
ಲಕ್ನೋ, ಮಾರ್ಚ್ 16: ಪ್ರತಿಯೊಬ್ಬ ಗಂಡಸಿಗೂ ತಾನು ತಂದೆಯಾಗುವ ಕ್ಷಣ ಬಹಳ ವಿಶೇಷವಾಗಿರುತ್ತದೆ. ಅಪ್ಪ ತನಗೆಷ್ಟೇ ಕಷ್ಟ ಬಂದರೂ ಮಗುವಿಗೆ ಯಾವ ತೊಂದರೆಯೂ ಆಗದಂತೆ ನೋಡಿಕೊಳ್ಳುತ್ತಾನೆ. ಮಗುವಿನ ಭವಿಷ್ಯಕ್ಕಾಗಿ ಯಾವ ತ್ಯಾಗ ಮಾಡಲು ಬೇಕಾದರೂ ಸಿದ್ಧವಾಗಿರುತ್ತಾನೆ. ಆದರೆ, ಉತ್ತರ ಪ್ರದೇಶದಲ್ಲಿ ನಡೆದ ಘಟನೆ ಬಹಳ ಆತಂಕಕಾರಿಯಾದುದು. 4 ವರ್ಷದ ತನ್ನ ಸ್ವಂತ ಮಗುವಿಗೆ ಬೆಲ್ಟ್‌ನಿಂದ ಹೊಡೆದು, ಬೆಂಕಿ ಹಚ್ಚಿ ಸುಟ್ಟು ಕೊಲೆ (Child Killed in Lucknow) ಮಾಡಿರುವ ಘಟನೆ ಆಘಾತ ಮೂಡಿಸಿದೆ. ಆ ಪುಟ್ಟ ಮಗುವಿನ ಪಾಲಿಗೆ ಹೆತ್ತ ಅಪ್ಪ ಮತ್ತು ಮಲತಾಯಿಯೇ ರಾಕ್ಷಸರಾಗಿದ್ದಾರೆ.
ಲಕ್ನೋದ ಚೌಕ್ ಪ್ರದೇಶದಲ್ಲಿ ತನ್ನ 4 ವರ್ಷದ ಮಗನನ್ನು ಕೊಂದ ಆರೋಪದ ಮೇಲೆ ಆ ಮಗುವಿನ ತಂದೆ ಮತ್ತು ಆತನ ಎರಡನೇ ಪತ್ನಿಯನ್ನು ಬಂಧಿಸಲಾಗಿದೆ. ಮಗುವಿನ ತಾಯಿಯ ಅಜ್ಜಿ ನೀಡಿದ ದೂರಿನ ಆಧಾರದ ಮೇಲೆ ಆರೋಪಿಗಳಾದ ಭೀಷ್ಮ ಖರ್ಬಂದ (35) ಮತ್ತು ಅವನ ಪತ್ನಿ ರಾಗಿಣಿ ಖರ್ಬಂದ (30) ಅವರನ್ನು ಬಂಧಿಸಲಾಗಿದೆ. ಉನ್ನಾವೋದ ಸುಧಾ ಕಶ್ಯಪ್ ಅವರು ಮಾರ್ಚ್ 12ರಂದು ತಮ್ಮ ಮೊಮ್ಮಗ ಅರ್ನವ್ನ ಸಾವಿನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದಾದ ನಂತರ ಪೊಲೀಸರು ತನಿಖೆ ಆರಂಭಿಸಿದ್ದರು.
ಇದನ್ನೂ ಓದಿ: ಮನೆಯಲ್ಲಿ ಮಲಗಿದ್ದ ಮಗುವನ್ನು ಅಪಹರಿಸಿ, ಅತ್ಯಾಚಾರ ಮಾಡಿ, ಎಸೆದು ಹೋದ ಪಾಪಿಗಳು
“ನಾವು ಲಜ್‌ಪತ್ ನಗರದಲ್ಲಿರುವ ಮನೆಗೆ ತಲುಪಿದಾಗ ಮಗುವಿನ ಶವವನ್ನು ವರಾಂಡಾದಲ್ಲಿ ಇಡಲಾಗಿತ್ತು. ತಪಾಸಣೆ ನಡೆಸಿದಾಗ ಮಗುವಿನ ದೇಹದಾದ್ಯಂತ ಹಲವಾರು ಗಾಯದ ಗುರುತುಗಳು ಮತ್ತು ನೀಲಿ ಗುರುತು ಕಂಡುಬಂದವು, ಇದು ಮಗುವನ್ನು ಕ್ರೂರವಾಗಿ ಥಳಿಸಿರುವುದನ್ನು ಸೂಚಿಸುತ್ತದೆ. ಮಗುವಿನ ಪಾದಗಳ ಮೇಲೆ ಸುಟ್ಟ ಗುರುತುಗಳು ಸಹ ಇದ್ದವು” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೊರಕೆ, ಅಡುಗೆಮನೆಯ ಚಾಕು, ಬೆಲ್ಟ್ ಮತ್ತು ಹಗ್ಗ ಸೇರಿದಂತೆ ಅಪರಾಧದಲ್ಲಿ ಬಳಸಲಾಗಿದೆ ಎನ್ನಲಾದ ಹಲವಾರು ವಸ್ತುಗಳನ್ನು ಪೊಲೀಸ್ ತಂಡ ವಶಪಡಿಸಿಕೊಂಡಿದೆ.
ಮಗುವಿನ ತಾಯಿ ಅನಾರೋಗ್ಯದಿಂದ ಕೆಲವು ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ಅದಾದ ನಂತರ ಭೀಷ್ಮ ಮತ್ತೊಂದು ಮದುವೆಯಾಗಿದ್ದರು. ಭೀಷ್ಮ ಮತ್ತು ರಾಗಿಣಿ ಆಸ್ತಿಯ ದುರಾಸೆಯಿಂದ 4 ವರ್ಷದ ಮಗುವನ್ನು ಕೊಂದಿದ್ದಾರೆ ಎಂದು ಆ ಮಗುವಿನ ಅಜ್ಜಿ ಆರೋಪಿಸಿದ್ದಾರೆ. ದೂರಿನ ಆಧಾರದ ಮೇಲೆ, ಚೌಕ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ತಂದೆಯನ್ನು ಕೊಂದು, ತನ್ನ ಮಣಿಕಟ್ಟನ್ನೇ ಕೊಯ್ದುಕೊಂಡ ವ್ಯಕ್ತಿ
ತಂದೆ ಮತ್ತು ಮಲತಾಯಿ ಹುಡುಗನನ್ನು ಪದೇ ಪದೇ ಹೊಡೆಯುತ್ತಿದ್ದರು ಎಂದು ಅಕ್ಕಪಕ್ಕದವರು ಹೇಳಿದ್ದಾರೆ. ಮಗುವಿಗೆ ವಿದ್ಯುತ್ ಶಾಕ್ ನೀಡಲಾಗಿದ್ದು, ಆಗಾಗ ಕಠಿಣವಾದ ಶಿಕ್ಷೆ ವಿಧಿಸಲಾಗುತ್ತಿತ್ತು ಎನ್ನಲಾಗಿದೆ. ಆ ಮಗುವಿನ ದೇಹದ ಮೇಲೆ ಸುಮಾರು 18 ಗಾಯದ ಗುರುತುಗಳು ಗೋಚರಿಸಿವೆ ಎಂದು ಮಗುವಿನ ತಾಯಿಯ ಕಡೆಯ ಕುಟುಂಬ ಆರೋಪಿಸಿದೆ.
ಅರ್ನವ್ನ ತಾಯಿಯ ಮರಣದ ನಂತರ ಆ ಹುಡುಗ ತನ್ನ ತಾಯಿಯ ಸಂಬಂಧಿಕರೊಂದಿಗೆ ವಾಸಿಸುತ್ತಿದ್ದ. ಆದರೆ, ಸುಮಾರು 6 ತಿಂಗಳ ಹಿಂದೆ ಅವನ ತಂದೆ ನ್ಯಾಯಾಲಯದ ಆದೇಶದ ನಂತರ ಅವನನ್ನು ವಶಕ್ಕೆ ಪಡೆದರು. ಮನೆಯಲ್ಲಿ ಆತನ ತಂದೆ ಸದಾ ಮಗುವನ್ನು ಹೊಡೆಯುತ್ತಿದ್ದರು. ಮಗುವನ್ನು ಹೊರಗೆ ಆಟವಾಡಲು ಕೂಡ ಬಿಡುತ್ತಿರಲಿಲ್ಲ, ಯಾರ ಮನೆಗೂ ಕಳುಹಿಸುತ್ತಿರಲಿಲ್ಲ ಎಂದು ಆರೋಪಿಸಲಾಗಿದೆ.
ಬಂಧಿತ ದಂಪತಿಯನ್ನು ವಿಚಾರಣೆ ನಡೆಸಲಾಗುತ್ತಿದೆ ಮತ್ತು ಮುಂದಿನ ಕಾನೂನು ಕ್ರಮಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ