
ನವದೆಹಲಿ, ಜೂನ್ 6: ಭಾರತದ ಇಂಧನ ಕ್ಷೇತ್ರದಲ್ಲಿ (Energy Sector) ಹೊಸದೊಂದು ಆಶಾವಾದ ಮೂಡಿಸುವ ಭಾರಿ ಬೆಳವಣಿಗೆ ನಡೆದಿದೆ. ಅಂಡಮಾನ್ ಸಮುದ್ರದಲ್ಲಿ ಬೃಹತ್ ಪ್ರಮಾಣದ ನೈಸರ್ಗಿಕ ಅನಿಲ ನಿಕ್ಷೇಪ ಪತ್ತೆಯಾಗಿದ್ದು, ದೇಶೀಯ ಇಂಧನ ಸ್ವಾವಲಂಬನೆಯ ಕನಸಿಗೆ ಹೊಸ ಚಾಲನೆ ಸಿಕ್ಕಂತಾಗಿದೆ. ಸರ್ಕಾರಿ ಸ್ವಾಮ್ಯದ ಆಯಿಲ್ ಇಂಡಿಯಾ ಲಿಮಿಟೆಡ್ (OIL) ಸಂಸ್ಥೆಯು ಅಂಡಮಾನ್ ದ್ವೀಪಗಳ ಸಾಗರೋತ್ತರ ಪರಿಶೋಧನಾ ಬಾವಿಯಲ್ಲಿ ನೈಸರ್ಗಿಕ ಅನಿಲ ಇರುವುದನ್ನು ಅಧಿಕೃತವಾಗಿ ಖಚಿತಪಡಿಸಿದೆ. ಇದು ಕೇಂದ್ರ ಸರ್ಕಾರದ ಸಾಗರೋತ್ತರ ಇಂಧನ ಪರಿಶೋಧನಾ ಯೋಜನೆಗೆ ಸಿಕ್ಕ ಅತ್ಯಂತ ದೊಡ್ಡ ಯಶಸ್ಸು ಎಂದು ಪರಿಗಣಿಸಲಾಗಿದೆ.
ಈ ನೈಸರ್ಗಿಕ ಅನಿಲದ ಆವಿಷ್ಕಾರವು ಕೇವಲ ಒಂದು ಬಾವಿಗೆ ಮಾತ್ರ ಸೀಮಿತವಾಗಿಲ್ಲ, ಇದರ ಮಹತ್ವ ಅತ್ಯಂತ ವಿಸ್ತಾರವಾದುದಾಗಿದೆ. ಅಂಡಮಾನ್ ಬೇಸಿನ್ (ಕೊಳ್ಳ) ಪ್ರದೇಶವು ಭಾರಿ ಪ್ರಮಾಣದ ಹೈಡ್ರೋಕಾರ್ಬನ್ ನಿಕ್ಷೇಪಗಳನ್ನು ಹೊಂದಿರಬಹುದು ಎಂದು ಭೂವಿಜ್ಞಾನಿಗಳು ದಶಕಗಳಿಂದ ನಂಬಿದ್ದರು. ಪ್ರಸ್ತುತ ಪತ್ತೆಯಾಗಿರುವ ಅನಿಲ ನಿಕ್ಷೇಪ ಆ ನಂಬಿಕೆಯನ್ನು ನಿಜವಾಗಿಸಿದೆ. ಆಯಿಲ್ ಇಂಡಿಯಾ ಲಿಮಿಟೆಡ್ ಪ್ರಸ್ತುತ ಕೈಗೊಂಡಿರುವ ಪರಿಶೋಧನಾ ಅಭಿಯಾನದಲ್ಲಿ ಕೊರೆದಿರುವ ಮೂರು ಬಾವಿಗಳಲ್ಲಿ ಈಗಾಗಲೇ ಎರಡು ಬಾವಿಗಳಲ್ಲಿ ಹೈಡ್ರೋಕಾರ್ಬನ್ ಇರುವುದು ವರದಿಯಾಗಿದೆ. ನಿಕ್ಷೇಪದ ಪ್ರಮಾಣ ಇನ್ನೂ ಪೂರ್ಣವಾಗಿ ಲಭ್ಯವಾಗಿಲ್ಲದಿದ್ದರೂ, ಇದು ಭವಿಷ್ಯದ ಇಂಧನ ಭದ್ರತೆಯ ದೃಷ್ಟಿಯಿಂದ ಅತ್ಯಂತ ಸಕಾರಾತ್ಮಕ ಸೂಚನೆಯಾಗಿದೆ.
ಭಾರತವು ಪ್ರಸ್ತುತ ಇಂಧನ ಅಗತ್ಯಗಳಿಗಾಗಿ ವಿದೇಶಿ ಆಮದಿನ ಮೇಲೆ ಅತಿಯಾಗಿ ಅವಲಂಬಿತವಾಗಿದೆ. ದೇಶದ ಕಚ್ಚಾ ತೈಲದ ಶೇಕಡಾ 85 ಕ್ಕಿಂತ ಹೆಚ್ಚು ಅಗತ್ಯವನ್ನು ಆಮದಿನ ಮೂಲಕವೇ ಪೂರೈಸಲಾಗುತ್ತಿದೆ. ನೈಸರ್ಗಿಕ ಅನಿಲದ ಬೇಡಿಕೆಯ ಗಣನೀಯ ಪಾಲನ್ನು ಸಹ ಆಮದು ಮಾಡಿಕೊಳ್ಳಲಾದ ದ್ರವೀಕೃತ ನೈಸರ್ಗಿಕ ಅನಿಲ (LNG) ಮೂಲಕವೇ ಪಡೆದುಕೊಳ್ಳಲಾಗುತ್ತಿದೆ. ಅಂಡಮಾನ್ ಬೇಸಿನ್‌ನಲ್ಲಿ, ವಾಣಿಜ್ಯಿಕವಾಗಿ ಲಾಭದಾಯಕವಾಗಲ್ಲ ನಿಕ್ಷೇಪಗಳು ಅಧಿಕೃತವಾಗಿ ದೃಢಪಟ್ಟರೆ, ಭಾರತದ ಈ ಆಮದು ಅವಲಂಬನೆ ಗಣನೀಯವಾಗಿ ಕಡಿಮೆಯಾಗಲಿದೆ. ದೇಶೀಯ ಉತ್ಪಾದನೆ ಹೆಚ್ಚಳದಿಂದ ಜಾಗತಿಕ ಮಾರುಕಟ್ಟೆಯ ತೈಲ ಏರಿಳಿತಗಳಿಂದ ಭಾರತ ನಿರಾಳವಾಗಬಹುದು. ಆದರೆ ಗ್ರಾಹಕರಿಗೆ ಈ ಗ್ಯಾಸ್ ತಲುಪಬೇಕಿದ್ದರೆ ಅನೇಕ ಪ್ರಕ್ರಿಯೆಗಳಿವೆ. ಹಲವು ಸುತ್ತಿನ ಪರೀಕ್ಷೆಗಳು, ಮೂಲಸೌಕರ್ಯ ಅಭಿವೃದ್ಧಿ ಮತ್ತು ವಾಣಿಜ್ಯ ಅನುಮೋದನೆಗಳ ಸುದೀರ್ಘ ಪ್ರಕ್ರಿಯೆ ಆದ ನಂತರವಷ್ಟೇ ಅದು ಸಾಧ್ಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಅಂಡಮಾನ್ ಬೇಸಿನ್ ಭಾರತದ ‘ಗಯಾನಾ’ ಆಗಲಿದೆಯೇ ಎಂಬ ಪ್ರಶ್ನೆ ಈಗ ಉದ್ಭವಿಸಿದೆ. ಗಯಾನಾದಲ್ಲಿ ಕಂಡುಬಂದ ಬೃಹತ್ ತೈಲ ನಿಕ್ಷೇಪಗಳು ಆ ದೇಶದ ಇಂಧನ ಚಿತ್ರಣವನ್ನೇ ಬದಲಾಯಿಸಿದ್ದವು. ಅದೇ ಮಾದರಿಯಲ್ಲಿ ಅಂಡಮಾನ್ ಕೂಡ ಭಾರತದ ಇಂಧನ ಭವಿಷ್ಯವನ್ನು ಬದಲಾಯಿಸಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ. ಈ ಬಗ್ಗೆ ಈ ಹಿಂದೆ ಇಂಧನ ಇಲಾಖೆ ಕೂಡ ವಿಶ್ವಾಸ ವ್ಯಕ್ತಪಡಿಸಿತ್ತು. ಪ್ರಾಥಮಿಕ ಸಮೀಕ್ಷೆಗಳ ಅಂದಾಜಿನ ಪ್ರಕಾರ, ಈ ಬೇಸಿನ್‌ನಲ್ಲಿ 307 ರಿಂದ 370 ಮಿಲಿಯನ್ ಮೆಟ್ರಿಕ್ ಟನ್ ತೈಲ-ಸಮಾನ ಹೈಡ್ರೋಕಾರ್ಬನ್ ಇರಬಹುದು ಎಂದು ಅಂದಾಜಿಸಲಾಗಿದೆ.
Congratulations @OilIndiaLimited !
An ocean of energy opportunities reinforced in the Andaman Sea!
Very happy to report the presence of natural gas in Sri Vijayapuram-3 an exploratory well drilled by Oil India Ltd. 15 km off the east coast of the Andaman Islands at a water… pic.twitter.com/j6QvWqZkFx— Hardeep Singh Puri (@HardeepSPuri) June 5, 2026
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅನಿಲ ನಿಕ್ಷೇಪ ಪತ್ತೆ ಕುರಿತು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ. ‘ಅಂಡಮಾನ್ ಸಮುದ್ರದಲ್ಲಿ ಇಂಧನ ಅವಕಾಶಗಳ ಮಹಾಸಾಗರವೇ ಅನಾವರಣಗೊಂಡಿದೆ! ಆಯಿಲ್ ಇಂಡಿಯಾ ಲಿಮಿಟೆಡ್ ಅಂಡಮಾನ್ ದ್ವೀಪಗಳ ಪೂರ್ವ ಕರಾವಳಿಯಿಂದ 15 ಕಿಲೋಮೀಟರ್ ದೂರದಲ್ಲಿ, 355 ಮೀಟರ್ ನೀರಿನ ಆಳದಲ್ಲಿ ಕೊರೆದಿರುವ ‘ಶ್ರೀ ವಿಜಯಪುರಂ-3’ ಪರಿಶೋಧನಾ ಬಾವಿಯಲ್ಲಿ ನೈಸರ್ಗಿಕ ಅನಿಲ ಪತ್ತೆಯಾಗಿದೆ ಎಂಬುದನ್ನು ತಿಳಿಸಲು ಅತ್ಯಂತ ಸಂತೋಷವಾಗುತ್ತಿದೆ. ಬಾವಿಯ ಆರಂಭಿಕ ಉತ್ಪಾದನಾ ಪರೀಕ್ಷೆ ವೇಳೆ ನಿರಂತರ ಜ್ವಾಲೆ ಉರಿಯುವ ಮೂಲಕ ನೈಸರ್ಗಿಕ ಅನಿಲದ ಇರುವಿಕೆಯನ್ನು ದೃಢಪಡಿಸಿದೆ’ ಎಂದು ಸಚಿವರು ಬರೆದುಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದ ರಾಷ್ಟ್ರೀಯ ಆಳ ಸಮುದ್ರ ಪರಿಶೋಧನಾ ಯೋಜನೆ ಅಥವಾ ‘ಸಮುದ್ರ ಮಂಥನ ಮಿಷನ್’ಗೆ ಈ ಆವಿಷ್ಕಾರವು ಆರಂಭಿಕ ಮತ್ತು ದೊಡ್ಡ ಯಶಸ್ಸನ್ನು ತಂದುಕೊಟ್ಟಿದೆ. ಮಿಷನ್ ಮೋಡ್‌ನಲ್ಲಿ ಸಮುದ್ರದೊಳಗಿನ ಇಂಧನ ಸಂಪನ್ಮೂಲಗಳನ್ನು ಹೊರತೆಗೆಯಲು ಭಾರತ ಹೆಜ್ಜೆ ಇಟ್ಟಿರುವುದಕ್ಕೆ ಇದು ಪ್ರಬಲ ಸಾಕ್ಷಿಯಾಗಿದೆ. ಪ್ರಸ್ತುತ ಆಯಿಲ್ ಇಂಡಿಯಾ ಸಂಸ್ಥೆಯು ಗ್ಯಾಸ್ ಸ್ಯಾಂಪ್ಲಿಂಗ್ ಮತ್ತು ಐಸೊಟೋಪ್ ಅಧ್ಯಯನಗಳನ್ನು ನಡೆಸುತ್ತಿದ್ದು, ಮುಂಬರುವ ದಿನಗಳಲ್ಲಿ ಜಾಗತಿಕ ಆಳ ಸಮುದ್ರ ಪರಿಶೋಧನಾ ತಜ್ಞರ ಸಹಯೋಗದೊಂದಿಗೆ ಇಲ್ಲಿ ವಾಣಿಜ್ಯ ಕಾರ್ಯಾಚರಣೆ ಕೈಗೊಳ್ಳುವ ಯೋಜನೆಯನ್ನು ಸರ್ಕಾರ ಹೊಂದಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:34 am, Sat, 6 June 26