ಉಡುಗೊರೆಗಳು ಸಂಭ್ರಮದ ಭಾಗಗಳಾಗಿವೆ. ಯಾವುದೇ ಒಂದು ವಿಶೇಷ ಸಂದರ್ಭಗಳಲ್ಲಿ ಹೀಗೆ ಉಡುಗೊರೆ ತೆಗೆದುಕೊಳ್ಳುವುದು, ಕೊಡುವುದು ನಡೆಯುತ್ತಲೇ ಇರುತ್ತದೆ. ಉಡುಗೊರೆ ಅಂದರೆ ಸ್ವಲ್ಪ ದುಬಾರಿಯಾಗಿರುವ, ಚೆನ್ನಾಗಿರುವ ಏನಾದರೂ ವಸ್ತುಗಳನ್ನು ಕೊಡಲಾಗುತ್ತದೆ. ಆದರೆ ಇತ್ತೀಚೆಗೆ ಪೆಟ್ರೋಲ್, ಡೀಸೆಲ್(Petrol Diesel)ಗಳೂ ಗಿಫ್ಟ್ ಸಾಲಿಗೆ ಸೇರಿವೆ ಎಂಬುದು ವಿಚಿತ್ರ ಸತ್ಯ. ಸದ್ಯ ಪೆಟ್ರೋಲ್, ಡೀಸೆಲ್ ದರಗಳು ಗಗನಕ್ಕೆ ಏರಿವೆ. ದೇಶದ ಬಹುತೇಕ ಮಹಾನಗರಗಳಲ್ಲಿ 100 ರೂ.ಗಡಿ ದಾಟಿವೆ. ಈ ಮಧ್ಯೆ ವ್ಯಕ್ತಿಯೊಬ್ಬ ತನಗೆ ಹೆಣ್ಣು ಮೊಮ್ಮಗು ಹುಟ್ಟಿದ್ದಕ್ಕೆ ಜನರಿಗೆ ಉಡುಗೊರೆ ರೂಪದಲ್ಲಿ ಪೆಟ್ರೋಲ್ನ್ನು ನೀಡಿದ್ದಾರೆ.
ಈ ವ್ಯಕ್ತಿಯ ಹೆಸರು ರಾಜೇಂದ್ರ ಸೈನಾನಿ ಎಂದಾಗಿದ್ದು, ಬೇತುಲ್ನಲ್ಲಿ ಪೆಟ್ರೋಲ್ ಪಂಪ್ ಒಂದರ ಮಾಲೀಕರಾಗಿದ್ದಾರೆ. ಇವರ ಸೊಸೆಗೆ ಮಾತು ಬರುವುದಿಲ್ಲ ಮತ್ತು ಕಿವಿಯೂ ಕೇಳುವುದಿಲ್ಲ. ಆಕೆ ಅಕ್ಟೋಬರ್ 9ರಂದು ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಇದರಿಂದ ಸಿಕ್ಕಾಪಟೆ ಖುಷಿಗೊಂಡ ರಾಜೇಂದ್ರ ಸೈನಾನಿ ಹೀಗೆ ಹೆಚ್ಚುವರಿ ಪೆಟ್ರೋಲ್ ನೀಡಿದ್ದಾರೆ. ನನ್ನ ಕುಟುಂಬದಲ್ಲಿ ಹೆಣ್ಣು ಮಗು ಹುಟ್ಟಿದ್ದಕ್ಕೆ ತುಂಬ ಸಂತೋಷವಾಗಿದೆ. ಈ ಖುಷಿಯ ಆಚರಣೆಗಾಗಿ ನಾನು ಅಕ್ಟೋಬರ್ 13ರಿಂದ 15ರವರೆಗೆ, ಬೆಳಗ್ಗೆ 9 ರಿಂದ 11ರವರೆಗೆ ಮತ್ತು ಸಂಜೆ 5ಗಂಟೆಯಿಂದ 7ಗಂಟೆವರೆಗೆ ನನ್ನ ಪಂಪ್ಗೆ ಬಂದ ಗ್ರಾಹಕರಿಗೆ ಹೆಚ್ಚುವರಿ ಪೆಟ್ರೋಲ್ ನೀಡಿದ್ದೇನೆ. ಈ ವೇಳೆಯಲ್ಲಿ ಬಂದು 100 ರೂ.ಪೆಟ್ರೋಲ್ ಹಾಕಿಸಿದ ಗ್ರಾಹಕರಿಗೆ ಶೇ.5ರಷ್ಟು ಹೆಚ್ಚು ಉಚಿತ ಪೆಟ್ರೋಲ್ ನೀಡಿದ್ದೇನೆ ಮತ್ತು 200 ರೂ.-500 ರೂ.ವರೆಗಿನ ಪೆಟ್ರೋಲ್ ಹಾಕಿಸಿದವರಿಗೆ ಶೇ.10ರಷ್ಟು ಹೆಚ್ಚು ಪೆಟ್ರೋಲ್ ನೀಡಿದ್ದೇನೆ. ಈ ಹೆಚ್ಚುವರಿಯಾಗಿ ನೀಡಿದ ಪೆಟ್ರೋಲ್ಗೆ ಹಣ ಪಡೆದಿಲ್ಲ ಎಂದು ತಿಳಿಸಿದ್ದಾರೆ.
ಅಂದಹಾಗೆ ಇಂದು ಕೂಡ ಪೆಟ್ರೋಲ್-ಡೀಸೆಲ್ ದರ ಏರಿಕೆಯಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಇಂದು 35 ಪೈಸೆ ಏರಿಕೆಯಾಗಿದ್ದು, ಅಲ್ಲೀಗ ಒಂದು ಲೀಟರ್ ಪೆಟ್ರೋಲ್ ಬೆಲೆ 105.49 ರೂ. ಇದೆ. ಹಾಗೇ, ಡೀಸೆಲ್ ದರ 94.22 ರೂ.ನಿಗದಿಯಾಗಿದೆ. ಮುಂಬೈನಲ್ಲಿ ಲೀಟರ್ ಪೆಟ್ರೋಲ್ಗೆ 111.43 ರೂ.ಇದ್ದು, ಡೀಸೆಲ್ ದರ 102.15ರಷ್ಟಿದೆ. ಹಾಗೇ, ಮಧ್ಯಪ್ರದೇಶದ ಬೇತುಲ್ನಲ್ಲಿ ಲೀಟರ್ಗೆ 113 ರೂ.ಇದೆ.
ಇದನ್ನೂ ಓದಿ: Meghana Raj: 45 ವರ್ಷ ಹಳೇ ಗೊಂಬೆಗಳ ಜತೆ ರಾಯನ್ ರಾಜ್ ಸರ್ಜಾ; ಮೇಘನಾ ರಾಜ್-ಚಿರು ಪುತ್ರನಿಗೆ ಮೊದಲ ದಸರಾ
ಭದ್ರತಾ ಪಡೆ ಬಳಿ ಸಿಕ್ಕಿಬಿದ್ದ ಲಷ್ಕರ್ ಇ ತೊಯ್ಬಾ ಕಮಾಂಡರ್; ಇಬ್ಬರು ಪೊಲೀಸರ ಹತ್ಯೆ ಮಾಡಿದ್ದ ಉಗ್ರ
Published On - 12:18 pm, Sat, 16 October 21