ಏರ್ ಇಂಡಿಯಾ ವಿಮಾನದಲ್ಲಿ ಮಹಿಳೆಯ ಮೇಲೆ ಮೂತ್ರ ವಿಸರ್ಜಿಸಿದ್ದ ಆರೋಪಿ ಕೊನೆಗೆ ತನಗೆ ಕುಟುಂಬವಿದೆ ದಯವಿಟ್ಟು ನನ್ನ ಮೇಲೆ ದೂರು ಕೊಡಬೇಡಿ ಎಂದು ಬೇಡಿಕೊಂಡಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ. ಒಂದೊಮ್ಮೆ ದೂರು ಕೊಟ್ಟರೆ ತನ್ನ ಹೆಂಡತಿ ಹಾಗೂ ಮಗುವಿಗೆ ತೊಂದರೆಯಾಗುತ್ತದೆ ಎಂದು ಕೇಳಿಕೊಂಡಿದ್ದ. ಮಹಿಳೆ ಏರ್ ಇಂಡಿಯಾಗೆ ನೀಡಿದ ದೂರಿನ ಆಧಾರದ ಮೇಲೆ ದೆಹಲಿ ಪೊಲೀಸರು ಆರೋಪಿಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಅದರಲ್ಲಿ ಆರೋಪಿ ತನ್ನ ವಿರುದ್ಧ ಕೇಸ್ ದಾಖಲಿಸಬೇಡಿ ಎಂದು ಕೇಳಿಕೊಂಡಿರುವ ವಿಷಯ ಉಲ್ಲೇಖಿಸಲಾಗಿದೆ.
ಮಹಿಳೆ, ತನ್ನ ಇಚ್ಛೆಯ ವಿರುದ್ಧವಾಗಿ ಆರೋಪಿಯೊಂದಿಗೆ ಮಾತುಕತೆ ನಡೆಸಿ, ರಾಜಿ ಮಾಡಿಕೊಳ್ಳುವಂತೆ ತನಗೆ ಒತ್ತಾಯಿಸಲಾಯಿತು ಎಂದು ಹೇಳಲಾಗಿದೆ. ಏರ್ ಇಂಡಿಯಾ ವಿಮಾನದಲ್ಲಿ ಸಹ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಆರೋಪಿ ಪತ್ತೆಗಾಗಿ ಲುಕ್‌ಔಟ್ ನೋಟಿಸ್ ಹೊರಡಿಸಲಾಗಿದೆ.
ಮತ್ತಷ್ಟು ಓದಿ: Air India ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ ಮತ್ತೊಂದು ಘಟನೆ ಬೆಳಕಿಗೆ
ಈ ವಿಚಾರದಲ್ಲಿ ತನಿಖೆಗೆ ಸಹಕರಿಸದ ಹಿನ್ನೆಲೆಯಲ್ಲಿ ಆರೋಪಿ ವಿರುದ್ಧ ಲುಕ್ ಔಟ್ ನೋಟಿಸ್ ಹೊರಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈವರೆಗೂ ವಿಮಾನದಲ್ಲಿದ್ದ ನಾಲ್ವರು ಸಿಬ್ಬಂದಿ ಮಾತ್ರ ವಿಚಾರಣೆಗೆ ಸಹಕರಿಸಿದ್ದಾರೆ. ಗುರುವಾರ ಲುಕ್‌ಔಟ್ ನೋಟಿಸ್ ಹೊರಡಿಸುವಂತೆ ಕೋರಿ ವಲಸೆ ಅಧಿಕಾರಿಗಳಿಗೆ ದೆಹಲಿ ಪೊಲೀಸರು ಪತ್ರ ಬರೆದಿದ್ದರು.
ಆರೋಪಿಯನ್ನು ಮುಂಬೈ ನಿವಾಸಿ ಎಸ್.ಮಿಶ್ರಾ ಎಂದು ಗುರುತಿಸಲಾಗಿದೆ. ಈತ ಕಳೆದ ವರ್ಷ ನವೆಂಬರ್ 26 ರಂದು ಅಮೆರಿಕದ ನ್ಯೂಯಾರ್ಕ್‌ನಿಂದ ದಿಲ್ಲಿಗೆ ಬರುತ್ತಿದ್ದ ವಿಮಾನದಲ್ಲಿ ಸುಮಾರು 70 ವರ್ಷದ ವೃದ್ಧೆ ಮೇಲೆ ಆತ ಮೂತ್ರ ವಿಸರ್ಜನೆ ಮಾಡಿದ್ದಾನೆ ಎನ್ನಲಾಗಿದೆ. ಆರೋಪಿಯನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ