ನಾನು ದೆಹಲಿಗೂ ಹೋಗಬಲ್ಲೆ: ಕಂಗನಾ ಲೇವಡಿಗೆ 73ರ ಹರೆಯದ ಹೋರಾಟಗಾರ್ತಿಯ ತಿರುಗೇಟು
'₹100 ಕೊಟ್ಟರೆ ಇವರು ಪ್ರತಿಭಟನೆಗೆ ಬರ್ತಾರೆ ಎಂದು ನಟಿಯೊಬ್ಬರು ನನ್ನ ಬಗ್ಗೆ ಬರೆದಿದದ್ದರಂತೆ. ಆಕೆ ನನ್ನ ಮನೆಗೆ ಬಂದು ನೋಡಿಲ್ಲ. ನಾನು ಏನು ಮಾಡುತ್ತಿದ್ದೇನೆ ಎಂಬುದು ಆಕೆಗೆ ಗೊತ್ತಿಲ್ಲ’.
ಲುಧಿಯಾನ: ‘ಶಾಹೀನ್‌ಬಾಗ್ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಅಜ್ಜಿ ಈಗ ರೈತರ ಪ್ರತಿಭಟನೆಯಲ್ಲಿಯೂ ಇದ್ದಾರೆ. ₹100 ಕೊಟ್ಟರೆ ಇವರು ಪ್ರತಿಭಟನೆಗೆ ಬರುತ್ತಾರೆ’
– ರೈತರ ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಅಜ್ಜಿಯೊಬ್ಬರ ಫೋಟೊ ಶೇರ್ ಮಾಡಿ ನಟಿ ಕಂಗನಾ ರನೌತ್ ಈ ರೀತಿ ಟ್ವೀಟ್ ಮಾಡಿದ್ದರು.
ಈ ಟ್ವೀಟ್‌ನಲ್ಲಿ ಹೇಳಿರುವುದು ಸುಳ್ಳು ಎಂದು ನೆಟ್ಟಿಗರು ತರಾಟೆ ತೆಗೆದುಕೊಂಡ ನಂತರ ಕಂಗನಾ ಆ ಟ್ವೀಟ್ ಡಿಲೀಟ್ ಮಾಡಿದ್ದಾರೆ. ಅಂದಹಾಗೆ ಕಂಗನಾ ಅವರ ಟ್ವೀಟ್ ಮೂಲಕ ಸುದ್ದಿಯಾದ ಆ ಹಿರಿಯ ಮಹಿಳೆಯ ಹೆಸರು ಮೊಹಿಂದರ್ ಕೌರ್. ವಯಸ್ಸು 73. ಬಟಿಂಡಾದ ಬಹಾದವುರ್‌ಗಡ್ ಜಾಂದಿಯನ್ ಗ್ರಾಮದ ನಿವಾಸಿ ಮೊಹಿಂದರ್ ಕೌರ್ ಅವರಿಗೆ 13 ಎಕರೆ ಜಮೀನು ಇದೆ. ಪತಿ ಅಸ್ತಮಾ ರೋಗ ಪೀಡಿತರಾದ ನಂತರ ಆ ಜಮೀನಿನ ಜವಾಬ್ದಾರಿ ವಹಿಸಿರುವವರು ಮೊಹಿಂದರ್.
‘₹100 ಕೊಟ್ಟರೆ ಇವರು ಪ್ರತಿಭಟನೆಗೆ ಬರ್ತಾರೆ ಎಂದು ನಟಿಯೊಬ್ಬರು ನನ್ನ ಬಗ್ಗೆ ಬರೆದಿದದ್ದರಂತೆ. ಆಕೆ ನನ್ನ ಮನೆಗೆ ಬಂದು ನೋಡಿಲ್ಲ. ನಾನು ಏನು ಮಾಡುತ್ತಿದ್ದೇನೆ ಎಂಬುದು ಆಕೆಗೆ ಗೊತ್ತಿಲ್ಲ. ಆದರೆ ನಾನು ₹100 ಲಭ್ಯ ಎಂದು ಆಕೆ ಹೇಳುತ್ತಿದ್ದಾಳೆ. ನನಗೆ ಮೂವರು ಹೆಣ್ಣು ಮಕ್ಕಳು. ಮೂವರಿಗೂ ಮದುವೆಯಾಗಿದೆ. ನನ್ನ ಮಗ, ಸೊಸೆ ಮತ್ತು ಅವರ ಮಕ್ಕಳು ನನ್ನ ಜತೆ ವಾಸಿಸುತ್ತಿದ್ದಾರೆ. ನಾನು ಬತ್ತ ಬೆಳೆಯುತ್ತೇನೆ. ಈಗಲೂ ಹತ್ತಿಗಿಡದಿಂದ ಹತ್ತಿ ಕೊಯ್ಯುತ್ತೇನೆ. ನಮ್ಮ ಕುಟುಂಬಕ್ಕೆ ಅಗತ್ಯವಿರುವ ತರಕಾರಿಗಳನ್ನು ನಾವೆೇ ಬೆಳೆಸುತ್ತೇವೆ. ಈಗ ಕೃಷಿ ಮಾಡುವುದು ತುಂಬಾ ಕಷ್ಟ. ಹಾಗಾಗಿಯೇ ನಾನು ರೈತರ ಪ್ರತಿಭಟನೆಗಳಲ್ಲಿ ಭಾಗವಹಿಸುತ್ತಿರುವುದು. ನಾನೂ ರೈತ ಮಹಿಳೆ. ಪೆಟ್ರೋಲ್ ಬಂಕ್‌ಗಳ ಮುಂದೆಯೂ ನಾವು ಧರಣಿ ಸತ್ಯಾಗ್ರಹ ಮಾಡುತ್ತೇವೆ’ ಅಂತಾರೆ ಈ ಅಜ್ಜಿ.
ಢಬ್‌ವಲಿ ಗಡಿಭಾಗದಲ್ಲಿ ನಡೆದ ಧರಣಿ ಸತ್ಯಾಗ್ರಹದಲ್ಲಿಯೂ ಭಾಗಿಯಾಗಲು ಮೊಹಿಂದರ್ ಬಂದಿದ್ದರು. ಆದರೆ ಮೆರವಣಿಗೆ ನಡೆಸಬೇಕಾಗಿ ಬಂದಿದ್ದರಿಂದ ಆಕೆಯನ್ನು ವಾಪಸ್ ಕಳುಹಿಸಿದೆವು. ನಾನು ಪ್ರತಿಭಟನೆಯಲ್ಲಿ ಭಾಗಿಯಾಗುತ್ತೇನೆ ಎಂದು ಆಕೆ ಹಟ ಹಿಡಿದಿದ್ದರು ಎಂದು ಭಾರತೀಯ ಕಿಸಾನ್ ಸಂಘಟನೆಯ ಬ್ಲಾಕ್ ಅಧ್ಯಕ್ಷ ಧರಂಪಾಲ್ ಹೇಳುತ್ತಾರೆ.
ಈಗಲೂ ನಾನು ದೆಹಲಿಗೆ ಹೋಗಬಲ್ಲೆ, ನನ್ನಲ್ಲಿ ಆ ಹುರುಪು ಇದೆ. ರೈತರ ಹೋರಾಟಗಳಲ್ಲಿ ಭಾಗವಹಿಸಲು ನಾನು ಉತ್ಸುಕಳಾಗಿದ್ದೇನೆ ಅಂತಾರೆ ಮೊಹಿಂದರ್ ಕೌರ್.