Zoho Mail: ಜಿ-ಮೇಲ್ನಿಂದ ಸ್ವದೇಶಿ ಜೋಹೋ ಮೇಲ್‌ಗೆ ಶಿಫ್ಟ್ ಆದ ಅಮಿತ್ ಶಾ; ಟ್ರಂಪ್ಗೆ ಟಾಂಗ್!
ಕೇಂದ್ರ ಗೃಹ ಸಚಿವ ಅಮಿತ್ ಶಾ ಜಿ-ಮೇಲ್ನಿಂದ ಸ್ವದೇಶಿಯಾದ ಜೋಹೋ ಮೇಲ್‌ಗೆ ಶಿಫ್ಟ್ ಆಗಿದ್ದಾರೆ. ಈಗಾಗಲೇ ಕೇಂದ್ರ ಸರ್ಕಾರ ಪವರ್ ಪಾಯಿಂಟ್ ಬದಲಾಗಿ ಜೋಹೋ ಆಯ್ಕೆ ಮಾಡಿಕೊಂಡಿರುವುದಾಗಿ ಘೋಷಿಸಿತ್ತು. ಶ್ರೀಧರ್ ವೆಂಬು ಅವರು ಜೋಹೋ ಸಂಸ್ಥಾಪಕರು. ಅಮೆರಿಕದ ಹೆಚ್ಚುವರಿ ಸುಂಕದ ಬಳಿಕ ಸ್ವದೇಶಿ ತಂತ್ರಜ್ಞಾನ, ಸ್ವದೇಶಿ ಉತ್ಪನ್ನಗಳನ್ನು ಬಳಸುವಂತೆ ಮೋದಿ ಸರ್ಕಾರ ಕರೆ ನೀಡುತ್ತಿದೆ. ಈಗಾಗಲೇ ವಾಟ್ಸಾಪ್ ಬದಲಾಗಿ ಸ್ವದೇಶಿಯಾದ ಅರಟ್ಟೈ ಆ್ಯಪ್ ಬಳಸುವಂತೆಯೂ ಪ್ರಚಾರ ಮಾಡಲಾಗುತ್ತಿದೆ. ಇದರ ಬೆನ್ನಲ್ಲೇ ಅಮಿತ್ ಶಾ ಅವರು ಜಿ-ಮೇಲ್ ಬದಲಾಗಿ ತಮ್ಮ ಹೊಸ ಜೋಹೋ ಮೇಲ್ ಐಡಿಯನ್ನು ಹಂಚಿಕೊಂಡಿದ್ದಾರೆ.

ನವದೆಹಲಿ, ಅಕ್ಟೋಬರ್ 8: ಭಾರತದ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಜಿ-ಮೇಲ್ ಬದಲಾಗಿ ಇನ್ಮುಂದೆ ಜೋಹೋ-ಮೇಲ್ (Zoho Mail) ಬಳಸುವುದಾಗಿ ಘೋಷಿಸಿದ್ದಾರೆ. ಚೆನ್ನೈ ಮೂಲದ ಶ್ರೀಧರ್ ವೆಂಬು ಅವರು ಅಭಿವೃದ್ಧಿಪಡಿಸಿದ ಜೋಹೋ ಮೇಲ್‌ಗೆ ತಮ್ಮ ಇಮೇಲ್ ಸೇವೆಗಳನ್ನು ಬದಲಾಯಿಸುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಅಮಿತ್ ಶಾ ಅವರ ಈ ಬದಲಾವಣೆಯ ಘೋಷಣೆಯು ಸ್ವದೇಶಿ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಕಡೆಗೆ ಸರ್ಕಾರದ ಹೆಚ್ಚುತ್ತಿರುವ ಆದ್ಯತೆಯನ್ನು ಎತ್ತಿ ತೋರಿಸುತ್ತದೆ. ಇದು ಅಮೆರಿಕಕ್ಕೆ ಬಿಸಿ ಮುಟ್ಟಿಸಿರುವುದಂತೂ ನಿಜ.
ಈಗಾಗಲೇ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮೈಕ್ರೋಸಾಫ್ಟ್ ಪವರ್ ಪಾಯಿಂಟ್ ಬದಲಾಗಿ ಜೋಹೋ ಬಳಸಲು ಕರೆನೀಡಿದ್ದರು. ತಮ್ಮ ಸಚಿವಾಲಯದ ಕಚೇರಿಗಳಲ್ಲಿ ಜೋಹೋ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದರು. ಇದೀಗ ಕೇಂದ್ರ ಗೃಹ ಸಚಿವರು ಜಿ-ಮೇಲ್ ಬದಲಾಗಿ ಜೋಹೋ ಮೇಲ್ ಬಳಸುತ್ತಿರುವುದು ದೇಶದ ಜನರನ್ನು ಸ್ವದೇಶಿ ತಂತ್ರಜ್ಞಾನವನ್ನು ಬಳಸಲು ಮತ್ತಷ್ಟು ಪ್ರೇರೇಪಿಸಲಿದೆ.
ಇದನ್ನೂ ಓದಿ: ಸ್ವದೇಶಿ ಉತ್ಪನ್ನ ಬಳಸಿ; ಜೋಹೋ ಬಳಸುವ ಮೂಲಕ ಭಾರತೀಯರಿಗೆ ಕರೆ ನೀಡಿದ ಸಚಿವ ಅಶ್ವಿನಿ ವೈಷ್ಣವ್
ಇಂದು ಎಕ್ಸ್ ಖಾತೆಯಲ್ಲಿ ಅಮಿತ್ ಶಾ ತಮ್ಮ ಹೊಸ ಮೇಲ್ ಐಡಿಯನ್ನು ಹಂಚಿಕೊಂಡಿದ್ದಾರೆ. amitshah.bjp@zohomail.in ಇದು ಇನ್ಮುಂದೆ ನನ್ನ ಸಂಪರ್ಕದ ಐಡಿ ವಿಳಾಸವಾಗಿರಲಿದೆ ಎಂದಿದ್ದಾರೆ. “ಎಲ್ಲರಿಗೂ ನಮಸ್ಕಾರ, ನಾನು ಜೋಹೋ ಮೇಲ್‌ಗೆ ನನ್ನ ವಿಳಾಸವನ್ನು ಬದಲಾಯಿಸಿದ್ದೇನೆ. ದಯವಿಟ್ಟು ನನ್ನ ಇಮೇಲ್ ವಿಳಾಸದಲ್ಲಿನ ಬದಲಾವಣೆಯನ್ನು ಗಮನಿಸಿ.” ಎಂದು ಅವರು ಪೋಸ್ಟ್ ಮಾಡಿದ್ದಾರೆ. ಆದರೆ, ವಿಷಯ ಇಷ್ಟೇ ಅಲ್ಲ, ಅವರ ಪೋಸ್ಟ್ ಸಾಕಷ್ಟು ಗಮನ ಸೆಳೆದಿರಲು ಮತ್ತೊಂದು ಕಾರಣವೂ ಇದೆ. ಈ ಪೋಸ್ಟ್ ಮೂಲಕ ಅಮಿತ್ ಶಾ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ.
Hello everyone,
I have switched to Zoho Mail. Kindly note the change in my email address.
My new email address is amitshah.bjp @ https://t.co/32C314L8Ct. For future correspondence via mail, kindly use this address.
Thank you for your kind attention to this matter.
— Amit Shah (@AmitShah) October 8, 2025
ಅಮಿತ್ ಶಾ ತಮ್ಮ ಪೋಸ್ಟ್ನ ಕೊನೆಯಲ್ಲಿ Thank you for your kind attention to this matter’ (ಈ ವಿಷಯದ ಬಗ್ಗೆ ಗಮನಹರಿಸಿದ್ದಕ್ಕಾಗಿ ಧನ್ಯವಾದಗಳು) ಎಂದು ಬರೆದಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾಷಣ ಮಾಡುವಾಗ ಅಥವಾ ಏನನ್ನಾದರೂ ಘೋಷಣೆ ಮಾಡುವಾಗ ಇದೇ ಸಾಲುಗಳನ್ನು ಬಳಸುತ್ತಾರೆ. ಅಮಿತ್ ಶಾ ಕೂಡ ಇದೇ ಸಾಲುಗಳನ್ನು ಉದ್ದೇಶಪೂರ್ವಕವಾಗಿ ಬಳಸುವ ಮೂಲಕ ಟ್ರಂಪ್ಗೆ ಪರೋಕ್ಷವಾಗಿ ಬಿಸಿ ಮುಟ್ಟಿಸಿದ್ದಾರೆ.
ಇದನ್ನೂ ಓದಿ: ಮೈಕ್ರೋಸಾಫ್ಟ್ಗೆ ಗುಡ್ ಬೈ, ಜೋಹೋ ಮೂಲಕ ಸಂಪುಟ ಸಭೆಯ ಮಾಹಿತಿ; ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಸ್ವದೇಶಿ ಅಭಿಯಾನ
ಸ್ಥಳೀಯ ತಂತ್ರಜ್ಞಾನ ವೇದಿಕೆಗಳನ್ನು ಬೆಂಬಲಿಸುವ, ಉತ್ತಮ ಡೇಟಾ ಗೌಪ್ಯತೆ ಮತ್ತು ಸ್ಥಳೀಯ ನಿಯಂತ್ರಣವನ್ನು ಖಚಿತಪಡಿಸಿಕೊಳ್ಳುವ ವಿಶಾಲ ಪ್ರಯತ್ನದ ಒಂದು ಭಾಗವಾಗಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ಸೂಚಿಸುತ್ತವೆ. ಸೈಬರ್ ಬೆದರಿಕೆಗಳು ವಿಶ್ವಾದ್ಯಂತ ಬೆಳೆಯುತ್ತಿದ್ದಂತೆ ಭಾರತದ ನಾಯಕತ್ವವು ವಿದೇಶಿ ತಂತ್ರಜ್ಞಾನ ದೈತ್ಯರನ್ನು ಅವಲಂಬಿಸುವ ಬದಲು ಸುರಕ್ಷಿತ, ಸ್ವದೇಶಿ ಪರ್ಯಾಯಗಳನ್ನು ಬಳಸುವತ್ತ ಹೆಚ್ಚು ಗಮನಹರಿಸುತ್ತಿದೆ. ಏಕೆಂದರೆ ಹಿಂದೆ ಕಂಡುಬಂದಂತೆ ಅವು ವೈಯಕ್ತಿಕ ಡೇಟಾ ಉಲ್ಲಂಘನೆಗೆ ಗುರಿಯಾಗಬಹುದು ಎಂಬ ಉದ್ದೇಶದಿಂದ ಸ್ವದೇಶಿ ತಂತ್ರಜ್ಞಾನದತ್ತ ಹೆಚ್ಚು ಆದ್ಯತೆ ನೀಡಲಾಗುತ್ತಿದೆ.
ಜೋಹೊ ಮೇಲ್ ಎಂದರೇನು?:
ಜೋಹೋ ಕಾರ್ಪೊರೇಷನ್‌ನಿಂದ ಪ್ರಾರಂಭಿಸಲ್ಪಟ್ಟ ಜೋಹೋ ಮೇಲ್, 1996ರಲ್ಲಿ ಶ್ರೀಧರ್ ವೆಂಬು ಮತ್ತು ಟೋನಿ ಥಾಮಸ್ ಸಹ-ಸ್ಥಾಪಿಸಿದ ಚೆನ್ನೈ ಮೂಲದ ಇಮೇಲ್ ಮತ್ತು ಉತ್ಪಾದಕತಾ ವೇದಿಕೆಯಾಗಿದೆ. ಜಾಗತಿಕವಾಗಿ 130 ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರೊಂದಿಗೆ, ಜೋಹೋ ಭಾರತದ ಅತ್ಯಂತ ಯಶಸ್ವಿ ತಂತ್ರಜ್ಞಾನಗಳಲ್ಲಿ ಒಂದಾಗಿದೆ. ಜೋಹೋ ಮೇಲ್ ತನ್ನ ಜಾಹೀರಾತು ಮುಕ್ತ, ಗೌಪ್ಯತೆ, ಬಲವಾದ ಸ್ಪ್ಯಾಮ್ ಫಿಲ್ಟರ್‌ಗಳು ಮತ್ತು ಭಾರತದಲ್ಲಿ ನೆಲೆಗೊಂಡಿರುವ ಡೇಟಾ ಸರ್ವರ್‌ಗಳಿಗೆ ಹೆಸರುವಾಸಿಯಾಗಿದೆ. ಇದು ಸರ್ಕಾರ ಮತ್ತು ಕಾರ್ಪೊರೇಟ್ ಬಳಕೆಗೆ ವಿಶೇಷವಾಗಿ ಬಹಳ ಉತ್ತಮವಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




