ಯೂಟ್ಯೂಬರ್ ಭೇಟಿಯಾಗಲು ಕೊಯಮತ್ತೂರಿನಿಂದ ಓಡಿಹೋದ 7ನೇ ತರಗತಿ ವಿದ್ಯಾರ್ಥಿನಿಯರು!

ಯೂಟ್ಯೂಬರ್ ಆಗಿರುವ ಮೊನಾಲಿಸಾಳನ್ನು ಭೇಟಿಯಾಗಲು ತಮಿಳುನಾಡಿನ ಕೊಯಮತ್ತೂರಿನಿಂದ ನಾಲ್ವರು 7ನೇ ತರಗತಿಯ ಹುಡುಗಿಯರು ಓಡಿಹೋಗಿದ್ದಾರೆ. ಅವರನ್ನು ರೈಲ್ವೆ ನಿಲ್ದಾಣದಲ್ಲಿ ರಕ್ಷಿಸಲಾಯಿತು. ನಾಲ್ವರು ಹುಡುಗಿಯರು ಮೊನಾಲಿಸಾಳನ್ನು ವೈಯಕ್ತಿಕವಾಗಿ ಭೇಟಿಯಾಗಬೇಕೆಂಬ ಬಲವಾದ ಆಸೆಯನ್ನು ಬೆಳೆಸಿಕೊಂಡಿದ್ದರು. ಇದೇ ಕಾರಣದಿಂದ ಅವರು ಚೆನ್ನೈಗೆ ಪ್ರಯಾಣಿಸಲು ನಿರ್ಧರಿಸಿದರು. ಹೀಗಾಗಿ, ಇದ್ದಕ್ಕಿದ್ದಂತೆ ಮನೆಯಿಂದ ಓಡಿಹೋದರು. ಇದರಿಂದ ಆಘಾತಕ್ಕೊಳಗಾದ ಅವರ ಪೋಷಕರು ಕೊಯಮತ್ತೂರು ನಗರ ಪೊಲೀಸರಿಗೆ ದೂರು ನೀಡಿದರು.

ಯೂಟ್ಯೂಬರ್ ಭೇಟಿಯಾಗಲು ಕೊಯಮತ್ತೂರಿನಿಂದ ಓಡಿಹೋದ 7ನೇ ತರಗತಿ ವಿದ್ಯಾರ್ಥಿನಿಯರು!
Youtuber

Updated on: Apr 02, 2026 | 3:32 PM

ಕೊಯಮತ್ತೂರು, ಏಪ್ರಿಲ್ 2: ಯೂಟ್ಯೂಬರ್ (YouTuber) ಮೊನಾಲಿಸಾಳನ್ನು ಭೇಟಿಯಾಗುವ ಉದ್ದೇಶದಿಂದ ಕೊಯಮತ್ತೂರಿನಿಂದ ಚೆನ್ನೈಗೆ ಪ್ರಯಾಣಿಸಲು ಯತ್ನಿಸಿದ ನಾಲ್ವರು ಶಾಲಾ ವಿದ್ಯಾರ್ಥಿನಿಯರನ್ನು ಕೊಯಮತ್ತೂರು ರೈಲ್ವೆ ನಿಲ್ದಾಣದ ಪೊಲೀಸರು ರಕ್ಷಿಸಿದ್ದಾರೆ. ಕೊಯಮತ್ತೂರಿನ ಖಾಸಗಿ ಶಾಲೆಯಲ್ಲಿ 7ನೇ ತರಗತಿಯ ಆಪ್ತ ಸ್ನೇಹಿತರಾದ ನಾಲ್ವರು ವಿದ್ಯಾರ್ಥಿನಿಯರು ಮನೆಯಿಂದ ಓಡಿಹೋಗಿ ರೈಲು ಹತ್ತುವ ಮೊದಲೇ ಅವರನ್ನು ತಡೆಹಿಡಿಯಲಾಯಿತು.

ಈ ಹುಡುಗಿಯರು ತಮ್ಮ ಪೋಷಕರ ಒಪ್ಪಿಗೆ ಪಡೆದು ಮೊಬೈಲ್ ಫೋನ್‌ಗಳನ್ನು ಬಳಸುತ್ತಿದ್ದರು. ಬಳಿಕ ಇನ್‌ಸ್ಟಾಗ್ರಾಮ್‌ನಲ್ಲಿ ಖಾತೆಗಳನ್ನು ರಚಿಸಿದರು, ಅದರಲ್ಲಿ ಹಲವಾರು ಜನರನ್ನು ಸ್ನೇಹಿತರನ್ನಾಗಿ ಮಾಡಿಕೊಂಡರು. ಸದಾ ಆನ್‌ಲೈನ್‌ನಲ್ಲಿ ಚಾಟ್ ಮಾಡುತ್ತಿದ್ದರು. ಚೆನ್ನೈ ಮೂಲದ 22 ವರ್ಷದ ಜನಪ್ರಿಯ ಯೂಟ್ಯೂಬರ್ ಮೊನಾಲಿಸಾಳ ಬಗ್ಗೆ ಆ 4 ಹುಡುಗಿಯರಲ್ಲಿ ಒಬ್ಬಳಿಗೆ ತುಂಬ ಇಷ್ಟವಿತ್ತು. ಆಕೆ ಯಾವಾಗಲೂ ಮೊನಾಲಿಸಾಳ ವಿಡಿಯೋ, ರೀಲ್ಸ್​ಗಳನ್ನು ನೋಡುತ್ತಿದ್ದಳು. ಯಾವಾಗಲಾದರೂ ಒಮ್ಮೆ ಆಕೆಯನ್ನು ಭೇಟಿಯಾಗಬೇಕೆಂದು ಬಯಸಿದ್ದಳು.

ಇದನ್ನೂ ಓದಿ: ಮದುವೆ, ಆನ್​​ಲೈನ್​​ ಟ್ರೇಡಿಂಗ್​​ ಹೆಸರಲ್ಲಿ 18 ಲಕ್ಷ ಪಂಗನಾಮ ಹಾಕಿದ ಮಹಿಳೆ: ಹಣ ಕೊಟ್ಟು ಕೆಟ್ಟ ಎಂಜಿನಿಯರ್​​ನಿಂದ ದೂರು ದಾಖಲು

ಆಕೆ ಇನ್‌ಸ್ಟಾಗ್ರಾಮ್‌ನಲ್ಲಿ ಮೊನಾಲಿಸಾಳನ್ನು ಫಾಲೋ ಮಾಡುತ್ತಿದ್ದಳು. ಆಗಾಗ ಆಕೆಯೊಂದಿಗೆ ಚಾಟ್ ಕೂಡ ಮಾಡಿತ್ತಿದ್ದಳು. ತಾನು ಆಕೆಯನ್ನು ಭೇಟಿಯಾಗಬೇಕೆಂದುಕೊಂಡಿದ್ದೇನೆ ಎಂಬ ವಿಷಯವನ್ನು ಆಕೆ ತನ್ನ ಸ್ನೇಹಿತರೊಂದಿಗೆ ಹಂಚಿಕೊಂಡಾಗ ಉಳಿದ ಮೂವರು ಹುಡುಗಿಯರು ಸಹ ಮೊನಾಲಿಸಾಳನ್ನು ಫಾಲೋ ಮಾಡಲು ಪ್ರಾರಂಭಿಸಿದರು. ಅವರೂ ಆಕೆಯ ಜೊತೆ ಸಂಪರ್ಕದಲ್ಲಿದ್ದರು.

ಕ್ರಮೇಣ, ನಾಲ್ವರು ಹುಡುಗಿಯರು ಮೊನಾಲಿಸಾಳನ್ನು ವೈಯಕ್ತಿಕವಾಗಿ ಭೇಟಿಯಾಗಬೇಕೆಂಬ ಬಲವಾದ ಆಸೆಯನ್ನು ಬೆಳೆಸಿಕೊಂಡರು. ಇದೇ ಕಾರಣಕ್ಕೆ ಚೆನ್ನೈಗೆ ಪ್ರಯಾಣಿಸಲು ನಿರ್ಧರಿಸಿದರು. ಪ್ಲಾನ್ ಮಾಡಿ ಮನೆಯಿಂದ ಓಡಿಹೋದರು. ಅವರ ನಾಪತ್ತೆಯನ್ನು ಕಂಡು ಆಘಾತಕ್ಕೊಳಗಾದ ಅವರ ಪೋಷಕರು ಕೊಯಮತ್ತೂರು ನಗರ ಪೊಲೀಸರಿಗೆ ದೂರು ನೀಡಿದರು. ಪೊಲೀಸ್ ಆಯುಕ್ತರ ಆದೇಶದ ಮೇರೆಗೆ, ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ತೀವ್ರ ಶೋಧ ಕಾರ್ಯಾಚರಣೆ ನಡೆಸಲು ವಿಶೇಷ ತಂಡವನ್ನು ರಚಿಸಲಾಯಿತು.

ಇದನ್ನೂ ಓದಿ: ಮದುವೆಯಾದ ಒಂದು ತಿಂಗಳಲ್ಲೇ ಅತ್ತೆಗೆ ವಿಷ ಹಾಕಿ ಹಣ, ಒಡವೆಯೊಂದಿಗೆ ವಧು ಪರಾರಿ

ಆ ಹುಡುಗಿಯರು ಕೊಯಮತ್ತೂರು ರೈಲು ನಿಲ್ದಾಣದ ಕಡೆಗೆ ಹೋಗಿದ್ದಾರೆ ಎಂದು ತನಿಖೆಯಲ್ಲಿ ತಿಳಿದುಬಂದಿತು. ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ನಾಲ್ವರು ಹುಡುಗಿಯರನ್ನು ರಕ್ಷಿಸಿ, ಪೊಲೀಸ್ ಠಾಣೆಗೆ ಕರೆತಂದರು. ಬಳಿಕ ಆ ಪೊಲೀಸರು ಹುಡುಗಿಯರಿಗೆ ಬುದ್ಧಿ ಹೇಳಿ ಅವರ ಪೋಷಕರಿಗೆ ಒಪ್ಪಿಸಿದರು. ಈ ಘಟನೆಯ ಕುರಿತು ತನಿಖೆ ನಡೆಯುತ್ತಿದೆ.

ಯೂಟ್ಯೂಬರ್ ಮೊನಾಲಿಸಾಗೆ ಮೆಸೇಜ್ ಮಾಡಿದ್ದ ಈ ವಿದ್ಯಾರ್ಥಿನಿಯರು ಆಕೆಯನ್ನು ನೋಡಲು ಬಯುಸುತ್ತಿರುವುದಾಗಿ ಹೇಳಿದ್ದರು. ಅದಕ್ಕೆ ಆಕೆ “ಬನ್ನಿ” ಎಂದು ಉತ್ತರಿಸಿದ್ದಳು. ಈ ವಿಷಯಕ್ಕೆ ಸಂಬಂಧಿಸಿದಂತೆ ಮೊನಾಲಿಸಾಳನ್ನು ಪೊಲೀಸರು ಪ್ರಶ್ನಿಸಲಿದ್ದಾರೆ. ಈ ಉದ್ದೇಶಕ್ಕಾಗಿ ಆಕೆಗೆ ನೋಟಿಸ್ ಜಾರಿ ಮಾಡಲು ನಿರ್ಧರಿಸಲಾಗಿದೆ. ತನಿಖೆಯಲ್ಲಿ ಆಕೆ ನಿಜವಾಗಿಯೂ ಈ ಹುಡುಗಿಯರನ್ನು ತನ್ನನ್ನು ಭೇಟಿ ಮಾಡಲು ಆಹ್ವಾನಿಸಿದ್ದು ಸಾಬೀತಾದರೆ ಆಕೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us