
ಮುಂಬೈ, ಸೆಪ್ಟೆಂಬರ್ 2: ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಕುಟುಂಬವೊಂದರಲ್ಲಿ ಬರೋಬ್ಬರಿ 5 ತಲೆಮಾರುಗಳು ಅಂದರೆ ಸುಮಾರು 200 ವರ್ಷಗಳ ನಂತರ ಹೆಣ್ಣು ಮಗುವೊಂದು ಜನಿಸಿದ್ದು, ಮಗುವನ್ನು ರಥದ ಮೆರವಣಿಗೆ, ವಾದ್ಯಮೇಳ, ನೃತ್ಯದೊಂದಿಗೆ ಅದ್ಧೂರಿಯಾಗಿ ಮನೆಗೆ ಬರಮಾಡಿಕೊಳ್ಳಲಾಗಿದೆ. “ಸಾಮಾನ್ಯವಾಗಿ ಜನರು ಗಂಡು ಮಗುವನ್ನು ಬಯಸುತ್ತಾರೆ, ಆದರೆ ಹೆಣ್ಣು ಮಗು ಹುಟ್ಟಿದಾಗ ಸಿಗುವ ಆನಂದ ಮತ್ತು ಅನುಭವವೇ ಬೇರೆ. ಹೆಣ್ಣುಮಕ್ಕಳು ತಂದೆಯೊಂದಿಗೆ ಹೆಚ್ಚು ಪ್ರೀತಿ-ಸಾಮೀಪ್ಯ ಹೊಂದಿರುತ್ತಾರೆ. ನಾವು ನಮ್ಮ ಮಗಳನ್ನು ಹೂವಿನಂತೆ ಅತ್ಯಂತ ಪ್ರೀತಿಯಿಂದ ಸಾಕಿ ಬೆಳೆಸುತ್ತೇವೆ” ಎಂದು ಆ ಮಗುವಿನ ತಂದೆ ಹೇಳಿದ್ದಾರೆ.
ಮಗುವಿಗೆ ‘ಗಾರ್ಗಿ’ ಎಂದು ನಾಮಕರಣ ಮಾಡಲಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ತಕ್ಷಣವೇ ಈ ಅದ್ಧೂರಿ ಸ್ವಾಗತ ನೀಡಲಾಗಿದೆ. ದಹಿಫಳೆ ಕುಟುಂಬದ ಹಿರಿಯರ ಪ್ರಕಾರ, ಕಳೆದ 200 ವರ್ಷಗಳಿಂದ ಅವರ ವಂಶದಲ್ಲಿ ಹೆಣ್ಣು ಮಗುವೇ ಜನಿಸಿರಲಿಲ್ಲ. ಹೀಗಾಗಿ ಮಗುವಿನ ಆಗಮನದ ಸುದ್ದಿ ತಿಳಿಯುತ್ತಿದ್ದಂತೆಯೇ ಆಸ್ಪತ್ರೆಯಲ್ಲಿದ್ದಾಗಲೇ ವಿಶೇಷ ಸ್ವಾಗತ ಕೋರಲು ಯೋಜಿಸಲಾಗಿತ್ತು.
ಇದನ್ನೂ ಓದಿ: ಖಾರ ತಿಂದ ಮಗು ಅಸ್ವಸ್ಥ: ಎಫ್‌ಡಿಎ ಅಧಿಕಾರಿಗೆ ಬಲವಂತವಾಗಿ ಎಕ್ಸ್‌ಪೈರಿ ಬಿಸ್ಕತ್ತು ತಿನ್ನಿಸಲು ಯತ್ನಿಸಿದ ಜನ
ಮಗುವಿನ ತಾತ ಲಿಂಬಾಜಿ ದಹಿಫಳೆ ಮಾತನಾಡಿ, “ನಮ್ಮ ಕುಟುಂಬದಲ್ಲಿ ಹೆಣ್ಣು ಮಗು ಇಲ್ಲ ಎಂಬ ದೊಡ್ಡ ಕೊರಗಿತ್ತು. ಇಂದು ಗಾರ್ಗಿಯ ಜನನದಿಂದ ಆ ಕೊರಗು ನೀಗಿದೆ. ಲಕ್ಷ್ಮಿಯಂತಿರುವ ಮೊಮ್ಮಗಳನ್ನು ರಥದಲ್ಲಿ, ಸಂಗೀತ-ವಾದ್ಯಗಳೊಂದಿಗೆ ಮನೆಗೆ ಕರೆತಂದಿರುವುದು ನನ್ನ ಜೀವನದ ಅತ್ಯಂತ ಸಂತೋಷದ ಕ್ಷಣ” ಎಂದು ಭಾವುಕರಾಗಿ ನುಡಿದಿದ್ದಾರೆ.
WATCH: A girl child born into Beed’s Dahiphale family has brought extraordinary joy after relatives said no girl had been born in the family for nearly 200 years. The newborn was taken home from hospital in a decorated chariot amid drums, fireworks and sweets. pic.twitter.com/aBDNlYA9Df
— Varad Bhatkhande | Journalist (@VaradBhatkhande) September 2, 2026
ಮೆರವಣಿಗೆಯುದ್ದಕ್ಕೂ ರಸ್ತೆಗಳಲ್ಲಿ ಕುಟುಂಬಸ್ಥರು ಭಜನೆ ಮತ್ತು ವಾದ್ಯಗಳ ನಾದಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು. 5 ತಲೆಮಾರುಗಳ ನಂತರ ಹೆಣ್ಣು ಮಗು ಜನಿಸಿರುವುದರಿಂದ ಕುಟುಂಬದ ಸಂತಸ ಇಮ್ಮಡಿಗೊಂಡಿದ್ದು, ಮಗುವಿನ ಆಗಮನವನ್ನು ಸ್ಮರಣೀಯವಾಗಿಸಲು ಈ ರೀತಿ ಅದ್ಧೂರಿ ಸ್ವಾಗತ ಕೋರಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:47 pm, Wed, 2 September 26