ಮುಂಬೈ: ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ರಾಜೀನಾಮೆಯನ್ನು ರಾಜ್ಯದ ರಾಜ್ಯಪಾಲರು ಅಂಗೀಕರಿಸಿದ್ದಾರೆ. ಭ್ರಷ್ಟಾಚಾರ ಆರೋಪಗಳಿಗೆ ಸಂಬಂಧಿಸಿ ಆರೋಪಿ ಸ್ಥಾನದಲ್ಲಿ ಇರುವ ಅನಿಲ್ ದೇಶ್ಮುಖ್ ಇಂದು (ಏಪ್ರಿಲ್ 5) ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ದೇಶ್ಮುಖ್ ರಾಜೀನಾಮೆ ಈಗ ಅಂಗೀಕಾರವಾಗಿದ್ದು, ದಿಲೀಪ್ ವಾಲ್ಸೆ ಪಾಟೀಲ್ಗೆ ಮಹಾರಾಷ್ಟ್ರ ಗೃಹ ಸಚಿವ ಸ್ಥಾನದ ಹೊಣೆ ನೀಡಲಾಗಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಶಿಫಾರಸಿನ ಮೇರೆಗೆ ದಿಲೀಪ್ ವಾಲ್ಸೆಗೆ ಗೃಹ ಖಾತೆ ಜವಾಬ್ದಾರಿ ವಹಿಸಲಾಗಿದೆ.
ಸದ್ಯ ಅಮಾನತು ಆಗಿರುವ ಮುಂಬೈ ಮಾಜಿ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಬಳಿ ಪ್ರತೀ ತಿಂಗಳು, ನಗರದ ಬಾರ್, ಪಬ್, ರೆಸ್ಟೋರೆಂಟ್ಗಳಿಂದ ₹ 100 ಕೋಟಿ ವಸೂಲಿ ಮಾಡುವಂತೆ ಒತ್ತಡ ಹೇರಿದ ಆರೋಪ ಹಾಗೂ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ವಿರುದ್ಧ ತನಿಖೆ ನಡೆಸುವಂತೆ ಬಾಂಬೆ ಹೈ ಕೋರ್ಟ್ ಸಿಬಿಐಗೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಎನ್ಸಿಪಿ ನಾಯಕರೂ ಆಗಿರುವ ಅನಿಲ್ ದೇಶ್ಮುಖ್ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ದಿಲೀಪ್ ವಾಲ್ಸೆ ಪಾಟೀಲ್ ಯಾರು?
ಪ್ರಸ್ತುತ ಮಹಾರಾಷ್ಟ್ರದ ಅಂಬೆಗಾಂವ್ ಕ್ಷೇತ್ರದಿಂದ, ಎನ್ಸಿಪಿ ಪಕ್ಷದ ಶಾಸಕರಾಗಿರುವ ದಿಲೀಪ್ ವಾಲ್ಸೆ ಪಾಟೀಲ್, 6 ಬಾರಿ ಎಂಎಲ್ಎ ಸ್ಥಾನ ಪಡೆದ ಹಿರಿಯ, ಅನುಭವಿ ರಾಜಕಾರಣಿ. 1999ರಿಂದ 2009ರ ವರೆಗೆ ವಿವಿಧ ಸಚಿವ ಸ್ಥಾನ ನಿಭಾಯಿಸಿ ಅನುಭವವನ್ನೂ ಹೊಂದಿದ್ದಾರೆ. ಈ ಮೊದಲು, ಹಣಕಾಸು, ಇಂಧನ, ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದವರು. ವಾಲ್ಸೆ, ಎನ್ಸಿಪಿ ನಾಯಕ ಹಾಗೂ ಮಹಾರಾಷ್ಟ್ರದ ಪ್ರಭಾವಿ ರಾಜಕಾರಣಿ ಶರದ್ ಪವಾರ್ಗೆ ಆಪ್ತರೂ ಹೌದು. ಎನ್ಸಿಪಿ ಮತ್ತು ಶಿವಸೇನಾ ನೇತೃತ್ವದ ಈಗಿನ ಸರ್ಕಾರದಲ್ಲಿ ಅಬಕಾರಿ ಹಾಗೂ ಕಾರ್ಮಿಕ ಸಚಿವರಾಗಿ ಕೆಲಸ ನಿರ್ವಹಿಸುತ್ತಿದ್ದ ದಿಲೀಪ್ ವಾಲ್ಸೆಗೆ ಗೃಹ ಖಾತೆ ಹೆಚ್ಚುವರಿ ಜವಾಬ್ದಾರಿಯಾಗಿ ಒದಗಿದೆ. ದಿಲೀಪ್ ವಾಲ್ಸೆ ಪಾಟೀಲ್ ಮುಂಬೈನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿಯನ್ನು ಪಡೆದಿದ್ದಾರೆ.
ಘಟನೆಯ ಹಿನ್ನೆಲೆ
ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ವಿರುದ್ಧ ಪ್ರತಿ ತಿಂಗಳು ₹ 100 ಕೋಟಿ ಹಣ ವಸೂಲಿ ಒತ್ತಡ ಆರೋಪಿಸಿ ಪತ್ರ ಬರೆದಿದ್ದ ಪರಮ್ವೀರ್ ಸಿಂಗ್ ಪ್ರಕರಣ ಸಿಬಿಐ ಮೆಟ್ಟಿಲೇರಿತ್ತು. 15 ದಿನದ ಒಳಗೆ ಪ್ರಾಥಮಿಕ ತನಿಖೆ ನಡೆಸಿ ವರದಿ ನಿಡುವಂತೆ ಸಿಬಿಐಗೆ ಬಾಂಬೆ ಹೈಕೋರ್ಟ್ ಸೂಚನೆ ನೀಡಿದೆ. ಈ ಹಿಂದೆ ನಡೆದಿದ್ದ ವಿಚಾರಣೆಯಲ್ಲಿ ಇನ್ನೂ ಗೃಹ ಸಚಿವ ಅನಿಲ್ ದೇಶ್ಮುಖ್ ವಿರುದ್ಧ ಎಫ್ಐಆರ್ ದಾಖಲಿಸಿಲ್ಲ ಎಂದು ಪ್ರಶ್ನಿಸಿತ್ತು.
ಕೆಲ ದಿನಗಳ ಹಿಂದೆ ಮುಕೇಶ್ ಅಂಬಾನಿ ಮನೆ ಮುಂದೆ ಸ್ಪೋಟಕ ಹೊತ್ತಿದ್ದ ಕಾರು ಪತ್ತೆ ಪ್ರಕರಣ ರೋಚಕ ತಿರುವು ಪಡೆದಿತ್ತು. ಸಸ್ಪೆಂಡ್ ಆಗಿರುವ ಎಎಸ್ಐ ಸಚಿನ್ ವಾಜೆ ಬಳಿ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್, ಬಾರ್ ಮತ್ತು ರೆಸ್ಟೊರೆಂಟ್ಗಳಿಂದ ಪ್ರತಿ ತಿಂಗಳು ₹ 100 ಕೋಟಿ ಹಣ ವಸೂಲಿ ಮಾಡುವಂತೆ ಒತ್ತಡ ಹೇರಿದ್ದರು ಎಂದು ಮುಂಬೈ ಮಾಜಿ ಪೊಲೀಸ್ ಆಯುಕ್ತ ಪರಮ್ವೀರ್ ಸಿಂಗ್ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆಗೆ ಇಂದು ಪತ್ರ ಬರೆದಿದ್ದರು. ಈ ಗಂಭೀರ ಆರೋಪದಿಂದ ಮಹಾರಾಷ್ಟ್ರ ಶಿವಸೇನೆ-ಎನ್ಸಿಪಿ ಮೈತ್ರಿಕೂಟದ ಸರ್ಕಾರಕ್ಕೆ ಭಾರೀ ಮುಖಭಂಗವಾಗಿತ್ತು.
ಇದನ್ನೂ ಓದಿ: Anil Deshmukh Resigns: ಸಿಬಿಐ ತನಿಖೆಗೆ ಬಾಂಬೆ ಹೈಕೋರ್ಟ್ ಸೂಚನೆ; ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ರಾಜೀನಾಮೆ
ಇದನ್ನೂ ಓದಿ: ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ವಿರುದ್ಧ 15 ದಿನಗಳಲ್ಲಿ ಪ್ರಾಥಮಿಕ ತನಿಖೆ ನಡೆಸುವಂತೆ ಬಾಂಬೆ ಹೈಕೋರ್ಟ್ ಸೂಚನೆ
Published On - 9:45 pm, Mon, 5 April 21