ಪ್ರತಿ ಕುಟುಂಬಕ್ಕೂ ಸರ್ಕಾರಿ ಉದ್ಯೋಗ, ವಾರ್ಷಿಕ 6 ಸಿಲಿಂಡರ್, 2ಜಿಬಿ ಡೇಟಾ; ಆಕರ್ಷಕ ಪ್ರಣಾಳಿಕೆ ಘೋಷಿಸಿದ ಎಐಎಡಿಎಂಕೆ
Tamil Nadu Election 2021: ಕಾಲೇಜು ವಿದ್ಯಾರ್ಥಿಗಳಿಗೆ ಉಚಿತವಾಗಿ ವಾರ್ಷಿಕ 2GB ಡೇಟಾ ಒದಗಿಸುವಂತಹ ಅತ್ಯಾಕರ್ಷಕ ಅಂಶಗಳನ್ನು ಪ್ರಣಾಳಿಕೆ ಒಳಗೊಂಡಿದೆ. ಅಲ್ಲದೇ ವಾರ್ಷಿಕ 6 ಸಿಲಿಂಡರ್ಗಳನ್ನು ಮನೆಬಳಕೆಗೆ ನೀಡುವುದಾಗಿಯೂ ಪಕ್ಷ ಘೋಷಿಸಿದೆ.
ಚೆನ್ನೈ: ಏಪ್ರಿಲ್ 6ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಆಡಳಿತಾರೂಢ ಎಐಎಡಿಎಂಕೆ ಅಧಿಕೃತವಾಗಿ ಆಕರ್ಷಕ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಪ್ರತಿ ಕುಟುಂಬಕ್ಕೂ ಒಂದು ಸರ್ಕಾರಿ ಉದ್ಯೋಗ ನೀಡುವುದು ಪ್ರಣಾಳಿಕೆಯ ಅತಿ ಪ್ರಮುಖ ಅಂಶವಾಗಿದ್ದು, ಕಾಲೇಜು ವಿದ್ಯಾರ್ಥಿಗಳಿಗೆ ಉಚಿತವಾಗಿ ವಾರ್ಷಿಕ 2GB ಡೇಟಾ ಒದಗಿಸುವಂತಹ ಅತ್ಯಾಕರ್ಷಕ ಅಂಶಗಳನ್ನು ಪ್ರಣಾಳಿಕೆ ಒಳಗೊಂಡಿದೆ. ಅಲ್ಲದೇ ವಾರ್ಷಿಕ 6 ಸಿಲಿಂಡರ್ಗಳನ್ನು ಮನೆಬಳಕೆಗೆ ನೀಡುವುದಾಗಿಯೂ ಪಕ್ಷ ಘೋಷಿಸಿದೆ.
ಸಿಎಎ ವಿರುದ್ಧವೂ ಹೋರಾಟ ನಡೆಸುವುದಾಗಿ ಭರವಸೆ ನೀಡಿರುವ ಎಐಎಡಿಎಂಕೆ ಪ್ರಣಾಳಿಕೆ ಅಚ್ಚರಿ ಹುಟ್ಟಿಸಿದೆ. ಸಿಎಎ ಜಾರಿಗೊಳಿಸಿದ್ದ ಬಿಜೆಪಿ ಜೊತೆ ಎಐಎಡಿಎಂಕೆ ಮೈತ್ರಿ ಹೊಂದಿದ್ದರೂ ಸಿಎಎ ವಿರುದ್ಧವೂ ಹೋರಾಟ ನಡೆಸುವುದಾಗಿ ಭರವಸೆ ನೀಡಿದೆ. ಜತೆಗೆ ಶ್ರೀಲಂಕಾದ ತಮಿಳು ನಿರಾಶ್ರಿತರಿಗೆ ದ್ವಿಪೌರತ್ವ ಒದಗಿಸುವುದಾಗಿ ಆಶ್ವಾಸನೆ ನೀಡಿದೆ. ಸೋಲಾರ್ ಒಲೆ ಮತ್ತು ವಾಶಿಂಗ್ಮಶಿನ್ಗಳನ್ನು ಎಲ್ಲಾ ಮನೆಗೂ ಒದಗಿಸುವುದಾಗಿ ಎಐಡಿಎಂಕೆ ಪ್ರಣಾಳಿಕೆ ಹೇಳುತ್ತದೆ. ರಾಜೀವ್ ಗಾಂಧಿ ಹಂತಕರ ಬಿಡುಗಡೆ ಭರವಸೆಯನ್ನೂ ಪ್ರಣಾಳಿಕೆಯನ್ನೂ ನೀಡಲಾಗಿದೆ.
ತಮಿಳುನಾಡು ವಿಧಾನಸಭಾ ಚುನಾವಣೆಗೆ ಆಡಳಿತಾರೂಢ ಎಐಎಡಿಎಂಕೆ ಪಕ್ಷದ ಮೊದಲ ಪಟ್ಟಿ ಬಿಡುಗಡೆಯಾಗಿದೆ. ಮೊದಲ ಪಟ್ಟಿಯಲ್ಲಿ ಆರು ಪ್ರಭಾವಿ ನಾಯಕರ ಕ್ಷೇತ್ರಗಳನ್ನು ಅಂತಿಮಗೊಳಿಸಲಾಗಿದೆ. ಶಶಿಕಲಾ ರಾಜಕೀಯ ನಿವೃತ್ತಿ ಘೋಷಣೆಯ ನಂತರ ತಮಿಳುನಾಡು ರಾಜಕಾರಣ ದೇಶದ ಗಮನ ಸೆಳೆದಿತ್ತು. ಶಶಿಕಲಾ ನಿರ್ಧಾರ ಎಐಎಡಿಎಂಕೆ-ಬಿಜೆಪಿ ಮೈತ್ರಿಕೂಟದ ಹಿತಕ್ಕೆ ಪೂರಕವಾಗಬಹುದು ಎಂಬ ವಿಶ್ಲೇಷಣೆಗಳು ಚಾಲ್ತಿಗೆ ಬಂದಿದ್ದವು.
ಪ್ರಬಲರ ಸ್ಪರ್ಧೆ
ಸೇಲಂ ಜಿಲ್ಲೆಯ ಎಡಪ್ಪಾಡಿ ಕ್ಷೇತ್ರದಿಂದ ಮುಖ್ಯಮಂತ್ರಿ ಪಳನಿಸ್ವಾಮಿ, ತೇನಿ ಜಿಲ್ಲೆಯ ಬೋಡಿನಯಾಕ್ಕನೂರ್ ಕ್ಷೇತ್ರದಿಂದ ಉಪಮುಖ್ಯಮಂತ್ರಿ ಓ.ಪನ್ನೀರ್ಸೆಲ್ವಂ ಸ್ಪರ್ಧಿಸಲಿದ್ದಾರೆ.
ಮೀನುಗಾರಿಕೆ ಸಚಿವ ಡಿ.ಜಯಕುಮಾರ್ ರಾಯಪುರಂ ಕ್ಷೇತ್ರದಿಂದ ಮತ್ತು ಮತ್ತು ಕಾನೂನು ಸಚಿವ ಸಿ.ವಿ.ಷಣ್ಮುಗಂ ಉತ್ತರ ತಮಿಳುನಾಡಿನ ವಿಲ್ಲುಪುರಂ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಶಾಸಕರಾದ ಎಸ್.ಪಿ.ಷಣ್ಮುಗನಾಥನ್ ಮತ್ತು ಎಸ್.ತೆನ್ಮೊಳಿ ಅವರಿಗೆ ಕ್ರಮವಾಗಿ ಶ್ರೀವೈಕುಂಠಂ ಮತ್ತು ನಿಲಕ್ಕೋಟಿ (ಮೀಸಲು) ಕ್ಷೇತ್ರಗಳನ್ನು ಘೋಷಿಸಲಾಗಿದೆ.
ತಮಿಳುನಾಡಿನಲ್ಲಿ ಏಪ್ರಿಲ್ 6ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ.
ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿರುವ 171 ಅಭ್ಯರ್ಥಿಗಳ ಪಟ್ಟಿಯನ್ನು ಎಐಎಡಿಎಂಕೆ ಈಗಾಗಲೇ ಮಾಡಿದೆ. ಈ ಬಾರಿಯ ಚುನಾವಣೆಯಲ್ಲಿ 177 ಮಂದಿಯನ್ನು ಪಕ್ಷ ಕಣಕ್ಕಿಳಿಸಲಿದೆ. ಬಿಜೆಪಿಗೆ 20 ಸೀಟುಗಳನ್ನು ಎಐಎಡಿಎಂಕೆ ನೀಡಿದೆ. ಈ ಚುನಾವಣೆಯಲ್ಲಿ ಬಿಜೆಪಿ, ಎಐಎಡಿಎಂಕೆ ಮತ್ತು ಪಾಟ್ಟಾಳಿ ಮಕ್ಕಳ್ ಕಟ್ಚಿ (PMK) ಮೈತ್ರಿಕೂಟ ಜತೆಯಾಗಿ ಸ್ಪರ್ಧಿಸಲಿದೆ. ಎನ್ಡಿಎ ಮೈತ್ರಿಕೂಟದಿಂದ ನಟ, ರಾಜಕಾರಣಿ ವಿಜಯಕಾಂತ್ ಅವರ ಡಿಎಂಡಿಕೆ ಪಕ್ಷ ಹೊರ ನಡೆದ ಕಾರಣ ಪಿಎಂಕೆಗೆ 23 ಸೀಟುಗಳು ಲಭಿಸಿವೆ. ಇಲ್ಲಿವರೆಗೆ ನಡೆದ ಸೀಟು ಹಂಚಿಕೆ ಪ್ರಕಾರ 14 ಸೀಟುಗಳು ಅನ್ನೂ ಹಂಚಿಕೆಯಾಗದೆ ಮೈತ್ರಿಕೂಟದಲ್ಲಿ ಉಳಿದೆ.
ತಮಿಳುನಾಡಿನ 234 ಸೀಟುಗಳಿಗೆ ಏಪ್ರಿಲ್ 6ರಂದು ಚುನಾವಣೆ ನಡೆಯಲಿದ್ದು ಮೇ.2ರಂದು ಫಲಿತಾಂಶ ಪ್ರಕಟವಾಗಲಿದೆ. ತಮಿಳುನಾಡಿನ ಮುಖ್ಯಮಂತ್ರಿ ಜೆ.ಜಯಲಲಿತಾ ನಿಧನ ನಂತರ ಎಐಎಡಿಎಂಕೆ ಸ್ಪರ್ಧಿಸುವ ಮೊದಲ ಚುನಾವಣೆ ಇದಾಗಿದ್ದು, ವಿಪಕ್ಷಗಳಿಂದ ತೀವ್ರ ಪೈಪೋಟಿ ಎದುರಾಗಿದೆ. 2016 ಡಿಸೆಂಬರ್ ತಿಂಗಳಲ್ಲಿ ಜಯಲಲಿತಾ ನಿಧನರಾಗಿದ್ದರು. ಇದಾದನಂತರ ಪಕ್ಷದಲ್ಲಿದ್ದ ಟಿಟಿವಿ ದಿನಕರನ್ ತಮ್ಮದೇ ಆದ ಪಕ್ಷವಾದ ಅಮ್ಮ ಮಕ್ಕಳ್ ಮುನ್ನೇಟ್ರ ಕಳಗಂ (AMMK) ಆರಂಭಿಸಿದರು. ಎಎಂಎಂಕೆ ಪಕ್ಷ ಈ ಬಾರಿ ಅಸಾದುದ್ದೀನ್ ಓವೈಸಿ ಅವರ ಎಐಎಎಂಐಎಂ ಜತೆ ಮೈತ್ರಿ ಮಾಡಿಕೊಂಡಿದೆ.
ತಮ್ಮ ಮೈತ್ರಿಕೂಟದಲ್ಲಿರುವ ಪಕ್ಷಗಳಿಗೆ ಸೀಟು ಹಂಚಿಕೆ ಮಾಡುವುದು ಎಐಎಡಿಎಂಕೆ ಪ್ರಯಾಸವನ್ನುಂಟು ಮಾಡಿದೆ,. ಸೀಟು ಹಂಚಿಕೆ ವಿಷಯದಲ್ಲಿ ಅಸಮಧಾನಗೊಂಡು ಡಿಎಂಡಿಕೆ ಮೈತ್ರಿಕೂಟದಿಂದ ಹೊರ ನಡೆದಿತ್ತು. ಡಿಎಂಡಿಕೆಗೆ 15 ಸೀಟುಗಳನ್ನು ನೀಡುವುದಾಗಿ ಎಐಎಡಿಎಂಕೆ ಹೇಳಿತ್ತು. ಆದರೆ ಅಷ್ಟು ಸಾಲುವುದಿಲ್ಲ ಎಂದು ಮುನಿಸಿಕೊಂಡು ಡಿಎಂಡಿಕೆ ಮೈತ್ರಿಕೂಟದಿಂದ ಹೊರ ನಡೆದಿತ್ತು.
ಇದನ್ನೂ ಓದಿ: ತಮಿಳುನಾಡಿನ ಅರವಕುರಿಚಿ ಕ್ಷೇತ್ರದಿಂದ ಅಣ್ಣಾಮಲೈ ಸ್ಪರ್ಧೆ: ಬಿಜೆಪಿಯಿಂದ ಅಧಿಕೃತ ಘೋಷಣೆ
‘ಎಐಎಡಿಎಂಕೆ ಈಗ ಮೇಡಂ ಜಯಲಲಿತಾರ ಪಕ್ಷವಲ್ಲ..ಅದು ಪ್ರಧಾನಿ ಮೋದಿಯವರ ಗುಲಾಮ ಪಕ್ಷ’- ಅಸಾದುದ್ದೀನ್ ಓವೈಸಿ ಟೀಕೆ
Published On - 9:00 pm, Sun, 14 March 21