
ನವದೆಹಲಿ, ಜುಲೈ 22: ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದಲ್ಲಿ ಇಂದು ಹಾಂಕಾಂಗ್ನಿಂದ ಆಗಮಿಸಿದ ಏರ್ ಇಂಡಿಯಾ ವಿಮಾನ (Air India Plane) ಇಳಿಯುತ್ತಿದ್ದಂತೆ ಅದರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಏರ್ ಇಂಡಿಯಾ ವಿಮಾನದ ಸಹಾಯಕ ವಿದ್ಯುತ್ ಘಟಕ (ಎಪಿಯು) ಬೆಂಕಿಗೆ ಆಹುತಿಯಾಗಿದೆ. ಪ್ರಯಾಣಿಕರು ವಿಮಾನದಿಂದ ಇಳಿಯುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಏರ್ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ. ಈ ಘಟನೆಯಲ್ಲಿ ಯಾವುದೇ ಪ್ರಯಾಣಿಕರು ಅಥವಾ ಸಿಬ್ಬಂದಿಗೆ ಹಾನಿಯಾಗಿಲ್ಲ.
ಸಹಾಯಕ ವಿದ್ಯುತ್ ಘಟಕವು ವಾಣಿಜ್ಯ ವಿಮಾನದ ಬಾಲದ ತುದಿಯಲ್ಲಿರುತ್ತದೆ. ಈ ವಿಮಾನವು ವಿಸ್ತಾರಾ ಏರ್ಲೈನ್ಸ್ ನದ್ದಾಗಿದ್ದು, ವಿಲೀನದ ನಂತರ ಈಗ ಏರ್ ಇಂಡಿಯಾ ಇದನ್ನು ನಡೆಸುತ್ತಿದೆ. ಬೆಂಕಿಯಿಂದಾಗಿ ವಿಮಾನಕ್ಕೆ ಸ್ವಲ್ಪ ಹಾನಿಯಾಗಿದೆ. ಆದರೆ, ಪ್ರಯಾಣಿಕರು ಮತ್ತು ಸಿಬ್ಬಂದಿಗಳು ಸುರಕ್ಷಿತವಾಗಿ ಕೆಳಗೆ ಇಳಿದಿದ್ದಾರೆ ಎಂದು ಏರ್ ಇಂಡಿಯಾ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಏರ್ ಇಂಡಿಯಾ ವಿಮಾನ ಅಪಘಾತ ಸಂತ್ರಸ್ತರಿಗೆ ನೆರವಾಗಲು ಟಾಟಾ ಸನ್ಸ್ನಿಂದ 500 ಕೋಟಿ ರೂ. ಟ್ರಸ್ಟ್ ಸ್ಥಾಪನೆ
ಜುಲೈ 22, 2025ರಂದು ಹಾಂಗ್ ಕಾಂಗ್ ನಿಂದ ದೆಹಲಿಗೆ ಹಾರಾಟ ನಡೆಸುತ್ತಿದ್ದ ಫ್ಲೈಟ್ AI 315 ದೆಹಲಿ ಏರ್ಪೋರ್ಟ್ನಲ್ಲಿ ಇಳಿದು ಗೇಟ್ ನಲ್ಲಿ ನಿಲ್ಲಿಸಿದ ಸ್ವಲ್ಪ ಸಮಯದ ನಂತರ ಸಹಾಯಕ ವಿದ್ಯುತ್ ಘಟಕ (APU)ದಲ್ಲಿ ಬೆಂಕಿ ಕಾಣಿಸಿಕೊಂಡಿತು. ಪ್ರಯಾಣಿಕರು ಇಳಿಯಲು ಪ್ರಾರಂಭಿಸಿದಾಗ ಈ ಘಟನೆ ಸಂಭವಿಸಿದೆ. ಸಿಸ್ಟಮ್ ವಿನ್ಯಾಸದ ಪ್ರಕಾರ APU ಸ್ವಯಂಚಾಲಿತವಾಗಿ ಸ್ಥಗಿತಗೊಂಡಿತು. ಹೆಚ್ಚಿನ ತನಿಖೆಗಾಗಿ ವಿಮಾನವನ್ನು ಸ್ಥಗಿತಗೊಳಿಸಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.
APU ಒಂದು ಸಣ್ಣ ಎಂಜಿನ್ (ಮುಖ್ಯ ಎಂಜಿನ್ ಅಲ್ಲ) ಆಗಿದ್ದು, ವಿಮಾನವು ನೆಲದ ಮೇಲೆ ಇರುವಾಗ ಅದಕ್ಕೆ ವಿದ್ಯುತ್ ಒದಗಿಸುತ್ತದೆ. ವಿಮಾನ ನೆಲದ ಮೇಲಿದ್ದಾಗ ಅದಕ್ಕೆ ಲೈಟ್, ಎಸಿ ಮತ್ತು ಮುಖ್ಯ ಎಂಜಿನ್‌ಗಳನ್ನು ಪ್ರಾರಂಭಿಸಲು ಇದು ಸಹಾಯ ಮಾಡುತ್ತದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ