ಬಂಗಾಳದಲ್ಲಿ ದುರ್ಗಾ ವಿಗ್ರಹ ವಿಸರ್ಜನೆ ವೇಳೆ ಪ್ರವಾಹಕ್ಕೆ ಸಿಲುಕಿ 8 ಜನ ಸಾವು; 30ಕ್ಕೂ ಹೆಚ್ಚು ಮಂದಿ ನಾಪತ್ತೆ

| Updated By: ಸುಷ್ಮಾ ಚಕ್ರೆ

Updated on: Oct 06, 2022 | 8:30 AM

ದುರ್ಗಾ ವಿಗ್ರಹ ವಿಸರ್ಜನೆ ವೇಳೆ ಏಕಾಏಕಿ ಪ್ರವಾಹ ಉಂಟಾಗಿದ್ದರಿಂದ ಈ ದುರಂತ ಸಂಭವಿಸಿದೆ. ಈ ಘಟನೆ ಕುರಿತು ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಬಂಗಾಳದಲ್ಲಿ ದುರ್ಗಾ ವಿಗ್ರಹ ವಿಸರ್ಜನೆ ವೇಳೆ ಪ್ರವಾಹಕ್ಕೆ ಸಿಲುಕಿ 8 ಜನ ಸಾವು; 30ಕ್ಕೂ ಹೆಚ್ಚು ಮಂದಿ ನಾಪತ್ತೆ
ಬಂಗಾಳದಲ್ಲಿ ದುರ್ಗಾ ವಿಗ್ರಹ ವಿಸರ್ಜನೆ ವೇಳೆ ಪ್ರವಾಹಕ್ಕೆ ಸಿಲುಕಿ 8 ಜನ ಸಾವು
Follow us on

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ದುರ್ಗಾ ವಿಗ್ರಹದ (Durga Idol) ವಿಸರ್ಜನೆ ವೇಳೆ ಪ್ರವಾಹದಲ್ಲಿ ಸಿಲುಕಿ 8 ಜನ ಸಾವನ್ನಪ್ಪಿದ್ದಾರೆ. ಜಲ್ಪೈಗುರಿಯಲ್ಲಿ ಮಾಲ್​ ನದಿ ಪ್ರವಾಹಕ್ಕೆ ಸಿಲುಕಿ 8 ಜನರು ಬಲಿಯಾಗಿದ್ದಾರೆ. ನದಿಯ ಪ್ರವಾಹದಲ್ಲಿ ಕೊಚ್ಚಿಹೋಗಿದ್ದ 70 ಜನರ ರಕ್ಷಣೆ ಮಾಡಲಾಗಿದೆ. ಈ ದುರಂತದಲ್ಲಿ 13 ಜನರಿಗೆ ಗಾಯಗಳಾಗಿದ್ದು, ರಕ್ಷಣಾ ಕಾರ್ಯ ಮುಂದುವರಿದಿದೆ. ಮಾಲ್ ನದಿ ಪ್ರವಾಹದಲ್ಲಿ ಸಿಲುಕಿ ಇನ್ನೂ 30-40 ಜನರು ನಾಪತ್ತೆಯಾಗಿದ್ದಾರೆ. ದುರ್ಗಾ ವಿಗ್ರಹ ವಿಸರ್ಜನೆ ವೇಳೆ ಏಕಾಏಕಿ ಪ್ರವಾಹ (Flood) ಉಂಟಾಗಿದ್ದರಿಂದ ಈ ದುರಂತ ಸಂಭವಿಸಿದೆ. ಈ ಘಟನೆ ಕುರಿತು ಪ್ರಧಾನಿ ನರೇಂದ್ರ ಮೋದಿ (Narendra Modi) ಸಂತಾಪ ವ್ಯಕ್ತಪಡಿಸಿದ್ದಾರೆ.

ನಿನ್ನೆ ರಾತ್ರಿ ದುರ್ಗಾ ಮಾತೆ ವಿಗ್ರಹಗಳ ವಿಸರ್ಜನೆ ವೇಳೆ ಈ ಘಟನೆ ನಡೆದಿದ್ದು, ಮೃತಪಟ್ಟವರಲ್ಲಿ ನಾಲ್ವರು ಮಹಿಳೆಯರು ಸೇರಿದ್ದಾರೆ. ನಿನ್ನೆ ಸಂಜೆ ದುರ್ಗಾ ವಿಗ್ರಹದ ವಿಸರ್ಜನೆಗೆ ನೂರಾರು ಜನರು ನದಿಯ ದಡದಲ್ಲಿ ಜಮಾಯಿಸಿದ್ದರು. ಆಗ ಇದ್ದಕ್ಕಿದ್ದಂತೆ ಹಠಾತ್ ಪ್ರವಾಹ ಅಪ್ಪಳಿಸಿತು. ಅದರಲ್ಲಿ ಜನರು ಕೊಚ್ಚಿಹೋದರು. ಇದುವರೆಗೆ 8 ಶವಗಳನ್ನು ಹೊರತೆಗೆಯಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: 34 ಅಡಿ ಎತ್ತರ ಗಣೇಶನನ್ನು ವಿಸರ್ಜನೆ ಮಾಡಬೇಕು ಎನ್ನುವಷ್ಟರಲ್ಲೇ ನಡೆಯಿತು ಘೋರ ದುರಂತ

ಸಣ್ಣಪುಟ್ಟ ಗಾಯಗಳಾಗಿರುವ 13 ಮಂದಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಪೊಲೀಸ್ ಮತ್ತು ಸ್ಥಳೀಯ ಆಡಳಿತದ ತಂಡಗಳು ನಾಪತ್ತೆಯಾದವರಿಗಾಗಿ ಶೋಧ ನಡೆಸುತ್ತಿವೆ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಕಚೇರಿ ಈ ದುರಂತಕ್ಕೆ ಸಂತಾಪ ಸೂಚಿಸಿದ್ದು, “ಪಶ್ಚಿಮ ಬಂಗಾಳದ ಜಲ್ಪೈಗುರಿಯಲ್ಲಿ ದುರ್ಗಾ ಪೂಜೆಯ ಸಂದರ್ಭದಲ್ಲಿ ಸಂಭವಿಸಿದ ದುರ್ಘಟನೆಯಿಂದ ದುಃಖವಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪಗಳು” ಎಂದು ಪ್ರಧಾನ ಮಂತ್ರಿಯನ್ನು ಉಲ್ಲೇಖಿಸಿ ಪಿಎಂಒ ಟ್ವೀಟ್ ಮಾಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:27 am, Thu, 6 October 22