ಅಕ್ಟೋಬರ್ ವೇಳೆಗೆ 85 ಕೋಟಿ ಡೋಸ್ ಸ್ಪುಟ್ನಿಕ್ ಲಸಿಕೆ ಲಭ್ಯ; ರಷ್ಯಾದಿಂದ ಭಾರತಕ್ಕೆ ನಿರೀಕ್ಷೆಗೂ ಮೀರಿದ ಸಹಾಯ

|

Updated on: May 22, 2021 | 3:16 PM

ರಷ್ಯಾದ ಸ್ಪುಟ್ನಿಕ್ ಲಸಿಕೆಯ ಉತ್ಪಾದನೆಯು ಆಗಸ್ಟ್ ತಿಂಗಳಲ್ಲಿ ಭಾರತದಲ್ಲಿ ಆರಂಭವಾಗಲಿದೆ. ಸೆಪ್ಟೆಂಬರ್-ಅಕ್ಟೋಬರ್ ವೇಳೆಗೆ ಬರೋಬ್ಬರಿ 85 ಕೋಟಿ ಡೋಸ್ ಸ್ಪುಟ್ನಿಕ್ ಲಸಿಕೆಯನ್ನು ಭಾರತದಲ್ಲಿ ಉತ್ಪಾದಿಸಲಾಗುತ್ತದೆ ಎಂದು ರಷ್ಯಾದಲ್ಲಿರುವ ಭಾರತದ ರಾಯಭಾರಿ ವೆಂಕಟೇಶ್ ವರ್ಮಾ ಶನಿವಾರ ರಷ್ಯಾದ ಸೇಂಟ್ ಪೀಟರ್ ಬರ್ಗ್‌ನಲ್ಲಿ  ಹೇಳಿದ್ದಾರೆ.

ಅಕ್ಟೋಬರ್ ವೇಳೆಗೆ 85 ಕೋಟಿ ಡೋಸ್ ಸ್ಪುಟ್ನಿಕ್ ಲಸಿಕೆ ಲಭ್ಯ; ರಷ್ಯಾದಿಂದ ಭಾರತಕ್ಕೆ ನಿರೀಕ್ಷೆಗೂ ಮೀರಿದ ಸಹಾಯ
ಸ್ಪುಟ್ನಿಕ್-v ಲಸಿಕೆ
Follow us on

ದೆಹಲಿ: ವಿಶ್ವದ ದೊಡ್ಡಣ್ಣ ಆಮೆರಿಕಾದ ಬಳಿ ತನ್ನ ಅಗತ್ಯಕ್ಕಿಂತ ಹೆಚ್ಚಿನ ಕೊರೊನಾ ಲಸಿಕೆ ಇದ್ದರೂ, ಭಾರತಕ್ಕೆ ಲಸಿಕೆ ನೀಡಲು ಹಿಂದೇಟು ಹಾಕುತ್ತಿದೆ. ಆದರೇ ಈಗ ಭಾರತದ ನೆರವಿಗೆ ಹಳೆಯ ಮಿತ್ರ ರಾಷ್ಟ್ರ ರಷ್ಯಾ ಧಾವಿಸಿದೆ. ಭಾರತದಲ್ಲೇ ಆಗಸ್ಟ್ ತಿಂಗಳಿನಿಂದ ರಷ್ಯಾದ ಸ್ಪುಟ್ನಿಕ್-v ಲಸಿಕೆ ಉತ್ಪಾದನೆ ಆರಂಭವಾಗಲಿದೆ. ಅಕ್ಟೋಬರ್ ವೇಳೆಗೆ ಭಾರತದಲ್ಲಿ 85 ಕೋಟಿ ಡೋಸ್ ಸ್ಪುಟ್ನಿಕ್ ಲಸಿಕೆ ಲಭ್ಯವಾಗಲಿದೆ. ಆ ಮೂಲಕ ಕೇಂದ್ರ ಸರ್ಕಾರವು ನಿರೀಕ್ಷಿಸಿರುವುದಕ್ಕಿಂತ ಹೆಚ್ಚಿನ ಪ್ರಮಾಣದ ಲಸಿಕೆ ಭಾರತಕ್ಕೆ ಲಭ್ಯವಾಗಲಿದೆ.

ಭಾರತದ ಕೊರೊನಾ ಸೋಂಕಿನ ವಿರುದ್ಧದ ಲಸಿಕಾ ಅಭಿಯಾನಕ್ಕೆ ದೊಡ್ಡ ಶಕ್ತಿ ನೀಡಲು ಈಗ ಭಾರತದ ಮಿತ್ರ ರಾಷ್ಟ್ರ ರಷ್ಯಾ ಮುಂದಾಗಿದೆ. ಪ್ರಮುಖ ಲಸಿಕಾ ಕಂಪನಿಗಳ ಲಸಿಕೆಯನ್ನು ತಮ್ಮ ಅಗತ್ಯಕ್ಕಿಂತ ಹೆಚ್ಚಾಗಿ ಆಮೆರಿಕಾ, ಇಂಗ್ಲೆಂಡ್, ಯೂರೋಪಿಯನ್ ರಾಷ್ಟ್ರಗಳು ಖರೀದಿಸಿವೆ. ಭಾರತವು ಎರಡೇ ಕಂಪನಿಗಳ ಮೇಲೆ ಅವಲಂಬಿತವಾಗಿದ್ದು, ಸಂಕಷ್ಟಕ್ಕೆ ಸಿಲುಕಿದೆ. ಆದರೆ ಶತ್ರು ದೇಶಗಳ ಜೊತೆಗೆ ಯುದ್ಧ ಸೇರಿದಂತೆ ಸವಾಲಿನ ಪರಿಸ್ಥಿತಿಯಲ್ಲಿದ್ದಾಗ ನೆರವಿಗೆ ಧಾವಿಸುವ ಮಿತ್ರ ರಾಷ್ಟ್ರ ರಷ್ಯಾ ಈಗಲೂ ಭಾರತದ ನೆರವಿಗೆ ಧಾವಿಸಿದೆ . ಭಾರತಕ್ಕೆ ಹೆಚ್ಚಿನ ಪ್ರಮಾಣದ ಕೊರೊನಾ ವಿರುದ್ಧದ ಲಸಿಕೆಯನ್ನು ಉತ್ಪಾದಿಸಿ ನೀಡಲು ರಷ್ಯಾ ಮುಂದಾಗಿದೆ.

ಕೊವ್ಯಾಕ್ಸಿನ್ ಲಸಿಕೆಯು ಕೊರೊನಾ ವೈರಸ್ ವಿರುದ್ಧ ಶೇಕಡಾ 78 ರಷ್ಟು ಪರಿಣಾಮಕಾರಿ ಎಂದು ಭಾರತ್ ಬಯೋಟೆಕ್ ಹೇಳಿದೆ. ಇನ್ನೂ ಸೆರಮ್ ಇನ್ಸ್​ಟಿಟ್ಯೂಟ್ ಆಫ್ ಇಂಡಿಯಾದ ಕೊವಿಶೀಲ್ಡ್ ಲಸಿಕೆ ಸೋಂಕಿನ ವಿರುದ್ಧ ಶೇಕಡಾ 70 ರಷ್ಟು ಪರಿಣಾಮಕಾರಿ ಎಂದು ಹೇಳಿದೆ. ಇವೆರಡಕ್ಕೆ ಹೋಲಿಸಿದರೆ, ರಷ್ಯಾದ ಸ್ಪುಟ್ನಿಕ್ ಲಸಿಕೆಯು ಕೊರೊನಾ ವೈರಸ್ ವಿರುದ್ಧ ಶೇಕಡಾ 91.6ರಷ್ಟು ಪರಿಣಾಮಕಾರಿಯಾಗಿದೆ. ಹೀಗಾಗಿ ರಷ್ಯಾದ ಸ್ಪುಟ್ನಿಕ್ ಲಸಿಕೆಗೆ ಭಾರತದಲ್ಲಿ ಬಾರಿ ಬೇಡಿಕೆ ಇದೆ.

ಕೇಂದ್ರ ಸರ್ಕಾರ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಡೋಸ್ ಉತ್ಪಾದಿಸಲು ರಷ್ಯಾ ಕ್ರಮ ಕೈಗೊಂಡಿದೆ. ರಷ್ಯಾದ ಸ್ಪುಟ್ನಿಕ್ ಲಸಿಕೆಯ ಉತ್ಪಾದನೆಯು ಆಗಸ್ಟ್ ತಿಂಗಳಲ್ಲಿ ಭಾರತದಲ್ಲಿ ಆರಂಭವಾಗಲಿದೆ. ಸೆಪ್ಟೆಂಬರ್-ಅಕ್ಟೋಬರ್ ವೇಳೆಗೆ ಬರೋಬ್ಬರಿ 85 ಕೋಟಿ ಡೋಸ್ ಸ್ಪುಟ್ನಿಕ್ ಲಸಿಕೆಯನ್ನು ಭಾರತದಲ್ಲಿ ಉತ್ಪಾದಿಸಲಾಗುತ್ತದೆ ಎಂದು ರಷ್ಯಾದಲ್ಲಿರುವ ಭಾರತದ ರಾಯಭಾರಿ ವೆಂಕಟೇಶ್ ವರ್ಮಾ ಶನಿವಾರ ರಷ್ಯಾದ ಸೇಂಟ್ ಪೀಟರ್ ಬರ್ಗ್‌ನಲ್ಲಿ  ಹೇಳಿದ್ದಾರೆ.

ಇದು ಭಾರತದ ಪಾಲಿಗೆ ಅತ್ಯಂತ ಮಹತ್ವದ ಬೆಳವಣಿಗೆ. ಏಕೆಂದರೇ, ಕೇಂದ್ರ ಸರ್ಕಾರವೇ ಈ ವರ್ಷದ ಆಗಸ್ಟ್​ನಿಂದ ಡಿಸೆಂಬರ್ ವೇಳೆಗೆ ಭಾರತಕ್ಕೆ ರಷ್ಯಾದ ಸ್ಪುಟ್ನಿಕ್ ಲಸಿಕೆಯ 15.6 ಕೋಟಿ ಡೋಸ್ ಲಸಿಕೆ ಮಾತ್ರ ಸಿಗುವ ನಿರೀಕ್ಷೆಯನ್ನು ಇಟ್ಟುಕೊಂಡಿತ್ತು. ಆದರೇ, ಇದರ ಆರು  ಪಟ್ಟು ಹೆಚ್ಚಿನ ಡೋಸ್ ಲಸಿಕೆಯು ಸಿಗುತ್ತದೆ ಎಂದು ಭಾರತದ ರಾಯಭಾರಿ ವೆಂಕಟೇಶ್ ವರ್ಮಾ ಹೇಳಿರುವುದು ನಿರೀಕ್ಷೆಯನ್ನು ಹೆಚ್ಚಿಸಿದೆ. ಜೊತೆಗೆ ಕುತೂಹಲಕ್ಕೂ ಕಾರಣವಾಗಿದೆ.

ಭಾರತದ ರಾಯಭಾರಿ ಹೇಳಿರುವಂತೆ ಭಾರತಕ್ಕೆ 85 ಕೋಟಿ ಡೋಸ್ ಸ್ಪುಟ್ನಿಕ್ ಲಸಿಕೆ ಸಿಕ್ಕರೇ, 42.5 ಕೋಟಿ ಜನರಿಗೆ ತಲಾ 2 ಡೋಸ್​ನಂತೆ ಲಸಿಕೆ ನೀಡಲು ಸಾಧ್ಯ.  ಭಾರತದಲ್ಲಿ ಇದುವರೆಗೂ ಕೊವಿಶೀಲ್ಡ್, ಕೊವ್ಯಾಕ್ಸಿನ್ ಹಾಗೂ ಸ್ಪುಟ್ನಿಕ್ ಲಸಿಕೆಗಳಿಗೆ ಮಾತ್ರ ತುರ್ತು ಬಳಕೆಗೆ ಅನುಮೋದನೆ ನೀಡಲಾಗಿದೆ. ಸ್ಪುಟ್ನಿಕ್ ಲಸಿಕೆಯ ಉತ್ಪಾದನೆ ಹೆಚ್ಚಾದಷ್ಟು ಭಾರತಕ್ಕೆ ಅನುಕೂಲವಾಗಲಿದೆ . ಭಾರತಕ್ಕೆ ಮೂರು ರೀತಿಯಲ್ಲಿ ರಷ್ಯಾದ ಸ್ಪುಟ್ನಿಕ್ ಲಸಿಕೆಯು ಸಿಗಲಿದೆ. ಮೊದಲನೇಯದಾಗಿ ಭಾರತಕ್ಕೆ ನೇರವಾಗಿ ರಷ್ಯಾದಿಂದ ಲಸಿಕೆ ರಫ್ತು ಮಾಡುವುದು. ಎರಡನೇಯದಾಗಿ ಭಾರತದಲ್ಲಿ ಬಾಟಲಿಯಲ್ಲಿ ಲಸಿಕೆ ತುಂಬಿ, ಪ್ರಕ್ರಿಯೆ ಪೂರ್ಣಗೊಳಿಸಿ ಲಸಿಕೆಯನ್ನು ನೀಡುವುದು. ಮೂರನೇಯದಾಗಿ ಭಾರತದಲ್ಲಿ ಪೂರ್ಣ ಪ್ರಮಾಣದಲ್ಲಿ ಲಸಿಕೆ ಉತ್ಪಾದನೆಗೆ ಭಾರತದ ಕಂಪನಿಗಳಿಗೆ ಲಸಿಕೆಯ ತಂತ್ರಜ್ಞಾನ ವರ್ಗಾವಣೆ  ಮಾಡಿ ಭಾರತದಲ್ಲೇ ಉತ್ಪಾದನೆ ಆಗುವಂತೆ ಮಾಡುವುದು.

ಈಗಾಗಲೇ ಲಸಿಕೆ ಸಂಶೋಧನೆಗೆ ಫಂಡಿಂಗ್ ಮಾಡಿರುವ ರಷ್ಯನ್ ಡೈರೆಕ್ಟ್ ಇನ್​ವೆಸ್ಟ್​ಮೆಂಟ್ ಫಂಡ್, ಭಾರತದಲ್ಲಿ ಸ್ಪುಟ್ನಿಕ್ ಲಸಿಕೆಯ ಉತ್ಪಾದನೆಗೆ ಐದು ಕಂಪನಿಗಳ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಪನಸಿಯಾ ಬಯೋಟೆಕ್, ವಿರಚೋವ್ ಬಯೋಟೆಕ್, ಸ್ಟಿಲಿಸ್ ಬಯೋಫಾರ್ಮಾ, ಗ್ಲಾಂಡಾ ಫಾರ್ಮಾ ಹಾಗೂ ಹೈದರಾಬಾದ್‌ನ ಹೆಟೆರೋ ಕಂಪನಿ ಸೇರಿದಂತೆ ಐದು ಕಂಪನಿಗಳ ಜೊತೆಗೆ ರಷ್ಯನ್ ಡೈರೆಕ್ಟ್ ಇನ್​ವೆಸ್ಟ್​ಮೆಂಟ್ ಫಂಡ್ ಲಸಿಕೆಯನ್ನು ಭಾರತದಲ್ಲೇ ಉತ್ಪಾದನೆ ಮಾಡಲು ಒಪ್ಪಂದ ಮಾಡಿಕೊಂಡಿದೆ. ಆ ಮೂಲಕ ಐದು ಕಂಪನಿಗಳು ಭಾರತದಲ್ಲಿರುವ ತಮ್ಮ ಘಟಕಗಳಲ್ಲಿ ಸ್ಪುಟ್ನಿಕ್ ಲಸಿಕೆಯನ್ನು ಉತ್ಪಾದನೆ ಮಾಡಲಿವೆ.

ವಿಶ್ವದಲ್ಲಿ ಎಲ್ಲೇ ಸ್ಪುಟ್ನಿಕ್ ಲಸಿಕೆ ಉತ್ಪಾದನೆಯಾದರೂ, ಅದರ ಶೇಕಡಾ 65-70 ರಷ್ಟು ಭಾರತದಲ್ಲಿ ಉತ್ಪಾದನೆಯಾಗಿರುತ್ತದೆ. ಭಾರತದಲ್ಲಿ ಉತ್ಪಾದನೆಯಾಗುವ ಲಸಿಕೆಯನ್ನು  ಅಂತಿಮವಾಗಿ ಭಾರತಕ್ಕೆ ನೀಡಲಾಗುತ್ತದೆ. ಭಾರತದ ಲಸಿಕೆಯ ಬೇಡಿಕೆ ಪೂರ್ಣವಾದ ಬಳಿಕ ವಿಶ್ವದ ಬೇರೆ ದೇಶಗಳಿಗೆ ಲಸಿಕೆಯನ್ನು ರಷ್ಯಾ ರಫ್ತು ಮಾಡಲಿದೆ ಎಂದು ರಾಯಭಾರಿ ವೆಂಕಟೇಶ್ ವರ್ಮಾ ಹೇಳಿದ್ದಾರೆ.

ರಷ್ಯಾದಿಂದ ಈಗಾಗಲೇ ಎರಡು ಕಂತುಗಳಲ್ಲಿ ಎರಡು ಲಕ್ಷದ ಹತ್ತು ಸಾವಿರ ಡೋಸ್ ಸ್ಪುಟ್ನಿಕ್ ಲಸಿಕೆ ಭಾರತಕ್ಕೆ ಬಂದಿದೆ. ಮೇ 1 ರಂದು 1.5 ಲಕ್ಷ ಡೋಸ್ ಸ್ಪುಟ್ನಿಕ್ ಲಸಿಕೆ ಭಾರತಕ್ಕೆ ಬಂದಿತ್ತು. ಆದಾದ ಬಳಿಕ ಕಳೆದ ವಾರ 60 ಸಾವಿರ ಡೋಸ್ ಲಸಿಕೆಯನ್ನು ಭಾರತಕ್ಕೆ ಕಳಿಸಲಾಗಿದೆ. ಮೇ ತಿಂಗಳ ಅಂತ್ಯದೊಳಗೆ 30 ಲಕ್ಷ ಡೋಸ್ ಸ್ಪುಟ್ನಿಕ್ ಲಸಿಕೆಯನ್ನು ಭಾರತಕ್ಕೆ ಪೂರೈಸಲಾಗುತ್ತದೆ. ಜೂನ್ ತಿಂಗಳೊಳಗೆ 50 ಲಕ್ಷ ಡೋಸ್ ಲಸಿಕೆಯು ಭಾರತಕ್ಕೆ ಪೂರೈಕೆಯಾಗಲಿದೆ .

ಸ್ಪುಟ್ನಿಕ್ ವಿ ಲಸಿಕೆಯು ಎರಡು ಡೋಸ್ ಲಸಿಕೆ. ಒಂದೇ ಡೋಸ್ ನೀಡುವ ಸ್ಪುಟ್ನಿಕ್ ಲೈಟ್ ಲಸಿಕೆ ಜನರ ಬಳಕೆಗೆ ಒಪ್ಪಿಗೆ ರಷ್ಯಾ ನೀಡಲಾಗಿದೆ. ಸ್ಪುಟ್ನಿಕ್ ಲೈಟ್ ಲಸಿಕೆಯ ಜನರ ಬಳಕೆಗೆ ಅನುಮತಿ ಕೋರಿ ಇನ್ನೂ ಭಾರತದ ಡಿಸಿಜಿಐಗೆ ಅರ್ಜಿ ಸಲ್ಲಿಸಿಲ್ಲ. ಸ್ಪುಟ್ನಿಕ್ ಲೈಟ್ ಲಸಿಕೆಗೆ ಡಿಸಿಜಿಐ ಒಪ್ಪಿಗೆ ನೀಡಿದ ಬಳಿಕ ಆ ಲಸಿಕೆಯು ಭಾರತಕ್ಕೆ ಪೂರೈಕೆಯಾಗುವ ವಿಶ್ವಾಸ ಇದೆ.

ಭಾರತದಲ್ಲಿ ಪತ್ತೆಯಾಗಿರುವ ಬಿ.1.617 ಪ್ರಭೇದದ ವೈರಸ್​ನ ಸ್ಯಾಂಪಲ್​ಗಳನ್ನು ನೀಡುವಂತೆ ರಷ್ಯಾ ಭಾರತಕ್ಕೆ ಕೇಳಿದೆ. ಇನ್ನೂ ಎಸ್‌-400 ಮಿಸೈಲ್ ರಕ್ಷಣಾ ವ್ಯವಸ್ಥೆಯನ್ನು ಈ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ರಷ್ಯಾ ಭಾರತಕ್ಕೆ ನೀಡಲಿದೆ ಎಂದು ರಾಯಭಾರಿ ವೆಂಕಟೇಶ್ ವರ್ಮಾ ಹೇಳಿದ್ದಾರೆ.

ಇದನ್ನೂ ಓದಿ:

ಧಾರವಾಡದ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆ: ರಷ್ಯಾದ ಸ್ಪುಟ್ನಿಕ್ ವಿ ಲಸಿಕೆ ಉತ್ಪಾದನೆ ಜಿಲ್ಲೆಯಲ್ಲಿಯೇ ಆರಂಭ

 

Published On - 3:13 pm, Sat, 22 May 21