
ಅಮರಾವತಿ, ಜುಲೈ 12: ಕಳೆದ ಹಲವು ವರ್ಷಗಳಿಂದ ಸಂಪೂರ್ಣವಾಗಿ ಶಾಂತವಾಗಿದ್ದ ಮಹಾಮಾರಿ ಕೋವಿಡ್-19 (Covid-19) ವೈರಸ್ ಆಂಧ್ರಪ್ರದೇಶದಲ್ಲಿ ಮತ್ತೊಮ್ಮೆ ಆತಂಕ ಮೂಡಿಸಿದೆ. ಕಡಪ ಜಿಲ್ಲೆಯಲ್ಲಿ ಭೀಕರ ಕೋವಿಡ್ ಸೋಂಕಿಗೆ ಇಬ್ಬರು ರೋಗಿಗಳು ಬಲಿಯಾಗಿದ್ದು, ಇದು 2022 ರ ನಂತರ ಆಂಧ್ರಪ್ರದೇಶದಲ್ಲಿ ವರದಿಯಾದ ಮೊದಲ ಕೋವಿಡ್ ಸಂಬಂಧಿತ ಸಾವಿನ ಪ್ರಕರಣಗಳಾಗಿವೆ. ಇದರ ಬೆನ್ನಲ್ಲೇ ನಾಲ್ಕು ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಆರೋಗ್ಯ ಇಲಾಖೆ ತೀವ್ರ ಕಣ್ಗಾವಲು ಹಾಗೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.
ಮೊದಲ ಸಾವು: ಕಡಪ ಜಿಲ್ಲೆಯ 60 ವರ್ಷದ ವೃದ್ಧರೊಬ್ಬರು ತೀವ್ರ ಅನಾರೋಗ್ಯದಿಂದ ತಿರುಪತಿಯ ಸ್ವೀಮ್ಸ್ (SVIMS) ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ವೆಲ್ಲೂರಿನ ಪ್ರಸಿದ್ಧ ಸಿಎಂಸಿ (CMC) ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಚಿಕಿತ್ಸೆ ಫಲಿಸದೆ ಜೂನ್ 28 ರಂದು ಅವರು ಮೃತಪಟ್ಟಿದ್ದರು. ಅವರ ಸಾವಿನ ನಂತರ ನಡೆಸಿದ ಆರ್‌ಟಿ-ಪಿಸಿಆರ್ (RT-PCR) ಪರೀಕ್ಷೆಯಲ್ಲಿ ಅವರಿಗೆ ಕೋವಿಡ್ ಇರುವುದು ದೃಢಪಟ್ಟಿದೆ.
ಎರಡನೇ ಸಾವು: ಕಡಪದ ಮಾಸಪೇಟೆಯ 46 ವರ್ಷದ ವ್ಯಕ್ತಿಯೊಬ್ಬರು ತೀವ್ರ ಜ್ವರ ಮತ್ತು ಕೆಮ್ಮಿನಿಂದ ಜುಲೈ 4 ರಂದು ಕಡಪದ ರಿಮ್ಸ್ (RIMS) ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಶ್ವಾಸಕೋಶಕ್ಕೆ ಸೋಂಕು ತೀವ್ರವಾಗಿ ಹರಡಿದ್ದರಿಂದ ನಾಲ್ಕು ದಿನಗಳ ಹೋರಾಟದ ನಂತರ ಅವರು ಕೊನೆಯುಸಿರೆಳೆದಿದ್ದಾರೆ. ಈ ರೋಗಿಗೆ ಅತಿಯಾದ ಮದ್ಯಪಾನದ ಇತಿಹಾಸವಿದ್ದುದು ಅವರ ಉಸಿರಾಟದ ಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿತ್ತು ಎಂದು ವೈದ್ಯರು ತಿಳಿಸಿದ್ದಾರೆ.
ಮರಣ ಹೊಂದಿದ ಇಬ್ಬರಲ್ಲದೆ, ಜಿಲ್ಲೆಯ ವಿವಿಧ ಭಾಗಗಳಲ್ಲಿ ನಾಲ್ಕು ಹೊಸ ಕೋವಿಡ್ ಸೋಂಕುಗಳು ಪತ್ತೆಯಾಗಿವೆ. ಇವರಲ್ಲಿ ಸೌಮ್ಯ ರೋಗಲಕ್ಷಣಗಳಿರುವ ಮೂವರು ರೋಗಿಗಳನ್ನು ಮನೆಯಲ್ಲೇ ಪ್ರತ್ಯೇಕವಾಗಿರಲು ಸೂಚಿಸಲಾಗಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ.
ಮತ್ತಷ್ಟು ಓದಿ: Video: ಕೋವಿಡ್ ಸಮಯದಲ್ಲಿ ವ್ಯವಹಾರದಲ್ಲಿ 2 ಕೋಟಿ ರೂ ನಷ್ಟ, ನಗುತಲೇ ಎಲ್ಲವನ್ನು ಜಯಿಸಿದ ಈ ವ್ಯಕ್ತಿ ಎಲ್ಲರಿಗೂ ಸ್ಫೂರ್ತಿ
ತೀವ್ರ ಲಕ್ಷಣಗಳಿದ್ದ ಒಬ್ಬ ರೋಗಿಯನ್ನು ಕಡಪ ರಿಮ್ಸ್ ಆಸ್ಪತ್ರೆಯ ವಿಶೇಷ ಕೋವಿಡ್ ವಾರ್ಡ್‌ಗೆ ದಾಖಲಿಸಲಾಗಿದ್ದು, ಸದ್ಯ ಅವರ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಜಿಲ್ಲೆಯ ಬೇರೆ ಬೇರೆ ಕಡೆಗಳಿಂದ ಈ ಪ್ರಕರಣಗಳು ಬಂದಿರುವುದರಿಂದ ಇಲಾಖೆ ಹೆಚ್ಚಿನ ಎಚ್ಚರಿಕೆ ವಹಿಸಿದೆ.
ಈ ಇತ್ತೀಚಿನ ಸೋಂಕುಗಳ ಹಿಂದೆ ಕೋವಿಡ್‌ನ ಹೊಸ ಓಮಿಕ್ರಾನ್ ಉಪ-ರೂಪಾಂತರ ಇರಬಹುದೇ ಎಂಬ ಬಲವಾದ ಶಂಕೆ ಅಧಿಕಾರಿಗಳಲ್ಲಿದೆ. ವೈರಸ್‌ನ ನಿಖರವಾದ ತಳಿಯನ್ನು ಪತ್ತೆಹಚ್ಚಲು ಮೃತಪಟ್ಟ ಇಬ್ಬರು ರೋಗಿಗಳ ಮಾದರಿಗಳನ್ನು ಜೀನೋಮ್ ಅನುಕ್ರಮಣಿಕೆಗಾಗಿ ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ (NIV) ಕಳುಹಿಸಿಕೊಡಲಾಗಿದೆ. ಇದರ ವರದಿ ಬಂದ ನಂತರ ಮುಂದಿನ ಚಿಕಿತ್ಸಾ ತಂತ್ರಗಳನ್ನು ರೂಪಿಸಲಾಗುತ್ತದೆ.
ರಾಜ್ಯ ವೈದ್ಯಕೀಯ ಮತ್ತು ಆರೋಗ್ಯ ಇಲಾಖೆಯು ಕಡಪ ಹಾಗೂ ನೆರೆಯ ಜಿಲ್ಲೆಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಿದೆ. ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಇನ್ಫ್ಲುಯೆನ್ಸ (ಜ್ವರ, ಕೆಮ್ಮು) ಲಕ್ಷಣಗಳಿರುವ ರೋಗಿಗಳನ್ನು ತಕ್ಷಣವೇ ಕೋವಿಡ್ ಪರೀಕ್ಷೆಗೆ ಒಳಪಡಿಸಲು ಸೂಚಿಸಲಾಗಿದೆ.
ಆದಾಗ್ಯೂ, ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಸದ್ಯಕ್ಕೆ ಇದು ಕೇವಲ ಸೀಮಿತ ಪ್ರಕರಣಗಳಾಗಿದ್ದು, ಯಾವುದೇ ರೀತಿಯ ದೊಡ್ಡ ಮಟ್ಟದ ಸಮುದಾಯ ಪ್ರಸರಣ ಕಂಡುಬಂದಿಲ್ಲ. ಆದರೂ, ಮುನ್ನೆಚ್ಚರಿಕಾ ಕ್ರಮವಾಗಿ ಹಿರಿಯ ನಾಗರಿಕರು, ಗರ್ಭಿಣಿಯರು ಮತ್ತು ಮೊದಲೇ ಆರೋಗ್ಯ ಸಮಸ್ಯೆ ಇರುವವರು ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸುವುದು ಹಾಗೂ ಜನದಟ್ಟಣೆಯ ಪ್ರದೇಶಗಳಿಂದ ದೂರವಿರುವುದು ಒಳಿತು ಎಂದು ಸಲಹೆ ನೀಡಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ