
|

Updated on:Dec 13, 2023 | 10:58 AM

ದೆಹಲಿ ಡಿಸೆಂಬರ್ 13: ಸಂಸತ್ ಮೇಲೆ ದಾಳಿ (Parliament attack)ನಡೆದು ಇಂದಿಗೆ 22 ವರ್ಷ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi), ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಗಣ್ಯರು ಬುಧವಾರ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಪಾಕಿಸ್ತಾನ (Pakistan) ಮೂಲದ ಲಷ್ಕರ್-ಎ-ತೊಯ್ಬಾ ಮತ್ತು ಜೈಶ್-ಎ-ಮೊಹಮ್ಮದ್ ಸಂಘಟನೆಗಳ ಭಯೋತ್ಪಾದಕರು ಡಿಸೆಂಬರ್ 13, 2001 ರಂದು ಸಂಸತ್ತಿನ ಸಂಕೀರ್ಣದ ಮೇಲೆ ದಾಳಿ ಮಾಡಿದ್ದು, ಈ ದಾಳಿಯಲ್ಲಿ ಒಂಬತ್ತು ಜನರು ಸಾವಿಗೀಡಾಗಿದ್ದಾರೆ. ದಾಳಿ ನಡೆಸಿದ ಐವರು ಭಯೋತ್ಪಾದಕರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದ್ದವು.

‘ದೇಶ ಎಂದೆಂದಿಗೂ ಋಣಿ’

2001 ರಲ್ಲಿ ಸಂಸತ್ತಿನ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ತಮ್ಮ ಪ್ರಾಣವನ್ನು ಅರ್ಪಿಸಿದ ಕೆಚ್ಚೆದೆಯ ಭದ್ರತಾ ಸಿಬ್ಬಂದಿಗೆ ರಾಷ್ಟ್ರವು ಎಂದೆಂದಿಗೂ ಋಣಿಯಾಗಿದೆ. ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುವ ಪ್ರತಿಜ್ಞೆಯನ್ನು ನಾವು ಪುನರುಚ್ಚರಿಸಬೇಕಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ. 22 ವರ್ಷಗಳ ಹಿಂದೆ ಈ ದಿನದಂದು, ದೇಶದ ರಾಜಕೀಯ ನಾಯಕತ್ವದ ಉನ್ನತ ಶ್ರೇಣಿಯನ್ನು ತೊಡೆದುಹಾಕಲು ಮತ್ತು ನಮ್ಮ ಪ್ರಜಾಪ್ರಭುತ್ವದ ದೇವಾಲಯಕ್ಕೆ ಹಾನಿ ಮಾಡುವ ಭಯೋತ್ಪಾದಕರ ದುಷ್ಕೃತ್ಯವನ್ನು ಮಾತೃಭೂಮಿಗಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ ಒಂಬತ್ತು ಮಂದಿ ಸೇರಿದಂತೆ ಕೆಚ್ಚೆದೆಯ ಭದ್ರತಾ ಸಿಬ್ಬಂದಿ ವಿಫಲಗೊಳಿಸಿದರು ಎಂದು ಮುರ್ಮು ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಬರೆದಿದ್ದಾರೆ.. ದೇಶವು ಅವರಿಗೆ ಋಣಿ ಆಗಿದೆ. ಅವರ ತ್ಯಾಗವನ್ನು ವ್ಯರ್ಥವಾಗಲು ಬಿಡುವುದಿಲ್ಲ, ಏಕೆಂದರೆ ಭಯೋತ್ಪಾದನೆಯನ್ನು ತೊಡೆದುಹಾಕಲು ನಾವು ಇಂದು ನಮ್ಮ ಪ್ರತಿಜ್ಞೆಯನ್ನು ಪುನರುಚ್ಚರಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ಮೋದಿ ಟ್ವೀಟ್

ಇಂದು, 2001 ರಲ್ಲಿ ಸಂಸತ್ತಿನ ದಾಳಿಯಲ್ಲಿ ಹುತಾತ್ಮರಾದ ಕೆಚ್ಚೆದೆಯ ಭದ್ರತಾ ಸಿಬ್ಬಂದಿಯನ್ನು ನಾವು ಸ್ಮರಿಸುತ್ತೇವೆ ಮತ್ತು ಅವರಿಗೆ ಹೃತ್ಪೂರ್ವಕ ಶ್ರದ್ಧಾಂಜಲಿಗಳನ್ನು ಸಲ್ಲಿಸುತ್ತೇವೆ. ಅಪಾಯದ ಸಂದರ್ಭದಲ್ಲಿ ಅವರ ಧೈರ್ಯ ಮತ್ತು ತ್ಯಾಗವು ನಮ್ಮ ರಾಷ್ಟ್ರದ ಸ್ಮರಣೆಯಲ್ಲಿ ಶಾಶ್ವತವಾಗಿ ಉಳಿಯುತ್ತದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ:  ಮನಿ ಹೈಸ್ಟ್; ಒಡಿಶಾದಲ್ಲಿ ಕೋಟಿ ನಗದು ವಶಪಡಿಸಿರುವ ವಿಡಿಯೊ ಟ್ವೀಟ್ ಮಾಡಿ ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ

ಡಿಸೆಂಬರ್ 13, 2001 ರಂದು ಏನಾಯಿತು?

ಡಿಸೆಂಬರ್ 13, 2001 ರಂದು ಸಂಸತ್ ಮೇಲೆ ಭಯೋತ್ಪಾದಕ ದಾಳಿ ನಡೆಯಿತು.ಪಾಕಿಸ್ತಾನ ಮೂಲದ ಉಗ್ರಗಾಮಿ ಗುಂಪುಗಳಾದ ಲಷ್ಕರ್-ಎ-ತೈಬಾ ಮತ್ತು ಜೈಶ್-ಎ-ಮೊಹಮ್ಮದ್‌ನೊಂದಿಗೆ ಸಂಯೋಜಿತವಾಗಿರುವ ಐವರು ಉಗ್ರರು ದಾಳಿ ಈ ದಾಳಿ ನಡೆಸಿದ್ದರು. ದಾಳಿಯಲ್ಲಿ 9 ಜನರು ಸಾವಿಗೀಡಾಗಿದ್ದು ಮತ್ತು 18 ವ್ಯಕ್ತಿಗಳು ಗಾಯಗೊಂಡರು. ಇದರಲ್ಲಿ ಆರು ದೆಹಲಿ ಪೊಲೀಸ್ ಅಧಿಕಾರಿಗಳು ಮತ್ತು ಇಬ್ಬರು ಸಂಸತ್ ಭದ್ರತಾ ಅಧಿಕಾರಿಗಳು ಸೇರಿದ್ದಾರೆ. ಸದನಗಳಲ್ಲಿ ಮಂತ್ರಿಗಳು ಮತ್ತು ಸಂಸದರಿಗೆ ಯಾವುದೇ ಹಾನಿಯಾಗದಂತೆ ಭದ್ರತಾ ಸಿಬ್ಬಂದಿ ನೋಡಿಕೊಂಡಿದ್ದಾರೆ.

ಎಕೆ-47 ರೈಫಲ್‌ಗಳು, ಗ್ರೆನೇಡ್ ಲಾಂಚರ್‌ಗಳು ಮತ್ತು ಕೈಬಂದೂಕುಗಳೊಂದಿಗೆ ಶಸ್ತ್ರಸಜ್ಜಿತರಾದ ದಾಳಿಕೋರರು ಬೆಳಿಗ್ಗೆ 11:40 ರ ಸುಮಾರಿಗೆ ಸಂಸತ್ತಿನ ಆವರಣವನ್ನು ಪ್ರವೇಶಿಸಿದರು. ಗೃಹ ಸಚಿವಾಲಯದ ನಕಲಿ ಸ್ಟಿಕ್ಕರ್‌ಗಳನ್ನುನ ಹೊಂದಿದ್ದ ಬಿಳಿಯ ಅಂಬಾಸಿಡರ್ ಕಾರು ಕಟ್ಟಡದ ಗೇಟ್ ಸಂಖ್ಯೆ 12 ಕಡೆಗೆ ಹೋಗುತ್ತಿತ್ತು. ಈ ಕಾರು ಪಾರ್ಲಿಮೆಂಟ್ ಹೌಸ್ ವಾಚ್ ಮತ್ತು ವಾರ್ಡ್ ಸಿಬ್ಬಂದಿಯೊಬ್ಬರ ಗಮನ ಸೆಳೆಯಿತು, ಅವರು ಕಾರನ್ನು ಹಿಂದಕ್ಕೆ ತಿರುಗಿಸಲು ಒತ್ತಾಯಿಸಿದರು. ಈ ಕಾರು ಬದಲಿಗೆ ಆಗಿನ ಉಪರಾಷ್ಟ್ರಪತಿ ಕ್ರಿಶನ್ ಕಾಂತ್ ಅವರ ವಾಹನಕ್ಕೆ ಡಿಕ್ಕಿ ಹೊಡೆದು “ಅಪಘಾತ” ಉಂಟುಮಾಡಿತು ಎಂದು ಅಂದಿನ ಉಪ ಪೊಲೀಸ್ ಆಯುಕ್ತ (ವಿಶೇಷ ಸೆಲ್) ಅಶೋಕ್ ಚಂದ್ ನೆನಪಿಸಿಕೊಂಡಿದ್ದಾರೆ. ಪರಿಣಾಮ, ಐವರು ಭಯೋತ್ಪಾದಕರು ವಾಹನದಿಂದ ಹೊರಬಂದ ನಂತರ ಗುಂಡಿನ ದಾಳಿ ನಡೆಸಿದರು.

ಉಗ್ರದಾಳಿಗೆ ಮೊದಲು ಬಲಿಯಾದವರು ಸಿಆರ್‌ಪಿಎಫ್ ಕಾನ್‌ಸ್ಟೆಬಲ್ ಕಮಲೇಶ್ ಕುಮಾರಿ, ನಂತರ  ಜಗದೀಶ್, ಮತ್ಬಾರ್, ನಾನಕ್ ಚಂದ್ ಮತ್ತು ರಾಂಪಾಲ್, ಸಹಾಯಕ ಸಬ್-ಇನ್ಸ್ಪೆಕ್ಟರ್, ದೆಹಲಿ ಪೋಲೀಸ್; ಓಂ ಪ್ರಕಾಶ್, ಬಿಜೇಂದರ್ ಸಿಂಗ್ ಮತ್ತು ಘನಶ್ಯಾಮ್, ದೆಹಲಿ ಪೋಲೀಸ್‌ನಲ್ಲಿ ಹೆಡ್ ಕಾನ್‌ಸ್ಟೆಬಲ್‌, ಕೇಂದ್ರ ಲೋಕೋಪಯೋಗಿ ಇಲಾಖೆ (CPWD) ತೋಟದ ಕೆಲಸಗಾರ ದೇಶ್ ರಾಜ್  ಉಗ್ರರ ದಾಳಿಯಲ್ಲಿ ಸಾವಿಗೀಡಾಗಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:50 am, Wed, 13 December 23