ರಾಂಚಿ: ಜಾರ್ಖಂಡ್‌ನ ರಾಂಚಿ (Ranchi) ಜಿಲ್ಲೆಯಲ್ಲಿ ಜುಲೈ 27ರಿಂದ 800ಕ್ಕೂ ಹೆಚ್ಚು ಹಂದಿಗಳು ಆಫ್ರಿಕನ್ ಹಂದಿ ಜ್ವರದಿಂದ (ಎಎಸ್‌ಎಫ್) ಸಾವನ್ನಪ್ಪಿವೆ. 2020ರ ಫೆಬ್ರವರಿಯಲ್ಲಿ ಅಸ್ಸಾಂನಲ್ಲಿ ದೇಶದಲ್ಲಿ ಮೊದಲು ಪತ್ತೆಯಾದ ASF ದೇಶೀಯ ಮತ್ತು ಕಾಡು ಹಂದಿಗಳ ಮೇಲೆ ಪರಿಣಾಮ ಬೀರುತ್ತದೆ. ಹಾಗೇ, ಮಧ್ಯಪ್ರದೇಶದಲ್ಲಿ ಸುಮಾರು 2,000 ಹಂದಿಗಳು ಆಫ್ರಿಕನ್ ಜ್ವರದಿಂದ (African Swine Fever) ಸಾವನ್ನಪ್ಪಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.
ರಾಜ್ಯ ಪಶುಸಂಗೋಪನೆ ನಿರ್ದೇಶಕ ಶಶಿ ಪ್ರಕಾಶ್ ಝಾ, ಈ ತಿಂಗಳ ಆರಂಭದಲ್ಲಿ ಭೂಪಾಲ್‌ನಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸ್ (ಎನ್‌ಐಎಚ್‌ಎಸ್‌ಎಡಿ)ಗೆ ಪರೀಕ್ಷೆಗಾಗಿ ಮಾದರಿಗಳನ್ನು ಕಳುಹಿಸಲಾಗಿದೆ. ಆ ವರದಿಯಲ್ಲಿ ಹಂದಿಗಳಿಗೆ ಆಫ್ರಿಕನ್ ಜ್ವರ ಬಂದಿರುವುದು ಪತ್ತೆಯಾಗಿದೆ. ASF ಹಂದಿಗಳ ಅತ್ಯಂತ ಸಾಂಕ್ರಾಮಿಕ ಹೆಮರಾಜಿಕ್ ವೈರಲ್ ಕಾಯಿಲೆಯಾಗಿದೆ ಆದರೆ ಇದು ಪ್ರಾಣಿಗಳಿಂದ ಮನುಷ್ಯರಿಗೆ ಹರಡುವುದಿಲ್ಲ.
ರಾಂಚಿ ಜಿಲ್ಲೆಯಿಂದ ಇದುವರೆಗೆ ಹಂದಿಗಳ ಸಾವುಗಳು ವರದಿಯಾಗಿದ್ದರೂ, ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಎಲ್ಲಾ 24 ಜಿಲ್ಲೆಗಳಿಗೆ ಸಲಹೆಯನ್ನು ನೀಡಲಾಗಿದೆ. ಹಂದಿಗಳ ಸಾವು ಅಥವಾ ರೋಗದ ಲಕ್ಷಣಗಳನ್ನು ವರದಿ ಮಾಡುವ ಹಂದಿ ಸಾಕಣೆ ಕೇಂದ್ರಗಳು ರೋಗ ಹರಡುವುದನ್ನು ತಡೆಯಲು ಪ್ರಾಣಿ ಅಥವಾ ಹಂದಿಮಾಂಸದ ಮಾರಾಟವನ್ನು ತಕ್ಷಣವೇ ನಿಲ್ಲಿಸುವಂತೆ ಕೇಳಿಕೊಳ್ಳಲಾಗಿದೆ. ಜಾರ್ಖಂಡ್ನಲ್ಲಿ ಯಾವುದೇ ಹಂದಿ ಸಾವು ವರದಿಯಾದರೆ ಇಲಾಖೆಯ ಟೋಲ್-ಫ್ರೀ ಸಂಖ್ಯೆಯಾದ 18003097711 ನಂಬರ್ ಸಂಪರ್ಕಿಸಲು ಹಂದಿ ಸಾಕಣೆದಾರರಿಗೆ ತಿಳಿಸಲಾಗಿದೆ.
ಇದನ್ನೂ ಓದಿ: Swine Flu: ಹಂದಿ ಜ್ವರ ಸೇರಿ ಒಟ್ಟು 4 ಬಗೆಯ ಜ್ವರದಿಂದ ರಕ್ಷಣೆ ನೀಡುತ್ತೆ ಈ 4 in1 ಲಸಿಕೆ
ಇಲಾಖೆ ಹೊರಡಿಸಿರುವ ಮಾರ್ಗಸೂಚಿಗಳ ಪ್ರಕಾರ ಪ್ರಾಣಿಗಳ ಮೃತದೇಹವನ್ನು ಸರಿಯಾಗಿ ವಿಲೇವಾರಿ ಮಾಡುವಂತೆಯೂ ಸೂಚಿಸಲಾಗಿದೆ. ಕಂಕೆ ಮೂಲದ ಸರ್ಕಾರಿ ಹಂದಿ ಸಾಕಾಣಿಕೆ ಕೇಂದ್ರದಲ್ಲಿ ಜುಲೈ 27ರಿಂದ ಇಲ್ಲಿಯವರೆಗೆ 666 ಹಂದಿಗಳು ಸಾವನ್ನಪ್ಪಿವೆ. ಈ ಹಂದಿ ಸಾಕಣೆ ಕೇಂದ್ರದಲ್ಲಿ ಸುಮಾರು 1,100 ಹಂದಿಗಳಿದ್ದವು.
ರಾಂಚಿ ಪಶುಸಂಗೋಪನಾ ಅಧಿಕಾರಿ ಅನಿಲ್ ಕುಮಾರ್ ಮಾತನಾಡಿ, ಜಿಲ್ಲೆಯ ವಿವಿಧ ಪ್ರದೇಶಗಳಾದ ಚಾನ್ಹೋ, ಕುಚು, ಮೆಕ್‌ಕ್ಲಸ್ಕಿಗಂಜ್ ಮತ್ತು ಖಲಾರಿ ಸೇರಿದಂತೆ ಸುಮಾರು 100 ಹಂದಿಗಳ ಸಾವು ವರದಿಯಾಗಿದೆ. ರಾಂಚಿಯ ಬಿರ್ಸಾ ಅಗ್ರಿಕಲ್ಚರ್ ಯುನಿವರ್ಸಿಟಿ (ಬಿಎಯು) ಮೂಲದ ಫಾರ್ಮ್‌ನಲ್ಲಿ ಸುಮಾರು 30 ಹಂದಿಗಳು ಸಾವನ್ನಪ್ಪಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಹಂದಿಜ್ವರ ಬಂದರೆ ಪ್ರಾಣಿಗಳಿಗೆ ಜ್ವರದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ, ಅವು ತಿನ್ನುವುದನ್ನು ನಿಲ್ಲಿಸುತ್ತವೆ ಮತ್ತು ಶೀಘ್ರದಲ್ಲೇ ಸಾಯುತ್ತವೆ.
ಇದನ್ನೂ ಓದಿ: ಆಫ್ರಿಕನ್ ಹಂದಿ ಜ್ವರ ಪತ್ತೆ ಹಿನ್ನೆಲೆ ಕಲಬುರಗಿಯಲ್ಲಿ ಹಂದಿ ಹಾಗೂ ಹಂದಿಗಳ ಉತ್ಪನ್ನ ಸಾಗಾಣಿಕೆಗೆ ನಿರ್ಬಂಧ
ಮಧ್ಯಪ್ರದೇಶದ ರೇವಾದಲ್ಲಿ 2000 ಹಂದಿಗಳ ಸಾವು:
ಮಧ್ಯಪ್ರದೇಶದ ರೇವಾ ನಗರದಲ್ಲಿ ಎರಡು ವಾರಗಳಲ್ಲಿ ಆಫ್ರಿಕನ್ ಹಂದಿ ಜ್ವರದಿಂದ 2,000ಕ್ಕೂ ಹೆಚ್ಚು ಹಂದಿಗಳು ಸಾವನ್ನಪ್ಪಿದ್ದು, ಆಡಳಿತವು ನಿಷೇಧಾಜ್ಞೆ ಹೊರಡಿಸಲಾಗಿದೆ. ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 144ರ ಅಡಿಯಲ್ಲಿ ಹಂದಿಗಳು ಮತ್ತು ಅವುಗಳ ಮಾಂಸದ ಸಾಗಣೆ, ಖರೀದಿ ಮತ್ತು ಮಾರಾಟವನ್ನು ನಿಷೇಧಿಸಿ ನಿಷೇಧಾಜ್ಞೆ ಹೊರಡಿಸಲಾಗಿದೆ. ರೇವಾ ನಗರದಲ್ಲಿ 25 ಸಾವಿರಕ್ಕೂ ಹೆಚ್ಚು ಹಂದಿಗಳಿದ್ದು, ಇವುಗಳಲ್ಲಿ 15ನೇ ವಾರ್ಡ್‌ನಲ್ಲಿ ಅತಿ ಹೆಚ್ಚು ಸೋಂಕಿತ ಪ್ರಾಣಿಗಳು ಪತ್ತೆಯಾಗಿವೆ ಎಂದು ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ.ರಾಜೇಶ್ ಮಿಶ್ರಾ ತಿಳಿಸಿದ್ದಾರೆ.
ಈ ಬಡಾವಣೆಯನ್ನು ರೆಡ್ ಝೋನ್ ಎಂದು ಗುರುತಿಸಿ ಒಂದು ಕಿ.ಮೀ ವ್ಯಾಪ್ತಿಯಲ್ಲಿರುವ ಎಲ್ಲಾ ಹಂದಿಗಳನ್ನು ತಪಾಸಣೆಗೆ ಒಳಪಡಿಸಿ ಆರೋಗ್ಯವಂತ ಪ್ರಾಣಿಗಳಿಗೆ ಲಸಿಕೆ ಹಾಕಲಾಗುತ್ತಿದೆ. ಅಧಿಕಾರಿಗಳ ಪ್ರಕಾರ, ಆಫ್ರಿಕನ್ ಹಂದಿ ಜ್ವರವು ಎರಡು ವಾರಗಳಲ್ಲಿ ರೇವಾ ನಗರದಲ್ಲಿ 2,000ಕ್ಕೂ ಹೆಚ್ಚು ಹಂದಿಗಳನ್ನು ಬಲಿ ತೆಗೆದುಕೊಂಡಿದೆ.