ಛತ್ತೀಸ್‌ಗಢ ಗರಿಯಾಬಂದ್​ನಲ್ಲಿ ಭಾರಿ ಎನ್​ಕೌಂಟರ್​: 12 ನಕ್ಸಲರ ಹತ್ಯೆ

ಛತ್ತೀಸ್‌ಗಢದ ಗರಿಯಾಬಂದ್‌ನಲ್ಲಿ ಸೋಮವಾರ ಹಾಗೂ ಮಂಗಳವಾರ ಬೆಳಗ್ಗೆ ನಡೆದ ಎನ್‌ಕೌಂಟರ್‌ನಲ್ಲಿ ಒಟ್ಟು 14 ಮಂದಿ ನಕ್ಸಲರನ್ನು ಹತ್ಯೆ ಮಾಡಲಾಗಿದೆ. ಸುಮಾರು 36 ಗಂಟೆಗಳ ಕಾಲ ಎನ್‌ಕೌಂಟರ್ ನಡೆದಿದೆ. ಭದ್ರತಾ ಪಡೆಗಳು ನಕ್ಸಲೀಯರ ವಿರುದ್ಧ ಇತ್ತೀಚಿನ ದಿನಗಳಲ್ಲಿ ಕೈಗೊಂಡ ಅತಿದೊಡ್ಡ ಕಾರ್ಯಾಚರಣೆ ಇದಾಗಿದೆ.

ಛತ್ತೀಸ್‌ಗಢ ಗರಿಯಾಬಂದ್​ನಲ್ಲಿ ಭಾರಿ ಎನ್​ಕೌಂಟರ್​: 12 ನಕ್ಸಲರ ಹತ್ಯೆ
ಸಾಂದರ್ಭಿಕ ಚಿತ್ರ

Updated on: Jan 21, 2025 | 1:46 PM

ಭುವನೇಶ್ವರ್, ಜನವರಿ 21: ಛತ್ತೀಸ್‌ಗಢದ ಗರಿಯಾಬಂದ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಕನಿಷ್ಠ 12 ನಕ್ಸಲರು ಹತರಾಗಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಸೋಮವಾರ ಕೂಡ ಕಾರ್ಯಾಚರಣೆ ನಡೆದಿತ್ತು. ಸೋಮವಾರದ ಕಾರ್ಯಾಚರಣೆಯಲ್ಲಿ ಇಬ್ಬರು ಮಹಿಳಾ ನಕ್ಸಲರನ್ನು ಹತ್ಯೆ ಮಾಡಲಾಗಿತ್ತು. ಒಬ್ಬ ಕೋಬ್ರಾ ಜವಾನ್ ಗಾಯಗೊಂಡಿದ್ದರು.

ಛತ್ತೀಸ್‌ಗಢ-ಒಡಿಶಾ ಗಡಿಯಲ್ಲಿರುವ ಮೈನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಸೋಮವಾರ ತಡರಾತ್ರಿ ಮತ್ತು ಮಂಗಳವಾರ ಮುಂಜಾನೆ ಗುಂಡಿನ ಚಕಮಕಿ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಜಿಲ್ಲಾ ಮೀಸಲು ಗಾರ್ಡ್ (ಡಿಆರ್‌ಜಿ), ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್), ಛತ್ತೀಸ್‌ಗಢದ ಕೋಬ್ರಾ ಮತ್ತು ಒಡಿಶಾದ ವಿಶೇಷ ಕಾರ್ಯಾಚರಣೆ ಗುಂಪು (ಎಸ್‌ಒಜಿ) ಯ ಭದ್ರತಾ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಒಟ್ಟು 10 ತಂಡಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದವು.

ನಟೋರಿಯಸ್ ನಕ್ಸಲ್ ಮುಖಂಡ ಚಲಪತಿ ಹತ್ಯೆ: ಭದ್ರತಾ ಪಡೆಗಳ ಮಹತ್ಸಾಧನೆ

ಭದ್ರತಾ ಪಡೆಗಳು ನಡೆಸಿದ ಎನ್​ಕೌಂಟರ್​ನಲ್ಲಿ ಒಡಿಶಾದಲ್ಲಿ ನಕ್ಸಲರ ಮುಖ್ಯಸ್ಥನಾಗಿದ್ದ, ಜೈರಾಮ್ ಅಲಿಯಾಸ್ ಚಲಪತಿ ಕೂಡ ಹತ್ಯೆಯಾಗಿದ್ದಾನೆ. ಈತನ ಪತ್ತೆಗೆ ಸರ್ಕಾರ 1 ಕೋಟಿ ರೂಪಾಯಿ ಬಹುಮಾನ ಘೋಷಿಸಿತ್ತು. ಚಲಪತಿಯನ್ನು ಹತ್ತಿಕ್ಕುವುದಾಗಿ ಭದ್ರತಾ ಪಡೆಗಳು ಪಣತೊಟ್ಟಿದ್ದವು. ಹೀಗಾಗಿ, ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳಿಗೆ ದೊಡ್ಡ ಜಯ ದೊರೆತಂತಾಗಿದೆ. ಚಲಪತಿ ಮಾತ್ರವಲ್ಲದೆ, ಕುಖ್ಯಾತ ನಕ್ಸಲರಾದ ಮನೋಜ್ ಮತ್ತು ಗುಡ್ಡು ಕೂಡ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಖಚಿತ ಮಾಹಿತಿ ಮೇರೆಗೆ ದಾಳಿ

ಕುಳರಿಘಾಟ್ ಮೀಸಲು ಅರಣ್ಯದಲ್ಲಿ ಮಾವೋವಾದಿಗಳು ಇರುವ ಬಗ್ಗೆ ಗುಪ್ತಚರ ಇಲಾಖೆ ನೀಡಿದ ಖಚಿತ ಮಾಹಿತಿಯ ಆಧಾರದ ಮೇಲೆ ಜನವರಿ 19 ರ ರಾತ್ರಿ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಘಟನೆ ನಡೆದ ಸ್ಥಳ ಛತ್ತೀಸ್‌ಗಢ, ಒಡಿಶಾದ ನುವಾಪಾಡಾ ಜಿಲ್ಲೆಯ ಗಡಿಯಿಂದ ಕೇವಲ 5 ಕಿಮೀ ದೂರದಲ್ಲಿದೆ.

ಇದನ್ನೂ ಓದಿ: 6 ನಕ್ಸಲರ ಶರಣಾಗತಿ ಬೆನ್ನಲ್ಲೇ ನಕ್ಸಲರ ಪಟ್ಟಿಯಲ್ಲಿ ಉಳಿದ ಏಕೈಕ ನಕ್ಸಲ್

ಎನ್‌ಕೌಂಟರ್ ನಡೆದ ಸ್ಥಳದಿಂದ ಆಟೋ-ಲೋಡಿಂಗ್ ರೈಫಲ್ ಸೇರಿದಂತೆ ದೊಡ್ಡ ಪ್ರಮಾಣದ ಬಂದೂಕುಗಳು, ಮದ್ದುಗುಂಡುಗಳು ಮತ್ತು ಐಇಡಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಾವೋವಾದಿಗಳ ಸಾವುನೋವುಗಳ ಸಂಖ್ಯೆ ಹೆಚ್ಚಾಗಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:54 am, Tue, 21 January 25

Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us