ಗುವಹಾಟಿ: ಕೊವಿಡ್ ಕಾರಣದಿಂದ ಮಸುಕಾಗಿದ್ದ CAA (Citizenship Amendment Act), National Register of Citizens (NRC) ವಿಚಾರವು ಮತ್ತೆ ಮುನ್ನೆಲೆಗೆ ಬರುವ ಸೂಚನೆ ಕಂಡುಬಂದಿದೆ. ಸಿಎಎ ರದ್ದತಿಯನ್ನು ಕೋರಿ NESO (North East Students Organization) ವಿದ್ಯಾರ್ಥಿ ಸಂಘಟನೆಯು ಡಿ. 11ರಂದು ‘Black Day’ ಆಚರಿಸಲಿದ್ದು, ಈಶಾನ್ಯ ರಾಜ್ಯಗಳಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ತಿಳಿದುಬಂದಿದೆ.
ಈಶಾನ್ಯ ರಾಜ್ಯಗಳ ಜನರು ಸಿಎಎ ತಿದ್ದುಪಡಿ ಕಾಯ್ದೆ 2019ನ್ನು ವಿರೋಧಿಸುತ್ತಲೇ ಬಂದಿದ್ದೇವೆ. ಆದರೂ, ಸರ್ಕಾರ ಇತ್ತಕಡೆ ಗಮನ ಹರಿಸದೇ ಕಾಯ್ದೆಯನ್ನು ಅಂಗೀಕರಿಸಿದೆ ಎಂದು NESO ಮುಖ್ಯಸ್ಥ, ಸ್ಯಾಮುಯಲ್ ಬಿ ಜೈರ್ವಾ ಹೇಳಿದ್ದಾರೆ. ಹೀಗಾಗಿ ಎಲ್ಲಾ 7 ಈಶಾನ್ಯ ರಾಜ್ಯಗಳ ಮುಖ್ಯ ನಗರಗಳಲ್ಲಿ ಕಪ್ಪು ಬಾವುಟ, ಕಪ್ಪು ಫಲಕಗಳನ್ನು ಹಿಡಿದು ಸಿಎಎ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.
ಈ ಮೂಲಕ ಸಿಎಎ ವಿರೋಧಿ ಸಂದೇಶವನ್ನು ಸರ್ಕಾರಕ್ಕೆ ರವಾನಿಸುವ ಇರಾದೆಯನ್ನು NESO ಹೊಂದಿದೆ. ಜೊತೆಗೆ, ಸರ್ಕಾರದ ಅನ್ಯಾಯವನ್ನು ಜನರಿಗೆ ಮನವರಿಕೆ ಮಾಡುವ ಉದ್ದೇಶವನ್ನೂ ಈ ಪ್ರತಿಭಟನೆ ಹೊಂದಿದೆ ಎಂದು NESO ಮುಖಂಡರು ಹೇಳಿದ್ದಾರೆ. NESO ಸಂಘಟನೆಯು ಏಳು ಈಶಾನ್ಯ ರಾಜ್ಯಗಳ, ಎಂಟು ವಿದ್ಯಾರ್ಥಿ ಸಂಘಟನೆಗಳ ಒಕ್ಕೂಟವಾಗಿದೆ.
ಸಿಎಎ ಮತ್ತು ಎನ್ಆರ್ಸಿ ತಿದ್ದುಪಡಿ ಕಾಯ್ದೆಯು ಕಳೆದ ವರ್ಷ ಡಿ. 9ರಂದು ಲೋಕಸಭೆಯಲ್ಲಿ ಒಪ್ಪಿಗೆ ಪಡೆದಿತ್ತು. ಡಿ. 11ರಂದು ರಾಜ್ಯಸಭೆಯಲ್ಲಿ ಅನುಮೋದನೆ ಪಡೆದಿತ್ತು ಮತ್ತು ಡಿ. 12ರಂದು ರಾಷ್ಟ್ರಪತಿಗಳಿಂದಲೂ ಅಂಗೀಕರಿಸಲ್ಪಟ್ಟಿತ್ತು. ಆ ಬಳಿಕ ದೇಶಾದ್ಯಂತ ಈ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆಗಳು ನಡೆದಿದ್ದವು. ಕೊವಿಡ್ ಕಾರಣದಿಂದ ಪ್ರತಿಭಟನೆ ಕಾವು ಕಡಿಮೆಯಾಗಿತ್ತು. ಇದೀಗ ಒಂದು ವರ್ಷದ ಬಳಿಕ ಸಿಎಎ ಮತ್ತೆ ಸದ್ದು ಮಾಡುವಂತೆ ಕಾಣುತ್ತಿದೆ.
Explainer | ಪೌರತ್ವ ತಿದ್ದುಪಡಿ ಕಾಯ್ದೆ ಎಂದು ಅನುಷ್ಠಾನ? ಏಕಿಷ್ಟು ವಿರೋಧ?
Published On - 11:21 am, Fri, 11 December 20