ಆಧಾರ್ ಕಾರ್ಡ್‌ನಲ್ಲಿರುವ ವಯಸ್ಸು ಅಂತಿಮ ಪುರಾವೆಯಲ್ಲ, ಮರಣೋತ್ತರ ಪರೀಕ್ಷಾ ವರದಿಯೇ ಹೆಚ್ಚು ವಿಶ್ವಾಸಾರ್ಹ: ಮಧ್ಯಪ್ರದೇಶ ಹೈಕೋರ್ಟ್

ಆಧಾರ್ ಕಾರ್ಡ್ ವಯಸ್ಸಿಗೆ ಅಂತಿಮ ಪುರಾವೆಯಲ್ಲ, ವೈದ್ಯಕೀಯ ಆಧಾರಿತ ಮರಣೋತ್ತರ ಪರೀಕ್ಷಾ ವರದಿಯೇ ಹೆಚ್ಚು ವಿಶ್ವಾಸಾರ್ಹ ಎಂದು ಮೋಟಾರು ವಾಹನ ಅಪಘಾತ ಪರಿಹಾರ ಮೇಲ್ಮನವಿ ವಿಚಾರಣೆ ವೇಳೆ ಮಧ್ಯಪ್ರದೇಶ ಹೈಕೋರ್ಟ್ ಮಹತ್ವದ ಅಭಿಪ್ರಾಯಪಟ್ಟಿದೆ. ಆಧಾರ್ ಕಾರ್ಡ್ ಮುಖ್ಯವಾಗಿ ವ್ಯಕ್ತಿಯ ಗುರುತಿನ ದಾಖಲೆಯಾಗಿದೆ. ಅದನ್ನು ಮಾತ್ರ ಆಧರಿಸಿ ಕಾರ್ಡ್ ಹೊಂದಿರುವ ವ್ಯಕ್ತಿಯ ವಯಸ್ಸನ್ನು ನಿರ್ಣಾಯಕವಾಗಿ ನಿರ್ಧರಿಸಲು ಸಾಧ್ಯವಿಲ್ಲ ಎಂದಿದೆ.

ಆಧಾರ್ ಕಾರ್ಡ್‌ನಲ್ಲಿರುವ ವಯಸ್ಸು ಅಂತಿಮ ಪುರಾವೆಯಲ್ಲ, ಮರಣೋತ್ತರ ಪರೀಕ್ಷಾ ವರದಿಯೇ ಹೆಚ್ಚು ವಿಶ್ವಾಸಾರ್ಹ: ಮಧ್ಯಪ್ರದೇಶ ಹೈಕೋರ್ಟ್
ಮಹತ್ವದ ಅಭಿಪ್ರಾಯಪಟ್ಟ ಮಧ್ಯಪ್ರದೇಶ ಹೈಕೋರ್ಟ್

Updated on: Nov 11, 2026 | 4:00 PM

ಭೋಪಾಲ್, ನವೆಂಬರ್​​ 11: ಮೋಟಾರು ವಾಹನ ಅಪಘಾತ ಪ್ರಕರಣವೊಂದರಲ್ಲಿ ಪರಿಹಾರ ಮೊತ್ತ ಹೆಚ್ಚಿಸುವಂತೆ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ಪುರಸ್ಕರಿಸಿದ ಮಧ್ಯಪ್ರದೇಶ ಹೈಕೋರ್ಟ್, ಆಧಾರ್ ಕಾರ್ಡ್ ಅನ್ನು ಮಾತ್ರ ಮೃತ ವ್ಯಕ್ತಿಯ ವಯಸ್ಸಿಗೆ ಸಂಬಂಧಿಸಿದ ಅಂತಿಮ ಪುರಾವೆಯಾಗಿ ಪರಿಗಣಿಸಲು ಸಾಧ್ಯವಿಲ್ಲ. ಬದಲಿಗೆ, ಮರಣೋತ್ತರ ಪರೀಕ್ಷಾ ವರದಿಯಲ್ಲಿ ದಾಖಲಿಸಿರುವ ವಯಸ್ಸು ಹೆಚ್ಚು ವಿಶ್ವಾಸಾರ್ಹವಾಗಿದೆ ಎಂದು ಅಭಿಪ್ರಾಯಪಟ್ಟಿದೆ.

ಆಧಾರ್ ಕಾರ್ಡ್ ಮುಖ್ಯವಾಗಿ ವ್ಯಕ್ತಿಯ ಗುರುತಿನ ದಾಖಲೆ

ಆಧಾರ್ ಕಾರ್ಡ್ ಮುಖ್ಯವಾಗಿ ವ್ಯಕ್ತಿಯ ಗುರುತಿನ ದಾಖಲೆಯಾಗಿದೆ. ಅದನ್ನು ಮಾತ್ರ ಆಧರಿಸಿ ಕಾರ್ಡ್ ಹೊಂದಿರುವ ವ್ಯಕ್ತಿಯ ವಯಸ್ಸನ್ನು ನಿರ್ಣಾಯಕವಾಗಿ ನಿರ್ಧರಿಸಲು ಸಾಧ್ಯವಿಲ್ಲ. ಮರಣೋತ್ತರ ಪರೀಕ್ಷೆಯ ಸಂದರ್ಭದಲ್ಲಿ ನಡೆಸುವ ವೈದ್ಯಕೀಯ ಮೌಲ್ಯಮಾಪನದ ಆಧಾರದ ಮೇಲೆ ಮರಣೋತ್ತರ ಪರೀಕ್ಷಾ ವರದಿಯಲ್ಲಿ ವಯಸ್ಸನ್ನು ದಾಖಲಿಸಲಾಗುತ್ತದೆ. ಆದ್ದರಿಂದ, ಪ್ರಸ್ತುತ ಪ್ರಕರಣದ ವಾಸ್ತವಾಂಶಗಳು ಮತ್ತು ಸಂದರ್ಭಗಳನ್ನು ಪರಿಗಣಿಸಿದಾಗ, ಮೃತ ವ್ಯಕ್ತಿಯ ವಯಸ್ಸನ್ನು ನಿರ್ಧರಿಸಲು ಮರಣೋತ್ತರ ಪರೀಕ್ಷಾ ವರದಿಯಲ್ಲಿ ದಾಖಲಿಸಿರುವ ವೈದ್ಯಕೀಯ ಅಭಿಪ್ರಾಯವೇ ಹೆಚ್ಚು ವಿಶ್ವಾಸಾರ್ಹ ಆಧಾರವಾಗಿದೆ ಎಂದು ನ್ಯಾಯಮೂರ್ತಿ ಅಮಿತ್ ಸೇಠ್ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

Loading...

ಇದನ್ನೂ ಓದಿ: ಅಜ್ಜನ ಆಸ್ತಿಯಲ್ಲಿ ಮೊಮ್ಮಗನಿಗೆ ಜನ್ಮಸಿದ್ಧ ಹಕ್ಕಿಲ್ಲವೇ? ಸುಪ್ರೀಂ ಮಹತ್ವದ ತೀರ್ಪು

2022ರ ಸೆಪ್ಟೆಂಬರ್‌ನಲ್ಲಿ ಭಿಂಡ್‌ನ ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿ (MACT) ನೀಡಿದ್ದ ₹5.45 ಲಕ್ಷ ಪರಿಹಾರ ಮೊತ್ತವನ್ನು ಹೆಚ್ಚಿಸುವಂತೆ ಪೋಷಕರು ಮನವಿ ಮಾಡಿದ್ದರು. ಬಾಲಕನ ಆಧಾರ್ ಕಾರ್ಡ್ ಆಧರಿಸಿ ಆತನ ವಯಸ್ಸನ್ನು 14 ವರ್ಷ, 7 ತಿಂಗಳು ಮತ್ತು 9 ದಿನಗಳು ಎಂದು ನ್ಯಾಯಮಂಡಳಿ ನಿರ್ಧರಿಸಿತ್ತು. ಆದರೆ, ಮರಣೋತ್ತರ ಪರೀಕ್ಷಾ ವರದಿಯಲ್ಲಿ ಆತನ ವಯಸ್ಸು 13 ವರ್ಷ ಎಂದು ದಾಖಲಾಗಿದೆ ಎಂದು ವಿಮಾ ಕಂಪನಿ ಈ ನಿರ್ಧಾರವನ್ನು ಪ್ರಶ್ನಿಸಿತ್ತು.

ಪರಿಹಾರ ಮೊತ್ತ ಲೆಕ್ಕಾಚಾರ ಮಾಡುವಾಗ ಅನ್ವಯಿಸಬೇಕಾದ ಮಲ್ಟಿಪ್ಲೈಯರ್ (ಗುಣಕ) ಬಗ್ಗೆಯೂ ನ್ಯಾಯಾಲಯ ಪರಿಶೀಲನೆ ನಡೆಸಿತು. ಬಾಲಕನ ವಯಸ್ಸು 15 ವರ್ಷಕ್ಕಿಂತ ಕಡಿಮೆ ಇರುವುದರಿಂದ 18ರ ಬದಲಿಗೆ 15ರ ಗುಣಕವನ್ನು ಅನ್ವಯಿಸಬೇಕು ಎಂದು ವಿಮಾ ಕಂಪನಿ ವಾದಿಸಿತ್ತು.
ವಿಮಾ ಕಂಪನಿಯ ವಾದದಲ್ಲಿ ನ್ಯಾಯಾಲಯಕ್ಕೆ ಹುರುಳು ಕಂಡುಬಂದಿದ್ದು, ಆಧಾರ್ ಕಾರ್ಡ್ ಅನ್ನು ಮಾತ್ರ ಆಧರಿಸಿ ಅದರ ಮಾಲೀಕರ ವಯಸ್ಸನ್ನು ನಿರ್ಣಾಯಕವಾಗಿ ಸಾಬೀತುಪಡಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತು.

ಇದಕ್ಕೆ ಬಾಲಕನ ಪೋಷಕರು ಆಕ್ಷೇಪ ವ್ಯಕ್ತಪಡಿಸಿದ್ದು, 2025ರಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ Ku Aarti v. Udayveer Singh (2025) ತೀರ್ಪನ್ನು ಉಲ್ಲೇಖಿಸಿದ್ದರು. ಈ ಪ್ರಕರಣದಲ್ಲಿ ಒಂಬತ್ತು ವರ್ಷದ ಮಗು ಮೃತಪಟ್ಟಿದ್ದ ಪ್ರಕರಣದಲ್ಲಿ 18ರ ಗುಣಕವನ್ನು ಅನ್ವಯಿಸಲಾಗಿತ್ತು.
ಆದರೆ, ಸುಪ್ರೀಂ ಕೋರ್ಟ್‌ನ Divya v. National Insurance Company Limited (2022) ತೀರ್ಪನ್ನು ಆಧರಿಸಿದ ಹೈಕೋರ್ಟ್, 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಪ್ರಕರಣಗಳಲ್ಲಿ 15ರ ಗುಣಕವನ್ನು ಅನ್ವಯಿಸಬೇಕು ಎಂದು ಸ್ಪಷ್ಟಪಡಿಸಿತು.

ಇನ್ನು ಬಾಲಕನ ಕಾಲ್ಪನಿಕ ಆದಾಯವನ್ನು ಅಕುಶಲ ಕಾರ್ಮಿಕರ ಕನಿಷ್ಠ ವೇತನದ ಆಧಾರದ ಮೇಲೆ ಲೆಕ್ಕ ಹಾಕಬೇಕು ಎಂಬ ಪೋಷಕರ ವಾದವನ್ನೂ ನ್ಯಾಯಾಲಯ ಒಪ್ಪಿಕೊಂಡಿದೆ. ಅದರಂತೆ ಬಾಲಕನ ಮಾಸಿಕ ಆದಾಯವನ್ನು ₹7,950 ಎಂದು ನಿಗದಿಪಡಿಸಿದೆ. ಈ ಮೂಲಕ ಒಟ್ಟು ಪರಿಹಾರ ಮೊತ್ತವನ್ನು ₹5.45 ಲಕ್ಷದಿಂದ ₹8,25,500ಕ್ಕೆ ಹೆಚ್ಚಿಸಲಾಗಿದೆ. ಈ ಷರತ್ತುಗಳೊಂದಿಗೆ ಪೋಷಕರು ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಾಲಯ ಭಾಗಶಃ ಪುರಸ್ಕರಿಸಿದೆ.ಹೆಚ್ಚುವರಿಯಾಗಿ ನೀಡಲಾದ ₹2,80,500 ಪರಿಹಾರ ಮೊತ್ತಕ್ಕೆ ಮೂಲ ಪರಿಹಾರ ಅರ್ಜಿ ಸಲ್ಲಿಸಿದ ದಿನಾಂಕದಿಂದ ಪರಿಹಾರ ಮೊತ್ತ ಪಾವತಿಯಾಗುವವರೆಗೆ ವಾರ್ಷಿಕ ಶೇ.6ರಷ್ಟು ಬಡ್ಡಿ ನೀಡುವಂತೆಯೂ ನ್ಯಾಯಾಲಯ ಆದೇಶಿಸಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 3:59 pm, Wed, 11 November 26

ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Loading...
Unable to load recommendations.
Follow Us