‘2029ರ ಅಂತ್ಯದೊಳಗೆ ಪಂಜಾಬ್ ಡ್ರಗ್ಸ್ ಮುಕ್ತವಾಗಲಿದೆ’; ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಜ್ಞೆ

ಪಂಜಾಬ್‌ನಲ್ಲಿ ಡ್ರಗ್ಸ್ ವಿರುದ್ಧ ಹೋರಾಡಿ ತಮ್ಮ ಜೀವ ಕಳೆದುಕೊಂಡ ಧೀರ ಕಾರ್ಯಕರ್ತರ ಹತ್ಯೆಯ ಹಿಂದೆ ಇರುವವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಅವರನ್ನು ಬಿಡದೆ ಬೇಟೆಯಾಡುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಖಡಕ್ ಎಚ್ಚರಿಕೆ ನೀಡಿದ್ದಾರೆ. ಪಂಜಾಬ್ ಭೇಟಿ ವೇಳೆ ಮಾದಕ ದ್ರವ್ಯ ದಂಧೆಯ ವಿರುದ್ಧ ದ್ವನಿ ಎತ್ತಿ ಹತ್ಯೆಗೀಡಾದ ಮತ್ತು ಸಂಕಷ್ಟಕ್ಕೆ ಸಿಲುಕಿದ ಸ್ಥಳೀಯ ಕಾರ್ಯಕರ್ತರ ಕುಟುಂಬಗಳನ್ನು ಭೇಟಿಯಾದ ಅಮಿತ್ ಶಾ, ಈ ದುಷ್ಕೃತ್ಯ ಎಸಗಿದವರನ್ನು ಕಾನೂನಿನ ಕಟಕಟೆಗೆ ತರುವುದಾಗಿ ಸ್ಪಷ್ಟಪಡಿಸಿದ್ದಾರೆ.

2029ರ ಅಂತ್ಯದೊಳಗೆ ಪಂಜಾಬ್ ಡ್ರಗ್ಸ್ ಮುಕ್ತವಾಗಲಿದೆ; ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಜ್ಞೆ
ಅಮಿತ್ ಶಾ
Image Credit source: PTI

Updated on: Oct 20, 2026 | 9:46 PM

ಚಂಡೀಗಢ, ಅಕ್ಟೋಬರ್ 20: ಪಂಜಾಬ್‌ನಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯ (ಡ್ರಗ್ಸ್) ಹಾವಳಿಯ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಆಮ್ ಆದ್ಮಿ ಪಾರ್ಟಿ (ಆಪ್) ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಧಿಕಾರಕ್ಕೆ ಬಂದ ಮೂರು ತಿಂಗಳೊಳಗೆ ಡ್ರಗ್ಸ್ ದಂಧೆಯನ್ನು ನಿರ್ಮೂಲನೆ ಮಾಡುವುದಾಗಿ ನೀಡಿದ್ದ ಭರವಸೆಯನ್ನು ಈಡೇರಿಸಲು ಆಪ್ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ ಅವರು, 2029ರ ಡಿಸೆಂಬರ್ 31ರ ವೇಳೆಗೆ ರಾಜ್ಯದಲ್ಲಿ ಮಾದಕ ದ್ರವ್ಯ ದಂಧೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದಾಗಿ ಸವಾಲು ಹಾಕಿದ್ದಾರೆ.

ವಿಜಯದಶಮಿಯ ಪವಿತ್ರ ದಿನದಂದು ಲೂಧಿಯಾನದಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಂಜಾಬ್‌ನಲ್ಲಿ ಆಳವಾಗಿ ಬೇರೂರಿರುವ ಡ್ರಗ್ಸ್ ಜಾಲವನ್ನು ಬುಡಸಹಿತ ಕಿತ್ತುಹಾಕಲು 2029ರ ಡಿಸೆಂಬರ್ 31 ಅನ್ನು ಗಡುವಾಗಿ ನಿಗದಿಪಡಿಸಿದ್ದಾರೆ. ಡ್ರಗ್ಸ್ ಮಾಫಿಯಾ ವಿರುದ್ಧ ಧ್ವನಿ ಎತ್ತಿ ಪ್ರಾಣ ಕಳೆದುಕೊಂಡ ಕಾರ್ಯಕರ್ತರ ಹತ್ಯೆಯ ಹಿಂದೆ ಇರುವ ಪ್ರಭಾವಿ ವ್ಯಕ್ತಿಗಳನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.   ಡ್ರಗ್ಸ್ ವಿರುದ್ಧ ಹೋರಾಡಿ ಹತ್ಯೆಗೀಡಾದ ಪರ್ವಿಂದರ್ ಸಿಂಗ್ ಝೋಟಾ ಸೇರಿದಂತೆ ಇತರೆ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ವಹಿಸಲಾಗುತ್ತಿದ್ದು, ತಪ್ಪಿತಸ್ಥರು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರನ್ನು ಕಾನೂನಿನ ಕಟಕಟೆಗೆ ತರಲಾಗುವುದು ಎಂದು ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ‘ನಕ್ಸಲಿಸಂನ ಎಲ್ಲ ಕುರುಹನ್ನೂ ಅಳಿಸಿಹಾಕಬೇಕು’; ಬಸ್ತಾರ್ ಪುನರುಜ್ಜೀವನದ ಕುರಿತು ಗೃಹ ಸಚಿವ ಅಮಿತ್ ಶಾ ಹೇಳಿಕೆ

ಡ್ರಗ್ಸ್ ದಂಧೆಕೋರರ ವಿರುದ್ಧ ಸಮರ:

ಪಂಜಾಬ್ ರಾಜ್ಯದಲ್ಲಿ ಯುವಕರ ಜೀವವನ್ನು ಬಲಿ ತೆಗೆದುಕೊಳ್ಳುತ್ತಿರುವ ಮಾದಕ ದ್ರವ್ಯ ಮಾಫಿಯಾ ಹಾಗೂ ಅದರ ಹಿಂದೆ ಇರುವ ಪ್ರಭಾವಿ ವ್ಯಕ್ತಿಗಳ ಜಾಲವನ್ನು ಸಂಪೂರ್ಣವಾಗಿ ಸದೆಬಡಿಯಲಾಗುವುದು. ಡ್ರಗ್ಸ್ ವಿರುದ್ಧ ಹೋರಾಡುವವರ ಧ್ವನಿಯನ್ನು ಅಡಗಿಸಲು ಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಪುನರುಚ್ಚರಿಸಿದ್ದಾರೆ.


ಜಮ್ಮು-ಕಾಶ್ಮೀರದಲ್ಲಿ ವಿಧಿ 370 ರದ್ದುಗೊಳಿಸಿರುವುದು, ಉಗ್ರವಾದ ಹಾಗೂ ನಕ್ಸಲಿಸಮ್ ಅನ್ನು ಯಶಸ್ವಿಯಾಗಿ ಮಟ್ಟಹಾಕಿರುವ ಕೇಂದ್ರ ಸರ್ಕಾರದ ದಾಖಲೆಯನ್ನು ಸ್ಮರಿಸಿದ ಅವರು, ಡ್ರಗ್ಸ್ ದಂಧೆಯನ್ನು ಸಂಪೂರ್ಣವಾಗಿ ಮಟ್ಟಹಾಕುವವರೆಗೂ ನಾವು ವಿಶ್ರಮಿಸುವುದಿಲ್ಲ ಎಂದರು. ಪ್ರಾಣ ಕಳೆದುಕೊಂಡ ಆ ಮೂವರು ವೀರ ವ್ಯಕ್ತಿಗಳಿಗೆ ಇದಕ್ಕಿಂತ ದೊಡ್ಡ ನಮನ ಬೇರೆ ಇರಲಾರದು ಎಂದು ಹೇಳಿದರು.

ಇದನ್ನೂ ಓದಿ: ‘ಉತ್ತರ ಪ್ರದೇಶದಲ್ಲಿ ತಯಾರಾದ ಬ್ರಹ್ಮೋಸ್ ಕ್ಷಿಪಣಿ ಪಾಕಿಸ್ತಾನದ ನಿದ್ದೆಗೆಡಿಸಿದೆ’; ನೊಯ್ಡಾದಲ್ಲಿ ಅಮಿತ್ ಶಾ ಬಣ್ಣನೆ

ಸಾರ್ವಜನಿಕರಿಗೆ ನೇರ ಎಚ್ಚರಿಕೆ ಹಾಗೂ ಸಂದೇಶ:

ಡ್ರಗ್ಸ್ ಕಳ್ಳಸಾಗಣೆಯ ಕುರಿತು ಯಾವುದೇ ಮಾಹಿತಿ ಇದ್ದರೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋಗೆ (ಎನ್​ಸಿಬಿ) ನೇರವಾಗಿ ವರದಿ ಮಾಡುವಂತೆ ಸಾರ್ವಜನಿಕರಿಗೆ ಕರೆ ನೀಡಿದ ಅಮಿತ್ ಶಾ, ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಕೇಂದ್ರ ಸರ್ಕಾರವೇ ಖುದ್ದು ಮಧ್ಯಪ್ರವೇಶಿಸಿ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.


ತಮ್ಮ ಭೇಟಿಯ ವೇಳೆ ಅಮಿತ್ ಶಾ ಅವರು ಗುರ್ದಾಸ್‌ಪುರದ ವಿಕ್ರಮ್‌ಜಿತ್ ಸಿಂಗ್, ಸಂಗ್ರೂರಿನ ಗುಲ್ಜಾರ್ ಸಿಂಗ್ ಮತ್ತು ಮಾನ್ಸಾದ ಮಾದಕ ದ್ರವ್ಯ ವಿರೋಧಿ ಹೋರಾಟಗಾರ ಪರ್ವಿಂದರ್ ಸಿಂಗ್ ಝೋಟಾ ಅವರ ಕುಟುಂಬಗಳನ್ನು ಭೇಟಿಯಾದರು. ವಿಕ್ರಮ್‌ಜಿತ್ ಸಿಂಗ್ ಮತ್ತು ಝೋಟಾ ಅವರನ್ನು ಹತ್ಯೆ ಮಾಡಲಾಗಿದ್ದರೆ, ಗುಲ್ಜಾರ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದರು. ತಮ್ಮ ಪ್ರದೇಶದಲ್ಲಿ ನಡೆಯುತ್ತಿದ್ದ ಡ್ರಗ್ಸ್ ದಂಧೆಯನ್ನು ಪ್ರಶ್ನಿಸಿದ್ದಕ್ಕಾಗಿ ಗುಲ್ಜಾರ್ ಅವರಿಗೆ ಕಿರುಕುಳ ನೀಡಲಾಗಿತ್ತು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:42 pm, Tue, 20 October 26

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us