ಬಿಜೆಪಿ ಸಂಸದರ ತರಾಟೆ ನಂತರ ಯಮುನಾ ನದಿ ನೀರು ವಿಷಕಾರಿಯಲ್ಲ ಎಂದು ಸಾಬೀತುಪಡಿಸಲು ನದಿಯಲ್ಲಿ ಮಿಂದೆದ್ದ ದೆಹಲಿಯ ಅಧಿಕಾರಿ

| Updated By: ರಶ್ಮಿ ಕಲ್ಲಕಟ್ಟ

Updated on: Oct 30, 2022 | 4:35 PM

ಎರಡು ದಿನಗಳ ನಂತರ ಸವಾಲನ್ನು ಸ್ವೀಕರಿಸಿದ ಶರ್ಮಾ ಅವರು ಸ್ನಾನ ಮಾಡಲು ನದಿಯ ನೀರನ್ನು ಬಳಸಿದ್ದು ಪವಿತ್ರ ಸ್ನಾನಕ್ಕೆ ನೀರು ಸುರಕ್ಷಿತವಾಗಿದೆ ಎಂದು ಭಕ್ತರಿಗೆ ಭರವಸೆ ನೀಡಿದರು

ಬಿಜೆಪಿ ಸಂಸದರ ತರಾಟೆ ನಂತರ ಯಮುನಾ ನದಿ ನೀರು ವಿಷಕಾರಿಯಲ್ಲ ಎಂದು ಸಾಬೀತುಪಡಿಸಲು ನದಿಯಲ್ಲಿ ಮಿಂದೆದ್ದ ದೆಹಲಿಯ ಅಧಿಕಾರಿ
ಯಮುನಾ ನದಿ ನೀರಲ್ಲಿ ಸ್ನಾನ ಮಾಡುತ್ತಿರುವ ಅಧಿಕಾರಿ
Follow us on

ದೆಹಲಿ: ಛತ್ ಹಬ್ಬಕ್ಕೂ ಮುನ್ನ ಯಮುನಾ ನದಿಯಲ್ಲಿ (Yamuna river) ರಾಸಾಯನಿಕ ದ್ರವವನ್ನು ಸಿಂಪಡಿಸಿ ಬಿಜೆಪಿ ಸಂಸದ ಪರ್ವೇಶ್ ವರ್ಮಾ ಅವರ ಕೆಂಗಣ್ಣಿಗೆ ಗುರಿಯಾಗಿದ್ದ ದೆಹಲಿ ಜಲ ಮಂಡಳಿ (Delhi Jal Board)ಅಧಿಕಾರಿ ಇಂದು ನದಿಯಲ್ಲಿ ಸ್ನಾನ ಮಾಡಿ ಬಳಸಿದ ರಾಸಾಯನಿಕಗಳು ವಿಷಕಾರಿ ಅಲ್ಲ ಎಂದು ಸಾಬೀತುಪಡಿಸಿದ್ದಾರೆ. ಕ್ವಾಲಿಟಿ ಕಂಟ್ರೋಲ್‌ ಡಿಜೆಬಿ ನಿರ್ದೇಶಕ ಸಂಜಯ್ ಶರ್ಮಾ ಅವರನ್ನು ಶುಕ್ರವಾರ ಬಿಜೆಪಿಯ ಪರ್ವೇಶ್ ವರ್ಮಾ (Parvesh Verma) ಮತ್ತು ತಜಿಂದರ್ ಪಾಲ್ ಸಿಂಗ್ ಬಗ್ಗಾ ಅವರು ನದಿ ದಡದಲ್ಲಿ ತರಾಟೆಗೆ ತೆಗೆದುಕೊಂಡಿದ್ದರು. ಈ ವಿಡಿಯೊವನ್ನು ನಂತರ ಡಿಜೆಬಿ ಉಪಾಧ್ಯಕ್ಷ ಎಎಪಿ ಶಾಸಕ ಸೌರಭ್ ಭಾರದ್ವಾಜ್ ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ವಿಡಿಯೊದಲ್ಲಿ, ವರ್ಮಾ ಅವರು “ವಿಷಕಾರಿ” ಎಂದು ಲೇಬಲ್ ಮಾಡಿದ ಡಿಫೋಮರ್ (ನೊರೆಯನ್ನು ಹೋಗಲಾಡಿಸುವ ರಾಸಾಯನಿಕ) ಸಿಂಪಡಿಸಿದ್ದಕ್ಕಾಗಿ  ಸಂಜಯ್ ಶರ್ಮಾ ಅವರನ್ನು ಬೈದಿದ್ದು, ನೀವು ಹೋಗಿ ನದಿ ನೀರಲ್ಲಿ ಮುಳುಗೆದ್ದು ಬನ್ನಿ ಎಂದು ಕಿರುಚಿದ್ದರು.

ಎರಡು ದಿನಗಳ ನಂತರ ಸವಾಲನ್ನು ಸ್ವೀಕರಿಸಿದ ಶರ್ಮಾ ಅವರು ಸ್ನಾನ ಮಾಡಲು ನದಿಯ ನೀರನ್ನು ಬಳಸಿದ್ದು ಪವಿತ್ರ ಸ್ನಾನಕ್ಕೆ ನೀರು ಸುರಕ್ಷಿತವಾಗಿದೆ ಎಂದು ಭಕ್ತರಿಗೆ ಭರವಸೆ ನೀಡಿದರು. ಅಧಿಕಾರಿಗಳು ನದಿಯ ನೀರನ್ನು ದೋಣಿಯಲ್ಲಿ ಹೋಗಿ ತುಂಬಿಸುತ್ತಿರುವಾಗ ಶರ್ಮಾ ನದಿಯ ದಡದಲ್ಲಿ ಕಾಯುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಡಿಜೆಬಿ ಅಧಿಕಾರಿ ನಂತರ ನದಿಯ ನೀರಿನಿಂದ ಸ್ನಾನ ಮಾಡಲು ಮುಂದಾದಾಗ ಸುತ್ತಮುತ್ತಲಿನವರು ಚಪ್ಪಾಳೆ ತಟ್ಟಿದರು.


“ಸ್ಪ್ರೇ ಮಾಡುವ ರಾಸಾಯನಿಕವು ಹಾನಿಕಾರಕವಲ್ಲ. ಇದು ವಿಷಕಾರಿಯಲ್ಲದ, ಆಹಾರ ದರ್ಜೆಯ ರಾಸಾಯನಿಕವಾಗಿದ್ದು, ಆಹಾರ ಪದಾರ್ಥಗಳು ಮತ್ತು ಸೌಂದರ್ಯವರ್ಧಕಗಳಲ್ಲಿ ಬಳಸಲಾಗುತ್ತದೆ. ಪೂರ್ವಾಂಚಲಿ ಭಕ್ತರು ಯಾವುದೇ ಭಯವಿಲ್ಲದೆ ನದಿಯಲ್ಲಿ ಸ್ನಾನ ಮಾಡಲು ನಾನು ಸ್ವಾಗತಿಸುತ್ತೇನೆ ಎಂದು ಶರ್ಮಾ ಸ್ನಾನದ ನಂತರ ಪತ್ರಕರ್ತರಿಗೆ ಹೇಳಿದರು.

ಛತ್ ಪೂಜೆಗೂ ಮುನ್ನ ಕಲುಷಿತ ಯಮುನಾ ನೀರಿನ ವಿಚಾರದಲ್ಲಿ ಎಎಪಿ ಮತ್ತು ಬಿಜೆಪಿ ಪರಸ್ಪರ ವಾಗ್ದಾಳಿ ನಡೆಸಿವೆ. ಏತನ್ಮಧ್ಯೆ, ಛತ್ ಆಚರಣೆಯ ಭಾಗವಾಗಿ ಯಾವುದೇ ಅರ್ಪಣೆಗಳನ್ನು ನದಿಯಲ್ಲಿ ಮುಳುಗಿಸಲು ಅನುಮತಿಸಲಾಗುವುದಿಲ್ಲ ಎಂದು  ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಹೇಳಿದೆ.

ಇದನ್ನೂ ಓದಿ: ಕೆಮಿಕಲ್ ತಲೆ ಮೇಲೆ ಸುರಿಬೇಕಾ? ಯಮುನಾ ನದಿಗೆ ರಾಸಾಯನಿಕ ಸಿಂಪಡಿಸಿದ ಅಧಿಕಾರಿಗಳ ವಿರುದ್ಧ ಗುಡುಗಿದ ಬಿಜೆಪಿ ಸಂಸದ