
ನವದೆಹಲಿ, ಆಗಸ್ಟ್ 10: ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಗ್ರೂಪ್‌ಗೆ ಜಾರಿ ನಿರ್ದೇಶನಾಲಯ (ಇಡಿ) ಭಾರಿ ಬಿಗ್ ಶಾಕ್ ನೀಡಿದೆ. ಸುಮಾರು 40,000 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಬ್ಯಾಂಕ್ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಲಯನ್ಸ್ ಕಮ್ಯುನಿಕೇಷನ್ಸ್ (RCom) ಮತ್ತು ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ವಿರುದ್ಧ ಇಡಿ ಶನಿವಾರ ದೆಹಲಿಯ ವಿಶೇಷ ನ್ಯಾಯಾಲಯಕ್ಕೆ ಎರಡು ಪ್ರತ್ಯೇಕ ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಿದೆ. ಈ ವಂಚನೆ ಪ್ರಕರಣದಲ್ಲಿ ಅನಿಲ್ ಅಂಬಾನಿ (Anil ambani) ಅವರ ಒಡೆತನದ ಎರಡು ಸಂಸ್ಥೆಗಳು ಸೇರಿದಂತೆ ಗೌತಮ್ ದೋಷಿ, ಸತೀಶ್ ಸೇಥ್ ಮತ್ತು ಅಮಿತಾಭ್ ಜುಂಜುನ್‌ವಾಲಾ ಅವರನ್ನು ಆರೋಪಿಗಳೆಂದು ಹೆಸರಿಸಲಾಗಿದೆ.
ಆರ್‌ಕಾಮ್ ವಿರುದ್ಧ ಸಲ್ಲಿಕೆಯಾಗಿರುವ ಚಾರ್ಜ್‌ಶೀಟ್‌ನಲ್ಲಿ, ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳ ಒಕ್ಕೂಟಕ್ಕೆ ಸಂಸ್ಥೆಯು ಬಾಕಿ ಉಳಿಸಿಕೊಂಡಿರುವ ಮತ್ತು ಸುಸ್ತಿದಾರರಾಗಿರುವ ಒಟ್ಟು 40,186 ಕೋಟಿ ರೂಪಾಯಿಗಳನ್ನು ‘ಅಪರಾಧದ ಆದಾಯ’ (Proceeds of Crime) ಎಂದು ಇಡಿ ಅಂದಾಜಿಸಿದೆ. 1 ಬಿಲಿಯನ್ ಡಾಲರ್ ಮೌಲ್ಯದ ಎಫ್‌ಸಿಸಿಬಿ (FCCB) ನಿಧಿಯ ಬಳಕೆಯ ಬಗ್ಗೆ ಸುಳ್ಳು ಪ್ರಮಾಣಪತ್ರಗಳನ್ನು ಸೃಷ್ಟಿಸಿ, ಹಣವನ್ನು ಬೇರೆಡೆಗೆ ವರ್ಗಾಯಿಸುವಲ್ಲಿ ಮತ್ತು ಮರೆಮಾಚುವಲ್ಲಿ ಆರೋಪಿಗಳು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಇಡಿ ಉಲ್ಲೇಖಿಸಿದೆ.
ಈ ಹಿನ್ನೆಲೆಯಲ್ಲಿ, ಅನಿಲ್ ಅಂಬಾನಿ ಅವರ ಆಸ್ತಿಗಳು ಸೇರಿದಂತೆ ರಿಲಯನ್ಸ್ ಕಮ್ಯುನಿಕೇಷನ್ಸ್ ಮತ್ತು ಅದರ ಪ್ರವರ್ತಕರಿಗೆ ಸೇರಿದ ಈಗಾಗಲೇ ಜಪ್ತಿ ಮಾಡಲಾಗಿರುವ ರೂ. 8,078 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಇಡಿ ನ್ಯಾಯಾಲಯದ ಅನುಮತಿ ಕೋರಿದೆ.
ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ವಿರುದ್ಧ ದಾಖಲಾಗಿರುವ ಮತ್ತೊಂದು ಚಾರ್ಜ್‌ಶೀಟ್‌ನಲ್ಲಿ ಭೀಕರ ವಂಚನೆಯ ಜಾಲ ಬಯಲಾಗಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮಂಜೂರು ಮಾಡಿದ್ದ ನಾಲ್ಕು ಪ್ರಮುಖ ಟೋಲ್ ರಸ್ತೆ ಯೋಜನೆಗಳಾದ ತಿರುಚಿ-ಕರೂರ್, ತಿರುಚಿ-ದಿಂಡಿಗಲ್, ಸೇಲಂ-ಉಳುಂದೂರ್‌ಪೇಟೆ ಮತ್ತು ಜೈಪುರ-ರೀಂಗಸ್ ಯೋಜನೆಗಳ ಸಾರ್ವಜನಿಕ ಹಣವನ್ನು ವ್ಯವಸ್ಥಿತವಾಗಿ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಬ್ಯಾಂಕ್ ಸಾಲಗಳು ಮತ್ತು NHAI ಅನುದಾನದ ಮೂಲಕ ಬಂದಿದ್ದ ಹಣದಲ್ಲಿ ಸುಮಾರು 187 ಕೋಟಿ ರೂಪಾಯಿಗಳನ್ನು 2010ರ ಸೆಪ್ಟೆಂಬರ್-ಅಕ್ಟೋಬರ್ ಅವಧಿಯಲ್ಲಿ ನಕಲಿ ಉಪ-ಗುತ್ತಿಗೆ (Sub-contracting) ಕೆಲಸಗಳ ಹೆಸರಿನಲ್ಲಿ ಬೇರೆಡೆಗೆ ವರ್ಗಾಯಿಸಲಾಗಿತ್ತು. ಈ ವರ್ಗಾವಣೆಯನ್ನು ಅಸಲಿ ವೆಚ್ಚ ಎಂದು ಬಿಂಬಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿತ್ತು. ತದನಂತರ ಈ ಹಣವನ್ನು ಶೆಲ್ ಕಂಪನಿಗಳು ಮತ್ತು ವಜ್ರದ ವ್ಯಾಪಾರಿಗಳ ಮೂಲಕ ಅಕ್ರಮವಾಗಿ ಚಲಾವಣೆ ಮಾಡಲಾಗಿದೆ ಎಂದು ಇಡಿ ಚಾರ್ಜ್‌ಶೀಟ್‌ನಲ್ಲಿ ವಿವರಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:40 am, Mon, 10 August 26