AIIMS Recruitment 2026: ಏಮ್ಸ್​​​ನಲ್ಲಿ ಭರ್ಜರಿ ನೇಮಕಾತಿ; 1,484 ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯು (AIIMS) ನೇಮಕಾತಿ 2024 ಅಧಿಸೂಚನೆ ಬಿಡುಗಡೆ ಮಾಡಿದೆ. 1484 ಬೋಧಕೇತರ ಗ್ರೂಪ್ B ಮತ್ತು C ಹುದ್ದೆಗಳಿಗೆ ಜೂನ್ 13 ರಿಂದ ಜುಲೈ 3 ರವರೆಗೆ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಕೇಂದ್ರ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅರ್ಹ ಅಭ್ಯರ್ಥಿಗಳಿಗೆ ಇದು ಸುವರ್ಣಾವಕಾಶ. ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಮತ್ತು ಕೌಶಲ್ಯ ಪರೀಕ್ಷೆ ಮೂಲಕ ಆಯ್ಕೆ ನಡೆಯಲಿದೆ.

AIIMS Recruitment 2026: ಏಮ್ಸ್​​​ನಲ್ಲಿ ಭರ್ಜರಿ ನೇಮಕಾತಿ; 1,484 ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನ
ಏಮ್ಸ್​​​ನಲ್ಲಿ ಭರ್ಜರಿ ನೇಮಕಾತಿ
Image Credit source: Pinterest

Updated on: Jun 14, 2026 | 1:38 PM

ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯು (AIIMS) ತನ್ನ ಸಾಮಾನ್ಯ ನೇಮಕಾತಿ ಪರೀಕ್ಷೆ (CRE-5)ಗೆ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ದೇಶಾದ್ಯಂತ ಇರುವ ವಿವಿಧ ಎಮ್ಸ್ ಆಸ್ಪತ್ರೆಗಳು ಮತ್ತು ಇತರ ಕೇಂದ್ರ ಸರ್ಕಾರಿ ಸಂಸ್ಥೆಗಳಲ್ಲಿ ಖಾಲಿ ಇರುವ ಒಟ್ಟು 1,484 ಬೋಧಕೇತರ (Non-Faculty) ಗ್ರೂಪ್ ಬಿ ಮತ್ತು ಗ್ರೂಪ್ ಸಿ ಹುದ್ದೆಗಳನ್ನು ಭರ್ತಿ ಮಾಡಲು ಈ ಬೃಹತ್ ನೇಮಕಾತಿ ಪ್ರಕ್ರಿಯೆಯನ್ನು ಹಮ್ಮಿಕೊಳ್ಳಲಾಗಿದೆ. ಕೇಂದ್ರ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿದ್ದ ಅರ್ಹ ಅಭ್ಯರ್ಥಿಗಳಿಗೆ ಇದು ಅತ್ಯುತ್ತಮ ಸುವರ್ಣ ಅವಕಾಶವಾಗಿದೆ.

ಅರ್ಜಿ ಸಲ್ಲಿಕೆಯ ದಿನಾಂಕಗಳು ಮತ್ತು ಅಧಿಕೃತ ವೆಬ್‌ಸೈಟ್:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಅಭ್ಯರ್ಥಿಗಳು ಜೂನ್ 13 ರಿಂದ ಜುಲೈ 3 ರವರೆಗೆ ಆನ್‌ಲೈನ್ ಮೂಲಕ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ಎಮ್ಸ್‌ನ ಅಧಿಕೃತ ಪರೀಕ್ಷಾ ವೆಬ್‌ಸೈಟ್ ಆದ aiimsexams.ac.in ಗೆ ಭೇಟಿ ನೀಡುವ ಮೂಲಕ ನಿಗದಿತ ಅವಧಿಯೊಳಗೆ ಆನ್‌ಲೈನ್ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ಅಧಿಸೂಚನೆಯಲ್ಲಿ ನೀಡಿರುವ ಅರ್ಹತೆಗಳನ್ನು ಅಭ್ಯರ್ಥಿಗಳು ಸಂಪೂರ್ಣವಾಗಿ ಓದಿಕೊಳ್ಳುವುದು ಸೂಕ್ತ.

ಪರೀಕ್ಷಾ ದಿನಾಂಕ ಮತ್ತು ಆಯ್ಕೆ ವಿಧಾನ:

ನೇಮಕಾತಿಯ ಪ್ರಮುಖ ಹಂತವಾದ ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆಯನ್ನು (CBT) ಜುಲೈ 25 ರಿಂದ ಜುಲೈ 27, 2026 ರ ನಡುವೆ ನಡೆಸಲು ತಾತ್ಕಾಲಿಕ ದಿನಾಂಕಗಳನ್ನು ನಿಗದಿಪಡಿಸಲಾಗಿದೆ. ಈ ಪರೀಕ್ಷೆಗೆ ಸಂಬಂಧಿಸಿದ ಪ್ರವೇಶ ಪತ್ರವನ್ನು (Admit Card) ಜುಲೈ ಎರಡನೇ ವಾರದಲ್ಲಿ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾಗುವುದು. ಲಿಖಿತ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸುವ ಅಂಕಗಳು ಮತ್ತು ಅದರ ನಂತರ ಆಯಾ ಹುದ್ದೆಗಳಿಗೆ ಅನುಗುಣವಾಗಿ ನಡೆಯುವ ಕೌಶಲ್ಯ ಪರೀಕ್ಷೆಗಳ (Skill Test) ಆಧಾರದ ಮೇಲೆ ಅಂತಿಮ ಆಯ್ಕೆಯನ್ನು ಮಾಡಲಾಗುತ್ತದೆ. ಕೌಶಲ್ಯ ಪರೀಕ್ಷೆಯ ನಿಖರ ದಿನಾಂಕಗಳನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು.

ಲಿಖಿತ ಪರೀಕ್ಷೆಯ ಸ್ವರೂಪ ಮತ್ತು ನೆಗೆಟಿವ್ ಮಾರ್ಕಿಂಗ್:

ಈ ನೇಮಕಾತಿಯ ಲಿಖಿತ ಪರೀಕ್ಷೆಯು ಒಟ್ಟು 400 ಅಂಕಗಳಿಗೆ ನಡೆಯಲಿದ್ದು, ಪರೀಕ್ಷಾ ಅವಧಿಯು 90 ನಿಮಿಷಗಳಾಗಿರುತ್ತದೆ. ಸಂಪೂರ್ಣ ಪರೀಕ್ಷೆಯು ಬಹು ಆಯ್ಕೆಯ ಪ್ರಶ್ನೆಗಳ (MCQ) ಸ್ವರೂಪದಲ್ಲಿದ್ದು, ಒಟ್ಟು 100 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಇಲ್ಲಿ ಪ್ರತಿ ಸರಿಯಾದ ಉತ್ತರಕ್ಕೆ 4 ಅಂಕಗಳನ್ನು ನೀಡಲಾಗುವುದು ಮತ್ತು ಪ್ರತಿ ತಪ್ಪು ಉತ್ತರಕ್ಕೆ 1 ಅಂಕವನ್ನು ಋಣಾತ್ಮಕ ಅಂಕವಾಗಿ (Negative Marking) ಕಡಿತಗೊಳಿಸಲಾಗುತ್ತದೆ. ಪಠ್ಯಕ್ರಮದ ಪ್ರಕಾರ, ಸಾಮಾನ್ಯ ಜ್ಞಾನ, ಯೋಗ್ಯತೆ (Aptitude) ಮತ್ತು ಕಂಪ್ಯೂಟರ್ ಜ್ಞಾನದ ವಿಷಯಗಳಿಂದ 20 ಪ್ರಶ್ನೆಗಳನ್ನು ಹಾಗೂ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ನಿರ್ದಿಷ್ಟ ಹುದ್ದೆಗೆ ಸಂಬಂಧಿಸಿದ ವಿಷಯದಿಂದ 80 ಪ್ರಶ್ನೆಗಳನ್ನು ಕೇಳಲಾಗುತ್ತದೆ.

ಇದನ್ನೂ ಓದಿ: ಲಿಖಿತ ಪರೀಕ್ಷೆಯಿಲ್ಲದೆ ಸಿಗಲಿದೆ ತಿಂಗಳಿಗೆ 2.25 ಲಕ್ಷ ರೂ. ಸಂಬಳದ ಉದ್ಯೋಗ! ಅರ್ಜಿ ಸಲ್ಲಿಸುವುದು ಹೇಗೆ?

ವರ್ಗವಾರು ಅರ್ಜಿ ಶುಲ್ಕದ ವಿವರಗಳು:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಮ್ಮ ಸಾಮಾಜಿಕ ವರ್ಗದ ಆಧಾರದ ಮೇಲೆ ನಿಗದಿತ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಸಾಮಾನ್ಯ (General) ಮತ್ತು ಒಬಿಸಿ (OBC) ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ 3,000 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ. ಇನ್ನು ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ (EWS) ಅಭ್ಯರ್ಥಿಗಳಿಗೆ 2,400 ರೂಪಾಯಿ ಅರ್ಜಿ ಶುಲ್ಕವಿರುತ್ತದೆ. ವಿಕಲಚೇತನ (PwBD) ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.

ಭರ್ತಿ ಮಾಡಲಾಗುವ ಪ್ರಮುಖ ಹುದ್ದೆಗಳು:

ಈ ಬಾರಿಯ ನೇಮಕಾತಿ ಅಡಿಯಲ್ಲಿ ವೈವಿಧ್ಯಮಯ ತಾಂತ್ರಿಕ ಮತ್ತು ಆಡಳಿತಾತ್ಮಕ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಹಿರಿಯ ಆಡಳಿತಾಧಿಕಾರಿ, ಸಹಾಯಕ ಆಡಳಿತಾಧಿಕಾರಿ, ಕಿರಿಯ ಆಡಳಿತಾಧಿಕಾರಿ, ಕಾರ್ಯನಿರ್ವಾಹಕ ಸಹಾಯಕ, ಕಚೇರಿ ಸೂಪರಿಂಟೆಂಡೆಂಟ್ ಮತ್ತು ಸಹಾಯಕ ಹುದ್ದೆಗಳು ಇದರಲ್ಲಿ ಸೇರಿವೆ. ಇದರೊಂದಿಗೆ ಕೆಳ ವಿಭಾಗದ ಗುಮಾಸ್ತ (LDC), ಉನ್ನತ ವಿಭಾಗದ ಗುಮಾಸ್ತ (UDC), ಜೂನಿಯರ್ ಎಂಜಿನಿಯರ್ (ಸಿವಿಲ್/ಎಲೆಕ್ಟ್ರಿಕಲ್/ಮೆಕ್ಯಾನಿಕಲ್), ಸಹಾಯಕ ಎಂಜಿನಿಯರ್, ಸಹಾಯಕ ಆಹಾರ ತಜ್ಞ, ಆಹಾರ ತಜ್ಞ, ವಾರ್ಡನ್, ಸ್ಟೋರ್ ಕೀಪರ್, ಕ್ಯಾಷಿಯರ್ ಮತ್ತು ಜೂನಿಯರ್ ಅಕೌಂಟ್ಸ್ ಆಫೀಸರ್ ಮುಂತಾದ ಹತ್ತಾರು ವಿಭಾಗದ ಹುದ್ದೆಗಳಿಗೆ ಅಭ್ಯರ್ಥಿಗಳು ತಮ್ಮ ಅರ್ಹತೆಗನುಗುಣವಾಗಿ ಸ್ಪರ್ಧಿಸಬಹುದಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 1:36 pm, Sun, 14 June 26

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us