ಉತ್ತರಾಖಂಡ್ನಲ್ಲಿ ಮತ್ತೆ ಮೇಘಸ್ಫೋಟ; ಇಬ್ಬರು ಸಾವು, ರಕ್ಷಣಾ ಕಾರ್ಯಾಚರಣೆಗೆ ಮಳೆ ಅಡ್ಡಿ
ಮೇಘಸ್ಫೋಟದ ಬಗ್ಗೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಮಿ ಟ್ವೀಟ್ ಮಾಡಿದ್ದು, ಅವಶೇಷಗಳಡಿ ಸಿಲುಕಿರುವ ಜನರನ್ನು ಹೊರತೆಗೆಯುವ ಪ್ರಯತ್ನ ನಡೆಯುತ್ತಿದೆ.
ಉತ್ತರಾಖಂಡ್ನಲ್ಲಿ ಮತ್ತೊಮ್ಮೆ ಮೇಘಸ್ಫೋಟವಾಗಿದ್ದು, ಅವಘಡದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಏಳು ಮನೆಗಳು ನೆಲಸಮಗೊಂಡಿದ್ದು, ಅವಶೇಷಗಳಡಿ 5ಕ್ಕೂ ಹೆಚ್ಚು ಮಂದಿ ಸಿಲುಕಿದ್ದಾರೆ ಎಂದು ಹೇಳಲಾಗಿದೆ. ಧರ್ಚುಲಾದ ಜುಮ್ಮಾ ಗ್ರಾಮದಲ್ಲಿ ಮೇಘ ಸ್ಫೋಟಗೊಂಡಿದೆ. ಅದರ ಪರಿಣಾಮ ಎನ್ಎಚ್ಪಿ ಕಾಲನಿ, ತಪೋವನದವರೆಗೂ ಜಲಾವೃತವಾಗಿದೆ ಎಂದು ಹೇಳಲಾಗಿದೆ.
ದುರ್ಘಟನೆ ಬಗ್ಗೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಮಿ ಟ್ವೀಟ್ ಮಾಡಿದ್ದು, ಅವಶೇಷಗಳಡಿ ಸಿಲುಕಿರುವ ಜನರನ್ನು ಹೊರತೆಗೆಯುವ ಪ್ರಯತ್ನ ನಡೆಯುತ್ತಿದೆ. ಕಳೆದ ಕೆಲವು ದಿನಗಳಿಂದಲೂ ಉತ್ತರಾಖಂಡ್ನಲ್ಲಿ ಸಿಕ್ಕಾಪಟೆ ಮಳೆ ಬೀಳುತ್ತಿದೆ. ಮಳೆಯಿಂದಾಗಿ ನಿರಂತರ ಹಾನಿಯಾಗುತ್ತಿದೆ ಎಂದು ಹೇಳಿದರು. ಹಾಗೇ, ಘರ್ವಾಲ್ ಪ್ರದೇಶದಲ್ಲಿ ಪುಷ್ಕರ್ ಸಿಂಗ್ ಧಮಿ ಏರಿಯಲ್ ಸರ್ವೇ ಕೂಡ ನಡೆಸಿದ್ದಾರೆ.
ಕಳೆದ ವಾರ ಖಬ್ರಾಳ ಗ್ರಾಮದ ಸತ್ಲಾ ದೇವಿ ದೇಗುಲದ ಸಮೀಪ ಮೇಘಸ್ಫೋಟವಾಗಿತ್ತು. ಇದರಿಂದಾಗಿ ನದಿಗಳು, ಹಳ್ಳಕೊಳ್ಳಗಳೆಲ್ಲ ತುಂಬಿ ಹರಿದಿದ್ದವು. ನೀರು ಮನೆಗಳಿಗೆ ನುಗ್ಗಿತ್ತು. ವಿದ್ಯುತ್ ಕಂಬಗಳು, ಮರಗಳು ಮುರಿದುಬಿದ್ದು ಅವ್ಯವಸ್ಥೆ ಸೃಷ್ಟಿಸಿದ್ದವು. ದ್ವಿಚಕ್ರವಾಹನಗಳೂ ನೀರಿನಲ್ಲಿ ತೊಳೆದು ಹೋಗಿದ್ದವು. ಅಂದು ಯಾರೂ ಮೃತಪಟ್ಟಿರಲಿಲ್ಲ.
ಇದನ್ನೂ ಓದಿ: ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣ; ಕದ್ದ ಮೊಬೈಲ್ನಿಂದ ಸಿಕ್ಕಿಬಿದ್ದ ಆರೋಪಿಗಳು
Published On - 11:44 am, Mon, 30 August 21