
ಚಂಡೀಗಡ, ಆಗಸ್ಟ್ 14: ಕೇಂದ್ರ ಸರ್ಕಾರದ ‘ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ’ (PMGKAY) ಅಡಿಯಲ್ಲಿ ಬಡ ಫಲಾನುಭವಿಗಳಿಗೆ ಪಾರದರ್ಶಕವಾಗಿ ಸೌಲಭ್ಯ ತಲುಪಿಸಲು ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (CBDC – Digital Rupee) ಆಧಾರಿತ ‘ನೇರ ನಗದು ವರ್ಗಾವಣೆ’ (Direct Benefit Transfer – DBT) ವ್ಯವಸ್ಥೆಗೆ ಚಂಡೀಗಢದಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಗಿದೆ.
ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು, ಪ್ರಕೃತಿ ವಿಕೋಪಗಳು ಮತ್ತು ತಾಂತ್ರಿಕ ಸವಾಲುಗಳ ನಡುವೆಯೂ ಆಹಾರ ಧಾನ್ಯಗಳ ವಿತರಣೆ ಮತ್ತು ಆಹಾರ ಭದ್ರತೆಯನ್ನು ಅತ್ಯಂತ ದಕ್ಷತೆಯಿಂದ ನಿರ್ವಹಿಸುತ್ತಿರುವ ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪ್ರಲ್ಹಾದ್ ಜೋಶಿ ಅವರ ನೇತೃತ್ವ ಹಾಗೂ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ನಾಯಕತ್ವದ ಉಪಸ್ಥಿತಿ: ಚಂಡೀಗಢದಲ್ಲಿ ನಡೆದ ಈ ಮಹತ್ವದ ಕಾರ್ಯಕ್ರಮದಲ್ಲಿ ಪಂಜಾಬ್ ರಾಜ್ಯಪಾಲರು ಹಾಗೂ ಚಂಡೀಗಢದ ಆಡಳಿತಾಧಿಕಾರಿ ಗುಲಾಬ್ ಚಂದ್ ಕಟಾರಿಯಾ, ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪ್ರಲ್ಹಾದ್ ಜೋಶಿ ಹಾಗೂ ರಾಜ್ಯ ಸಚಿವೆ ನಿಮುಬೆನ್ ಜಯಂತಿಭಾಯಿ ಬಂಭಾನಿಯಾ ಭಾಗವಹಿಸಿದ್ದರು.
ಇದನ್ನೂ ಓದಿ: ಸ್ವಾತಂತ್ರ್ಯೋತ್ತರ ಎಂಟು ದಶಕದಲ್ಲಿ ಭಾರತದ ಪ್ರಮುಖ ಸಾಧನೆಗಳೇನು? ಒಂದು ನೋಟ
ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಸಚಿವ ಪ್ರಲ್ಹಾದ್ ಜೋಶಿ ಅವರು, ಕೇಂದ್ರ ಸರ್ಕಾರವು ದೇಶದ ಬಡ ಮತ್ತು ಅಗತ್ಯವಿರುವ ಜನರಿಗೆ ಉಚಿತ ಪಡಿತರ ಹಾಗೂ ಸೌಲಭ್ಯ ಒದಗಿಸಲು ವಾರ್ಷಿಕವಾಗಿ ₹2.10 ಲಕ್ಷ ಕೋಟಿಗೂ ಹೆಚ್ಚು ಹಣವನ್ನು ವಿನಿಯೋಗಿಸುತ್ತಿದೆ ಎಂದು ತಿಳಿಸಿದರು.
ಶಿವರಾಜ್ ಸಿಂಗ್ ಚೌಹಾಣ್ ಭಾಷಣ ಮಾಡುತ್ತಿರುವುದು
ಇದನ್ನೂ ಓದಿ: ಅತ್ತ ಚಿಲ್ಲರೆ ಹಣದುಬ್ಬರ ಏರಿದರೆ, ಇತ್ತ ಸಗಟು ಹಣದುಬ್ಬರ ಇಳಿಕೆ; ನಾಲ್ಕು ವರ್ಷದಲ್ಲಿ ಮೊದಲ ಬಾರಿ ತಗ್ಗಿದ ಡಬ್ಲ್ಯುಪಿಐ ದರ
ಗುಜರಾತ್ ಮತ್ತು ಪುದುಚೇರಿಗಳಲ್ಲಿ ಯಶಸ್ವಿಯಾಗಿ ನಡೆದ ಪ್ರಾಯೋಗಿಕ ಪರೀಕ್ಷೆಯ (Pilot implementation) ನಂತರ, ಈಗ ಈ ತಂತ್ರಜ್ಞಾನ ಆಧಾರಿತ ಸೇವೆಯನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇದನ್ನು ದೇಶಾದ್ಯಂತ ವಿಸ್ತರಿಸುವ ಗುರಿಯನ್ನು ಸರ್ಕಾರ ಹೊಂದಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ